ಕೋಲಾರ : ಕೊರೊನಾ ಸಂಕಷ್ಟದ ಕಾಲದಲ್ಲೂ ಕೆಜಿಎಫ್ ಜನರಿಗೊಂದು ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಜಿಲ್ಲೆಯ ಕೆಜಿಎಫ್ ಚಿನ್ನದ ಗಣಿಯ ಆಸ್ಪತ್ರೆ ಎರಡು ದಶಕಗಳ ಹಿಂದೆ ಬೀಗ ಹಾಕಲಾಗಿದ್ದ ಐತಿಹಾಸಿಕ ಆಸ್ಪತ್ರೆ. ಸಾವಿರಾರು ಬಡ ಕಾರ್ಮಿಕರಿಗೆ ಸಂಜೀವಿನಿಯಂತಿದ್ದ ಈ ಆಸ್ಪತ್ರೆಯ ಬೀಗ ತೆಗೆಯಲು ಕೊರೊನಾ ಕಾರಣವಾಗಿದೆ. ಕಳೆದ 20 ವರ್ಷಗಳ ಹಿಂದೆ ಕೆಜಿಎಫ್ ಚಿನ್ನದ ಗಣಿಗೆ ಬೀಗ ಹಾಕಿದಾಗ ಅದರ ಜೊತೆಯಲ್ಲೇ ಚಿನ್ನದ ಗಣಿಗೆ ಸೇರಿದ್ದ ಸುಸಜ್ಜಿತವಾದ 800 ಹಾಸಿಗೆಗಳ ಅತ್ಯಾಧುನಿಕ ಆಸ್ಪತ್ರೆಗೂ ಬೀಗ ಹಾಕಲಾಗಿತ್ತು. ಆದರೆ ಈಗ ಆ ಆಸ್ಪತ್ರೆಯನ್ನು ಕೊರೊನಾ ಸಂಕಷ್ಟದ ಹಿನ್ನೆಲೆ ಬಾಗಿಲು ತೆಗೆದು ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸಿಕೊಳ್ಳಲು ಕೇಂದ್ರದ ಗಣಿ ಸಚಿವ ಪ್ರಹ್ಲಾದ್ ಜೋಶಿ ಮೌಖಿಕವಾಗಿ ಒಪ್ಪಿಗೆ ನೀಡಿದ್ದು, ಕೂಡಲೇ ಅದಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಕೆಜಿಎಫ್ ಭಾಗದ ಜನರು ಸಂತಸಗೊಂಡಿದ್ದಾರೆ.
ಗ್ರೀನ್ ಸಿಗ್ನಲ್ ಸಿಕ್ಕ ಬೆನ್ನಲ್ಲೇ ಸೇವೆ ಮಾಡಲು ನೂರಾರು ಜನ
ಕಳೆದ ಇಪ್ಪತ್ತು ವರ್ಷಗಳಿಂದ ಬೀಗ ಹಾಕಿದ್ದ ಆಸ್ಪತ್ರೆಯನ್ನು ತೆರೆದು ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಮಾಡಿಕೊಡಿ ಎಂಬ ಸೂಚನೆ ಸಿಗುತ್ತಿದ್ದಂತೆ ಈ ಭಾಗದ ಜನರಿಗೆ ಸಂತಸ ತಂದಿದೆ. ಅದೇ ಖುಷಿಯಲ್ಲಿ ನೂರಾರು ಜನರು ಇಡೀ ಆಸ್ಪತ್ರೆಯನ್ನು ಸ್ವಚ್ಚಗೊಳಿಸಲು ಸ್ವಯಂ ಪ್ರೇರಿತರಾಗಿ ಬರುತ್ತಿದ್ದಾರೆ. ಇಪ್ಪತ್ತು ವರ್ಷಗಳಿಂದ ಪಾಳು ಬಿದ್ದ ಕೊಂಪೆಯಂತಾಗಿ, ಗಿಡಗಂಟೆಗಳಿಂದ ತುಂಬಿಕೊಂಡಿದ್ದ ಆಸ್ಪತ್ರೆಯನ್ನು ರಾತ್ರೋ ರಾತ್ರಿ ಸ್ವಚ್ಛಗೊಳಿಸಿದ್ದಾರೆ.
ಚಿನ್ನದ ಗಣಿ ಆಸ್ಪತ್ರೆಯ ವಿಶೇಷತೆ, ಇತಿಹಾಸ ಏನು?
ಕೆಜಿಎಫ್ ಚಿನ್ನದ ಗಣಿ ಆಸ್ಪತ್ರೆಗೆ ತನ್ನದೇ ಆದ ಇತಿಹಾಸ ಇದೆ. 1880 ರಲ್ಲಿ ಜಾನ್ ಟೇಲರ್ ಕಾಲದಲ್ಲಿ ಈ ಆಸ್ಪತ್ರೆಯನ್ನು ಚಿನ್ನದ ಗಣಿ ಕಾರ್ಮಿಕರಿಗಾಗಿ ಸುಸಜ್ಜಿತವಾಗಿ, ಆತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ನಿರ್ಮಾಣ ಮಾಡಲಾಗಿತ್ತು. 800 ಹಾಸಿಗೆಗಳ ಆಸ್ಪತ್ರೆಯಲ್ಲಿ ಆ ಕಾಲಕ್ಕೆ ಎಕ್ಸ್ ರೇ ಯಿಂದ ಹಿಡಿದು ಅತ್ಯಾಧುನಿಕ ಲ್ಯಾಬೋರೇಟರಿ ಹೊಂದಿದ್ದ ಆಸ್ಪತ್ರೆ ಇದಾಗಿತ್ತು. ಈ ಆಸ್ಪತ್ರೆ ಚಿನ್ನದ ಗಣಿಯ ಆಳದಲ್ಲಿ ಕೆಲಸ ಮಾಡಿ ಸಿಲಿಕಾಸಿಸ್ ನಂತಹ ಕಾಯಿಲೆಗಳಿಗೆ ತುತ್ತಾದ ಸಾವಿರಾರು ಜನ ಕಾರ್ಮಿಕರ ಜೀವ ಉಳಿಸಿದ್ದ ಕೀರ್ತಿ ಈ ಆಸ್ಪತ್ರೆಗಿತ್ತು.
ಆದರೆ ದುರಾದೃಷ್ಟವಶಾತ್ ನಷ್ಟದ ನೆಪವೊಡ್ಡಿ 2001 ಮಾರ್ಚ್ 1 ರಂದು ಚಿನ್ನದ ಗಣಿಗೆ ಬೀಗ ಹಾಕಿದಾಗ ಈ ಆಸ್ಪತ್ರೆಗೂ ಬೀಗ ಹಾಕಲಾಗಿತ್ತು. ಆಗ ಕೆಜಿಎಫ್ ಭಾಗದ ಸಾವಿರಾರು ಜನ ಬಡ ಕಾರ್ಮಿಕರಿ ಸಾಕಷ್ಟು ಆರೋಗ್ಯ ಸಮಸ್ಯೆಗಳಿಂದ ಸಂಕಷ್ಟಕ್ಕೆ ತುತ್ತಾಗಿದ್ದರು.
ಚಿನ್ನದ ಗಣಿ ಆಸ್ಪತ್ರೆಗೆ ಬೀಗ ಹಾಕಿದ ನಂತರ ಮತ್ತೆ ಅದನ್ನು ತೆರೆಯುವಂತೆ ಹತ್ತಾರು ಬಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಳಿ ಮನವಿ ಮಾಡಲಾಗಿತ್ತಾದರೂ ಅದಕ್ಕೆ ಕಾಲ ಕೂಡಿ ಬಂದಿರಲಿಲ್ಲ. ಆದರೆ ಈಗ ಕೋಲಾರ ಸಂಸದ ಎಸ್.ಮುನಿಸ್ವಾಮಿ ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಶಿ ಬಳಿ ಜಿಲ್ಲೆಯ ಕೊರೊನಾ ಪರಿಸ್ಥಿತಿಯನ್ನು ಗಮನಕ್ಕೆ ತಂದು, ಚಿನ್ನದ ಗಣಿಗೆ ಸೇರಿದ ಬೃಹತ್ ಈ ಆಸ್ಪತ್ರೆ ತೆರೆಯಲು ಅನುಮತಿ ಕೇಳಿದಾಗ ಆಸ್ಪತ್ರೆ ತೆರೆದು ಚಿಕಿತ್ಸೆಗೆ ಬಳಸಿಕೊಳ್ಳುವಂತೆ ಒಪ್ಪಿಗೆ ನೀಡಿದ್ದಾರೆ.
ಇದನ್ನೂ ಓದಿ
ಬೇರೆ ಸ್ಥಳಗಳಿಂದ ಆಗಮಿಸುವ ಸಾರ್ವಜನಿಕರು ಮನೆಯಲ್ಲಿಯೇ ಇರಿ; ಗದಗ ಜಿಲ್ಲಾಧಿಕಾರಿ ಮನವಿ
(KGF hospital which was closed 20 years ago was opened to treat corona Infected)