
ಬೆಂಗಳೂರು, ಅಕ್ಟೋಬರ್ 28: ಕರ್ನಾಟಕದ ಮತದಾರರ ಪಟ್ಟಿಯಲ್ಲಿ ಅನರ್ಹವಾಗಿ ಸೇರ್ಪಡೆಯಾಗಿದ್ದ 716 ವಿದೇಶಿ ಪ್ರಜೆಗಳ ಹೆಸರುಗಳನ್ನು ಭಾರತೀಯ ಚುನಾವಣಾ ಆಯೋಗ ತೆಗೆದುಹಾಕಿದೆ. ಬೆಂಗಳೂರಿನ ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಸ್ಐಆರ್ ವೇಳೆ ಅತಿ ಹೆಚ್ಚು ನೇಪಾಳದ ಪ್ರಜೆಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ. ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುರುತಿಸಲಾದ 583 ಅನರ್ಹ ಮತದಾರರ ಪೈಕಿ ನೇಪಾಳದ 545 ಪ್ರಜೆಗಳ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಅಮೆರಿಕ, ದುಬೈ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಕೆನಡಾದ ಪ್ರಜೆಗಳು ಮತದಾರರ ಗುರುತಿನ ಚೀಟಿ ಹೊಂದಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 40 ವಿದೇಶಿ ಪ್ರಜೆಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇವರಲ್ಲಿ ನೇಪಾಳದ 17, ಕೆನಡಾದ 5, ಆಸ್ಟ್ರೇಲಿಯಾದ 6, ಅಮೆರಿಕದ 6 ಮತ್ತು ಬ್ರಿಟನ್‌ನ 2 ಪ್ರಜೆಗಳು ಸೇರಿದ್ದಾರೆ. ನೆದರ್ಲೆಂಡ್ಸ್, ದಕ್ಷಿಣ ಆಫ್ರಿಕಾ, ಐರ್ಲೆಂಡ್ ಮತ್ತು ನಾರ್ವೆಯ ತಲಾ ಒಬ್ಬರ ಹೆಸರನ್ನೂ ತೆಗೆದುಹಾಕಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ನೇಪಾಳ, ಪಾಕಿಸ್ತಾನ, ಅಮೆರಿಕ ಮತ್ತು ಬಾಂಗ್ಲಾದೇಶದ ಪ್ರಜೆಗಳಿಗೆ ಸಂಬಂಧಿಸಿದ 22 ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ನೇಪಾಳ, ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ಕೆನಡಾ ಸೇರಿದಂತೆ ವಿವಿಧ ದೇಶಗಳ 44 ಪ್ರಜೆಗಳ ಹೆಸರುಗಳನ್ನು ತೆಗೆದುಹಾಕಲಾಗಿದೆ. ಬೆಳಗಾವಿ ಮತ್ತು ಹಾಸನ ಜಿಲ್ಲೆಗಳಲ್ಲಿಯೂ ನೇಪಾಳ ಹಾಗೂ ಶ್ರೀಲಂಕಾದ ಪ್ರಜೆಗಳ ಹೆಸರುಗಳು ಪತ್ತೆಯಾಗಿವೆ.
2002ರ ಮತದಾರರ ಪಟ್ಟಿಯ ಮ್ಯಾಪಿಂಗ್ ಮಾಹಿತಿ ಲಭ್ಯವಾಗದ ಮತ್ತು ಮತದಾರರ ಗಣತಿ ನಮೂನೆಗಳ ಪರಿಶೀಲನೆ ನಡೆಯುತ್ತಿದ್ದ ವ್ಯಕ್ತಿಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಈ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಮತದಾರರ ಪಟ್ಟಿಯಿಂದ ಶೇ 45.5 ರಷ್ಟು ಹೆಸರುಗಳು ಹೊರಗೆ!
ಮತದಾರರ ಗುರುತಿನ ಚೀಟಿ ಹೊಂದಿದ್ದರೂ, ಸಂಬಂಧಪಟ್ಟ ವ್ಯಕ್ತಿಗಳು ಶಾಲಾ ಪ್ರಮಾಣಪತ್ರ, ಆಸ್ತಿ ದಾಖಲೆಗಳು ಸೇರಿದಂತೆ ಸೂಚಿಸಲಾದ ಇತರ ದಾಖಲೆಗಳನ್ನು ಒದಗಿಸಲು ಸಾಧ್ಯವಾಗಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಪರಿಶೀಲನೆಯ ಬಳಿಕ ಒಟ್ಟು 716 ವಿದೇಶಿ ಪ್ರಜೆಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ