ಎಳೆ ಜೋಳ ತಿಂದು ರೈತರ ಜೊತೆ ಜೂಟಾಟ ಆಡುತ್ತಿರುವ ಗಿಳಿಗಳು! ತೆನೆ ರಕ್ಷಣೆಗೆ ಹಾವೇರಿ ಅನ್ನದಾತನ ಹರಸಾಹಸ

ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಗುಂಪು ಗುಂಪಾಗಿ ಜಮೀನಿಗೆ ಬರುವ ಗಿಳಿಗಳು ಯಾರಿಗೂ ಭಯ ಪಡುವುದಿಲ್ಲ. ಜಮೀನಿನಲ್ಲಿ ರೈತರು ಇದ್ದರೂ ಸರಿ, ಇರದಿದ್ದರೂ ಸರಿ ಯಾವುದಕ್ಕೂ, ಯಾರಿಗೂ ಚಿಂತೆ ಮಾಡದೆ ತೆನೆಗಳ ಮೇಲೆ ಕುಳಿತು ಹೊಟ್ಟೆ ತುಂಬುವರೆಗೆ ಜೋಳವನ್ನು ತಿಂದು ಹಾರಿ ಹೋಗುತ್ತವೆ.

ಎಳೆ ಜೋಳ ತಿಂದು ರೈತರ ಜೊತೆ ಜೂಟಾಟ ಆಡುತ್ತಿರುವ ಗಿಳಿಗಳು! ತೆನೆ ರಕ್ಷಣೆಗೆ ಹಾವೇರಿ ಅನ್ನದಾತನ ಹರಸಾಹಸ
ಮೆಕ್ಕೆ ಜೋಳ ತಿನ್ನುತ್ತಿರುವ ಗಿಳಿಗಳು
preethi shettigar

| Edited By: sadhu srinath

Feb 06, 2021 | 3:07 PM

ಹಾವೇರಿ: ಜಿಲ್ಲೆಯ ರೈತರ ಜಮೀನುಗಳು ಈಗ ಹಸಿರಿನಿಂದ ನಳನಳಿಸುತ್ತಿವೆ. ಅದರಲ್ಲೂ ಹಿಂಗಾರು ಬೆಳೆಯಾಗಿರುವ ಜೋಳದ ಫಸಲು ಹೊತ್ತು ನಿಂತಿದ್ದು, ಹಾಲುಕಾಳಿನ ಜೋಳದ ತೆನೆಗಳು ರೈತರ ಹೊಲದಲ್ಲಿ ಕಾಣುತ್ತಿವೆ‌. ಆದರೆ, ಈಗ ರೈತರ ಜಮೀನಿನಲ್ಲಿರುವ ಜೋಳದ ತೆನೆಗಳಲ್ಲಿನ ಕಾಳುಗಳು ಮಾಯವಾಗುತ್ತಿದ್ದು, ಜೋಳದ ತೆನೆಗಳನ್ನು ಉಳಿಸಿಕೊಳ್ಳಲು ರೈತರು ಎಲ್ಲಿಲ್ಲದ ಹರಸಾಹಸ ಪಡುವಂತಾಗಿದೆ.

ಹೌದು ಜಿಲ್ಲೆಯಲ್ಲಿ ಜೋಳದ ಜಮೀನುಗಳಿಗೆ ಈಗ ಗಿಳಿಗಳ ಹಿಂಡು ಲಗ್ಗೆ ಇಡುತ್ತಿವೆ‌. ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಗುಂಪು ಗುಂಪಾಗಿ ರೈತರ ಜಮೀನುಗಳಿಗೆ ಗಿಳಿ ಹಿಂಡು ಧಾವಿಸುತ್ತಿದ್ದು, ಜೋಳದ ತೆನೆಗಳನ್ನು ತಿಂದು ಹೋಗುತ್ತಿವೆ. ಜೋಳದ ತೆನೆಗಳಲ್ಲಿ ಈಗ ಹಾಲುಕಾಳು ಆಗುತ್ತಿರುವುದರಿಂದ ಗಿಳಿಗಳಿಗೆ ತೆನೆಗಳು ಹೇಳಿ ಮಾಡಿಸಿದ ಆಹಾರದಂತಿವೆ. ಹೀಗಾಗಿ ಜೋಳದ ಜಮೀನಿಗೆ ಲಗ್ಗೆ ಇಡುತ್ತಿರುವ ಗಿಳಿಗಳು ರುಚಿಕಟ್ಟಾಗಿರುವ ಜೋಳದ ತೆನೆಗಳನ್ನು ತಿಂದು ಹಾರಿ ಹೋಗುತ್ತಿವೆ.

ಭಯವಿಲ್ಲದೆ ಜಮೀನಿನಲ್ಲಿ ಬಿಡಾರ: ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಗುಂಪು ಗುಂಪಾಗಿ ಜಮೀನಿಗೆ ಬರುವ ಗಿಳಿಗಳು ಯಾರಿಗೂ ಭಯ ಪಡುವುದಿಲ್ಲ. ಜಮೀನಿನಲ್ಲಿ ರೈತರು ಇದ್ದರೂ ಸರಿ, ಇರದಿದ್ದರೂ ಸರಿ ಯಾವುದಕ್ಕೂ, ಯಾರಿಗೂ ಚಿಂತೆ ಮಾಡದೆ ತೆನೆಗಳ ಮೇಲೆ ಕುಳಿತು ಹೊಟ್ಟೆ ತುಂಬುವರೆಗೆ ಜೋಳವನ್ನು ತಿಂದು ಹಾರಿ ಹೋಗುತ್ತವೆ. ಕೆಲವು ಗಿಳಿಗಳಂತೂ ಮುಂಜಾನೆಯಿಂದ ಸಂಜೆಯವರೆಗೂ ಜೋಳದ ಜಮೀನುಗಳಲ್ಲೇ ಬಿಡಾರ ಹೂಡಿವೆ.

parrot corn

ತೆನೆಗಳನ್ನು ತಿಂದು ಬಾನಿಗೆ ಹಾರುತ್ತಿರುವ ಗಿಳಿಗಳು

ತೆನೆಗಳ ರಕ್ಷಣೆಗೆ ಅನ್ನದಾತನ ಹರಸಾಹಸ : ಕಳೆದ ಕೆಲವು ದಿನಗಳ ಹಿಂದೆ ಅಕಾಲಿಕವಾಗಿ ಮಳೆ ಸುರಿದು ಜೋಳದ ಬೆಳೆ ನೆಲಕ್ಕೆ ಉರುಳಿತ್ತು. ಅಳಿದುಳಿದ ಜೋಳದ ಬೆಳೆಗಳಲ್ಲಿ ತೆನೆಗಳು ಆಗುತ್ತಿವೆ. ಆದರೆ ಈಗ ಅವುಗಳಿಗೂ ಗಿಳಿಗಳ ಕಾಟ ಶುರುವಾಗಿದೆ. ಹೀಗಾಗಿ ರೈತರು ಬೆಳೆ ರಕ್ಷಣೆಗೆ ನಾನಾ ಬಗೆಯ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಕಪ್ಪನೆಯ ಪ್ಲಾಸ್ಟಿಕ್ ಹಾಳೆಗಳನ್ನು ತಂದು ಜೋಳದ ಜಮೀನುಗಳಲ್ಲಿ ಕಟ್ಟಿದ್ದಾರೆ. ಮೂರ್ನಾಲ್ಕು ಜೋಳದ ದಂಟುಗಳ ನಡುವೆ ಒಂದೊಂದು ಪ್ಲಾಸ್ಟಿಕ್ ಹಾಳೆ ಕಟ್ಟಿದ್ದಾರೆ.

parrot corn

ಗಿಳಿ

ಪ್ಲಾಸ್ಟಿಕ್ ಕಂಡು ಗಿಳಿಗಳು ಬಾರದಿರಲಿ ಎನ್ನುವುದು ರೈತರ ಉದ್ದೇಶ. ಇದರ ಜೊತೆಗೆ ಟೇಪ್ ರೆಕಾರ್ಡರ್​ಗೆ ಹಾಕುತ್ತಿದ್ದ ಕ್ಯಾಸೇಟ್‌ ರೀಲನ್ನು ಜಮೀನಿನಲ್ಲಿ ಕಟ್ಟಿದ್ದಾರೆ. ಗಾಳಿ ಬಿಟ್ಟಾಗ ಕ್ಯಾಸೇಟ್ ರೀಲಿನ ಸದ್ದು ಜೋರಾಗಿ ಬರುವುದರಿಂದ ಗಿಳಿಗಳು ತೆನೆಗಳಿಗೆ ಬಾರದೆ ಹಾಗೆ ಹೆದರಿ ಹೋಗುತ್ತವೆ ಎಂಬುವುದು ರೈತರ ಉದ್ದೇಶ. ಆದರೆ ಯಾವುದನ್ನೂ ಲೆಕ್ಕಿಸದೆ ಗಿಳಿಗಳು ಬಂದು ಕುಳಿತು ತಿಂದು ಆರಾಮಾಗಿ ಹಾರಿಕೊಂಡು ಹೋಗುತ್ತಿವೆ ಎನ್ನುವುದು ವಿಪರ್ಯಾಸ.

parrot corn

ರೈತರಿಗೆ ಆತಂಕವಾದ ಗಿಳಿಗಳ ಗುಂಪು

ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ: ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಬೆಳೆಗಳು ಸಂಪೂರ್ಣ ಹಾಳಾಗಿ ಹೋಗಿವೆ. ಮಾಡಿದ ಖರ್ಚು ಕೈ ಸೇರಿಲ್ಲ. ಹಿಂಗಾರು ಬೆಳೆಯಲ್ಲಿ ಜೋಳ ಬೆಳೆದು ವರ್ಷವಿಡಿ ರೊಟ್ಟಿ ಊಟಕ್ಕೆ ಜೋಳ ಅನುಕೂಲವಾಗುತ್ತದೆ ಎಂದು ಲೆಕ್ಕಾಚಾರ ಹಾಕಿದ್ದರು. ಆದರೆ ಈಗ ಜೋಳ ದಂಟಿನಲ್ಲಿ ತೆನೆಗಳು ಆಗುತ್ತಿವೆ‌. ಜೋಳದ ತೆನೆಗಳಲ್ಲಿ ಕಾಳು ಕಟ್ಟುತ್ತಿವೆ. ಆದರೆ ತೆನೆಗಳಿಗೂ ಗಿಳಿಗಳ ಕಾಟ ಶುರುವಾಗಿರುವುದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಹಾವೇರಿ ಜಿಲ್ಲೆಯಲ್ಲಿ ರೈತರು ಹೆಚ್ಚಾಗಿ ಊಟಕ್ಕೆ ರೊಟ್ಟಿ ಊಟವನ್ನೆ ನೆಚ್ಚಿಕೊಂಡಿದ್ದಾರೆ. ಜೋಳದ ತೆನೆಗಳಿಂದ ರೈತರಿಗೆ ಊಟಕ್ಕೆ ಅನುಕೂಲವಾದರೆ, ಜೋಳದ ದಂಟುಗಳು ರೈತರ ಮನೆಯಲ್ಲಿನ ಜಾನುವಾರುಗಳಿಗೆ ಉತ್ತಮ ಆಹಾರ. ಆದರೆ ಗಿಳಿಗಳ ಹಿಂಡು ಹಗಲು ರಾತ್ರಿ ಎನ್ನದೆ ರೈತರ ಜಮೀನಿಗೆ ಲಗ್ಗೆ ಇಟ್ಟು ಜೋಳದ ತೆನೆಗಳನ್ನು ತಿಂದು ಸ್ವಚ್ಛಂದವಾಗಿ ಹಾರಾಡಿಕೊಂಡಿವೆ.

parrot corn

ಜೋಳದ ಕಾಳುಗಳನ್ನು ತಿನ್ನುತ್ತಿರುವ ಗಿಳಿ

ಹೀಗಾಗಿ ರೈತರಿಗೆ ಜೊಳದ ತೆನೆಗಳನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಗಿಳಿಗಳು ಜಮೀನಿನ ತುಂಬ ಹಾರಾಡುತ್ತಿದ್ದರೆ ಅವುಗಳನ್ನು ಓಡಿಸಲು ರೈತರಿಗೂ ಮನಸ್ಸಾಗುತ್ತಿಲ್ಲ. ಹಾಗಂತ ಸುಮ್ಮನೆ ಬಿಡಲು ಆಗುತ್ತಿಲ್ಲ. ಸುಮ್ಮನೆ ಬಿಟ್ಟರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ. ಹೀಗಾಗಿ ಕಷ್ಟಪಟ್ಟು ಗಿಳಿಗಳನ್ನು ರೈತರು ಜಮೀನಿನಿಂದ ಓಡಿಸುತ್ತಿದ್ದಾರೆ.

ಗಿಳಿಗಳನ್ನು ನೋಡಿದರೆ ಜಮೀನಿನಿಂದ ಓಡಿಸಲು ಮನಸ್ಸಾಗುವುದಿಲ್ಲ. ಆದರೆ ಹಾಗೆ ಬಿಟ್ಟರೆ ಜೋಳದ ತೆನೆಗಳಲ್ಲಿ ಕಾಳುಗಳು ಖಾಲಿ ಆಗುತ್ತವೆ‌. ಈಗ ತೆನೆಗಳಲ್ಲಿ ಹಾಲುಕಾಳಿವೆ. ಹೀಗಾಗಿ ಗಿಳಿಗಳು ಜಮೀನಿನಲ್ಲಿ ಬಿಡಾರ ಹೂಡಿದ್ದು, ಕಾಳುಗಳನ್ನು ತಿಂದು ಹೋಗುತ್ತಿವೆ‌. ಹೀಗಾಗಿ ರೈತರ ಪರಿಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಜೋಳ ಬೆಳೆದ ರೈತ ಪ್ರಕಾಶ ಹೇಳಿದ್ದಾರೆ.

ಕಳೆದ ವರ್ಷ ಅತಿವೃಷ್ಟಿಗೆ ಬೆಳೆ ಹಾಳಾಗಿದ್ದವು. ಅದರ ನಂತರ ಅತಿಯಾದ ಮಳೆಗೆ ಬೆಳೆಗಳು ಮಣ್ಣು ಪಾಲಾಗಿದ್ದವು. ಈಗಲೂ ಹಿಂಗಾರಿ ಬೆಳೆಯಾದ ಜೋಳ ಅಷ್ಟೊಂದು ಉತ್ತಮವಾದ ಫಸಲು ಬಂದಿಲ್ಲ. ಕಳೆದ‌ ಕೆಲವು ದಿನಗಳ ಹಿಂದೆ ಸುರಿದ ಅಕಾಲಿಕ ಮಳೆಗೆ ಜೋಳ ಹಾಳಾಗಿ ಹೋಗಿದೆ. ಅಂತಹದರಲ್ಲಿ ಈಗ ತೆನೆಗಳಲ್ಲಿ ಕಾಳು ಕಟ್ಟುವ ಸಮಯ. ಆ ತೆನೆಗಳಿಗೂ ಗಿಳಿಗಳು ಮುತ್ತಿಗೆ ಹಾಕಿ ಕಾಳುಗಳನ್ನು ತಿಂದು ಹೋಗುತ್ತಿವೆ‌. ಪಾಪ ಗಿಳಿಗಳಿಗೆ ಎಲ್ಲೂ ಆಹಾರ ಸಿಗುತ್ತಿಲ್ಲ. ಹೀಗಾಗಿ ಜಮೀನಿಗೆ ಬಂದು ತಿನ್ನುತ್ತಿವೆ. ಅವುಗಳಿಗೆ ಏನೂ ಮಾಡಲು ಆಗುವುದಿಲ್ಲ. ಇದು ರೈತರ ಪರಿಸ್ಥಿತಿ ಎಂದುಕೊಂಡು ಕೃಷಿ ಜೀವನ ನಡೆಸುತ್ತಿದ್ದೇವೆ ಎಂದು ರೈತ ಮಹಾಂತೇಶ ಅಳಲು ತೋಡಿಕೊಂಡಿದ್ದಾರೆ.

ನೆಲಕಚ್ಚಿದ ಬೆಳೆ: ಮಳೆರಾಯನ ಆರ್ಭಟಕ್ಕೆ ನಲುಗಿದ ಅನ್ನದಾತರು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada