
ಬೆಂಗಳೂರು, ಅಕ್ಟೋಬರ್ 26: ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಕ್ರಮಕ್ಕೆ ಮುಂದಾಗಿದೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಭದ್ರತೆ ಹೆಚ್ಚಿಸುವ ಉದ್ದೇಶದಿಂದ ಇನ್ಮುಂದೆ ಮೂರು ಪ್ರತಿಗಳ ಒಎಂಆರ್ ಶೀಟ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇಂದಿನಿಂದ ಅಕ್ಟೋಬರ್ 27ರವರೆಗೆ ನಡೆಯುತ್ತಿರುವ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಇದೇ ಮೊದಲ ಬಾರಿಗೆ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
ಭೂಮಾಪಕ, ಗ್ರಾಮ ಆಡಳಿತಾಧಿಕಾರಿ, ವಸತಿ ಶಾಲೆಗಳ ಶಿಕ್ಷಕರು, ಇಎಸ್‌ಐ ನರ್ಸಿಂಗ್ ಅಧಿಕಾರಿ, ಫಾರ್ಮಸಿ ಅಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಕೆಇಎ ಪರೀಕ್ಷೆಗಳನ್ನು ನಡೆಸುತ್ತಿದೆ. ಈ ಪರೀಕ್ಷೆಗಳಲ್ಲಿ ಒಎಂಆರ್ ಶೀಟ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಇನ್ಮುಂದೆ ಮೂರು ಪ್ರತಿಗಳ ಒಎಂಆರ್ ಶೀಟ್ ಬಳಸಲಾಗುತ್ತದೆ.
ಈ ಹಿಂದೆ ಎರಡು ಪ್ರತಿಗಳ ಒಎಂಆರ್ ಶೀಟ್ ವ್ಯವಸ್ಥೆ ಜಾರಿಯಲ್ಲಿತ್ತು. ಪರೀಕ್ಷೆಯ ಮೂಲ ಒಎಂಆರ್ ಪ್ರತಿಯನ್ನು ಕೆಇಎಗೆ ಸಲ್ಲಿಸಲಾಗುತ್ತಿತ್ತು. ಕಾರ್ಬನ್ ಪ್ರತಿಯನ್ನು ಅಭ್ಯರ್ಥಿಗೆ ನೀಡಲಾಗುತ್ತಿತ್ತು. ಆದರೆ, ಹೊಸ ವ್ಯವಸ್ಥೆಯಲ್ಲಿ ಮೂರನೇ ಪ್ರತಿಯನ್ನೂ ಸೇರಿಸಲಾಗಿದ್ದು, ಪರೀಕ್ಷೆಯ ಉತ್ತರ ಪತ್ರಿಕೆಗಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಹೊಸ ವ್ಯವಸ್ಥೆಯಡಿ ಪರೀಕ್ಷೆ ಮುಗಿದ ಬಳಿಕ ಒಎಂಆರ್ ಶೀಟ್‌ನ ಮೂಲ ಪ್ರತಿಯನ್ನು ಕೆಇಎಗೆ ಸಲ್ಲಿಸಲಾಗುತ್ತದೆ. ಎರಡನೇ ಪ್ರತಿಯನ್ನು ಅಭ್ಯರ್ಥಿಗೆ ನೀಡಲಾಗುತ್ತದೆ. ಮೂರನೇ ಪ್ರತಿಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿಯ ಸ್ಟ್ರಾಂಗ್ ರೂಮ್‌ನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ. ಈ ಮೂಲಕ ಒಂದೇ ಒಎಂಆರ್ ಶೀಟ್‌ನ ಮೂರು ಪ್ರತಿಗಳನ್ನು ಪ್ರತ್ಯೇಕವಾಗಿ ಸಂರಕ್ಷಿಸುವ ವ್ಯವಸ್ಥೆ ಜಾರಿಗೆ ಬರಲಿದೆ. ಪರೀಕ್ಷೆಯ ನಂತರ ಉತ್ತರ ಪತ್ರಿಕೆಗಳ ನಿರ್ವಹಣೆ ಮತ್ತು ಪರಿಶೀಲನೆಗೆ ಹೆಚ್ಚಿನ ಭದ್ರತೆ ಒದಗಿಸುವುದು ಈ ಕ್ರಮದ ಉದ್ದೇಶವಾಗಿದೆ.
ಕೆಇಎ ಮುಂದಿನ ದಿನಗಳಲ್ಲಿ ನಡೆಸುವ ನೇಮಕಾತಿ ಪರೀಕ್ಷೆಗಳಲ್ಲಿಯೂ ಮೂರು ಪ್ರತಿಗಳ ಒಎಂಆರ್ ಶೀಟ್ ವ್ಯವಸ್ಥೆ ಮುಂದುವರಿಯಲಿದೆ. ಮೂಲ ಪ್ರತಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸುವುದು, ಎರಡನೇ ಪ್ರತಿಯನ್ನು ಅಭ್ಯರ್ಥಿಗೆ ನೀಡುವುದು ಮತ್ತು ಮೂರನೇ ಪ್ರತಿಯನ್ನು ಜಿಲ್ಲಾಧಿಕಾರಿ ಕಚೇರಿಯ ಸ್ಟ್ರಾಂಗ್ ರೂಮ್‌ನಲ್ಲಿ ಇರಿಸುವ ಮೂಲಕ ಪರೀಕ್ಷಾ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕಗೊಳಿಸಲು ಉದ್ದೇಶಿಸಲಾಗಿದೆ.
ಈ ಬದಲಾವಣೆಯಿಂದ ಒಎಂಆರ್ ಶೀಟ್‌ಗಳ ಸುರಕ್ಷತೆ ಹೆಚ್ಚುವುದರ ಜೊತೆಗೆ, ಪರೀಕ್ಷಾ ಪ್ರಕ್ರಿಯೆಯಲ್ಲಿ ಅಕ್ರಮಗಳಿಗೆ ಅವಕಾಶ ಕಡಿಮೆ ಮಾಡುವ ನಿರೀಕ್ಷೆಯಿದೆ. ಈ ಕುರಿತು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರೂ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮದ ತನಿಖೆ ಚುರುಕುಗೊಳಿಸಿದ ಸಿಐಡಿ; ಒಎಂಆರ್ ಶೀಟ್ಗಳನ್ನು ಎಫ್ಎಸ್ಎಲ್ಗೆ ಕಳಿಸಲು ಸಿದ್ಧತೆ
ಒಟ್ಟಿನಲ್ಲಿ, ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ತಡೆ ಮತ್ತು ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ಕೆಇಎ ಟ್ರಿಪಲ್ ಒಎಂಆರ್ ಶೀಟ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಮುಂದಿನ ಎಲ್ಲ ನೇಮಕಾತಿ ಪರೀಕ್ಷೆಗಳಲ್ಲಿಯೂ ಈ ವ್ಯವಸ್ಥೆ ಮುಂದುವರಿಯಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ