ಬೆಂಗಳೂರು, (ಆಗಸ್ಟ್ 18): ನೀರಿನ ಅಭಾವವಿದ್ದರೂ ತಮಿಳುನಾಡಿಗೆ ಕಾವೇರಿ ನದಿ ನೀರು(Cauvery Water )ಹರಿಬಿಡಲಾಗುತ್ತಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕೃಷ್ಣರಾಜ ಸಾಗರ ಡ್ಯಾಂನಿಂದ 12,781 ಕ್ಯೂಸೆಕ್ಸ್ ನೀರನ್ಮು ಕಾವೇರಿ ನದಿಗೆ ಬಿಡುಗಡೆ ಮಾಡಿ ಅದನ್ನು ತಮಿಳುನಾಡಿಗೆ(Tamil nadu) ಹರಿಸಲಾಗಿದೆ. ಕೆಅರ್ ಅಸ್ ಜಲಾಶಯಯದ ಗರಿಷ್ಟ ಮಟ್ಟ 124.80 ಅಡಿ, ಅದರಲ್ಲಿ ನಿನ್ನೆ (ಆಗಸ್ಟ್ 17) ವರೆಗೆ 110.04 ಅಡಿಗಳಷ್ಟು ಮಾತ್ರ ನೀರಿದೆ. ನೀರಿನ ಅಭಾವದ ಮಧ್ಯೆಯೂ ತಮಿಳುನಾಡಿಗೆ ಹೆಚ್ಚೆಚ್ಚು ನೀರು ಹರಿಸುತ್ತಿರುವುದಕ್ಕೆ ರೈತರ ಆತಂಕಕ್ಕೆ ಕಾರಣವಾಗಿದೆ. ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಜ್ಯದಲ್ಲಿ ಮಳೆ ಕೊರತೆಯಿಂದ ನೀರಿನ ಅಭಾವ ಹೆಚ್ಚಾಗಿದೆ. ಆದರೂ ಆರಂಭದಲ್ಲಿ ನಾವು ತಮಿಳುನಾಡಿಗೆ ನೀರು ಹರಿಸಿದ್ದೇವೆ. ಕೃಷಿ ಉದ್ದೇಶಕ್ಕಿಂತ ಕುಡಿಯುವ ಉದ್ದೇಶಕ್ಕೆ ನೀರು ಸಂಗ್ರಹಿಸಬೇಕಿದೆ. ಹೀಗಾಗಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಮಾಜಿ ಸಿಎಂ ಕುಮಾರಸ್ವಾಮಿ ಕೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಕೇವಲ ಕಾವೇರಿ ವಿಚಾರ ಮಾತ್ರವಲ್ಲ, ಮಹದಾಯಿ, ಕೃಷ್ಣಾ ಸೇರಿದಂತೆ ಪ್ರಮುಖ ವಿಚಾರ ಬಗ್ಗೆ ಸರ್ವಪಕ್ಷಗಳ ಜತೆ ಚರ್ಚಿಸುವುದರಲ್ಲಿ ತಪ್ಪಿಲ್ಲ/ ಸರ್ವಪಕ್ಷಗಳ ಸಭೆ ನಡೆಸುವ ಬಗ್ಗೆ ನಾವೂ ಆಲೋಚನೆ ಮಾಡಿದ್ದೇವೆ ಎಂದರು.
ನೀರು ಬಿಡುಗಡೆ ಮಾಡಬಾರದೆಂದು ಬಸವರಾಜ ಬೊಮ್ಮಾಯಿ ಪತ್ರ ಬರೆದಿದ್ದಾರೆ. ಬೊಮ್ಮಾಯಿ ಸಿಎಂ ಆಗಿದ್ದಾಗಲೂ ತಮಿಳುನಾಡಿಗೆ ನೀರು ಬಿಡಲಾಗಿತ್ತು. ಹೆಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗಲೂ ನೀರು ಬಿಡಲಾಗಿತ್ತು. ಈ ಬಗ್ಗೆ ದಾಖಲೆಗಳಿವೆ, ಇದರಲ್ಲಿ ರಾಜಕಾರಣ ಮಾಡುವ ಅಗತ್ಯವಿಲ್ಲ. ನಮ್ಮ ಸ್ಥಿತಿ ಹದಗೆಟ್ಟಿದ್ದು ತಮಿಳುನಾಡಿನವರ ಆಗ್ರಹ ಮುಂದುವರೆದಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಟಾಂಗ್ ಕೊಟ್ಟರು.
ರೈತರ ಪ್ರತಿಭಟನೆ ಜೊತೆಗೆ ಶಾಸಕರ ಅಸಮಾಧಾನ ತಿಳಿದಿದೆ. ನಮ್ಮ ರಾಜ್ಯದವರು ಕೇಂದ್ರದ ಕಮಿಟಿ ಬಳಿ ಸಮರ್ಥ ವಾದ ಮಾಡಿದ್ದಾರೆ. ಆದರೆ ತಮಿಳುನಾಡು ಸಭೆಯಿಂದ ಹೊರ ನಡೆದಿದೆ. 15 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಕೇಳಿದ್ದರು. ನಾವು ಅದಕ್ಕೆ ಒಪ್ಪದ ಕಾರಣ ಹೊರ ನಡೆದರು. ಈ ಬಗ್ಗೆ ಸುಪ್ರೀಂಕೋರ್ಟ್ ಇವತ್ತು ತಾತ್ಕಾಲಿಕ ತೀರ್ಪು ನೀಡಲಿದೆ ಎಂದರು.
ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ಮಾಡುತ್ತೇವೆ. ರಾಜ್ಯದ ರೈತರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ. ಕಟ್ಟು ಪದ್ಧತಿಯಲ್ಲಿ ಬೆಳೆಗಳಿಗೆ ನೀರು ಬಿಡುಗಡೆ ಮಾಡುತ್ತಿದ್ದೇವೆ. 15 ದಿನಗಳಿಗೊಮ್ಮೆ ನೀರು ಬಿಡುಗಡೆ ಮಾಡುತ್ತಿದ್ದೇವೆ. ಸದ್ಯ ತಮಿಳುನಾಡಿಗೆ ನಿತ್ಯವೂ ಕೇಂದ್ರದ ತೀರ್ಮಾನದಂತೆ ನೀರು ಹರಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ