ಕೋಡಿಹಳ್ಳಿ ಚಂದ್ರಶೇಖರ್ ಹಸಿರು ಟವೆಲ್ ಬಿಟ್ಟು ರಾಜಕಾರಣಿಯಾಗಲಿ: ಬಡಗಲಪುರ ನಾಗೇಂದ್ರ ವ್ಯಂಗ್ಯ
ಕೋಡಿಹಳ್ಳಿ ಚಂದ್ರಶೇಖರ್ ರೈತ ಸಂಘದ ಅಧಿಕೃತ ರಾಜ್ಯಾಧ್ಯಕ್ಷ ಅಲ್ಲ. ಅವರೇ ಗುಂಪು ಕಟ್ಟಿಕೊಂಡು ಆ ಗುಂಪಿನ ನಾಯಕನಾಗಿದ್ದಾರೆ ಅಷ್ಟೇ ಎಂದು ಬಡಗಲಪುರ ನಾಗೇಂದ್ರ ಹೇಳಿದ್ದಾರೆ.
ಮೈಸೂರು: ಕೋಡಿಹಳ್ಳಿ ಸಾರಿಗೆ ನೌಕರರ ಪರ ಹೋರಾಟ ಮಾಡಲಿ. ಆದರೆ ಅದಕ್ಕೂ ಮುನ್ನ ಹೆಗಲಿನಲ್ಲಿರುವ ಹಸಿರು ಟವಲ್ ಕೆಳಗೆ ಇಳಿಸಲಿ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಟೀಕಿಸಿದ್ದಾರೆ.
ಕೋಡಿಹಳ್ಳಿಗೆ ಸಮಸ್ಯೆಯ ಅರಿವೂ ಇಲ್ಲ. ಅದಕ್ಕೆ ಪರಿಹಾರವೂ ಗೊತ್ತಿಲ್ಲ. ಅವರಿಗೆ ಪ್ರತಿಭಟನೆ ಮಾಡೋದಷ್ಟೇ ಗೊತ್ತು. ಕೋಡಿಹಳ್ಳಿಯವರೇ ಸುಮ್ಮನೆ ಹಸಿರು ಟವಲ್ ಹಾಕಿಕೊಂಡು ರೈತರಿಗೆ ಅವಮಾನ ಮಾಡಬೇಡಿ ಎಂದು ವ್ಯಂಗ್ಯವಾಡಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ರೈತಸಂಘದ ಅಧಿಕೃತ ರಾಜ್ಯಾಧ್ಯಕ್ಷ ಅಲ್ಲ. ಅವರೇ ಗುಂಪು ಕಟ್ಟಿಕೊಂಡು ಆ ಗುಂಪಿನ ನಾಯಕನಾಗಿದ್ದಾರೆ ಅಷ್ಟೇ. ದೆಹಲಿಯಲ್ಲಿ ರೈತರು ಚಳಿಯಲ್ಲಿ ಬೀದಿಗೆ ಬಂದು ಹೋರಾಟ ಮಾಡುತ್ತಿದ್ದಾರೆ. ಆದರೆ, ಕೋಡಿಹಳ್ಳಿ ರೈತರ ಹೋರಾಟಕ್ಕೆ ಬೆಂಬಲ ನೀಡೋ ಬದಲು ಸಾರಿಗೆ ಮುಷ್ಕರದ ನೇತೃತ್ವ ವಹಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸಾರಿಗೆ ನೌಕರರ ಬಗ್ಗೆ ಸಹಾನುಭೂತಿ ಇದೆ. ಆದರೆ, ಕೋಡಿಹಳ್ಳಿಯವರು ಮಾಡುತ್ತಿರುವುದು ಸರಿಯಲ್ಲ. ಅವರಿಗೆ ಪ್ರತಿಭಟನೆ ಮಾಡುವ ಹುಮ್ಮಸ್ಸಿದ್ದರೆ ಹಸಿರು ಟವೆಲ್ ಬಿಟ್ಟು ರಾಜಕಾರಣಕ್ಕೆ ಸೇರಿಕೊಳ್ಳಲಿ. ಅವರು ರಾಜಕಾರಣಿಯಾದರೆ ಖಂಡಿತಾ ಯಶಸ್ವಿಯಾಗುತ್ತಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಅವರ ಕಾಲೆಳೆದಿದ್ದಾರೆ.
ಸಾರಿಗೆ ಸಿಬ್ಬಂದಿ ಮುಷ್ಕರ ಅಂತ್ಯ -ಕೋಡಿಹಳ್ಳಿ ಚಂದ್ರಶೇಖರ್ ಘೋಷಣೆ, ಯಾವುದೇ ಕ್ಷಣ ಬಸ್ ರೈಟ್.. ರೈಟ್!