ಬೆಂಗಳೂರು, ನವೆಂಬರ್ 2: ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವ ವಿಚಾರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಇದೀಗ ಐತಿಹಾಸಿಕ ಸ್ಮಾರಕಗಳ ಮೇಲೂ ವಕ್ಫ್ ಕಣ್ಣು ಬಿದ್ದಿದೆ. ವಿಜಯಪುರದ ಪ್ರಸಿದ್ಧ ಗೋಲ್ ಗುಂಬಜ್, ಇಬ್ರಾಹಿಂ ರೋಜಾ, ಬಾರಾ ಕಮಾನ್, ಬೀದರ್ ಮತ್ತು ಕಲಬುರಗಿಯ ಕೋಟೆಗಳು ಸೇರಿದಂತೆ ಕರ್ನಾಟಕದಾದ್ಯಂತ ಕನಿಷ್ಠ 53 ಐತಿಹಾಸಿಕ ಸ್ಮಾರಕಗಳನ್ನು ವಕ್ಫ್ ಮಂಡಳಿ ತನ್ನದು ಎಂದು ಪ್ರತಿಪಾದಿಸುತ್ತಿರುವ ಬಗ್ಗೆ ವರದಿಯಾಗಿದೆ. ಇವುಗಳಲ್ಲಿ, ಆದಿಲ್ ಶಾಹಿಗಳ ಹಿಂದಿನ ರಾಜಧಾನಿ ವಿಜಯಪುರದಲ್ಲಿರುವ 43 ಆಸ್ತಿಗಳನ್ನು 2005 ರಲ್ಲೇ ವಕ್ಫ್ ಬೋರ್ಡ್ ವಕ್ಫ್ ಆಸ್ತಿ ಎಂದು ಘೋಷಿಸಿದೆ.
ವಕ್ಫ್ ಮಂಡಳಿಯು ವಿಜಯಪುರದಲ್ಲಿ 43 ಕೇಂದ್ರೀಯ ಸಂರಕ್ಷಿತ ಸ್ಮಾರಕಗಳನ್ನು ವಕ್ಫ್ ಆಸ್ತಿಗಳೆಂದು ಘೋಷಿಸಿದೆ. ಆಸ್ತಿಯ ಮಾಲೀಕರಿಗೆ ನೀಡಲಾದ ಹಕ್ಕುಗಳ ದಾಖಲೆ / ಸರ್ಕಾರದ ಪ್ರಮಾಣಪತ್ರವನ್ನೇ ಮುಂದಿಟ್ಟುಕೊಂಡು ಹೀಗೆ ಮಾಡಲಾಗಿದೆ ಎಂಬುದನ್ನು ಆರ್ಟಿಐ ಅರ್ಜಿ ಮೂಲಕ ತಿಳಿದುಕೊಳ್ಳಲಾಗಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಎಎಸ್‌ಐ ಸಮಾಲೋಚನೆಯಿಲ್ಲದೆ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಸಂರಕ್ಷಿತ ಸ್ಮಾರಕಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ವೈದ್ಯಕೀಯ ಶಿಕ್ಷಣ) ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್ ಅವರು 2005 ರಲ್ಲಿ ವಕ್ಫ್ ಆಸ್ತಿ ಎಂದು ಘೋಷಿಸಿದ್ದರು. ಮೊಹ್ಸಿನ್ ಅವರು ಆಗ ವಿಜಯಪುರದ ಜಿಲ್ಲಾಧಿಕಾರಿ ಮತ್ತು ಜಿಲ್ಲೆಯ ವಕ್ಫ್ ಮಂಡಳಿಯ ಅಧ್ಯಕ್ಷರಾಗಿ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡಿದ್ದರು.
ಇದನ್ನೂ ಓದಿ: ಧಾರವಾಡ ಮುಸ್ಲಿಂ ರೈತರ ಜಮೀನಿನ ಮೇಲೂ ವಕ್ಫ್ ಕಣ್ಣು: 20ಕ್ಕೂ ಹೆಚ್ಚು ರೈತರಿಂದ ಆಕ್ರೋಶ
ಎಷ್ಟು ಸ್ಮಾರಕಗಳನ್ನು ವಕ್ಫ್ ಆಸ್ತಿ ಎಂದು ಘೋಷಿಸಲಾಗಿತ್ತು ಎಂಬುದು ನನಗೆ ನೆನಪಿಲ್ಲ. ಆದರೆ ಕಂದಾಯ ಇಲಾಖೆ ಹೊರಡಿಸಿದ ಸರ್ಕಾರಿ ಗೆಜೆಟ್ ಅಧಿಸೂಚನೆ ಪ್ರಕಾರವಷ್ಟೇ ನಾನು ಕೆಲಸ ನಿರ್ವಹಿಸಿದ್ದೇನೆ ಎಂದು ಮೊಹ್ಸಿನ್ ಪ್ರತಿಕ್ರಿಯಿಸಿರುವುದಾಗಿಯೂ ‘ಡೆಕ್ಕನ್ ಹೆರಾಲ್ಡ್’ ವರದಿ ತಿಳಿಸಿದೆ. ಅವುಗಳಲ್ಲಿ ಹೆಚ್ಚಿನವುಗಳನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕಗಳೆಂದು ಬ್ರಿಟಿಷ್ ಸರ್ಕಾರವು 1914 ರ ನವೆಂಬರ್ 12 ರಂದು ಘೋಷಿಸಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ