
ಬೆಂಗಳೂರು, ಅಕ್ಟೋಬರ್ 25: ಕಾವೇರಿ ಜಲಾನಯನ ಪ್ರದೇಶ ಹಾಗೂ ಕೊಡಗು ಭಾಗದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಹಲವು ದಿನಗಳಿಂದ ಮಳೆಯಿಲ್ಲದೆ ಬತ್ತಿಹೋಗುವಂತಿದ್ದ ಕೆಆರ್ಎಸ್ ಸೇರಿದಂತೆ ಪ್ರಮುಖ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದು ರೈತರು ಹಾಗೂ ಸಾರ್ವಜನಿಕರಲ್ಲಿ ನಿರಾಳ ಮೂಡಿಸಿದೆ. ಜಲಾಶಯಗಳ ನೀರಿನ ಮಟ್ಟದಲ್ಲಿ ಆಗುತ್ತಿರುವ ಈ ಸಕಾರಾತ್ಮಕ ಬದಲಾವಣೆಯು ಮುಂಬರುವ ದಿನಗಳಲ್ಲಿ ಕುಡಿಯುವ ನೀರು ಮತ್ತು ಕೃಷಿಗೆ ಅನುಕೂಲವಾಗಲಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕಾವೇರಿ ಕೊಳ್ಳದ ಜೀವನಾಡಿ KRS ಡ್ಯಾಂಗೆ ಇಂದು 9,457 ಕ್ಯೂಸೆಕ್ ಒಳಹರಿವು ದಾಖಲಾಗಿದೆ. 124.80 ಅಡಿ ಗರಿಷ್ಠ ಮಟ್ಟದ ಈ ಅಣೆಕಟ್ಟಿನಲ್ಲಿ, ನೀರಿನ ಮಟ್ಟ 102.98 ಅಡಿಗೆ ಏರಿಕೆಯಾಗಿದೆ. ಸದ್ಯ 25.235 ಟಿಎಂಸಿ ನೀರು ಸಂಗ್ರಹವಿದ್ದು, ಡ್ಯಾಂನಿಂದ 1,589 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಒಳಹರಿವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಪ್ರಸ್ತುತ 10,477 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಜಲಾಶಯದ ವ್ಯಾಪ್ತಿಯಲ್ಲಿ 55 ಮಿ.ಮೀ ಮಳೆ ದಾಖಲಾಗಿದ್ದು, 84 ಅಡಿ ಗರಿಷ್ಠ ಮಟ್ಟದ ಪೈಕಿ ಪ್ರಸ್ತುತ ನೀರಿನ ಮಟ್ಟ 71.61 ಅಡಿಯಷ್ಟಿದೆ. ಒಟ್ಟು 12.48 ಟಿಎಂಸಿ ನೀರು ಸಂಗ್ರಹವಿದ್ದು, ನದಿ ಮತ್ತು ನಾಲೆಗಳಿಗೆ 500 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.
ಕೊಡಗು ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿರುವುದರಿಂದ ಕುಶಾಲನಗರ ತಾಲ್ಲೂಕಿನ ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ಜಲಾಶಯಕ್ಕೆ 2,812 ಕ್ಯೂಸೆಕ್ ಒಳಹರಿವು ಬರುತ್ತಿದ್ದು, 2,859 ಅಡಿ ಗರಿಷ್ಠ ಮಟ್ಟದ ಈ ಡ್ಯಾಂನಲ್ಲಿ ಇಂದಿನ ನೀರಿನ ಮಟ್ಟ 2,846.45 ಅಡಿಯಷ್ಟಿದೆ.
ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ (ಆಲಮಟ್ಟಿ ಡ್ಯಾಂ) ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಇದ್ದು, ಇಂದಿನ ನೀರಿನ ಮಟ್ಟ 516.23 ಮೀಟರ್ ತಲುಪಿದೆ. ಸದ್ಯ ಒಳಹರಿವು ಇಲ್ಲದಿದ್ದರೂ, ಡ್ಯಾಂನಿಂದ 7,743 ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿದೆ.
ತುಂಗಭದ್ರ ಜಲಾಶಯದ ಗರಿಷ್ಠ ಮಟ್ಟ 1633 ಅಡಿಗಳಾಗಿದ್ದು, ಪ್ರಸ್ತುತ ನೀರಿನ ಮಟ್ಟ 1614.548 ಅಡಿಯಿದೆ. ಡ್ಯಾಂನಲ್ಲಿ 47.357 ಟಿಎಂಸಿ ನೀರು ಸಂಗ್ರಹವಿದ್ದು, ನದಿ ಹಾಗೂ ವಿವಿಧ ನಾಲೆಗಳಿಗೆ ಒಟ್ಟು 11,265 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:43 am, Sun, 25 October 26