AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಜಾತಾ ಭಟ್​ ತಪ್ಪೊಪ್ಪಿಗೆ: ಅನನ್ಯಾ ಭಟ್​ ನಾಪತ್ತೆ ಕೇಸ್​ ತನಿಖೆ ಅಂತ್ಯಗೊಳಿಸಿದ SIT

ಅನನ್ಯಾ ಭಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಅಂತ್ಯಗೊಂಡಿದೆ. ಮಗಳು ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದ ಸುಜಾತಾ ಭಟ್, ತಮ್ಮ ದೂರು ಸುಳ್ಳು ಎಂದು ಒಪ್ಪಿಕೊಂಡಿದ್ದಾರೆ. ಸುಜಾತಾ ಭಟ್ ಅವರ ಹೇಳಿಕೆಗಳ ಬದಲಾವಣೆ ಹಾಗೂ ಅಂತಿಮ ತಪ್ಪೊಪ್ಪಿಗೆಯ ನಂತರ ಎಸ್‌ಐಟಿ ಪ್ರಕರಣದ ತನಿಖೆಯನ್ನು ನಿಲ್ಲಿಸಿದೆ.

ಸುಜಾತಾ ಭಟ್​ ತಪ್ಪೊಪ್ಪಿಗೆ: ಅನನ್ಯಾ ಭಟ್​ ನಾಪತ್ತೆ ಕೇಸ್​ ತನಿಖೆ ಅಂತ್ಯಗೊಳಿಸಿದ SIT
ಸುಜಾತಾ ಭಟ್​Image Credit source: Google
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ಪ್ರಸನ್ನ ಹೆಗಡೆ|

Updated on:Oct 31, 2025 | 2:22 PM

Share

ಮಂಗಳೂರು, ಅಕ್ಟೋಬರ್ 31: ರಾಜ್ಯಾದ್ಯಂತ ಭಾರಿ ಸದ್ದು ಮಾಡಿದ್ದ ಅನನ್ಯಾ ಭಟ್ ನಾಪತ್ತೆ ಕೇಸ್​​ನ​ ತನಿಖೆಯನ್ನ ಎಸ್​ಐಟಿ ಅಂತ್ಯಗೊಳಿಸಿದೆ. ಮಗಳು ಧರ್ಮಸ್ಥಳದಲ್ಲಿ ಕಾಣೆ ಆಗಿದ್ದಾಳೆ ಎಂದು ಸುಜಾತಾ ಭಟ್​ ದೂರು ನೀಡಿದ್ದರು. ಆದರೆ ತನಿಖೆ ವೇಳೆ ತಾನು ಸುಳ್ಳು ದೂರು ನೀಡಿದ್ದಾಗಿ ಅವರು ತಪ್ಪೊಪ್ಪಿಕೊಂಡಿರುವ ಹಿನ್ನಲೆ ತನಿಖೆ ಅಂತ್ಯಗೊಳಿಸಲಾಗಿದೆ. ಪ್ರಕರಣ ಸಂಬಂಧ ಸುಜಾತಾ ಭಟ್​​ ಅವರ ದೂರು ಅರ್ಜಿ ವಿಲೆ ಮಾಡಲಾಗಿರುತ್ತೆಂದು ಎಸ್​ಐಟಿ ಅಧಿಕಾರಿಗಳು ಹಿಂಬರಹ ನೀಡಿದ್ದಾರೆ.

ಪ್ರಕರಣ ಏನಾಗಿತ್ತು?

ಧರ್ಮಸ್ಥಳದಲ್ಲಿ ಸಾಮೂಹಿಕವಾಗಿ ಹೆಣ ಹೂಳಲಾಗಿದೆ ಎಂದು ಅನಾಮಧೇಯ ವ್ಯಕ್ತಿಯೋರ್ವ ಮಾಡಿದ್ದ ಆರೋಪ ದೇಶಾದ್ಯಂತ ಬಿರುಗಾಳಿ ಎಬ್ಬಿಸಿತ್ತು. ಈ ಸಂದರ್ಭದಲ್ಲಿ ಪ್ರತ್ಯಕ್ಷವಾಗಿದ್ದ ಸುಜಾತಾ ಭಟ್​ ಎಂಬವರು ತನ್ನ ಮಗಳು ಮಗಳು ಧರ್ಮಸ್ಥಳದಲ್ಲಿ ಕಾಣೆ ಆಗಿದ್ದಾಳೆ ಎಂದು ದೂರು ನೀಡಿದ್ದರು. 2003ರಲ್ಲಿ ಮಣಿಪಾಲದಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದಾಗ ತನ್ನ ಮಗಳು ನಾಪತ್ತೆಯಾಗಿದ್ದು, ಆಕೆಯನ್ನು ಧರ್ಮಸ್ಥಳದಲ್ಲಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಪ್ರಕರಣ ಗಂಭೀರತೆ ಪಡೆದುಕೊಂಡ ಕಾರಣ, ಇದರ ತನಿಖೆಯನ್ನ ಎಸ್​ಐಟಿಗೆ ಸರ್ಕಾರ ಹಸ್ತಾಂತರಿಸಿತ್ತು.

ಇದನ್ನೂ ಓದಿ: ಧರ್ಮಸ್ಥಳದಲ್ಲಿ ಅನನ್ಯ ಭಟ್ ನಾಪತ್ತೆ ಕೇಸ್​​ಗೆ ಬಿಗ್ ಟ್ವಿಸ್ಟ್: ಸುಜಾತಾ ಭಟ್​​​ಗೆ ಮಕ್ಕಳೇ ಇರಲಿಲ್ಲ!

ದಿನಕ್ಕೊಂದು ಕತೆ ಹೇಳಿದ್ದ ಸುಜಾತಾ ಭಟ್​

ತನಿಖೆ ವೇಳೆ ಸುಜಾತಾ ಭಟ್​ ದಿನಕ್ಕೊಂದು ಕತೆ ಹೇಳಿದ್ದು, ಯಾರದ್ದೋ ಫೋಟೋ ತೋರಿಸಿ ಇವಳೇ ನನ್ನ ಮಗಳು ಅನನ್ಯಾ ಭಟ್​ ಎಂದು ಆರಂಭದಲ್ಲಿ ಹೇಳಿದ್ದರು. ಆದರೆ ಅದು ಅವರ ಮಗಳ ಫೋಟೋವಲ್ಲ, ಬದಲಾಗಿ ವಾಸಂತಿ ಎಂಬವರ ಫೋಟೋ ಎಂಬ ವಿಷಯ ರಿವೀಲ್​ ಆಗಿತ್ತು. ಆ ಬಳಿಕ ತಮ್ಮ ಹೇಳಿಕೆ ಬದಲಾಯಿಸಿದ್ದ ಸುಜಾತಾ ಭಟ್​ ಆಕೆ ತನ್ನ ಸ್ನೇಹಿತರ ಮಗಳು ಎಂದು ಹೇಳಿಕೊಂಡಿದ್ದರು. ಸೋಮೆಶ್ವರದ ಅರವಿಂದ್​ ಮತ್ತು ವಿಮಲಾ ದಂಪತಿ ಮಗಳು ಎಂದು ತಿಳಿಸಿದ್ದರು.

ಅಂತಿಮವಾಗಿ ತಾವು ಹೇಳಿದ್ದು ಸುಳ್ಳು ಎಂದು ಒಪ್ಪಿಕೊಂಡಿದ್ದ ಸುಜಾತಾ ಭಟ್​, ಧರ್ಮಸ್ಥಳ ಪ್ರಕರಣದ ಸಂಬಂಧ ಬುರುಡೆ ಗ್ಯಾಂಗ್ ಜೊತೆ ಸೇರಿಕೊಂಡಿದ್ದಕ್ಕೆ ತೀವ್ರ ಪಶ್ಚಾತ್ತಾಪವಿದೆ . ಯಾರದ್ದೋ ಮಾತು ಕೇಳಿ ತಮ್ಮ ಜೀವನ ಹಾಳು ಮಾಡಿಕೊಳ್ಳಲು ಇಚ್ಛಿಸುವುದಿಲ್ಲ. ಈ ಬಗ್ಗೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಬಳಿ ಕ್ಷಮೆಯಾಚಿಸುತ್ತೇನೆ. ಈ ವಿಚಾರದಲ್ಲಿ ತಮ್ಮೊಂದಿಗೆ ಇದ್ದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಮಟ್ಟಣ್ಣವರ್ ಸೇರಿದಂತೆ ಯಾರೂ ಈಗ ತಮ್ಮ ಸಂಪರ್ಕದಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದರು. ವೈಯಕ್ತಿಕ ಜೀವನದ ಮೇಲೆ ಇದು ಪರಿಣಾಮ ಬೀರಿದ್ದು, ತಮ್ಮ ಪಾಡಿಗೆ ತಾವು ಬದುಕಲು ಬಯಸುವುದಾಗಿ ತಿಳಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:21 pm, Fri, 31 October 25