ಯಾದಗಿರಿ: ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು ಎನ್ನುವ ಗಾದೆ ಮಾತಿನಂತೆ ಕೃಷಿಯಲ್ಲಿ ಸಾವಯವ ಕೃಷಿ ಮಾಡಿ ಯುವ ರೈತರಿಬ್ಬರು ಯಶಸ್ಸು ಸಾಧಿಸಿದ್ದಾರೆ. ಬಾಳೆ ಹಾಗೂ ಮೆಣಸಿನಕಾಯಿ ಬೆಳೆದು ಈಗ ಲಕ್ಷಾಂತರ ರೂಪಾಯಿ ಆದಾಯ ಸಂಪಾದಿಸುತ್ತಿರುವ ಈ ಯುವ ರೈತ ಓದಿಗೆ ತಿಲಾಂಜಲಿ ಹೇಳಿ ಕೃಷಿಯತ್ತ ಚಿತ್ತ ಹರಿಸಿದ್ದು, ನೀರಾವರಿ ಬೆಳೆ ಬೆಳೆದು ಉತ್ತಮ ಲಾಭ ಗಳಿಸಿದ್ದಾರೆ.
ಇಂದಿನ ಯುವಕರು ಉದ್ಯೋಗಕ್ಕಾಗಿ ಕೃಷಿ ಮಾಡುವುದನ್ನು ಬಿಟ್ಟು ಬೃಹತ್ ನಗರಗಳತ್ತ ಮುಖ ಮಾಡಿ ಊರು ತೊರೆಯುತ್ತಿದ್ದಾರೆ. ಆದರೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬೆಂಡಬೆಂಬಳಿ ಗ್ರಾಮದ ಯುವ ರೈತ ಪರ್ವತರೆಡ್ಡಿ ಅವರು ಪಿಯುಸಿ ವರೆಗೆ ವ್ಯಾಸಂಗ ಮಾಡಿ ಓದಿಗೆ ತಿಲಾಂಜಲಿ ಹಾಡಿದ್ದು, ಓದಿ ಬೇರೆಯವರ ಕೈ ಕೆಳಗೆ ನೌಕರಿ ಮಾಡದೆ ಕೃಷಿಯಲ್ಲಿಯೇ ಬದುಕು ಕಟ್ಟಿಕೊಂಡು ಯುವಕರಿಗೆ ಮಾದರಿಯಾಗಿದ್ದಾರೆ.
ನೀರಾವರಿ ಬೆಳೆ ಬೆಳೆದು ಯಶಸ್ಸು:
ಪರ್ವತರೆಡ್ಡಿ ಅವರು ತಮ್ಮ 16 ಎಕ್ಕರೆ ಭೂಮಿಯಲ್ಲಿ ಕಳೆದ 10 ವರ್ಷದಿಂದ ನೀರಾವರಿ ಬೆಳೆ ಬೆಳೆಯುತ್ತಿದ್ದಾರೆ. ತೆರೆದ ಬಾವಿ ಜೊತೆಗೆ 3 ಬೋರ್ವೆಲ್ ಅನ್ನು ಹಾಕಿಸಿದ್ದು, ಅಂದಾಜು 3 ಲಕ್ಷ ರೂಪಾಯಿ ಹಣ ಖರ್ಚು ಮಾಡಿ ನೀರಾವರಿಗೆ ಅನುಕೂಲ ಮಾಡಿಕೊಂಡಿದ್ದಾರೆ. ತೆರೆದ ಬಾವಿಗೆ ಸುಮಾರು 1 ಲಕ್ಷ ರೂಪಾಯಿ ಖರ್ಚು ಮಾಡಿ ಹೂಳು ತೆಗೆದು ನೀರಿನ ಸೌಲಭ್ಯ ಮಾಡಿಕೊಂಡಿದ್ದಾರೆ.
3 ಎಕರೆಯಲ್ಲಿ ಬಾಳೆ ಬೆಳೆ:
ಪರ್ವತರೆಡ್ಡಿ ಅವರು ತಮ್ಮ 3 ಎಕ್ಕರೆ ಭೂಮಿಯಲ್ಲಿ ಬಾಳೆ ಬೆಳೆ ಬೆಳೆಯುತ್ತಿದ್ದಾರೆ. ಜಿ-9 ತಳಿಯ ಬಾಳೆ ಸಸಿಯನ್ನು ಪ್ರತಿ ಸಸಿಗೆ 20 ಸಾವಿರ ರೂಪಾಯಿ ಹಣ ಖರ್ಚು ಮಾಡಿ ಸುಮಾರು 3600 ಸಸಿಗಳನ್ನು ನೆಡಲಾಗಿದ್ದು, ಕಳೆದ 1 ವರ್ಷದಿಂದ ಬಾಳೆ ಬೆಳೆಯಲಾಗುತ್ತಿದೆ. ಪರ್ವತರೆಡ್ಡಿ ಅವರು ತಮ್ಮ ಜಮೀನಿನಲ್ಲಿ ಬೆಳೆದ ಬಾಳೆಯನ್ನ ಸ್ಥಳೀಯ ಮಾರುಕಟ್ಟೆಯ ಜೊತೆಗೆ ದೂರದ ಹೈದ್ರಾಬಾದ್ಗೂ ಸಹ ಟ್ರಾನ್ಸಪೋರ್ಟ್ ಮಾಡುತ್ತಿದ್ದು, ಉತ್ತಮ ಬೆಲೆ ಸಿಗುತ್ತಿದ್ದರಿಂದ ಬಾಳೆ ಬೆಳೆಯಿಂದ ಬದುಕು ಕಟ್ಟಿಕೊಂಡಿದ್ದಾರೆ.
2 ಎಕರೆಯಲ್ಲಿ ಮೆಣಸಿನ ಕಾಯಿ:
ತಮ್ಮ ಇನ್ನುಳಿದ 2 ಎಕರೆ ಜಮೀನಿನಲ್ಲಿ ಮೆಣಸಿನ ಸಸಿಗಳನ್ನ ಹಾಕಿದ್ದು, ಕಳೆದ ಮೂರು ವರ್ಷಗಳಿಂದ ಪರ್ವತರೆಡ್ಡಿ ಅವರು ಮೆಣಸಿನ ಸಸಿಗಳನ್ನ ಬೆಳೆಸುತ್ತಿದ್ದಾರೆ. ಪ್ರತಿ ವರ್ಷವೂ ಸಹ ಮೆಣಸಿನ ಕಾಯಿಯಿಂದ ಸಾಕಷ್ಟು ಲಾಭವನ್ನ ಗಳಿಸಿದ್ದಾರೆ. ಪ್ರತಿ ಕೆ.ಜಿ ಮೆಣಸಿನಕಾಯಿಗೆ ಸುಮಾರು 250 ರಿಂದ 300 ರೂಪಾಯಿಯಂತೆ ರಾಯಚೂರು ಜಿಲ್ಲೆಗೆ ಮಾರಾಟ ಮಾಡಲಾಗುತ್ತದೆ. ಇದರಿಂದ ವರ್ಷದಿಂದ ವರ್ಷಕ್ಕೆ ಸಾಕಷ್ಟು ಲಾಭ ಬರುತ್ತಿದೆ.
ಓದಿ ಬೆರೆಯವರ ಬಳಿ ನೌಕರಿ ಮಾಡುವ ಬದಲು ನಮ್ಮದೆ ಹೊಲದಲ್ಲಿ ಅಚ್ಚುಕಟ್ಟಾಗಿ ಕೃಷಿ ಮಾಡಿದರೆ ಲಾಭ ಬರಬಹುದು ಎಂದು ಪ್ಲಾನ್ ಮಾಡಿ ಕೃಷಿ ಮಾಡಿದ್ದೇನೆ. ಈಗಾಗಲೇ ಕೃಷಿಯಿಂದ ಸಾಕಷ್ಟು ತೃಪ್ತಿ ಸಿಕ್ಕಿದೆ. ಇನ್ನು ನಮ್ಮ ಹೊಲದ ಬಾವಿಯನ್ನ ಸ್ವಚ್ಛ ಮಾಡಿಸಿ ನೀರು ಶೇಖರಿಸಿದ್ದೇನೆ. ಜೊತೆಗೆ ಮೂರು ಬೋರ್ವೆಲ್ ಕೊರೆಸಿದ್ದು, ಸಾಕಷ್ಟು ನೀರು ಸಿಗುತ್ತಿದೆ ಎಂದು ಪರ್ವತರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ: ಎಳೆ ಜೋಳ ತಿಂದು ರೈತರ ಜೊತೆ ಜೂಟಾಟ ಆಡುತ್ತಿರುವ ಗಿಳಿಗಳು! ತೆನೆ ರಕ್ಷಣೆಗೆ ಹಾವೇರಿ ಅನ್ನದಾತನ ಹರಸಾಹಸ