ಕೊರೊನಾ ಸೋಂಕಿಗೆ 30 ವರ್ಷದ ತಾಲೂಕು ಪಂಚಾಯತ್ ಸದಸ್ಯ ಬಲಿ
ಮಹಾಮಾರಿ ಕೊರೊನಾ ಸೋಂಕಿಗೆ 30 ವರ್ಷದ ತಾಲೂಕು ಪಂಚಾಯತ್ ಸದಸ್ಯ ಬಲಿಯಾಗಿದ್ದಾನೆ. ಕಮಲಾಪುರ ತಾಲೂಕಿನ ನಾಗೂರು ಗ್ರಾಮದ ನಿವಾಸಿ ಪ್ರವೀಣ ಅಡಕರ್ ಸೋಕಿಗೆ ಬಲಿಯಾದ ಯುವಕ.
ಕಲಬುರಗಿ: ಕೊರೊನಾ ಎರಡನೇ ಅಲೆ ಭೀಕರತೆಯಿಂದ ಸೋಂಕಿತರ ಸಂಖ್ಯೆ ಮತ್ತು ಸೋಂಕಿತರ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಅದರಲ್ಲೂ ಎರಡನೇ ಅಲೆ ಯುವಕರನ್ನೇ ಹೆಚ್ಚಾಗಿ ಸಾವಿನ ದವಡೆಗೆ ನೂಕುತ್ತಿದೆ. ಮಹಾಮಾರಿ ಕೊರೊನಾ ಸೋಂಕಿಗೆ 30 ವರ್ಷದ ತಾಲೂಕು ಪಂಚಾಯತ್ ಸದಸ್ಯ ಬಲಿಯಾಗಿದ್ದಾನೆ. ಕಮಲಾಪುರ ತಾಲೂಕಿನ ನಾಗೂರು ಗ್ರಾಮದ ನಿವಾಸಿ ಪ್ರವೀಣ ಅಡಕರ್ ಸೋಕಿಗೆ ಬಲಿಯಾದ ಯುವಕ.
ಕಮಲಾಪುರು ತಾಲೂಕಿನ ಜೇವಣಗಿ ಗ್ರಾಮ ಪಂಚಾಯತ್ ಸದಸ್ಯನಾಗಿದ್ದ ಪ್ರವೀಣ ಅವಿವಾಹಿತನಾಗಿದ್ದ. ಎಂಟು ದಿನದ ಹಿಂದೆ ಪ್ರವೀಣನಿಗೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಆರು ದಿನದ ಹಿಂದೆ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ನಿನ್ನೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯಿಂದ ಹೈದರಾಬಾದ್ಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದ್ರೆ ಮಾರ್ಗಮಧ್ಯೆಯೇ ಪ್ರವೀಣ ಮೃತಪಟ್ಟಿದ್ದಾನೆ. ಕಳೆದ ರಾತ್ರಿ ಗ್ರಾಮದಲ್ಲಿ ಕುಟುಬಸ್ಥರಿಂದ ಅಂತ್ಯಸಂಸ್ಕಾರ ನೆರವೇರಿದೆ.
ಹಸೆಮಣೆ ಏರಬೇಕಾಗಿದ್ದ ದಿನವೇ ಮದುಮಗನ ಸಾವು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ದೇವರಕೊಡಿಗೆಯಲ್ಲಿ ಇಂದು (ಏಪ್ರಿಲ್ 29) ಹಸೆಮಣೆ ಏರಬೇಕಾಗಿದ್ದ ಯುವಕನೋರ್ವ ಕೊರೊನಾ ಸೋಂಕಿನಿಂದ ದುರಂತ ಅಂತ್ಯ ಕಂಡಿದ್ದು ಇಡೀ ಊರಿನಲ್ಲಿ ಶೋಕ ಮಡುಗಟ್ಟಿದೆ. ದೇವರಕೊಡಿಗೆ ಗ್ರಾಮದ 32 ವರ್ಷದ ಪೃಥ್ವಿರಾಜ್ ಎಂಬ ಯುವಕ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ.
ಇಂದು ಮದುವೆಯಾಗಬೇಕಿದ್ದ ಪೃಥ್ವಿರಾಜ್ 10 ದಿನಗಳ ಹಿಂದೆಯಷ್ಟೇ ಬೆಂಗಳೂರಿನಿಂದ ಮನೆಗೆ ಬಂದಿದ್ದರು. ಆದರೆ, ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೃಥ್ವಿರಾಜ್ ಕೊರೊನಾ ಸೋಂಕಿನ ತೀವ್ರತೆಗೆ ಸಿಕ್ಕು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ವಿವಾಹ ಕಾರ್ಯಕ್ರಮದ ನಿಮಿತ್ತ ಸಂಭ್ರಮ ನೆಲೆಸಬೇಕಿದ್ದ ಮನೆಯಲ್ಲಿ ಕೊರೊನಾದಿಂದಾಗಿ ಸೂತಕ ಆವರಿಸಿದ್ದು, ಯುವಕನ ಸಾವಿಗೆ ಗ್ರಾಮಸ್ಥರು, ಸಂಬಂಧಿಕರು ಕಣ್ಣೀರಿಡುತ್ತಿದ್ದಾರೆ. ಮೊದಲನೇ ಅಲೆಯಲ್ಲಿ ವಯೋವೃದ್ಧರು ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದವರಿಗೆ ಮಾತ್ರ ಪ್ರಾಣಾಪಾಯ ಸೃಷ್ಟಿಸುತ್ತಿದ್ದ ಕೊರೊನಾ ವೈರಾಣು ಇದೀಗ ಆರೋಗ್ಯವಂತ ಯುವಕರ ಸಾವಿಗೂ ಕಾರಣವಾಗುತ್ತಿರುವುದು ವೈದ್ಯಕೀಯ ವಲಯದಲ್ಲಿ ಆತಂಕ ಮೂಡಿಸಿದೆ.
ಇದನ್ನೂ ಓದಿ: ಕೊರೊನಾ ಸಾವಿನ ಫೇಕ್ ವಿಡಿಯೋಗಳು ವೈರಲ್; ಎಚ್ಚರಿಕೆ ನೀಡಿದ ಜಗ್ಗೇಶ್