ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ: ಸಿಟಿ ರವಿ ಪ್ರಕರಣ ಉಲ್ಲೇಖಿಸಿ ಕುಮಾರಸ್ವಾಮಿ ಪ್ರಶ್ನೆ

|

Updated on: Dec 20, 2024 | 2:24 PM

ವಿಧಾನ ಪರಿಷತ್‌ನಲ್ಲಿ ನಡೆದ ಹಿಂಸಾಚಾರ ಮತ್ತು ಸಿಟಿ. ರವಿ ಅವರ ಬಂಧನದ ನಂತರದ ಘಟನೆಗಳನ್ನು ಉಲ್ಲೇಖಿಸಿ, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಕರ್ನಾಟಕದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸಚಿವೆಯ ಬೆಂಬಲಿಗರ ನಡವಳಿಕೆ ಮತ್ತು ಪೊಲೀಸ್ ನಿಷ್ಕ್ರಿಯತೆಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ. ಡಿಕೆ ಶಿವಕುಮಾರ್ ಅವರ ವಿರುದ್ಧವೂ ಅವರು ಪರೋಕ್ಷವಾಗಿ ಆರೋಪ ಮಾಡಿದ್ದಾರೆ.

ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ: ಸಿಟಿ ರವಿ ಪ್ರಕರಣ ಉಲ್ಲೇಖಿಸಿ ಕುಮಾರಸ್ವಾಮಿ ಪ್ರಶ್ನೆ
ಹೆಚ್​ಡಿ ಕುಮಾರಸ್ವಾಮಿ
Follow us on

ಬೆಂಗಳೂರು, ಡಿಸೆಂಬರ್ 20: ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ. ವಿಧಾನ ಪರಿಷತ್​​ನಲ್ಲಿ ಗುರುವಾರ ನಡೆದಿದ್ದ ಘಟನಾವಳಿಗಳು ಹಾಗೂ ನಂತರ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಬಂಧನದ ನಂತರದ ಬೆಳವಣಿಗೆಗಳನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸುದೀರ್ಘ ಸಂದೇಶ ಪ್ರಕಟಿಸಿರುವ ಅವರು, ಪ್ರತಿಪಕ್ಷ ನಾಯಕರಿಗೇ ರಕ್ಷಣೆ ಇಲ್ಲ ಎಂದ ಮೇಲೆ ವಿಧಾನಮಂಡಲದಲ್ಲಿ ಯಾರ ಭಾವಚಿತ್ರ ಹಿಡಿದರೇನು ಫಲ ಎಂದು ಪ್ರಶ್ನಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯರಾದ ಸಿಟಿ ರವಿ ಮೇಲೆ ಸುವರ್ಣಸೌಧದಲ್ಲಿಯೇ ಹಲ್ಲೆ ಯತ್ನ ನಡೆದಿರುವುದು ಖಂಡನೀಯ ಎಂದು ಕುಮಾರಸ್ವಾಮಿ ಉಲ್ಲೇಖಿಸಿದ್ದಾರೆ.

ಸಚಿವೆಯ ಬೆಂಬಲಿಗರ ವರ್ತನೆ, ಗೂಂಡಾಗಿರಿ ಅತಿರೇಕದ್ದು: ಕುಮಾರಸ್ವಾಮಿ

ಗೌರವಾನ್ವಿತ ಸಚಿವೆ ಬಗ್ಗೆ ಸಿಟಿ ರವಿ ಅವರು ಅಶ್ಲೀಲ ಪದ ಬಳಸಿದ್ದರೆ ಅದನ್ನು ನಾನು ಸಮರ್ಥಿಸುವುದಿಲ್ಲ. ಅದಕ್ಕೆ ಪ್ರತಿಯಾಗಿ ಸಚಿವೆ ವರ್ತಿಸಿದ ರೀತಿ, ಅವರ ಬೆಂಬಲಿಗರ ಗೂಂಡಾಗಿರಿ ಅತಿರೇಕದ್ದು. ಎಲ್ಲದ್ದಕ್ಕೂ ಡಾ.ಅಂಬೇಡ್ಕರ್ ಅವರ ಸಂವಿಧಾನದಡಿಯಲ್ಲಿ ರೂಪಿತವಾದ ಕಾನೂನಿದೆ. ಸಭಾಪತಿಗಳೂ ರೂಲಿಂಗ್ ನೀಡಿದ್ದಾರೆ. ಆ ನಂತರವೂ ನಡೆಯುತ್ತಿರುವ ಘಟನಾವಳಿಗಳು, ಸಭಾಪತಿಗಳನ್ನೇ ನಿಂದಿಸುವ ಕೆಟ್ಟ ನಡವಳಿಕೆಗಳು ಆಘಾತಕಾರಿ. ಸರಕಾರದಲ್ಲಿರುವ ಕೆಲವರು ಈ ಘಟನೆಗೆ ಜ್ವಾಲೆ ಸ್ವರೂಪ ನೀಡಿ ಪ್ರಚೋದಿಸುತ್ತಿರುವುದು ಕಳವಳಕಾರಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಮೀಸಲಾತಿಗಾಗಿ ಪಂಚಮಸಾಲಿ ಮುಖಂಡರು ಸುವರ್ಣಸೌಧದ ಮುಂದೆ ಪ್ರತಿಭಟಿಸಿದ್ದಕ್ಕೆ ಪೊಲೀಸರಿಂದ ಲಾಠಿಚಾರ್ಜ್ ಮಾಡಿಸಿ ಪೌರುಷ ಮೆರೆದಿತ್ತು ಕಾಂಗ್ರೆಸ್ ಸರಕಾರ. ಅಂದು ಪೊಲೀಸರ ಪ್ರತಾಪ ಹೇಳತೀರದು. ಗೇಟಿನಲ್ಲಿಯೇ ತಡೆದು ಆ ಪಂಚಮಸಾಲಿ ಜನರಿಗೆ ರಕ್ತ ಬರುವಂತೆ ಲಾಠಿ ಬೀಸಿದ ಪೊಲೀಸರೇ, ಈ ಗೂಂಡಾಗಳು ಸುವರ್ಣಸೌಧದೊಳಕ್ಕೆ ಹೇಗೆ ಬಂದರು? ಅಥವಾ ಅವರೇ ನಿಮ್ಮ ಕಣ್ತಪ್ಪಿಸಿ ಒಳ ನುಸಳಿದರೋ ಅಥವಾ ಸರಕಾರವೇ ಷಡ್ಯಂತ್ರ ಮಾಡಿ ಒಳ ನುಗ್ಗಿಸಿತೋ? ಇಲ್ಲವೇ ಯಾವುದಾದರೂ ಕಲ್ಲು ಬಂಡೆಯ ಕರಾಮತ್ತು, ಕುಮ್ಮಕ್ಕು ಇದೆಯಾ ಎಂದು ಕುಮಾರಸ್ವಾಮಿ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

‘ಬಂಡೆ’ ಬೆಂಬಲದಿಂದಲೇ ಕೃತ್ಯ: ಕುಮಾರಸ್ವಾಮಿ ಆರೋಪ

ಸದನದ ಕಾರಿಡಾರಿನಲ್ಲಿಯೇ ಆ ಗೂಂಡಾಗಳು ಶಾಸಕರನ್ನು ಅಟ್ಟಾಡಿಸುತ್ತಾರೆ, ಕೊಲೆಗೆತ್ನಿಸುತ್ತಾರೆ, ಮಾರ್ಷಲ್​​ಗಳನ್ನು ಕೆಳಕ್ಕೆ ಕೆಡವಿ ಕ್ರಿಮಿನಲ್ ಪ್ರವೃತ್ತಿ ಮೆರೆಯುತ್ತಾರೆಂದರೆ ‘ಬಂಡೆ’ ಬೆಂಬಲವಿದೆ ಎಂದೇ ಅರ್ಥ ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದಾರೆ.

ಸುರಕ್ಷಿತ ಕೈಗಳಲ್ಲಿಲ್ಲ ಆಡಳಿತ: ಹೆಚ್​ಡಿಕೆ ಕಿಡಿ

ಆ ಗೌರವಾನ್ವಿತ ಸಚಿವೆಯ ಆಪ್ತ ಸಹಾಯಕ ಶಾಸಕರ ಮೇಲೇರಿ ಹೋಗುವ, ಕಾರಿಡಾರಿನ ಕಬ್ಬಿಣದ ಬಾಗಿಲನ್ನೇ ಮುರಿಯಲೆತ್ನಿಸಿ ಹಲ್ಲೆಗೆ ಯತ್ನಿಸುವ ದೃಶ್ಯಗಳು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ರಾಜ್ಯದಲ್ಲಿ ಆಡಳಿತ ಸುರಕ್ಷಿತ ಕೈಗಳಲ್ಲಿ ಇಲ್ಲ ಎನ್ನುವುದಕ್ಕೆ ಆ ದೃಶ್ಯಗಳೇ ಸಾಕ್ಷಿ ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಸುವರ್ಣಸೌಧಕ್ಕೆ ನುಗ್ಗಿದ ಗೂಂಡಾಗಳನ್ನು ಕೂಡಲೇ ಬಂಧಿಸಿ, ಅವರ ವಿರುದ್ಧ ರೌಡಿಪಟ್ಟಿ ತೆರೆಯಬೇಕು. ಸಮಾಜದ ಶಾಂತಿಗೆ ಬೆದರಿಕೆಯಾಗಿರುವ ಆ ಕಿಡಿಗೇಡಿಗಳನ್ನು ಸುವರ್ಣಸೌಧ, ವಿಧಾನಸೌಧದಿಂದ ಶಾಶ್ವತವಾಗಿ ನಿರ್ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ನಿನ್ನ ಹೆಣ ಚಿಕ್ಕಮಗಳೂರಿಗೆ ಹೋಗುತ್ತೆ ಎಂದು ಧಮಕಿ ಹಾಕಿದ್ದರು: ಕೋರ್ಟ್​ನಲ್ಲಿ ಸಿಟಿ ರವಿ ಆರೋಪ

ಕುಮಾರಸ್ವಾಮಿ ಎಕ್ಸ್ ಸಂದೇಶ


‘‘ಪೊಲೀಸರೇ.., ಇಡೀ ಪ್ರಕರಣದ ಬಗ್ಗೆ ನೀವು ಉತ್ತರಿಸಬೇಕಾಗುತ್ತದೆ. ಇಡೀ ರಾತ್ರಿ ಸಿ.ಟಿ.ರವಿ ಅವರನ್ನು ಪೊಲೀಸ್ ಜೀಪಿನಲ್ಲಿ ಸುತ್ತಿಸುತ್ತೀರಿ ಎಂದರೆ, ಇದಕ್ಕೆ ಯಾರ ಫರ್ಮಾನು ಕಾರಣ? ಈ ಗೂಂಡಾಗಳ ಗ್ಯಾಂಗ್ ಲೀಡರ್ ಯಾರು? ನಿಮಗೆ ಎಲ್ಲಾ ಮಾಹಿತಿ ಇರುತ್ತದೆ, ನೀವೂ ಸತ್ಯ ಹೇಳಬೇಕಾಗುತ್ತದೆ’’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ