ಬೆಂಗಳೂರು: ಕರ್ನಾಟಕದ ಮಲೆನಾಡು, ಕರಾವಳಿ ಸೇರಿದಂತೆ ಬಹುತೇಕ ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ಮಳೆ ಸುರಿಯುತ್ತಿದೆ. ಮುಂಗಾರಿನ (Monsoon 2021) ಆರಂಭದಲ್ಲಿ ಭಾರೀ ಪ್ರಮಾಣದಲ್ಲಿ ಸುರಿದಿದ್ದ ಮಳೆ ಒಂದಷ್ಟು ಸಮಯದ ನಂತರ ಬಿಡುವು ನೀಡಿತ್ತು. ಆದರೆ, ಈಗ ಮತ್ತೆ ಮಳೆಯ (Karnataka Rain) ವಾತಾವರಣ ಆವರಿಸಿದ್ದು, ಎಲ್ಲೆಡೆ ವರುಣನ ಆರ್ಭಟ ಜೋರಾಗುತ್ತಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಭಾರೀ ಮಳೆಯ ಜತೆಗೆ ಗಾಳಿಯ ರಭಸವೂ ಹೆಚ್ಚಾಗಿದ್ದು, ಕೆಲವೆಡೆ ಮುಂಜಾನೆಯಿಂದಲೇ ಮಳೆ ಸುರಿಯುತ್ತಿದೆ. ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾಸನ, ಕೊಡಗು ಸೇರಿದಂತೆ ಹಲವು ಪ್ರದೇಶಗಳಲ್ಲಿ ಜುಲೈ 16ರ ತನಕವೂ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ವರದಿಗಳು (Weather Report) ಮುನ್ಸೂಚನೆ ನೀಡಿವೆ.
ನಿನ್ನೆ (ಜುಲೈ 12, ಸೋಮವಾರ) ಕರಾವಳಿ, ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗಿದ್ದು, ಗಾಳಿಯ ಹೊಡೆತವೂ ಹೆಚ್ಚಾಗಿದೆ. ಇಂದು ಕೂಡಾ ಬೆಳ್ಳಂಬೆಳಗ್ಗೆಯೇ ದಟ್ಟ ಮೋಡ ಆವರಿಸಿದ್ದು, ಮಳೆ ಸುರಿಯುತ್ತಲೇ ಇದೆ. ಇದೇ ವಾತಾವರಣ ಜುಲೈ 16ರ ತನಕ ಮುಂದುವರೆಯುವ ಸಾಧ್ಯತೆ ಇದ್ದು, ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆ, ಜುಲೈ 16ರವರೆಗೆ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆಯಿಂದ 7 ಜಿಲ್ಲೆಗಳಿಗೆ ಇಂದು (ಜುಲೈ 13) ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಇಂದು ಆರೆಂಜ್ ಅಲರ್ಟ್ ಜಾರಿಯಲ್ಲಿರಲಿದೆ ಮತ್ತು ಜುಲೈ 14, 15ರಂದು ಯೆಲ್ಲೋ ಅಲರ್ಟ್ ಜಾರಿಯಲ್ಲಿರಲಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೀದರ್, ಕಲಬುರಗಿ, ಗದಗ, ಬೆಳಗಾವಿ, ಧಾರವಾಡ, ರಾಯಚೂರು, ಯಾದಗಿರಿ, ಹಾವೇರಿ, ಬಾಗಲಕೋಟೆಯಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಬೆಂಗಳೂರಲ್ಲಿ ಮುಂದಿನ ಎರಡು ದಿನ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಬೆಂಗಳೂರು ನಿರ್ದೇಶಕ ಸಿ.ಎಸ್.ಪಾಟೀಲ್ ಹೇಳಿದ್ದಾರೆ.
ಕರ್ನಾಟಕದ ಕರಾವಳಿ, ಮಲೆನಾಡು ಭಾಗದಲ್ಲಿ ಮುಂದಿನ ಮೂರ್ನಾಲ್ಕು ದಿನ ಅತಿ ಹೆಚ್ಚು ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಈಗಾಗಲೇ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಜುಲೈ 16ರ ತನಕವೂ ಈ ವಾತಾವರಣ ಇರಲಿದೆ. ಅರಬ್ಬಿ ಸಮುದ್ರದಲ್ಲಿ ಏಳುವ ಗಾಳಿಯಿಂದ ಅಲೆಗಳ ಹೊಡೆತ ಬಿಗುವಾಗಲಿದ್ದು, ಕಡಲ ಕೊರೆತ ಉಂಟಾಗುವ ಸಂಭವವಿದೆ. ಈ ಕಾರಣದಿಂದ ಕರಾವಳಿ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಶಿವಮೊಗ್ಗ ಜಿಲ್ಲೆಯ ಆಗುಂಬೆ, ತೀರ್ಥಹಳ್ಳಿ, ಹೊಸನಗರ, ನಗರ, ಸಾಗರ, ಕೋಣಂದೂರು, ಸೊರಬ, ಶಿಕಾರಿಪುರ ಸೇರಿದಂತೆ ಬಹುತೇಕ ಭಾಗಗಳಲ್ಲಿ ಮಳೆಯಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ, ಹೆಬ್ರಿ, ಕಾಪು, ಬೈಂದೂರು ಭಾಗದಲ್ಲಿ ಉತ್ತಮ ಮಳೆ ಸುರಿದಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ, ಕಳಸ, ಶೃಂಗೇರಿ, ಕೊಪ್ಪ, ಮೂಡಿಗೆರೆ, ಮತ್ತು ಎನ್.ಆರ್.ಪುರ ಭಾಗದಲ್ಲಿಯೂ ಅಧಿಕ ಮಳೆಯಾಗುತ್ತಿದೆ.
ದೇಶಾದ್ಯಂತ ವರುಣನ ಅಬ್ಬರ ಜೋರಾಗಿದ್ದು, ದಕ್ಷಿಣ ಭಾರತ ಮಾತ್ರವಲ್ಲದೇ ಉತ್ತರ ಭಾರತದ ಹಲವು ರಾಜ್ಯಗಳಲ್ಲೂ ವಿಪರೀತ ಮಳೆಯಾಗಿದೆ. ಕಳೆದೆರೆಡು ದಿನಗಳಿಂದ ಸುರಿದ ಭಾರೀ ಮಳೆಗೆ ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ರಾಜಸ್ಥಾನ, ಗುಜರಾತ್ ಭಾಗದಲ್ಲಿ ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ಆದರೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಸಿಲಿನ ಝಳಕ್ಕೆ ಜನರು ಬೇಸತ್ತಿದ್ದು, ಮಳೆಗಾಗಿ ಹಂಬಲಿಸುವಂತಾಗಿದೆ.
ಇದನ್ನೂ ಓದಿ:
ಕರ್ನಾಟಕದ ವಿವಿಧೆಡೆ ಉತ್ತಮ ಮಳೆ: ಕಲಬುರಗಿಯಲ್ಲಿ ಉಕ್ಕಿ ಹರಿದ ಹಳ್ಳ, ಉಡುಪಿಯಲ್ಲಿ ನಿರಂತರ ಮಳೆ
Published On - 8:29 am, Tue, 13 July 21