ಬೆಂಗಳೂರು: ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಕರ್ನಾಟಕದ (Karnataka Rains) ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಕೊಡಗಿನಲ್ಲೂ ಭಾರೀ ಮಳೆಯಿಂದ ಭೂಕುಸಿತವಾಗುತ್ತಿದೆ. ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗಿನ ಕೆಲವು ಹಳ್ಳಿಗಳು ಅಕ್ಷರಶಃ ದ್ವೀಪದಂತಾಗಿವೆ. ಕರ್ನಾಟಕದಲ್ಲಿ ಜುಲೈ 27ರವರೆಗೆ ವ್ಯಾಪಕ ಮಳೆಯಾಗಲಿದ್ದು, ಇನ್ನೆರಡು ದಿನ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ (Red Alert) ಘೋಷಿಸಲಾಗಿದೆ.
ಗುಡುಗು ಸಹಿತ ಭಾರೀ ಮಳೆಯ ಹಿನ್ನೆಲೆಯಲ್ಲಿ ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರ ಹಾಗೂ ಉತ್ತರ ಕನ್ನಡದ ಸಿದ್ಧಾಪುರ, ಶಿರಸಿ, ಕುಮಟಾ, ಯಲ್ಲಾಪುರ, ಅಂಕೋಲದಲ್ಲಿ ಈ ಬಾರಿ ದಾಖಲೆಯ ಮಳೆಯಾಗಿದೆ. ಶಿವಮೊಗ್ಗದ ಹೊಸನಗರ ತಾಲೂಕಿನಲ್ಲಿ ನಿನ್ನೆ 210 ಮಿ.ಮೀ. ಮಳೆ ದಾಖಲಾಗಿದೆ. ಇದರಿಂದ ಶರಾವತಿ, ವರಾಹಿ, ಅಘನಾಶಿನಿ, ತುಂಗಾ ನದಿಗಳ ನೀರಿನ ಮಟ್ಟ ಭಾರೀ ಏರಿಕೆಯಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಅಪಾರಪ್ರಮಾಣದ ನೀರು ಹರಿದುಬರುತ್ತಿರುವುದರಿಂದ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಜೀವಕಳೆ ಬಂದಿದೆ.
Western Naval Command of @indiannavy has mobilised resources to provide assistance to State & District Administration of affected areas in large parts of Maharashtra, Karnataka & Goa reeling under extensive flooding caused by incessant rains & overflowing of riverbanks & dams pic.twitter.com/AQv4xv1Ggy
— PRO Defence Gujarat (@DefencePRO_Guj) July 24, 2021
ಉಳಿದಂತೆ ಕರ್ನಾಟಕದ ಪ್ರಮುಖ ನದಿಗಳಾದ ನೇತ್ರಾವತಿ, ಕಾವೇರಿ, ಭದ್ರಾ, ಕೃಷ್ಣಾ, ಕಪಿಲಾ, ಭೀಮಾ ನದಿಗಳೂ ಉಕ್ಕಿ ಹರಿಯುತ್ತಿವೆ. ಉತ್ತರ ಕನ್ನಡ ಮತ್ತು ಬೆಳಗಾವಿಯಲ್ಲಿ ತಲಾ ಇಬ್ಬರು ಮಳೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಅನೇಕ ಕಡೆ ಮನೆಗಳು ಕುಸಿದು ಬಿದ್ದಿವೆ. ರಸ್ತೆಗಳು ಬಂದ್ ಆಗಿವೆ. ಗುಡ್ಡ ಕುಸಿದು ಜಮೀನುಗಳು ನಾಶವಾಗಿವೆ. ಉತ್ತರ ಕರ್ನಾಟಕದಲ್ಲೂ ಕೃಷ್ಣಾ ನದಿ ತೀರದ ಜನರಿಗೆ ಪ್ರವಾಹ ಭೀತಿ ಎದುರಾಗಿದೆ.
ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಹಾವೇರಿ, ಗದಗ, ಧಾರವಾಡ, ಯಾದಗಿರಿ, ಕಲಬುರ್ಗಿ ಜಿಲ್ಲೆಗಳಲ್ಲಿ ಇಂದು ಹಳದಿ ಅಲರ್ಟ್ ಘೋಷಿಸಲಾಗಿದೆ. ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಿಗೆ ಇಂದು ರೆಡ್ ಅಲರ್ಟ್ ಘೋಷಿಸಲಾಗಿದ್ದು, ಜುಲೈ 26 ಮತ್ತು 27ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿಯೂ ಮಳೆ ಶುರುವಾಗಿದ್ದು, ಇನ್ನೂ ಮೂರು ದಿನ ಮಳೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: Karnataka Rain: ಬೆಳಗಾವಿಯ ಅಡಿಬಟ್ಟಿ ಗ್ರಾಮದಲ್ಲಿ ರಕ್ಷಣೆಗಾಗಿ ದಂಪತಿ, ಮಗು ಮೊರೆ
(Karnataka Rain Updates: Red Alert Issued in 7 Districts as Heavy Rain Lashes Malnad, Coastal Karnataka, Kodagu till July 27)