ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಕಲಿ ಅಂಕಪಟ್ಟಿ, ಅಕ್ರಮಗಳಿಗೆ ಕಡಿವಾಣ ಹಾಕುವುದಾ ಡಿಜಿಟಲ್ ತಂತ್ರಜ್ಞಾನ?

| Updated By: ಸಾಧು ಶ್ರೀನಾಥ್​

Updated on: Jan 12, 2021 | 5:09 PM

ಇತ್ತೀಚಿನ ದಿನಗಳಲ್ಲಿ ಅಂಕಪಟ್ಟಿ ತಿದ್ದುಪಡಿ, ಖೊಟ್ಟಿ ಅಂಕಪಟ್ಟಿ ತಯಾರು ಮಾಡುವ ಜಾಲ ಎಲ್ಲೆಡೆ ಬೆಳೆಯುತ್ತಿದೆ. ಇದರಿಂದಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಇಂಥಹ ಅನೇಕ ಪ್ರಕರಣಗಳು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕಂಡು ಬಂದಿದ್ದವು.ಈ ನಿಟ್ಟಿನಲ್ಲಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಇದೀಗ ತಂತ್ರಜಾನದ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಕಲಿ ಅಂಕಪಟ್ಟಿ, ಅಕ್ರಮಗಳಿಗೆ ಕಡಿವಾಣ ಹಾಕುವುದಾ ಡಿಜಿಟಲ್ ತಂತ್ರಜ್ಞಾನ?
ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡ
Follow us on

ಧಾರವಾಡ: ಅಂಕಪಟ್ಟಿ ತಿದ್ದುಪಡಿ, ಖೊಟ್ಟಿ ಅಂಕಪಟ್ಟಿ ತಯಾರು ಮಾಡುವ ಜಾಲಕ್ಕೆ ಬ್ರೇಕ್​ ಹಾಕುವ ಕಾಲ ಬಂದಿದೆ. ಥ್ಯಾಂಕ್ಸ್​ ಟು  ಡಿಜಿಟಲ್ ತಂತ್ರಜ್ಞಾನ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಇಂಥಹ ಅನೇಕ ಪ್ರಕರಣಗಳು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕಂಡು ಬಂದಿದ್ದವು. ಈ ನಿಟ್ಟಿನಲ್ಲಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಅಕ್ರಮಗಳ ತಡೆಗೆ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ತಂತ್ರಜಾನದ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಎಲ್ಲವೂ ಡಿಜಿಟಲ್ ಜಗತ್ತಿನಲ್ಲಿಯೇ ಲಭ್ಯ:

ಸದ್ಯಕ್ಕೆ ವಿಶ್ವವಿದ್ಯಾಲಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಸೇರಿದಂತೆ ಇತರೆ ದಾಖಲೆಗಳನ್ನು ಕಾಗದಗಳಲ್ಲಿ ಮುದ್ರಿಸಿ ನೀಡಲಾಗುತ್ತಿದೆ. ಆದರೆ ವಂಚಕರು ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ, ಇದೇ ದಾಖಲೆಗಳನ್ನು ತಿದ್ದಿ ಅಥವಾ ಬದಲಾಯಿಸಿ ಅಕ್ರಮ ಎಸಗುತ್ತಿದ್ದಾರೆ. ಹೀಗಾಗಿ ಎಚ್ಚೆತ್ತುಕೊಂಡಿರುವ ಆಡಳಿತ ಮಂಡಳಿ, ಇದೀಗ ಈ ಎಲ್ಲ ದಾಖಲೆಗಳನ್ನು ಡಿಜಿಟಲ್ ಮೂಲಕವೇ ನಿರ್ವಹಿಸಲು ಮತ್ತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದ್ದಾರೆ.

ಏನಿದು ಹೊಸ ಸಾಧ್ಯತೆ?

ಈಗಾಗಲೇ ಸರಕಾರ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಎಲೆಕ್ಟ್ರಾನಿಕ್ಸ್ ಡಾಂಕ್ಯುಮೆಂಟ್ ಜನರೇಷನ್ ಸಿಸ್ಟೆಮ್ (ಇಡಿಜಿಎಸ್) ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿದೆ. ವಿದ್ಯಾರ್ಥಿಗಳ ಪ್ರವೇಶಾತಿಯಿಂದ ಅವರ ಅಂಕಪಟ್ಟಿಯವರೆಗೆಎಲ್ಲವೂ ವೆಬ್ ಮೂಲಕವೇ ಪಡೆಯುವ ಅವಕಾಶ ಇಲ್ಲಿದೆ. ಓರ್ವ ವಿದ್ಯಾರ್ಥಿ ಪ್ರವೇಶ ಕೋರಿ ಅರ್ಜಿ ಸಲ್ಲಿಸುವುದರಿಂದ ಹಿಡಿದು, ವಿದ್ಯಾಭ್ಯಾಸ ಮುಗಿಸಿ ಬೇರೆ ಕಡೆಗೆ ಹೋಗುವಾಗ ವರ್ಗಾವಣೆ ಪ್ರಮಾಣ ಪತ್ರವನ್ನು ಕೂಡ ಇದೇ ಡಿಜಿಟಲ್ ಮಾಧ್ಯಮದ ಮೂಲಕವೇ ಪಡೆಯಬಹುದು.

ಇನ್ನು, ಪರೀಕ್ಷೆ ವಿಚಾರಕ್ಕೆ ಬಂದರೆ, ಅಲ್ಲಿಯೂ ಕೂಡ ಯಾವುದೇ ಅಕ್ರಮಕ್ಕೆ ಅವಕಾಶವೇ ಇರುವುದಿಲ್ಲ. ಏಕೆಂದರೆ ಈ ವ್ಯವಸ್ಥೆ ಜಾರಿಗೆ ಬಂದರೆ, ಕೊನೆಯ ಹಂತದವರೆಗೂ ಯಾವ ಉಪನ್ಯಾಸಕ, ಪ್ರಾಧ್ಯಾಪಕರಿಗೆ ಯಾವ ಕಡೆಗೆ ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಅನ್ನುವುದು ಗೊತ್ತೇ ಇರುವುದಿಲ್ಲ. ಕೊನೆಯ ಹಂತದಲ್ಲಿ ಈ ರೀತಿ ಮಾಹಿತಿ ನೀಡಿದರೆ, ಅಕ್ರಮಗಳನ್ನು ತಡೆಯಲು ಸಾಧ್ಯವಾಗುತ್ತದೆ.

ಏಕೆಂದರೆ ಈಗಿನ ವ್ಯವಸ್ಥೆಯಲ್ಲಿ ಯಾರಿಗೆ ಎಲ್ಲಿಗೆ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ ಅನ್ನುವುದು ಕೆಲ ದಿನಗಳ ಮುಂಚೆಯೇ ಗೊತ್ತಾಗಿರುತ್ತದೆ. ಈ ರೀತಿ ಮಾಹಿತಿ ಇರುವುದರಿಂದ ಅಕ್ರಮ ನಡೆಯಲು ಅವಕಾಶವಿರುತ್ತದೆ. ಆದರೆ ಕೊನೆಯ ಹಂತದಲ್ಲಿ ಕರ್ತವ್ಯದ ವಿವರ ಗೊತ್ತಾಗುವುದರಿಂದ ಅಕ್ರಮ ತಡೆಗಟ್ಟಲು ಇದೊಂದು ಒಳ್ಳೆಯ ವ್ಯವಸ್ಥೆ ಅನ್ನಬಹುದು.

ಇಂಥಹ ಪ್ರಯೋಗ ರಾಜ್ಯದಲ್ಲಿಯೇ ಪ್ರಥಮ:

ದೇಶದಲ್ಲಿ ಇಂಥ ವ್ಯವಸ್ಥೆಗೆ ಸರಕಾರವೇ ನಿರ್ವಹಿಸುತ್ತಿರುವ ಅನೇಕ ವೇದಿಕೆಗಳಿವೆ. ಎನ್.ಎ.ಡಿ, ಡಿಜಿಲಾಕ್, ಇಡಿಜಿಎಸ್ ಸೇರಿದಂತೆ ಅನೇಕ ವ್ಯವಸ್ಥೆಗಳ ಮೂಲಕ ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ಇಡಬಹುದಾಗಿದೆ. ವಿದ್ಯಾರ್ಥಿ ಪ್ರವೇಶ ಪಡೆಯಲು ಹೋದಾಗ ಆತನ ಎಲ್ಲ ಮಾಹಿತಿಯನ್ನು ಸಂಬಂಧಿಸಿದ ಆಡಳಿತ ಮಂಡಳಿ ಈ ವ್ಯವಸ್ಥೆಗಳ ಮೂಲಕವೇ ಪಡೆಯಬಹುದು.

ಹೀಗಾಗಿ ಇಲ್ಲಿ ಅಕ್ರಮ ನಡೆಯುವ ಸಾಧ್ಯತೆ ಇರುವುದಿಲ್ಲ. ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಸಿರುವ ವಿಶ್ವವಿದ್ಯಾಲಯದ ಆಡಳಿತ ಮಂಡಳಿ, ಆದಷ್ಟು ಬೇಗ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸರಕಾರದಿಂದ ಇದಕ್ಕೆ ಅನುಮತಿ ಪಡೆಯಲು ಯತ್ನಿಸುತ್ತಿದೆ. ಒಂದು ವೇಳೆ ಸರಕಾರ ಇದಕ್ಕೆ ಅನುಮತಿ ನೀಡಿದರೆ, ರಾಜ್ಯದಲ್ಲಿಯೇ ಇಂಥ ವ್ಯವಸ್ಥೆ ಹೊಂದಿರುವ ಪ್ರಥಮ ವಿಶ್ವವಿದ್ಯಾಲಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ವಿದ್ಯಾರ್ಥಿಗಳಿಗೆ ಅನುಕೂಲ:

ಎಷ್ಟೋ ಸಂದರ್ಭದಲ್ಲಿ ವಿದ್ಯಾರ್ಥಿಗಳು ನೂರಾರು ಕಿ.ಮೀ ಪ್ರಯಾಣಿಸಿ, ಪ್ರವೇಶ ಪಡೆಯಲು ಬೇರೆ ಬೇರೆ ಕಾಲೇಜುಗಳಿಗೆ ಹೋಗಿರುತ್ತಾರೆ. ಈ ವೇಳೆ ಒಂದೇ ಒಂದು ದಾಖಲೆಯನ್ನು ಮರೆತು ಬಂದಿದ್ದರೂ ಅವರಿಗೆ ಪ್ರವೇಶ ಸಿಗುವುದೇ ಇಲ್ಲ. ಇನ್ನು ಎಷ್ಟೋ ವಿದ್ಯಾರ್ಥಿಗಳು ಪ್ರಯಾಣದ ವೇಳೆ ದಾಖಲೆಗಳನ್ನೇ ಕಳೆದುಕೊಂಡು ಬಿಟ್ಟಿರುತ್ತಾರೆ. ಹೀಗಾಗಿ ಪ್ರವೇಶ ಸಿಗುವುದು ಕಷ್ಟಕರವಾಗಿರುತ್ತದೆ. ಈ ಸಮಸ್ಯೆ ಉದ್ಯೋಗಕ್ಕಾಗಿ ನಡೆಯೋ ಸಂದರ್ಶನದ ವೇಳೆಯೂ ಸಂಭವಿಸುತ್ತಿರುತ್ತವೆ. ಆದರೆ ಎಲ್ಲ ದಾಖಲೆಗಳು ಡಿಜಿಟಲ್ ರೂಪದಲ್ಲಿ ಇದ್ದರೆ, ಸಮಸ್ಯೆಗಳನ್ನು ತಡೆಗಟ್ಟಬಹುದು.

ಇಂಟರ್​ನೆಟ್ ಇದ್ದರೆ ಸಾಕು, ಕ್ಷಣಾರ್ಧದಲ್ಲಿಯೇ ಕೈಗೆ ದಾಖಲೆಗಳು ಸಿಕ್ಕ ಹಾಗೆಯೇ. ಹೀಗಾಗಿ ಇಂಥದ್ದೊಂದು ವ್ಯವಸ್ಥೆ ಬೇಗ ಬಂದರೆ ಅಕ್ರಮಗಳಿಗೆ ಕಡಿವಾಣ ಹಾಕುವುದರೊಂದಿಗೆ ವಿದ್ಯಾರ್ಥಿಗಳಿಗೆ ಅನುಕೂಲ. ಈ ಯೋಜನೆಗೆ ಸರಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕರೆ, ಇದೊಂದು ಮಾದರಿ ವ್ಯವಸ್ಥೆಯಾದಂತಾಗುತ್ತದೆ ಎಂದು ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಕುಲಸಚಿವ ಕೆ.ಟಿ. ಹನುಮಂತಪ್ಪ ಅಭಿಪ್ರಾಯ ತಿಳಿಸಿದ್ದಾರೆ.

ರೈತರನ್ನು ನೆನೆಯೋ ದಿನ: ಧಾರವಾಡದಲ್ಲಿ ದಿನಾಚರಣೆ ಹೇಗಿತ್ತು ಗೊತ್ತಾ?