ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮ ಹುಟ್ಟಿದ ಸ್ಥಳ ಎಂದು ಹೆಸರಾದ ಅಂಜನಾದ್ರಿ ಪರ್ವತ ಇದೀಗ ಸುದ್ದಿಯಲ್ಲಿದೆ. ಟಿಟಿಡಿ ಹನುಮ ಹುಟ್ಟಿದ್ದು ನಮ್ಮಲ್ಲಿ ಎಂದು ಹೇಳ್ತಿದೆ. ಇತ್ತ ಕೊಪ್ಪಳ ಇತಿಹಾಸಕಾರರು, ಹನುಮ ಹುಟ್ಟಿದ್ದು ನಮ್ಮಲ್ಲಿ ಎನ್ನುತ್ತಿದ್ದಾರೆ. ಅಷ್ಕಕ್ಕೂ ಹನುಮ ಹುಟ್ಟಿದ ವಿವಾದ ಏನು ಎಂಬ ಈ ಆಸಕ್ತಿಕರ ಸ್ಟೋರಿ ಇಲ್ಲಿದೆ.
ಕೊಪ್ಪಳ ಜಿಲ್ಲೆ ಕಿಷ್ಕಿಂದೆ ಹನುಮ ಹುಟ್ಟಿದ ಸ್ಥಳ ಎಂದು ಹೆಸರುವಾಸಿಯಾದ ಪ್ರದೇಶ. ಕಿಷ್ಕಿಂದೆ ಎಂದರೆ ಸಂಸ್ಕೃತದಲ್ಲಿ ಇಕ್ಕಟ್ಟಿನ ಪ್ರದೇಶ ಎಂದರ್ಥ. ಹನುಮ ಹುಟ್ಟಿದ ಕೊಪ್ಪಳ ಜಿಲ್ಲೆ ಅಂಜನಾದ್ರಿ ಕೂಡಾ ಇಕ್ಕಟ್ಟಿನ ಪ್ರದೇಶವಾಗಿದೆ. ಸುಮಾರು 576 ಮೆಟ್ಟಿಲನ್ನು ಹತ್ತಿ ಹನುಮನ ದರ್ಶನ ಪಡೆಯಬೇಕು. ಕೊಪ್ಪಳ ಜಿಲ್ಲೆ ಕಿಷ್ಕಿಂದೆ ಪ್ರದೇಶ ಅಂಜನಾದ್ರಿಯಲ್ಲೆ ಹನುಮ ಹುಟ್ಟಿದ ಅನ್ನೋದಕ್ಕೆ ಅನೇಕ ದಾಖಲೆಗಳಿವೆ. ಅಲ್ಲದೇ ಉತ್ತರ ಭಾರತ, ದಕ್ಷಿಣ ಭಾರತದಿಂದಲೂ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ. ಇದೀಗ ಟಿಟಿಡಿ ಹನುಮ ಹುಟ್ಟಿದ್ದು ನಮ್ಮಲ್ಲಿ ಎಂಬ ಕ್ಯಾತೆ ತೆಗೆದಿದೆ.
ಕೊಪ್ಪಳದಲ್ಲಿಯೇ ಹನುಮ ಹುಟ್ಟಿದ ಅನ್ನೋದಕ್ಕೆ ಇರುವ ದಾಖಲೆಗಳು
ಹನುಮ ಕಿಷ್ಕಿಂದೆ ಪ್ರದೇಶದಲ್ಲಿ ಹುಟ್ಟಿದ ಅನ್ನೋದಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ..ಕ್ರಿಸ್ತಶಕ 1000 ರಲ್ಲಿಯೇ ಕೆತ್ತಲಾದ ದಾಖಲೆಗಳಿವೆ. ಈ ಬಗ್ಗೆ ಸ್ಥಳೀಯ ಇತಿಹಾಸಕಾರ ಡಾ. ಶರಣಬಸಪ್ಪ ಕೋಲ್ಕಾರ್ ಅಧ್ಯಯನ ನಡೆಸಿ ಪುಸ್ತಕ ಬರೆದಿದ್ದು, ಅದರಲ್ಲಿ ಅನೇಕ ದಾಖಲೆಗಳನ್ನು ಉಲ್ಲೇಖಿಸಿದ್ದಾರೆ. ಆನೆಗೊಂದಿಯಿಂದ 10 ಕಿಮೀ ದೂರದ ಕ್ರಿ.ಶ 1069 ರಲ್ಲಿ ರಚಿಸಿದ ಶಾಸನದಲ್ಲಿ ತುಂಗಭದ್ರಾ ತಟದಲ್ಲಿ ಕಿಷ್ಕಿಂದೆ ಪ್ರದೇಶದ ಉಲ್ಲೇಖವಿದೆ. ಪಶ್ಚಿಮಕ್ಕೆ 20 ಕಿಮೀ ದೂರದಲ್ಲಿರುವ ಕ್ರಿ.ಶ 1088ರ ಶಾಸನದಲ್ಲಿಯೂ ಕಿಷ್ಕಿಂದೆಯ ಉಲ್ಲೇಖವಿದೆ.
ಹನುಮ ಇಲ್ಲಿಯೇ ಹುಟ್ಟಿದ್ದ ಎನ್ನಲು ಇನ್ನೂ ಅನೇಕ ಪುರಾವೆಗಳಿವೆ. ಇದೇ ಕಿಷ್ಕಿಂಧೆ ಪ್ರದೇಶಕ್ಕೆ ಶ್ರೀರಾಮ ಬಂದಾಗ ಹನುಮನ ಭೇಟಿ ಮಾಡಿದ ಕುರುಹು ಇಂದಿಗೂ ಇವೆ. ವಾಲಿ ಸುಗ್ರೀವ ಕಾದಾಡಿದ ಜಾಗವೂ ಇಲ್ಲಿದೆ. ಇದಲ್ಲದೇ ಪಂಪಾ ಸರೋವರ ಇದೆ. ಇವೆಲ್ಲವೂ ಹನುಮ ಇಲ್ಲೆ ಹುಟ್ಟಿದ ಎಂಬುದಕ್ಕೆ ಸಾಕಷ್ಟು ಪುಷ್ಟಿ ನೀಡಿವೆ.
ತುಂಗಭದ್ರಾ ನದಿಯಲ್ಲಿದೆ ಹನುಮನ ಸೆಳೆವು
ಇತಿಹಾಸಕಾರ ಶರಣಬಸಪ್ಪ ಕೋಲ್ಕಾರ್ ಹೇಳುವ ಪ್ರಕಾರ ತುಂಗಭದ್ರಾ ನದಿ ವಿಶಾಲವಾಗಿ ಹರಿಯುತ್ತಿತ್ತು. ಹನುಮನ ತಾಯಿ ಅಂಜನಾ ದೇವಿಗೆ ನೀರಿನ ಅಗತ್ಯವಿತ್ತು. ಆ ನದಿಯನ್ನು ಹನುಮ ತಡೆದು ಅಂಜನಾದ್ರಿ ಕಡೆ ನೀರು ಬರೋ ಹಾಗೆ ಮಾಡಿದ ಎಂದು ಹೇಳುತ್ತಾರೆ. ಅದೇ ಜಾಗಕ್ಕೆ ಹನುಮನ ಸೆಳೆವು ಎಂದು ಇಂದಿಗೂ ಕರೆಯುತ್ತಾರೆ.
ಆನೆಗೊಂದಿ ಪರಿಸರದ ಕಿಷ್ಕಿಂದೆ ರಾಮಾಯಣ ಕಾಲದ ಒಂದು ವಾನರ ರಾಜ್ಯ. ವಾಲಿ ಇದರ ಅಧಿಪತಿಯಾಗಿದ್ದ. ರಾಮಾಯಣದಲ್ಲಿ ಆನೆಗೊಂದಿ ಭಾಗದ ಅನೇಕ ಪ್ರದೇಶಗಳ ಉಲ್ಲೇಖವಿದೆ. ಇದಕ್ಕೆ ಸಂಬಧಿಸಿದ ದಾಖಲೆಗಳು ಈಗಲೂ ಇವೆ. ಜಾನಪದಲ್ಲೂ ಇದರ ಬಗ್ಗೆ ಉಲ್ಲೇಖವಿದೆ. ಸಾವಿರಾರು ವರ್ಷಗಳಿಂದ ಹನುಮ ಹುಟ್ಟಿದ್ದು ಇದೇ ಅಂಜನಾದ್ರಿಯಲ್ಲಿ ಎಂಬ ನಂಬಿಕೆಯಿದೆ.
ಸ್ಥಳೀಯ ಐತಿಹ್ಯ
ವಾಲಿ ಮಹಾರಾಜ ವಾಸ ಮಾಡುತ್ತಿದ್ದ ವಾಲಿ ಕಿಲ್ಲಾ ಇಂದಿಗೂ ಇಲ್ಲಿದೆ. ಇಲ್ಲಿ ವಾಲಿ ಬಂಢಾರ ಇದೆ, ಇಲ್ಲಿ ವಾಲಿ ಮಹಾರಾಜ ಇಡೀ ಸಂಪತ್ತು ಕೂಡಿ ಇಟ್ಟಿದ್ದನಂತೆ. ಇಲ್ಲಿಯೇ ಪಂಪಾ ಸರೋವರ ಇದೆ. ಸ್ಕಂದ ಪುರಾಣದಲ್ಲಿ ಪಂಪಾ ಸರೋವರದ ಉಲ್ಲೇಖವಿದೆ. ಪಂಪಾಬಿಕ ವಿರೂಪಾಕ್ಷದೇವರನ್ನು ವಿವಾಹ ಆಗುವ ಮುಂಚೆ ಇಲ್ಲಿಯೇ ತಪಸ್ಸು ಮಾಡಿದ್ದಾರೆ ಎಂಬ ಐತಿಹ್ಯವಿದೆ .
ರಾಮಾಯಣ ಕಾಲದಲ್ಲಿ ಪಂಪಾ ಸರೋವರದ ಉಲ್ಲೇಖವಿದೆ. ತಿರುಪತಿ ತಿರುಮಲದಲ್ಲಿ ಯಾವುದೇ ನದಿ ಇಲ್ಲ. ಇದರ ಜೊತೆಗೆ ತುಂಗಭದ್ರಾ ನದಿತೀರದಲ್ಲಿ ವೆಂಕಟಾಪೂರ ಬಳಿ ವಾಲಿ ದಿಬ್ಬ ಇದೆ. ವಾಲಿಯನ್ನು ರಾಮ ಸಂಹರಿಸಿ ಸಂಸ್ಕಾರ ನಡೆಸಿದ ಜಾಗ ಎಂದು ಇದನ್ನು ಕರೆಯಲಾಗುತ್ತದೆ. ಸೀತೆಯನ್ನು ಹುಡುಕಿಕೊಂಡು ರಾಮ ಲಕ್ಷ್ಮಣ ಇಲ್ಲಿ ಬಂದ ಕುರಿತು ಪುರಾಣಗಳಲ್ಲಿ ಉಲ್ಲೇಖವಿದೆ. ಅಂಜನಾದ್ರಿ ಪರ್ವತ ಅತ್ಯಂತ ಖಚಿತವಾಗಿ ಹನುಮನ ಜನ್ಮಸ್ಥಳ ಎನ್ನಲು ಪರ್ವತದಲ್ಲಿ ಇಂದಿಗೂ ಹನುಮನ ಹಳ್ಳಿ, ರಾಮಾಪೂರಗಳಿವೆ. ಅಂಜನಹಳ್ಳಿ ಅಂಜನಾದೇವಿ ಮೂಲ ತವರಾಗಿದ್ದು, ಬೆಟ್ಟದ ಮೇಲೆ ಆಂಜನೇಯನ ಜನನವಾದ ಕಾರಣ ಅಂಜನಾದ್ರಿ ಬೆಟ್ಟ ಎನ್ನಲಾಗುತ್ತದೆ.
‘ಕಿಷ್ಕಿಂದಾ ಕಾಂಡದ ಎಲ್ಲ ಘಟನೆಗಳು ನಡೆದಿದ್ದು ಆನೆಗೊಂದಿ ಭಾಗದಲ್ಲಿ. ಇದಕ್ಕೆ ಅನೇಕ ದಾಖಲೆಗಳು, ಪುರಾತತ್ವ ದಾಖಲೆಗಳು, ಗವಿ ಚಿತ್ರಗಳು, ನಂಬಿಕೆಗಳು ಸಾಕ್ಷಿಯಾಗಿವೆ . ಇವುಗಳ ಆಧಾರದ ಮೇಲೆ ನಾವು ತಿರುಪತಿ ತಿರುಮಲವನ್ನು ಹನುಮ ಹುಟ್ಟಿದ ಸ್ಥಳ ಎಂದು ನಂಬಲು ಸಾಧ್ಯವಿಲ್ಲ. ನಮ್ಮ ಪ್ರದೇಶವೇ ಹನುಮ ಹುಟ್ಟಿದ ಸ್ಥಳ. ದಕ್ಷಿಣ ಭಾರತದಲ್ಲಿ ಅನೇಕ ಅಂಜನಾದ್ರಿಗಳಿವೆ, ಇದೊಂದೇ ಹೆಸರಿನ ಕಾರಣದಿಂದ ಟಿಟಿಡಿ ಹನುಮ ಹುಟ್ಟಿದ್ದು ಅಲ್ಲಿ ಎಂಬುದು ಹಾಸ್ಯಾಸ್ಪದ’ ಎಂದು ಇತಿಹಾಸ ಸಂಶೋಧಕರಾದ ಡಾ. ಶರಬಸಪ್ಪ ಕೋಲ್ಕಾರ್ ಹೇಳುತ್ತಾರೆ.
ಜಾನಪದದಲ್ಲೂ ಅಂಜನಾದ್ರಿಯ ಉಲ್ಲೇಖ
ಆಡುವ್ಯಾಗ ಅಂಜನಾದೇವಿ ಹನುಮನ ಹಡದಾಳೋ, ತೊಡೆ ತೊಳೆಯೋಕೆ ನೀರಿಲ್ಲ, ಬಾಲ ಹನುಮ ಬೆಟ್ಟ ಇಳಿದು ಹೊಳೆಯ ತಿರುವ್ಯಾನ ಎಂಬ ಸಾಲುಗಳು ಸ್ಥಳೀಯ ಜಾನಪದ ಗೀತೆಗಳಲ್ಲಿ ಉಲ್ಲೇಖವಿದೆ. ಈ ಸಾಲುಗಳು ಸಹ ಕಿಷ್ಕಿಂದೆಯೇ ಹನುಮ ಹುಟ್ಟಿದ ಸ್ಥಳ ಎನ್ನುತ್ತವೆ.
ರಾಮಾಯಣ ಕಾವ್ಯದಲ್ಲಿ ಉಲ್ಲೇಖವಾಗಿರುವ ಕಿಷ್ಕಿಂದೆ, ಅಂಜನಾದ್ರಿ ಪರ್ವತಗಳ ಗುರುತು ಆನೆಗೊಂದಿ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂದಿಗೂ ಇವೆ. ಇಲ್ಲಿಯೇ ವಾನರನಂತೆ ಕಾಣುವ ಚಿತ್ರಗಳಿವೆ. 4000 ವರ್ಷಗಳ ಹಿಂದಿನ ಅನೇಕ ಚಿತ್ರಗಳಿವೆ. ವಾನರ ಬದುಕಿನ ಚಿತ್ರಗಳಿವೆ. ಇಂತಹ ಪ್ರಾಚೀನ ಕಲೆಗಳು ತಿರುಪತಿ ತಿರುಮಲದಲ್ಲಿ ಇಲ್ಲ. 11 ನೇ ಶತಮಾನದ ಅನೇಕ ಶಾಸನಗಳು ಹನುಮ ಹುಟ್ಟಿದ್ದುಇಲ್ಲೇ ಎಂದು ಉಲ್ಲೇಖಿಸುತ್ತವೆ.
ವಿಜಯನಗರ ಸಾಮ್ರಾಜ್ಯದ ಅರಸು, ಈ ಪ್ರದೇಶದ ಮಹತ್ವ ಅರಿತು ರಾಮ ಆಂಜನೇಯನ ಒಡನಾಟ ಕಂಡು ಹಂಪಿಯಲ್ಲಿ ಅನೇಕ ರಾಮನ ದೇವಾಲಯ ನಿರ್ಮಾಣ ಮಾಡಿದ್ದಾರೆ. ಅನೇಕ ಕಂಬಗಳ ಮೇಲೆ,ರಾಮ, ಆಂಜನೇಯನ್ನು ಕೆತ್ತನೆ ಮಾಡಲಾಗಿದೆ. ಆನೆಗೊಂದಿ ಭಾಗದಲ್ಲಿ ಆಂಜನೇಯನ ಅನೇಕ ಶಿಲ್ಪಗಳನ್ನು ಕೆತ್ತನೆ ಮಾಡಲಾಗಿದೆ. ಕೃಷ್ಣದೇವರಾಯರ ಗುರು ವ್ಯಾಸರಾಯರು 770 ಆಂಜನೇಯನ ಶಿಲ್ಪಗಳನ್ನು ಕೆತ್ತನೆ ಮಾಡಿಸಿದ್ದಾರೆ.
ಇದನ್ನೂ ಓದಿ: ತಿರುಪತಿ ಆಡಳಿತ ಮಂಡಳಿಯಿಂದ ಅಪಚಾರ; ಆಂಜನೇಯ ಹುಟ್ಟಿದ್ದು ಕರ್ನಾಟಕದಲ್ಲಿ ಅಲ್ಲ ತಿರುಪತಿಯಲ್ಲಂತೆ!
ರೋಪ್ ವೇ: ಅಂಜನಾದ್ರಿ ಬೆಟ್ಟದ ಆಂಜನೇಯ ದರ್ಶನಕ್ಕೆ ಪರದಾಡುತ್ತಿದ್ದ ಭಕ್ತರಿಗೆ ಸಿಹಿ ಸುದ್ದಿ
(Kishkindha in Koppal district is the Birth Place of God Anjaneya accurate records proves once again)