ನಾಳೆ ವಿಧಾನ ಪರಿಷತ್​ ಕಲಾಪ; ಗೋಹತ್ಯೆ ನಿಷೇದ ಕಾಯ್ದೆ ಮಂಡನೆ ಸಾಧ್ಯತೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 14, 2020 | 9:35 PM

ನಾಳೆಯ ಅಧಿವೇಶನ ಬಿಜೆಪಿ ಪಾಲಿಗೆ ಬಹಳ ಮಹತ್ವ ಪಡೆದುಕೊಂಡಿದೆ. ವಿಧಾನಸಭೆಯಲ್ಲಿ (ಕೆಳಮನೆ ) ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆಗೆ ಅನುಮೋದನೆ ದೊರೆತಿದೆ. ಅದೇ ರೀತಿ  ವಿಧಾನ ಪರಿಷತ್​ನಲ್ಲೂ​ (ಮೇಲ್ಮನೆ) ಗೋ ಹತ್ಯೆ ನಿಷೇಧಕ್ಕೆ ಅನುಮೋದನೆ ಪಡೆದುಕೊಳ್ಳುವ ತರಾತುರಿಯಲ್ಲಿ ಬಿಜೆಪಿ ಇದೆ. 

ನಾಳೆ ವಿಧಾನ ಪರಿಷತ್​ ಕಲಾಪ; ಗೋಹತ್ಯೆ ನಿಷೇದ ಕಾಯ್ದೆ ಮಂಡನೆ ಸಾಧ್ಯತೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ವಿಧಾನಸೌಧದಲ್ಲಿ ನಾಳೆ (ಡಿ.15) ಪರಿಷತ್​ ಕಲಾಪ ಪುನರಾರಂಭಗೊಳ್ಳಲಿದೆ. ಕಲಾಪದಲ್ಲಿ ಬಿಜೆಪಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020 (ಗೋಹತ್ಯೆ ನಿಷೇಧ ಕಾನೂನು) ಮಂಡನೆಗೆ ಸಿದ್ಧತೆ ಮಾಡಿಕೊಂಡಿದ್ದು, ಪ್ರತಿಪಕ್ಷಗಳು ಇದಕ್ಕೆ ವಿರೋಧ ವ್ಯಕ್ತಪಡಿಸಲು ಯೋಜನೆ ರೂಪಿಸಿವೆ.

ಡಿಸೆಂಬರ್​ 10ರಂದು ಗೋಹತ್ಯೆ ನಿಷೇಧ ಕಾಯ್ದೆ ಮಂಡನೆ ಮಾಡಲು ಬಿಜೆಪಿ ಮುಂದಾಗಿತ್ತು. ಆದರೆ, ಪಶು ಸಂಗೋಪನಾ ಸಚಿವರು ಕಲಾಪದಲ್ಲಿ ಹಾಜರಿಲ್ಲ ಎಂಬ ನೆಪ ಹೇಳಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ವಿಧೇಯಕ ಮಂಡನೆಗೆ ಅವಕಾಶ ನೀಡಲಿಲ್ಲ. ವಿಧೇಯಕ ಮಂಡನೆಯಾಗದೇ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತ್ತು. ಇದಾದ ಬೆನ್ನಲ್ಲೇ ವಿಧಾನಪರಿಷತ್​ನ ಕಾರ್ಯದರ್ಶಿಗೆ ಪತ್ರ ಬರೆದಿದ್ದ ಸರ್ಕಾರ, ಡಿಸೆಂಬರ್ 15ರಿಂದ ಕಲಾಪ ಪುನರಾರಂಭಿಸಲು ನಿರ್ದೇಶಿಸಿತ್ತು.

ನಾಳೆಯ ಅಧಿವೇಶನ ಬಿಜೆಪಿ ಪಾಲಿಗೆ ಬಹಳ ಮಹತ್ವ ಪಡೆದುಕೊಂಡಿದೆ. ವಿಧಾನಸಭೆಯಲ್ಲಿ ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆಗೆ ಅನುಮೋದನೆ ದೊರೆತಿದೆ. ಅದೇ ರೀತಿ ವಿಧಾನ ಪರಿಷತ್​ನಲ್ಲೂ​ (ಮೇಲ್ಮನೆ) ಗೋಹತ್ಯೆ ನಿಷೇಧಕ್ಕೆ ಅನುಮೋದನೆ ಪಡೆದುಕೊಳ್ಳುವ ತರಾತುರಿಯಲ್ಲಿ ಬಿಜೆಪಿ ಇದೆ.

ಬಲಾಬಲ ಎಷ್ಟು?
ಗೋಹತ್ಯೆ ನಿಷೇಧ ಕಾಯ್ದೆಗೆ ಅನುಮೋದನೆ ದೊರೆಯುವುದು ಸುಲಭವಿಲ್ಲ. ವಿಧಾನ ಪರಿಷತ್​ನಲ್ಲಿ ಬಿಜೆಪಿ 31, ಕಾಂಗ್ರೆಸ್​ 28 ಹಾಗೂ ಜೆಡಿಎಸ್​ 14 ಸ್ಥಾನಗಳನ್ನು ಹೊಂದಿದೆ. ಒಂದೊಮ್ಮೆ, ನಾಳಿನ ಅಧಿವೇಶನದಲ್ಲಿ ಜೆಡಿಎಸ್​ ಬಿಜೆಪಿಗೆ ಬೆಂಬಲ ನೀಡಿದರೆ ಅಥವಾ ಅವರು ಅಧಿವೇಶನ ಧಿಕ್ಕರಿಸಿ ಹೊರ ನಡೆದರಷ್ಟೇ ಕಾಯ್ದೆ ಪಾಸ್​ ಆಗಲಿದೆ. ಒಂದೊಮ್ಮೆ, ಈ ವಿಚಾರದಲ್ಲಿ ಜೆಡಿಎಸ್​​-ಕಾಂಗ್ರೆಸ್​ ಒಂದಾದರೆ, ಗೋ ಹತ್ಯೆ ನಿಷೇಧ ವಿಧೇಯಕ ಪಾಸಾಗುವುದಿಲ್ಲ.

ಬಿಜೆಪಿ ಮುಂದಿನ ಆಯ್ಕೆ ಏನು?
ಒಂದೊಮ್ಮೆ ನಾಳೆ ಕಾಯ್ದೆ ಪಾಸ್​ ಆಗದೆ ಇದ್ದರೆ ಬಿಜೆಪಿಗೆ ಮತ್ತೊಂದು ಅವಕಾಶ ಇರಲಿದೆ. ನಿಯಮಗಳ ಪ್ರಕಾರ ಈ ಕಾಯ್ದೆಯನ್ನು ಕೆಳಮನೆಗೆ ತೆಗೆದುಕೊಂಡು ಹೋಗಿ ಬಿಜೆಪಿ ಒಪ್ಪಿಗೆ ಪಡೆಯಬಹುದು. ಹಾಗಾದಾಗ, ಈ ಕಾಯ್ದೆ ನೇರವಾಗಿ ರಾಜ್ಯಪಾಲರ ಬಳಿ ಹೋಗಲಿದೆ. ಅವರು ಸಮ್ಮತಿಸಿದ ನಂತರ ಇದು ಕಾನೂನಾಗುತ್ತದೆ.

ಡಿ.15ರಂದು ಪರಿಷತ್ ಅಧಿವೇಶನ ಕರೆಯುವಂತೆ ವಿಧಾನ ಪರಿಷತ್ ಕಾರ್ಯದರ್ಶಿಗೆ ಸರ್ಕಾರ ಪತ್ರ