ಧರ್ಮಸ್ಥಳ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ, ಸಂಚಲನ ಮೂಡಿಸಿದ ಮತ್ತೊಂದು ಪತ್ರ

ರಾಜ್ಯಾದ್ಯಂತ ಭಾರಿ ಸದ್ದು ಮಾಡಿದ್ದ ಅನನ್ಯಾ ಭಟ್ ನಾಪತ್ತೆ ಕೇಸ್​​ನ​ ತನಿಖೆಯನ್ನ ಎಸ್​ಐಟಿ ಅಂತ್ಯಗೊಳಿಸಿದೆ. ಇನ್ನು ಧರ್ಮಸ್ಥಳ ಸುತ್ತಮುತ್ತ ನೂರಾರು ಶವ ಹೂತ್ತಿಟ್ಟಿರುವ ಪ್ರಕರಣ ಇನ್ನೇನು ಕ್ಲೈ ಮ್ಯಾಕ್ಸ್ ಹಂತಕ್ಕೆ ಬಂದಿದೆ ಎನ್ನುವಷ್ಟರಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಮಹಿಳಾ ಆಯೋಗದ ಪತ್ರ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.

ಧರ್ಮಸ್ಥಳ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ, ಸಂಚಲನ ಮೂಡಿಸಿದ ಮತ್ತೊಂದು ಪತ್ರ
Dharmasthala Mass Burial Case

Updated on: Nov 04, 2025 | 9:34 PM

ಬೆಂಗಳೂರು, (ನವೆಂಬರ್ 04): ಧರ್ಮಸ್ಥಳದಲ್ಲಿ (dharmasthala mass burial Case) ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ಹೇಳಿಕೆ ನೀಡಿರುವ ಬುರುಡೆ ಚಿನ್ನಯ್ಯ ಜೈಲು ಪಾಲಾಗಿದ್ದು, ಈ ಪ್ರಕರಣ ಕ್ಲೈಮ್ಯಾಕ್ಸ್ ಹಂತ ತಲುಪಿದೆ ಎನ್ನುವಾಗಲೇ ಮಹಿಳಾ ಆಯೋಗ ಮಧ್ಯೆ ಪ್ರವೇಶ ಮಾಡಿದೆ. ಹೌದು..ಧರ್ಮಸ್ಥಳ ಪ್ರಕರಣದ  ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‍ಐಟಿ) ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಅತ್ಯಾಚಾರ, ಕೊಲೆ ಪ್ರಕರಣಗಳ ಜತೆಗೆ ಅಸಹಜ ಮತ್ತು ಅನುಮಾನಾಸ್ಪದ ಸಾವು ಪ್ರಕರಣಗಳ ಬಗ್ಗೆಯೂ ಸಮಗ್ರವಾಗಿ ತನಿಖೆಯನ್ನು ನಡೆಸಬೇಕೆಂದು ಕೋರಿ ರಾಜ್ಯ ಮಹಿಳಾ ಆಯೋಗವು ಎಸ್‍ಐಟಿ ಮುಖ್ಯಸ್ಥರಿಗೆ ಪತ್ರ ಬರೆದಿದೆ.

ಆಯೋಗದ ಪತ್ರದಲ್ಲೇನಿದೆ?

ಧರ್ಮಸ್ಥಳದಲ್ಲಿ ಕಳೆದ 20ಕ್ಕೂ, ಹೆಚ್ಚು ವರ್ಷಗಳಿಂದ ಗಂಭೀರ ಸ್ವರೂಪದ ದೌರ್ಜನ್ಯ, ಹತ್ಯೆ, ಅತ್ಯಾಚಾರ, ಅಸ್ವಾಭಾವಿಕ ಸಾವು ಮತ್ತು ನಾಪತ್ತೆ ಪ್ರಕರಣಗಳು ಕೇಳಿ ಬರುತ್ತಿವೆ. ಈ ಬಗ್ಗೆ ಎಸ್‌ಐಟಿ ತನಿಖೆ ನಡೆಸಬೇಕು ಎಂದು ಈ ಹಿಂದೆ ಆಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿತ್ತು. ಅದಾದ ಬಳಿಕ ಎಸ್‌ಐಟಿ ರಚನೆಯಾಗಿದೆ. ಎಸ್‌ಐಟಿ ರಚನೆಯಾಗಬೇಕೆಂಬ ಕೋರಿಕೆಯ ಆಶಯವೂ ಮತ್ತು ಸರ್ಕಾರದ ಆದೇಶವೂ ಕೇವಲ ಕ್ರಿಮಿನಲ್ ಮೊಕದ್ದಮೆ ಸಂಖ್ಯೆ:39/2025, ಕಲಂ 211 (ಎ), ಬಿಎನ್‌ಎಸ್ ಪ್ರಕರಣದ ತನಿಖೆಗೆ ಸೀಮಿತವಾಗಿರದೆ, ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳ ಸಮಗ್ರ’ ತನಿಖೆಯನ್ನು ಎಸ್‌ಐಟಿ ಮಾಡಬೇಕೆಂಬುದನ್ನು ಸೂಚಿಸುತ್ತದೆ. ಹೀಗಿದ್ದರೂ, ಈವರೆಗೆ ಎಸ್‌ಐಟಿ ಅಂತಹ ಪ್ರಕರಣಗಳನ್ನು ತನಿಖೆ ಮಾಡುತ್ತಿರುವ ಬಗ್ಗೆ ಯಾವುದೇ ಮಾಹಿತಿ ಕಂಡು ಬರುತ್ತಿಲ್ಲ ಎಂದು ಪತ್ರದಲ್ಲಿ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಸುಜಾತಾ ಭಟ್​ ತಪ್ಪೊಪ್ಪಿಗೆ: ಅನನ್ಯಾ ಭಟ್​ ನಾಪತ್ತೆ ಕೇಸ್​ ತನಿಖೆ ಅಂತ್ಯಗೊಳಿಸಿದ SIT

ಮಾಧ್ಯಮಗಳ ವರದಿಯನ್ನು ಗಮನಿಸಿದಾಗ ಎಸ್‌ಐಟಿ ರಚನೆಯಾದಾಗಿನಿಂದ ಕೇವಲ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ ‘ಚಿನ್ನಯ್ಯ’ ಎಂಬ ವ್ಯಕ್ತಿಯ ಹೇಳಿಕೆಯನ್ನು ಆಧರಿಸಿ ಮಾನವ ಕಳೇಬರಹಗಳ ಉತ್ಪನನಕ್ಕೆ ಸೀಮಿತವಾಗಿ ಆತನ ಹೇಳಿಕೆಯ ಮಿತಿಯೊಳಗೆ ತನಿಖೆ ನಡೆದಿರುವುದು ಕಂಡುಬಂದಿದೆ. ಉತ್ಪನನದ ಸಂದರ್ಭದಲ್ಲಿ ದೊರೆತ ಅಸ್ಥಿಪಂಜರಗಳ ಅವಶೇಷಗಳ ಬಗ್ಗೆ ಸಾವು ಸಂಭವಿಸಿದ ಕಾರಣದ ಬಗ್ಗೆ ಅವುಗಳಲ್ಲಿ ಮಹಿಳೆಯರ ಅಸ್ಥಿಪಂಜರಗಳನ್ನು ಗುರುತಿಸುವ ಬಗ್ಗೆ ಕಾಡಿನ ಪ್ರದೇಶದಲ್ಲಿ ಅಸ್ಥಿಪಂಜರ ದೊರೆಯಲು ಕಾರಣಗಳ ಬಗ್ಗೆ ಮಾಹಿತಿ ಪತ್ತೆ ಹಚ್ಚುವ ಜೊತೆಗೆ, ಎಸ್‌ಐಟಿ ರಚನೆಯ, ಆಯೋಗದ ಕೋರಿಕೆ ಮತ್ತು ನಂತರದ ಸರ್ಕಾರದ ಆದೇಶಕ್ಕೆ ಅನುಗುಣವಾಗಿ ಎಸ್‌ಐಟಿಯು ಕೂಡಲೇ ಮಹಿಳೆಯರು ಮತ್ತು ಯುವತಿಯರ ನಾಪತ್ತೆ, ಅವರ ಅತ್ಯಾಚಾರ, ಕೊಲೆ ಪ್ರಕರಣಗಳನ್ನೂ ಸೇರಿದಂತೆ ಅಸಹಜ ಮತ್ತು ಅನುಮಾನಾಸ್ಪದ ಸಾವುಗಳು ಮತ್ತಿತರ ಪ್ರಕರಣಗಳ ಸಮಗ್ರ ತನಿಖೆಯನ್ನು ಕೈಗೊಳ್ಳುವಂತೆ ಅಥವಾ ಕೈಗೊಂಡಿದ್ದರೆ ಈ ಬಗ್ಗೆ ಮಾಹಿತಿಯನ್ನು ಆಯೋಗಕ್ಕೆ ನೀಡಿ ಎಂದು ಮನವಿ ಮಾಡಿದ್ದಾರೆ.

ಧರ್ಮಸ್ಥಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹತ್ತಾರು ವರ್ಷಗಳಿಂದ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ‘ಕೊಂದವರು’ ಯಾರು? ಎಂಬ ಸತ್ಯವನ್ನು ಸರಕಾರ ಪತ್ತೆಹಚ್ಚಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಮಹಿಳಾ ಸಂಘಟನೆಗಳು, ಹೋರಾಟಗಾರರು ಒಟ್ಟುಗೂಡಿ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನದಂದು ಬೆಂಗಳೂರು ನಗರದ ಫ್ರೀಡಂ ಪಾರ್ಕ್‍ನಲ್ಲಿ ಮಹಿಳೆಯರ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ್ದರು.

ಅಲ್ಲದೇ ಇತ್ತೀಚೆಗೆ ಮಹಿಳಾ ನಾಯಕಿಯರು ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಈ ಪ್ರಕರಣ ಸಂಬಂಧ ಚರ್ಚಿಸಿದ್ದರು.