ವಿಜಯನಗರ ನೂತನ ಜಿಲ್ಲೆ ರಚನೆಗೆ ಸರ್ಕಾರದಿಂದ ಅಧಿಕೃತ ಅಧಿಸೂಚನೆ
ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ನೂತನ ಜಿಲ್ಲೆ ರಚಿಸಲು ಸರ್ಕಾರವು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಸಾರ್ವಜನಿಕರ ಬೇಡಿಕೆ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ನೂತನ ಜಿಲ್ಲೆ ರಚಿಸುವುದಾಗಿ ಹೇಳಲಾಗಿದೆ.
ಬಳ್ಳಾರಿ: ವಿಜಯನಗರ ನೂತನ ಜಿಲ್ಲೆ ಘೋಷಣೆ ವಿಚಾರವಾಗಿ ಸರ್ಕಾರದಿಂದ ಹೊಸ ಆದೇಶವೊಂದು ಹೊರಬಿದ್ದಿದೆ. ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ನೂತನ ಜಿಲ್ಲೆ ರಚಿಸಲು ಸರ್ಕಾರವು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಸಾರ್ವಜನಿಕರ ಬೇಡಿಕೆ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ನೂತನ ಜಿಲ್ಲೆ ರಚಿಸುವುದಾಗಿ ಹೇಳಲಾಗಿದೆ.
ವಿಜಯನಗರ ಜಿಲ್ಲೆ ವ್ಯಾಪ್ತಿಗೆ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹೂವಿನಹಡಗಲಿ ಮತ್ತು ಹರಪನಹಳ್ಳಿ ತಾಲೂಕುಗಳನ್ನು ಸೇರಿಸಲಾಗಿದೆ. ಕುರುಗೋಡು, ಸಿರುಗುಪ್ಪ, ಕಂಪ್ಲಿ, ಸಂಡೂರು ಹಾಗೂ ಬಳ್ಳಾರಿ ತಾಲೂಕುಗಳನ್ನು ಬಳ್ಳಾರಿ ಜಿಲ್ಲೆ ವ್ಯಾಪ್ತಿಗೆ ತರಲಾಗಿದೆ. ಬಳ್ಳಾರಿಯು ಬಳ್ಳಾರಿ ಜಿಲ್ಲಾ ಕೇಂದ್ರವಾಗಿರಲಿದ್ದು, ಹೊಸಪೇಟೆ ನೂತನ ವಿಜಯನಗರ ಜಿಲ್ಲಾ ಕೇಂದ್ರ ಆಗಲಿದೆ.
ಕಂಪ್ಲಿ ಬಳ್ಳಾರಿಗೆ, ಕೂಡ್ಲಿಗಿ ವಿಜಯನಗರಕ್ಕೆ ಕೂಡ್ಲಿಗಿ-ಹೊಸಪೇಟೆ ಮತ್ತು ಕೂಡ್ಲಿಗಿ-ಬಳ್ಳಾರಿ ನಡುವಿನ ಪ್ರಯಾಣದ ಅಂತರವನ್ನು ಗಮನಿಸಿದರೆ, ಕೂಡ್ಲಿಗಿ ತಾಲೂಕಿಗೆ ಹೊಸಪೆಟೆಯೇ ಸಮೀಪವಾಗಿದೆ. ಈ ನಿಟ್ಟಿನಲ್ಲಿ ಕೂಡ್ಲಿಗಿಯನ್ನು ತಮ್ಮೊಂದಿಗೆ ಸೇರಿಸುವಂತೆ ವಿಜಯನಗರ ಜನರ ಊಗು ಕೇಳಿಬಂದಿತ್ತು. ಅದರಂತೆ ಕೂಡ್ಲಿಗಿಯು ವಿಜಯನಗರದ ಪಾಲಾಗಿದೆ. ನೂತನ ವಿಜಯನಗರ ಜಿಲ್ಲೆಗೆ ಕಂಪ್ಲಿ ತಾಲೂಕು ಒಳಪಡಲಿದೆ ಎನ್ನಲಾಗಿತ್ತು. ಆದರೆ ಈಗ ಕಂಪ್ಲಿ ತಾಲೂಕು ಬಳ್ಳಾರಿ ಪಾಲಾಗಿದೆ.
ಆಕ್ಷೇಪ-ಸಲಹೆ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ಹೊಸ ಜಿಲ್ಲಾ ರಚನೆಗೆ ಆಕ್ಷೇಪ ಅಥವಾ ಸಲಹೆ ನೀಡಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಆಕ್ಷೇಪ ಮತ್ತು ಸಲಹೆಗಳನ್ನು ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಲು ತಿಳಿಸಲಾಗಿದೆ. ಸರ್ಕಾರ ಅಧಿಸೂಚನೆ ಹೊರಡಿಸಿದ ದಿನದಿಂದ ಒಂದು ತಿಂಗಳವರೆಗೆ ಈ ಅವಕಾಶ ಇರಲಿದೆ ಎಂದು ಮಾಹಿತಿ ನೀಡಲಾಗಿದೆ.
ಬಳ್ಳಾರಿ-ವಿಜಯನಗರ ಜಿಲ್ಲಾ ವಿಂಗಡಣೆ ಯಾಕೆ?! ಬಳ್ಳಾರಿ ಜಿಲ್ಲಾ ಕೇಂದ್ರವು ಜಿಲ್ಲೆಯ ಪೂರ್ವ ಭಾಗದಲ್ಲಿದ್ದು, ಪಶ್ಚಿಮದ ತಾಲೂಕುಗಳಿಂದ ಸುಮಾರು 150 ಕಿ.ಮೀ.ನಷ್ಟು ದೂರದಲ್ಲಿವೆ. ಇದರಿಂದ ಪಶ್ಚಿಮದ ತಾಲೂಕುಗಳಿಗೆ ಜಿಲ್ಲಾ ಕೇಂದ್ರದೊಂದಿಗೆ ಸಂಪರ್ಕ ಕಷ್ಟಸಾಧ್ಯವಾಗಿತ್ತು. ಆಡಳಿತಾತ್ಮಕ ಸಮಸ್ಯೆಗಳು ತಲೆದೋರಿದ್ದವು. ಆಡಳಿತ ಸುಗಮಗೊಳಿಸುವ ಮತ್ತು ಅಭಿವೃದ್ಧಿ ಹೆಚ್ಚಿಸುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ಪಶ್ಚಿಮ ಭಾಗದ ಜನರು ಬಯಸಿದ್ದರು.
ಈ ಹಿಂದೆ, ಕಲ್ಯಾಣ ಕರ್ನಾಟಕದ ಭಾಗವಾಗಿರುವ ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡುವ ನಿರ್ಧಾರಕ್ಕೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಅನುಮೋದನೆ ದೊರಕಿತ್ತು. ಈ ಬಗ್ಗೆ ಜಿಲ್ಲೆಯ ಪಶ್ಚಿಮ ತಾಲೂಕುಗಳ (ಹೊಸ ಜಿಲ್ಲೆಗೆ ಒಳಪಡಲಿರುವ ತಾಲೂಕುಗಳು) ಜನರು ಸಂತಸ ವ್ಯಕ್ತಪಡಿಸಿದ್ದರು. ಕರ್ನಾಟಕದ ಏಕೀಕರಣ ಸಂದರ್ಭದಲ್ಲಿ ಬಳ್ಳಾರಿಯನ್ನು ಕನ್ನಡ ನಾಡಿಗೆ ಸೇರಿಸುವಂತೆ ನಡೆಸಿದ ಒಗ್ಗಟ್ಟಿನ ಹೋರಾಟಕ್ಕೆ ಅನ್ಯಾಯ ಮಾಡಿದಂತಾಗಿದೆ ಎಂದು ಜಿಲ್ಲೆಯ ಅಖಂಡತೆಯ ಪರ ಹೋರಾಟಗಾರರು ಅಭಿಪ್ರಾಯ ಪಟ್ಟಿದ್ದರು. ಬಳ್ಳಾರಿ ಜಿಲ್ಲೆಗೆ ಒಳಪಡಲಿರುವ ಭಾಗಗಳಲ್ಲಿ ಹೊಸ ಜಿಲ್ಲಾ ರಚನೆಗೆ ವಿರೋಧ ವ್ಯಕ್ತವಾಗಿತ್ತು.
ಬಳ್ಳಾರಿ-ವಿಜಯನಗರ ತಾಲೂಕುಗಳ ಬಗ್ಗೆ ಡಾ. ಡಿ.ಎಂ. ನಂಜುಂಡಪ್ಪ ವರದಿ ಏನು ಹೇಳುತ್ತದೆ?
Published On - 8:45 pm, Mon, 14 December 20