ಬೆಂಗಳೂರು: ಮುಂದಿನ ಸೋಮವಾರ ಅಂದರೆ ಫೆಬ್ರವರಿ 22ರಿಂದ 6ರಿಂದ 8ನೇ ತರಗತಿವರೆಗೆ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭಿಸುವುದಕ್ಕೆ ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಎಲ್ಲ ಶಿಕ್ಷಣ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಮರು ಆರಂಭಗೊಂಡಂತಾಗಿದೆ. ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ಪ್ರಾರಂಭಿಸಲು ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಗ್ರೀನ್ ಸಿಗ್ನಲ್ ನೀಡಿದ್ದು, 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಯೋಜನೆಯನ್ನು ಆರಂಭಿಸಲಾಗುವುದು. ವಿದ್ಯಾಗಮದ ಫಲಿತಾಂಶಗಳನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಶಾಲೆ ಆರಂಭಕ್ಕೆ ಚಿಂತನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಅಜೀಂ ಪ್ರೇಂಜಿ ವಿವಿ ಮಾಡಿದ ಒಂದು ಒಂದುಸಮೀಕ್ಷೆಯಲ್ಲಿ ಶೇ 90 ರಷ್ಟು ಮಕ್ಕಳು ಗಣಿತ ಪಾಠ ಮರೆತಿದ್ದಾರೆ. ಶೇ 80 ರಷ್ಟು ಮಕ್ಕಳು ಅಕ್ಷರವನ್ನೇ ಮರೆತಿದ್ದಾರೆ ಎಂಬುದು ತಿಳಿದುಬಂದಿದೆ ಎಂದು ತಿಳಿಸಿದ ಅವರು, ಜುಲೈ ೧೫ ರಿಂದ 2021-22ನೇ ಸಾಲಿನ ಹೊಸ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ ಎಂದು ಘೋಷಿಸಿದರು. ಅಲ್ಲದೇ, ಶಾಲೆ ಆರಂಭಕ್ಕೆ ಪೋಷಕರು, ಎದ್ಡಿಎಂಸಿ ಸದಸ್ಯರ ಒತ್ತಡವಿದೆ ಎಂದು ಸಹ ಹೇಳಿದರು.
ಏಕೆ ಆರಂಭವಾಗಬೇಕು..? ಶಿಕ್ಷಣ ಇಲಾಖೆಯ ಮನವಿಯಲ್ಲಿ ಏನಿತ್ತು?
ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮುಂದೆ ಶಿಕ್ಷಣ ಇಲಾಖೆ ಹಲವು ಅಂಶಗಳನ್ನು ಮಂಡಿಸಿತ್ತು. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತ ಪ್ರಕರಣ ಗಣನೀಯ ಇಳಿಕೆ ಕಾಣುತ್ತಿದೆ. ಅಂಗನವಾಡಿ ಕೇಂದ್ರ ತೆರೆಯಲು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಬೇರೆ ರಾಜ್ಯಗಳಲ್ಲಿ ಈಗಾಗಲೇ ಶಾಲೆ ಆರಂಭಗೊಂಡಿದ್ದು,ನಮ್ಮ ರಾಜ್ಯದಲ್ಲೂ 9 ರಿಂದ 12 ನೇ ತರಗತಿವರೆಗೆ ಪೂರ್ಣ ಪ್ರಮಾಣದಲ್ಲಿ ತರಗತಿಗಳು ಆರಂಭವಾಗಿವೆ. ಹೀಗಾಗಿ, ನಮ್ಮ ರಾಜ್ಯದಲ್ಲೂ ಶಾಲೆಗಳನ್ನು ಪೂರ್ಣಪ್ರಮಾಣದಲ್ಲಿ ಆರಂಭಿಸಬೇಕು ಎಂದು ಶಿಕ್ಷಣ ಇಲಾಖೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮುಂದೆ ವಾದ ಮಂಡಿಸಿತ್ತು.
ಅಲ್ಲದೇ, ತಾಂತ್ರಿಕ ಸಲಹಾ ಸಮಿತಿ ನೀಡಿರುವ ಮಾರ್ಗಸೂಚಿ ಅನ್ವಯ ತರಗತಿ ಪ್ರಾರಂಭಿಸಿದ್ದೇವೆ. ಹೀಗಾಗಿ, ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಕೊರೋನಾ ಸೊಂಕು ಪತ್ತೆಯಾಗಿಲ್ಲ. 1ರಿಂದ 8ನೇ ತರಗತಿವರೆಗೆ ಶಾಲೆ ಆರಂಭಿಸಲು ಪೋಷಕರ ಒತ್ತಾಯ ಕೇಳಿಬಂದಿದ್ದು, ಖಾಸಗಿ ಶಾಲೆಗಳ ಒಕ್ಕೂಟದಿಂದಲೂ 1 ರಿಂದ 8 ನೇ ತರಗತಿ ಶಾಲೆ ಆರಂಭಕ್ಕೆ ಮನವಿ ಮಾಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶಾಲೆ ಆರಂಭವಾಗದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಮಕ್ಕಳಿಗೆ ನಿರಂತರ ಶಿಕ್ಷಣ ಕಲಿಕೆ ಅನಿವಾರ್ಯವಾಗಿದ್ದು, ಈಗಾಗಲೇ ಹಲವು ರಾಜ್ಯಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತರಗತಿಗಳು ಆರಂಭವಾಗಿವೆ. ನಮ್ಮ ರಾಜ್ಯದಲ್ಲೂ ತರಗತಿಗಳನ್ನ ಪ್ರಾರಂಭಿಸಬಹುದು ಎಂದು ಶಿಕ್ಷಣ ಇಲಾಖೆ ಮನವಿ ಮಾಡಿತ್ತು.
ಬೇಸಿಗೆಗೂ ಮುನ್ನ ಶಾಲೆ ಆರಂಭವಾಗಲಿ
ಬೇಸಿಗೆ ಪ್ರಾರಂಭಕ್ಕೂ ಮುನ್ನವೇ ಶಾಲೆ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸುವುದು ಒಳಿತು ಎಂಬುದು ಶಿಕ್ಷಣ ತಜ್ಞರ ವಾದವಾಗಿತ್ತು.ಬೇಸಿಗೆ ಪ್ರಾರಂಭವಾದ ನಂತರ ಉತ್ತರ ಕರ್ನಾಟಕ ಭಾಗಗಳಲ್ಲಿ ಶಾಲೆಗಳು ನಡೆಸದು ತುಂಬಾ ಕಷ್ಟದ ಕೆಲಸ. ಹೀಗಾಗಿ, ಬೇಸಿಗೆ ಪ್ರಾರಂಭಕ್ಕೂ ಮುನ್ನವೇ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭಿಸೋದು ಮುಖ್ಯ ಎಂಬುದು ಹಲವರ ವಾದವಾಗಿತ್ತು. ಈ ಎಲ್ಲ ಕಾರಣಗಳನ್ನು ಆಲಿಸಿ ಕೊವಿಡ್ ತಾಂತ್ರಿಕ ಸಲಹಾ ಸಮಿತಿ 6-8ರವೆಗಿನ ವಿದ್ಯಾರ್ಥಿಗಳಿಗೆ ಪೂರ್ಣಪ್ರಮಾಣದಲ್ಲಿ ತರಗತಿ ಆರಂಭಿಸಲು ಅನುಮತಿ ನೀಡಿದೆ.
Published On - 11:29 am, Tue, 16 February 21