ತುಮಕೂರು: ರಾಜ್ಯದ ವಿವಿಧ ಕಡೆಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನದಿ, ಕೆರೆ, ಹಳ್ಳ- ಕೊಳ್ಳಗಳು ಭರ್ತಿಗೊಳ್ಳುತ್ತಿದ್ದು, ಕೆಲವೆಡೆ ಕೆರೆ ಕೋಡಿ ಹೊಡೆದು ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿದೆ. ಇದರಿಂದಾಗಿ ಜನರು ಪರದಾಡುವಂತಾಗಿದೆ. ಸದ್ಯ ತುಮಕೂರು, ಮಂಡ್ಯ ಸೇರಿದಂತೆ ವಿವಿಧ ಕಡೆಗಳಲ್ಲಿ ಸುರಿದ ಮಳೆಗೆ ಅವಾಂತರಗಳು ಸೃಷ್ಟಿಯಾಗಿವೆ. ಇನ್ನೊಂದೆಡೆ ತುಮಕೂರಿನಲ್ಲಿ ಕೆರೆ ತುಂಬಿ ರಸ್ತೆಗೆ ಬಂದ ನೀರಿನಲ್ಲಿ ಮೀನುಗಳು ಕೂಡ ಕೊಚ್ಚಿ ಬಂದಿವೆ. ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದಲ್ಲಿರುವ ಮಾರನಕಟ್ಟೆ ಕೆರೆ ಸತತವಾಗಿ ಸುರಿದ ಮಳೆಯಿಂದಾಗಿ ತುಂಬಿ ನೀರು ರಸ್ತೆಗೆ ಬಂದಿದೆ. ಇದರೊಂದಿಗೆ ಕೆರೆಯಲ್ಲಿದ್ದ ಮೀನುಗಳು ಕೂಡ ರಸ್ತೆಗೆ ಬಂದಿವೆ. ಹಿಗಾಗಿ ಜನರು ಮೀನಿಗಾಗಿ ಮುಗಿಬಿದ್ದಿದ್ದು, ದೃಶ್ಯಾವಳಿಗಳನ್ನು ಮೊಬೈಲ್ ಕ್ಯಾಮಾರಾದಲ್ಲಿ ಸೆರೆಹಿಡಿಯಲಾಗಿದೆ.
ಇನ್ನೊಂದೆಡೆ, ತುಮಕೂರಿನ ಮಧುಗಿರಿ ತಾಲ್ಲೂಕಿನ ಚನ್ನಸಾಗರ ಗ್ರಾಮಕ್ಕೆ ಮುಳುಗಡೆ ಭೀತಿ ಎದುರಾಗಿದೆ. ಈ ಹಿಂದೆ ಎರಡು ಬಾರಿಯ ಮಳೆಗೆ ಸಂಪೂರ್ಣ ಮುಳುಗಡೆಯಾಗಿದ್ದ ಗ್ರಾಮದಲ್ಲಿ ಇದೀಗ ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಪರಿಣಾಮವಾಗಿ ಜಯಮಂಗಲಿ ನದಿ ನೀರು ತುಂಬಿ ಹರಿಯುತ್ತಿದೆ. ಹೀಗಾಗಿ ಗ್ರಾಮ ಮುಳುಗಡೆಯಾಗುವ ಭೀತಿ ಎದುರಾದ ಹಿನ್ನೆಲೆ ಕೆಲವರು ಗ್ರಾಮ ತೊರೆಯಲು ಮುಂದಾಗಿದ್ದಾರೆ. ಅಲ್ಲದೆ ಗ್ರಾಮಸ್ಥರನ್ನು ಬೇರೆ ಕಡೆಗಳಿಗೆ ಸ್ಥಳಾಂತರಿಸಲು ಕಂದಾಯ ಅಧಿಕಾರಿಗಳು, ಪೊಲೀಸರು ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಜಮೀನುಗಳಿಗೆ ನುಗ್ಗಿದ ಹಳ್ಳದ ನೀರು
ರಾಮನಗರ: ತಡರಾತ್ರಿ ಮಾಗಡಿ ತಾಲೂಕಿನಾದ್ಯಂತ ಬಾರಿ ಮಳೆ ಹಿನ್ನೆಲೆ ಕೂಟಗಲ್, ಶ್ಯಾನಭೋಗನಹಳ್ಳಿ, ಎರೇಹಳ್ಳಿ ಗ್ರಾಮಗಳ ಜಮೀನುಗಳಿಗೆ ಹಳ್ಳದ ನೀರು ನುಗ್ಗಿದೆ. ಪರಿಣಾಮವಾಗಿ ರೈತರು ಬೆಳೆದ ಅಪಾರ ಪ್ರಮಾಣದ ಬೆಳೆ ನಾಶಗೊಂಡಿದ್ದು, ಬಾಳೆ, ತೆಂಗು, ಸೀಮೆ ಹುಲ್ಲು ಬೆಳೆಗಳು ಸಂಪೂರ್ಣ ನಾಶಗೊಂಡಿವೆ.
ಅಪಾಯದ ಅಂಚಿನಲ್ಲಿ ಕೆರೆ ತೊಣ್ಣೂರು ಕೆರೆ
ಮಂಡ್ಯ: ತಡ ರಾತ್ರಿ ಸುರಿದ ಭಾರೀ ಮಳೆಗೆ ತೊಣ್ಣೂರು ಕೆರೆ ಕೋಡಿ ಬಿದ್ದಿದ್ದು, ರಸ್ತೆಯಲ್ಲಿ ನದಿಯಂತೆ ಹರಿಯುತ್ತಿರುವ ನೀರನ್ನ ಕಂಡು ಜನರು ಭಯಭೀತರಾಗಿದ್ದಾರೆ. ತೊಣ್ಣೂರು ಕೆರೆ 20 ವರ್ಷಗಳ ಬಳಿಕ ಕೋಡಿ ಹೊಡೆದಿರುವ ಪರಿಣಾಮ 100 ಎಕರೆಯಷ್ಟು ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಕಬ್ಬು ಬತ್ತ ಬೆಳೆಗಳಿಗೆ ಹಾನಿಯಾಗಿವೆ. ಮುಂಜಾಗ್ರತಾ ಕ್ರಮವಾಗಿ ಕೆರೆಗೆ ಹೋಗುವ ಮಾರ್ಗವನ್ನ ಪೊಲೀಸರು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ