ಜಗದೀಶ್ ಕುಮಾರ್ ಆಪ್ತ ಮಂಜುನಾಥ್​ಗೆ ಸಂಕಷ್ಟ, ವಿಚಾರಣೆ ಮುಗಿಯುವವರೆಗೆ ಪ್ರ್ಯಾಕ್ಟೀಸ್ ಮಾಡದಂತೆ ಸಸ್ಪೆಂಡ್​ ಮಾಡಿದ ಬಾರ್ ಕೌನ್ಸಿಲ್

ಮಂಜುನಾಥ ಅವರನ್ನು ವಿಚಾರಣೆಗೆ ಕರೆದಿರುವ ಕೌನ್ಸಿಲ್ ಅದು ಮುಗಿಯುವವರಗೆ ಪ್ರ್ಯಾಕ್ಟೀಸ್ ಮಾಡದಂತೆ ಅಮಾನತುಗೊಳಿಸಿದೆ. ಜಗದೀಶ್ ಕುಮಾರ್ ಅವರ ನೋಂದಣಿಗೆ ಸಂಬಂಧಿಸಿದಂತೆ ಎದ್ದಿರುವ ವಿವಾದಕ್ಕೆ ತಾತ್ಕಾಲಿಕ ವಿರಾಮ ಬಿದ್ದಿದೆ

ಜಗದೀಶ್ ಕುಮಾರ್ ಆಪ್ತ ಮಂಜುನಾಥ್​ಗೆ ಸಂಕಷ್ಟ, ವಿಚಾರಣೆ ಮುಗಿಯುವವರೆಗೆ ಪ್ರ್ಯಾಕ್ಟೀಸ್ ಮಾಡದಂತೆ ಸಸ್ಪೆಂಡ್​ ಮಾಡಿದ ಬಾರ್ ಕೌನ್ಸಿಲ್
ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್

Updated on: Apr 03, 2021 | 8:18 PM

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಂತ್ರಸ್ತೆ ಪರ ವಕಾಲತು ಮಾಡುತ್ತಿರುವ ವಕೀಲ ಕೆ. ಎನ್ ಜಗದೀಶ್ ಕುಮಾರ್ ಅವರ ಆಪ್ತನೆಂದು ಹೇಳಲಾಗುತ್ತಿರುವ ವಕೀಲ ಮಂಜುನಾಥ್ ಅವರಿಗೆ ಸಂಕಷ್ಟ ಎದುರಾಗಿದೆ. ಜಗದೀಶ್ ಕುಮಾರ್ ಅವರ ವಕೀಲ ವೃತ್ತಿಯ ಕುರಿತು ವಿವಾದ ಎದ್ದಾಗ ಅವರನ್ನು ವಹಿಸಿಕೊಂಡು ಮಾತಾಡುವ ಭರದಲ್ಲಿ ಮಂಜುನಾಥ ಅವರು ಫೇಸ್ ಬುಕ್ ಲೈವ್​ನಲ್ಲಿ  ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ವೆಲ್​ಫೇರ್ ಸ್ಟ್ಯಾಂಪ್​ಗಳಲ್ಲೇ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದರಲ್ಲದೆ ಮಾಧ್ಯಮಗಳ ಎದುರು ತೋಳಿನಲ್ಲಿ ತಾಕತ್ ಇದ್ದರೆ….. ಅಂತ ಸವಾಲು ಹಾಕಿ ಕೌನ್ಸಿಲ್ ಬಗ್ಗೆ ಅಗೌರವದಿಂದ ಮಾತಾಡಿದ್ದರು. ಮಂಜುನಾಥ ಅವರು ಮಾಡಿರುವ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ಬಾರ್ ಕೌನ್ಸಿಲ್ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.

ಮಂಜುನಾಥ ಅವರನ್ನು ವಿಚಾರಣೆಗೆ ಕರೆದಿರುವ ಕೌನ್ಸಿಲ್ ಅದು ಮುಗಿಯುವವರಗೆ ಪ್ರ್ಯಾಕ್ಟೀಸ್ ಮಾಡದಂತೆ ಅಮಾನತುಗೊಳಿಸಿದೆ. ಜಗದೀಶ್ ಕುಮಾರ್ ಅವರ ನೋಂದಣಿಗೆ ಸಂಬಂಧಿಸಿದಂತೆ ಎದ್ದಿರುವ ವಿವಾದಕ್ಕೆ ತಾತ್ಕಾಲಿಕ ವಿರಾಮ ಬಿದ್ದಿದೆ. ಅವರು ವಕೀಲರಾಗಿ ದೆಹಲಿ ಬಾರ್ ಕೌನ್ಸಲ್​ನಲ್ಲಿ ನೋಂದಣಿ ಮಾಡಿಕೊಂಡಿರುವುದರಿಂದ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಸಾಧ್ಯವಿಲ್ಲ ಎಂದು ಬೆಂಗಳೂರು ಬಾರಿ ಕೌನ್ಸಿಲ್ ಹೇಳಿದೆ.

ಶುಕ್ರವಾರದಂದು ವಕೀಲ ಜಗದೀಶ್ ಕುಮಾರ್ ಅವರು ಕರ್ನಾಟಕದಲ್ಲಿ ವಕೀಲಿ ವೃತ್ತಿ ನಡೆಸಲು ಹೆಸರನ್ನೇ ನೋಂದಾಯಿಸಿಲ್ಲ ಎಂಬ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಹೇಳಿಕೆಗೆ ಖುದ್ದು ತಾವೇ ಪ್ರತಿಕ್ರಿಯೆ ನೀಡಿ, ತಾನು ಕರ್ನಾಟಕ ರಾಜ್ಯ ಬಾರ್​ ಕೌನ್ಸಿಲ್​ನಲ್ಲಿ ನೋಂದಣಿ ಮಾಡಿಲ್ಲ ಅಂತ ಹೇಳಲಾಗುತ್ತಿದೆ, ಆದರೆ ಕರ್ನಾಟಕ ಕಾನೂನು ವಿಶ್ವವಿದ್ಯಾಲುದಿಂದ ಕಾನೂನು ಪದವಿ ಪಡೆದು ಆಲ್‌ ಇಂಡಿಯಾ ಬಾರ್ ಕೌನ್ಸಿಲ್ ಪರೀಕ್ಷೆಯನ್ನು ಪಾಸು ಮಾಡಿರುವುದಾಗಿ ಹೇಳಿದ್ದರು. ಹಾಗೆಯೇ, ದೆಹಲಿ ಬಾರ್ ಕೌನ್ಸಿಲ್​ನಲ್ಲಿ ತಾನು ಹೆಸರನ್ನು ನೋಂದಣಿ ಮಾಡಿಸಿಕೊಂಡಿರುವುದಾಗಿ ಹೇಳಿದ್ದ ಅವರು ವಕೀಲ ವೃತ್ತಿ ನಡೆಸಲು ನೋಂದಣಿಯೇ ಮಾಡಿಸಿಲ್ಲ ಎಂದು ಹೇಳುತ್ತಿರುವುದು ಸರಿಯಲ್ಲ, ತಾಕತ್ತಿದ್ದರೆ ತನ್ನ ವಿರುದ್ಧ ಕಾನೂನು ಪ್ರಕಾರ ಹೋರಾಡಲಿ ಸುಳ್ಳುಕಂತೆಗಳನ್ನು ಸೃಷ್ಟಿಸಿ ಇಲ್ಲದ ಆರೋಪಗಳನ್ನು ಮಾಡುವುದು ಕೂಡಲೇ ನಿಲ್ಲಿಸಬೇಕು ಎಂದಿದ್ದರು.

ಅಲ್ಲದೆ, ಕರ್ನಾಟಕ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು 2011 ರಲ್ಲಿ ಕೇಂದ್ರದಲ್ಲಿ ಕಾನೂನು ಸಚಿವರಾಗಿದ್ದಾಗ ವಕೀಲರ ಕಾಯ್ದೆ 1961ರ ಸೆಕ್ಷನ್​ 30 ಕ್ಕೆ ತಿದ್ದುಪಡಿ ತಂದು ವಕೀಲರು ಭಾರತದ ಯಾವುದೇ ರಾಜ್ಯ ಹಾಗೂ ನ್ಯಾಯಾಲಯಗಳಲ್ಲಿ ವಾದಿಸಲು ಅವಕಾಶ ಮಾಡಿಕೊಟ್ಟಿದ್ದನ್ನು ಸಹ ಜಗದೀಶ್ ಕುಮಾರ್ ಉಲ್ಲೇಖಿಸಿದ್ದರು.

ಏತನ್ಮಧ್ಯೆ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದೆನ್ನಲಾಗಿರುವ ಸೆಕ್ಸ್ ಸಿಡಿ ಪ್ರಕರಣದಲ್ಲಿ ತನಿಖೆಯನ್ನು ಮುಂದುವರೆಸಿರುವ ವಿಶೇಷ ತನಿಖಾ ದಳವು (ಎಸ್ಐಟಿ) ಇಂದು ಸಂತ್ರಸ್ತೆ ಎನ್ನಲಾಗುತ್ತಿರುವ ಯುವತಿಯನ್ನು ಆಡುಗೋಡಿಯ ಟೆಕ್ನಿಕಲ್​ ಸೆಲ್​ನಲ್ಲಿ ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದರು.

ಮೂಲಗಳ ಪ್ರಕಾರ ಸಂತ್ರಸ್ತೆಯು ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ತಡವರಿಸದೆ ಉತ್ತರಿಸಿದರೆನ್ನಲಾಗಿದೆ. ಆಕೆಯನ್ನು ಅಪಹರಣ ಮಾಡಲಾಗಿದೆ ಎಂದು ಪೋಷಕರು ಮಾಡಿರುವ ಅರೋಪವನ್ನು ಸಾರಾಸಗಟು ತಳ್ಳಿಹಾಕಿರುವ ಸಂತ್ರಸ್ತೆಯು ತನ್ನನ್ನು ಯಾರೂ ಅಪಹರಿಸಿರಲಿಲ್ಲ ಮತ್ತು ತಾನೇ ಖುದ್ದಾಗಿ ಒಬ್ಬ ಸ್ನೇಹಿತನೊಂದಿಗೆ ಗೋವಾಗೆ ಹೋಗಿದ್ದಾಗಿ ಎಸ್​ ಐ ಟಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿಕರ್ನಾಟಕದಲ್ಲಿ ವಕೀಲಿ ವೃತ್ತಿ ನಡೆಸಲು ಜಗದೀಶ್ ಕುಮಾರ್​ ಹೆಸರನ್ನೇ ನೋಂದಾಯಿಸಿಲ್ಲ: ಬಾರ್​ ಕೌನ್ಸಿಲ್​ ಸ್ಪಷ್ಟನೆ

Published On - 8:16 pm, Sat, 3 April 21