ನಂದಿನಿ ಹಾಲಿನ ಜೊತೆಗೆ ಬಸ್ ಟಿಕೆಟ್ ದರವೂ ಏರಿಕೆ: ಸಚಿವ ಬೈರತಿ ಸುರೇಶ್ ಸುಳಿವು

ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಏರಿಕೆಯ ಚರ್ಚೆಗಳು ನಡೆದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ದರ ಏರಿಕೆ ಬಗ್ಗೆ ಅಧಿಕೃತ ಆದೇಶ ಹೊರಬೀಳಲಿದೆ. ಇದರ ಬೆನ್ನಲ್ಲೇ ಇದೀಗ ಸಾರಿಗೆ ಬಸ್ ಟಿಕೆಟ್ ದರವನ್ನು ಸಹ ಹೆಚ್ಚಳ ಮಾಡುವ ಕುರಿತು ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಸುಳಿವು ನೀಡಿದ್ದಾರೆ. ಹಾಗಾದ್ರೆ, ಸಾರಿಗೆ ಸಚಿವರು ಏನೆಲ್ಲಾ ಹೇಳಿದ್ದಾರೆ ಎನ್ನುವ ವರದಿ ಇಲ್ಲಿದೆ

ನಂದಿನಿ ಹಾಲಿನ ಜೊತೆಗೆ ಬಸ್ ಟಿಕೆಟ್ ದರವೂ ಏರಿಕೆ: ಸಚಿವ ಬೈರತಿ ಸುರೇಶ್ ಸುಳಿವು
Byrathi Suresh
Edited By:

Updated on: Sep 30, 2026 | 9:24 PM

ಬೆಂಗಳೂರು, (ಸೆಪ್ಟೆಂಬರ್ 30): ಕರ್ನಾಟಕ ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳ ಮಾಡುವ ಕುರಿತು ಸಾರಿಗೆ ಸಚಿವ ಬೈರತಿ ಸುರೇಶ್ ಸುಳಿವು ನೀಡಿದ್ದಾರೆ. ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ನೇಮಕಗೊಂಡಿರುವ ನಿವೃತ್ತ ಐಎಎಸ್ ಅಧಿಕಾರಿ ಅತುಲ್ ತಿವಾರಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಒಂದೆರಡು ದಿನಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಈ ವರದಿಯ ಆಧಾರದ ಮೇಲೆ ಎಷ್ಟು ಹೆಚ್ಚಿಸಬೇಕೆಂದು ಅಂತಿಮ ನಿರ್ಧಾರವಾಗಲಿದೆ. ಈ ಬಗ್ಗೆ ಸಾರಿಗೆ ಸಚಿವ ಪ್ರತಿಕ್ರಿಯಿಸಿದ್ದು, ಇವತ್ತು ಅಥವಾ ನಾಳೆ ವರದಿ ಸಲ್ಲಿಸುತ್ತಾರೆ. ವರದಿ ಆಧರಿಸಿ ಎಷ್ಟು ದರ ಹೆಚ್ಚಿಸಬೇಕೆಂದು ಚರ್ಚಿಸಿ ಅಂತಿಮವಾಗಿ ಸಂಪುಟದ ಅನುಮೋದನೆ ಪಡೆದು ಟಿಕೆಟ್ ದರ ಹೆಚ್ಚಳ ಮಾಡಲಾಗುತ್ತೆ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಉಪಸ್ಥಿತಿಯಲ್ಲಿ ರಾಜಧಾನಿಯ ಸಂಚಾರ ದಟ್ಟಣೆ ನಿಯಂತ್ರಣ, ರಸ್ತೆ ಸುರಕ್ಷತೆ ಹೆಚ್ಚಿಸುವುದು ಹಾಗೂ ಸಂಚಾರಿ ನಿಯಮಗಳ ಉಲ್ಲಂಘನೆಗೆ ಪರಿಣಾಮಕಾರಿಯಾಗಿ ಕಡಿವಾಣ ಹಾಕುವ ಸಂಬಂಧ ನಡೆದ ಸಭೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಬೈರತಿ, ಸಾರಿಗೆ ನಿಗಮಗಳು ಆರ್ಥಿಕವಾಗಿ ತೀವ್ರ ಸಂಕಷ್ಟ ಎದುರಿಸುತ್ತಿರುವುದರಿಂದ ಪ್ರಯಾಣ ದರವನ್ನು ಹೆಚ್ಚಳ ಮಾಡುವುದು ಅನಿವಾರ್ಯ ಎಂದು ತಿಳಿಸಿದರು.

ಇದನ್ನೂ ಓದಿ: ಮಹಿಳೆಯರ ಉಚಿತ ಬಸ್ ಪ್ರಯಾಣ: ಆಧಾರ್ ಬದಲಿಗೆ ಸ್ಮಾರ್ಟ್​ ಕಾರ್ಡ್ ನೀಡಲು ಮುಂದಾದ ಸರ್ಕಾರ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಒಂದು ವರ್ಷದಲ್ಲಿ ನಾಲ್ಕು ಬಾರಿ ಡೀಸೆಲ್ ಬೆಲೆ ಹೆಚ್ಚಳ ಮಾಡಿದೆ. ಇದರ ಪರಿಣಾಮ ಪ್ರತಿ ಲೀಟರ್ ಡೀಸೆಲ್ ಬೆಲೆ 15 ರಿಂದ 16 ರೂಪಾಯಿ ಹೆಚ್ಚಳವಾಗಿದ್ದು, ನಮ್ಮ ಸಾರಿಗೆ ನಿಗಮಗಳಿಗೆ ವಾರ್ಷಿಕ 8 ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದು ಹೇಳಿದರು.

ಅತುಲ್ ತಿವಾರಿ ಅವರು ಎಲ್ಲಾ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಿದ್ದು, ವರದಿ ನೀಡಲಿದ್ದಾರೆ. ಆ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿಟ್ಟು ಚರ್ಚಿಸಿ, ಮುಖ್ಯಮಂತ್ರಿಗಳ ಅನುಮೋದನೆ ಪಡೆದ ನಂತರ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಎಲ್ಲಾ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ

ಮಹಿಳೆಯರಿಗೆ ಸಾರಿಗೆ ನಿಗಮಗಳ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡುವ ಶಕ್ತಿ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಸರ್ಕಾರ ನಿರ್ಧರಿಸಿದೆ. ಇದರನ್ವಯ ಮುಖ್ಯಮಂತ್ರಿ ಶಿವಕುಮಾರ್ ಆಶಯದಂತೆ ಎಲ್ಲಾ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಅನ್ಯ ರಾಜ್ಯದ ಮಹಿಳೆಯರೂ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ನಮ್ಮ ರಾಜ್ಯದ ಮಹಿಳೆಯರಿಗೆ ಮಾತ್ರ ಸೀಮಿತಗೊಳಿಸಲು ಮತ್ತು ಅವರ ಪ್ರಯಾಣವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದೇವೆ ಎಂದರು.

ಮೊದಲ ಹಂತದಲ್ಲಿ ಒಂದು ಕೋಟಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ನೀಡುವ ದಿಸೆಯಲ್ಲಿ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಎರಡು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್ ಸಿದ್ಧವಾಗಲಿವೆ ಮತ್ತು ಮಹಿಳೆಯರಿಗೆ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Loading...
Unable to load recommendations.
Follow Us