Karnataka Rain: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಭಾರೀ ಮಳೆ, ತುಮಕೂರಿನಲ್ಲಿ ನೀರಿನಲ್ಲಿ ಸಿಲುಕಿದ ಆ್ಯಂಬುಲೆನ್ಸ್

| Updated By: Rakesh Nayak Manchi

Updated on: Nov 06, 2023 | 10:48 PM

ಬೆಂಗಳೂರು (Bengaluru Rain) ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದು ಸಂಜೆಯಿಂದ ಮಳೆಯಾಗಿದೆ (Karnataka Rain). ತುಮಕೂರಿನಲ್ಲಿ ಸತತ ಒಂದು ಗಂಟೆ ಕಾಲ ಸುರಿದ ಧಾರಾಕಾರ ಮಳೆಗೆ ರಸ್ತೆಯಲ್ಲಿ ತುಂಬಿದ್ದ ಮೂರ್ನಾಲ್ಕು ಅಡಿ ನೀರಿನಲ್ಲಿ ಆ್ಯಂಬುಲೆನ್ಸ್ ಸಿಲುಕಿ ಪರದಾಟ ನಡೆಸಿತು.

Karnataka Rain: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಭಾರೀ ಮಳೆ, ತುಮಕೂರಿನಲ್ಲಿ ನೀರಿನಲ್ಲಿ ಸಿಲುಕಿದ ಆ್ಯಂಬುಲೆನ್ಸ್
ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆ (ಸಾಂದರ್ಭಿಕ ಚಿತ್ರ)
Follow us on

ತುಮಕೂರು, ನ.6: ಬೆಂಗಳೂರು (Bengaluru Rain) ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದು ಸಂಜೆಯಿಂದ ಮಳೆಯಾಗಿದೆ (Karnataka Rain). ತುಮಕೂರಿನಲ್ಲಿ (Tumkur) ಸತತ ಒಂದು ಗಂಟೆ ಕಾಲ ಸುರಿದ ಧಾರಾಕಾರ ಮಳೆಗೆ ಅಂತರಸನಹಳ್ಳಿ ಬ್ರಿಡ್ಜ್ ಬಳಿ ತುಂಬಿದ್ದ ಮೂರ್ನಾಲ್ಕು ಅಡಿಯಷ್ಟು ನೀರಿನಲ್ಲಿ ಆ್ಯಂಬುಲೆನ್ಸ್ ಸಿಲುಕಿ ಪರದಾಟ ನಡೆಸಿತು.

ಬೆಂಗಳೂರು ನಗರದ ಮೆಜೆಸ್ಟಿಕ್, ಶಾಂತಿನಗರ, ವಿಜಯನಗರ, ಜಯನಗರ, ರಾಜಾಜಿನಗರ, ಚಂದ್ರಾಲೇಔಟ್, ಹೆಬ್ಬಾಳ, ಸದಾಶಿವನಗರ, ಬನಶಂಕರಿ, ಜೆ.ಪಿ.ನಗರ, ಕೋರಮಂಗಲ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ.

ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನ ಸವಾರರು ಮಳೆಯಿಂದಾಗಿ ಪರದಾಟ ನಡೆಸಿದರು. ಒಂದು ಘಂಟೆಯ ಮಳೆಗೆ ತಗ್ಗುಪ್ರದೇಶಗಳು ಜಲಾವೃತಗೊಂಡಿದ್ದು, ನಗರದ ಹಲವು ಅಂಡರ್ ಪಾಸ್​ಗಳಲ್ಲಿ ನೀರು ತುಂಬಿಕೊಂಡಿತು.

ಬಾಣಸವಾಡಿ ಬಳಿಯ ಲಿಂಗರಾಜಪುರಂ ಫ್ಲೈ ಓವರ್ ಕೆಳಗಿನ ಅಂಡರ್ ಪಾಸ್ ಜಲಾವೃತಗೊಂಡಿತು. ಫ್ರೆಜರ್ ಟೌನ್​ನಿಂದ ಹೆಣ್ಣೂರು ಮುಖ್ಯರಸ್ತೆಯಲ್ಲಿ ಬರುವ ಮೇಲ್ಸೇತುವೆ ಇದಾಗಿದ್ದು, ಅಂಡರ್ ಪಾಸ್ ಜಲಾವೃತ ಆದ ಹಿನ್ನೆಲೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಕಲಬುರಗಿಯಲ್ಲಿ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತ

ಕಲಬುರಗಿ: ಚಿಕ್ಕ ಅಲ್ಲೂರ, ನಾಲವಾರ ಸೇರಿದಂತೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಿವಿಧೆಡೆ ಸುರಿದ ಧಾರಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಅಲ್ಲೂರ ಗ್ರಾಮದ ಸುರಿದ ಮಳೆಯಿಂದ ರಸ್ತೆಗಳೆಲ್ಲ ಜಲಾವೃತಗೊಂಡಿತು. ಆದರೆ, ಮಳೆಯಿಲ್ಲದೇ ಕಂಗೆಟ್ಟಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿತು.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವರುಣಾರ್ಭಟ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭಾರೀ ಮಳೆಯಾಗಿದ್ದು, ಚನ್ನಪೇಟೆಯಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು. ಹುಬ್ಬಳ್ಳಿಯ ಗಣೇಶ ನಗರದ ರಸ್ತೆ ತುಂಬೆಲ್ಲಾ ನೀರು ತುಂಬಿತು. ಯುಜಿಡಿ ಸಮಸ್ಯೆಯಿಂದ ಮನೆಗಳಿಗೆ ನೀರು ನುಗ್ಗಿದ್ದು, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಿರುದ್ಧ ಜನರು ಆಕ್ರೋಶ ಹೊರಹಾಕಿದರು.

ಸುರಿದ ಮಳೆಗೆ ಕಂಗಾಲಾದ ರೈತರು

ಹಾವೇರಿ ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗಿದೆ. ಆ ಮೂಲಕ ಮಳೆ ಇಲ್ಲದೆ ಕಂಗಾಲಿದ್ದ ಜನರಿಗೆ ವರುಣ ದೇವ ತಂಪೆರೆದಿದ್ದಾನೆ. ಗುಡುಗು ಸಿಡಿಲು ಸಮೇತ ಕೆಲಕಾಲ ಧಾರಕಾರ ಮಳೆಯಾಗಿದೆ. ಆದರೆ ಕಟಾವಿಗೆ ಬಂದ ಮೆಕ್ಕೆಜೋಳ ಹಾನಿಯಾಗುವ ಭಯದಲ್ಲಿ ರೈತರಿದ್ದಾರೆ.

ಇದನ್ನೂ ಓದಿ: Karnataka Rain: ನವೆಂಬರ್ 12ರವರೆಗೆ ಕರ್ನಾಟಕದ ಈ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ

ಯಾದಗಿರಿ ಜಿಲ್ಲೆ ಶಹಾಪುರ‌ ತಾಲೂಕಿನಾದ್ಯಾಂತ ಮಳೆಯಾಗಿದ್ದು, ಮಳೆ ಹೊಡೆತ್ತಕ್ಕೆ ಕಟಾವಿಗೆ ಬಂದಿದ್ದ ಭತ್ತದ ಬೆಳೆ ನೆಲ‌ ಸಮವಾಗಿದೆ. ಶಹಾಪುರ‌ ತಾಲೂಕಿನ ಶಾರದಹಳ್ಳಿ ಗ್ರಾಮದಲ್ಲಿ‌ ನೂರಾರು ಎಕರೆ ಭತ್ತದ ಬೆಳೆ ನೆಲಕ್ಕುರುಳಿವೆ. ಇದರಿಂದಾಗಿ ಅನ್ನದಾತರು ಕಂಗಾಲಾಗಿದ್ದಾರೆ.

ಹಿಂಗಾರು ಬೆಳೆಗಳಿಗೆ ಜೀವ ಸೆಲೆಯಂತಾದ ಮಳೆ

ಹಿಂಗಾರು ಮಳೆ ಆಗದೆ ಬಾಗಲಕೋಟೆ ರೈತರು ಕಂಗಾಲಾಗಿದ್ದರು. ಆದರೆ ಇಂದು ಮಳೆಯಾಗಿದ್ದರಿಂದ ಅನ್ನದಾತರ ಮುಖದಲ್ಲಿ ಸಂತಸ ಮೂಡಿದೆ. ಅರ್ಧ ಗಂಟೆಗೂ ಅಧಿಕ ಕಾಲ ಜಿಟಿ ಜಿಟಿ ಮಳೆ ಸುರಿದಿದೆ. ಹಿಂಗಾರು ಬೆಳೆಗಳಿಗೆ ಈ ಮಳೆ ಜೀವ ಸೆಲೆಯಂತಾಗಿದೆ. ಅಲ್ಲದೆ, ರೈತರಿಗೆ ಅಲ್ಪ ಭರವಸೆ ಮೂಡಿದೆ.

ಕೋಟೆನಾಡು ಚಿತ್ರದುರ್ಗ ನಗರದಲ್ಲಿ ಧಾರಾಕಾರ ಮಳೆಯಾಗಿದ್ದು, ಹಲವೆಡೆ ರಸ್ತೆಗಳು ಬಹುತೇಕ ಜಲಾವೃತಗೊಂಡಿತು. ಗುಮಾಸ್ತ ಕಾಲೋನಿಯಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು. ಚಿಕ್ಕಬಳ್ಳಾಫುರದಲ್ಲಿಯೂ ಮಳೆರಾಯನ ಆಗಮನವಾಗಿದ್ದು, ಮಳೆ ಕಂಡು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:45 pm, Mon, 6 November 23