ಹೊಸ ಟೆಕ್ನಾಲಜಿ ಮೊರೆ ಹೋದ KMF: ನಕಲಿ, ಕಲಬೆರಕೆ ನಂದಿನಿ ಉತ್ನನ್ನ ಕಂಡುಹಿಡಿಯುವುದಿನ್ನು ಸುಲಭ

ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್​ ನಂದಿನಿ ಗ್ರಾಹಕರು ತನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಲು ಮುಂದಾಗಿದ್ದು, ನಕಲಿ ಉತ್ಪನ್ನ ಮತ್ತು ಕಲಬೆರೆಕೆ ಕಂಡುಹಿಡಿಯಲು ಹೊಸ ಟೆಕ್ನಾಲಜಿಯ ಮೊರೆ ಹೋಗಿದೆ. ಹೊಸ ತಂತ್ರಜ್ಞಾನ ಏನು? ಉತ್ಪನ್ನಗಳು ಕೆಎಂಎಫ್​ನದ್ದೇ ಎಂದು ನೀವು ಹೇಗೆ ಸುಲಭವಾಗಿ ಗುರುತಿಸಬಹುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಹೊಸ ಟೆಕ್ನಾಲಜಿ ಮೊರೆ ಹೋದ KMF: ನಕಲಿ, ಕಲಬೆರಕೆ ನಂದಿನಿ ಉತ್ನನ್ನ ಕಂಡುಹಿಡಿಯುವುದಿನ್ನು ಸುಲಭ
Nandini

Updated on: Oct 21, 2025 | 7:21 PM

ಬೆಂಗಳೂರು, ಅಕ್ಟೋಬರ್​ 21: ನಾವು ಇಂದು ಸೇವಿಸುವ ಆಹಾರಗಳ ಪೈಕಿ ಬಹುತೇಕ ವಸ್ತುಗಳು ಕಲಬೆರಕೆಯಿಂದ ಕೂಡಿರುತ್ತವೆ. ಹಾಲು, ಮೊಸರಿನಿಂದ ಹಿಡಿದು ದಿನೋಪಯೋಗಿ ವಸ್ತುಗಳವರೆಗೆ ಕಲಬೆರಕೆ ಎಂಬುದು ಮಾಮೂಲು ಎಂಬಂತಾಗಿದೆ. ಇದರ ಜೊತೆಗೆ ನಕಲಿ ಬ್ರ್ಯಾಂಡ್​ ಗಳ ಹಾವಳಿಯೂ ಹೆಚ್ಚಿದ್ದು, ಯಾವುದು ಅಸಲಿ ಮತ್ತು ಯಾವುದು ನಕಲಿ ಎಂದು ಪತ್ತೆ ಮಾಡುವುದೇ ಗ್ರಾಹಕರಿಗೆ ತಲೆನೋವಾಗಿ ಮಾರ್ಪಟ್ಟಿದೆ. ಈ ನಡುವೆ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್​ ನಂದಿನಿ (Nandini) ಗ್ರಾಹಕರು ತನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಲು ಮುಂದಾಗಿದ್ದು, ನಕಲಿ ಉತ್ಪನ್ನ ಮತ್ತು ಕಲಬೆರೆಕೆ ಸುಲಭವಾಗಿ ಕಂಡುಹಿಡಿಯಲು ಹೊಸ ಟೆಕ್ನಾಲಜಿಯ ಮೊರೆ ಹೋಗಿದೆ.

ನಕಲಿ ಹಾಗೂ ಕಲಬೆರಕೆ ಹಾಲಿನ ಉತ್ಪನ್ನ ಮಾರಾಟ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರೋ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ, ಶೀಘ್ರವೇ ನಮ್ಮ ಉತ್ಪನ್ನಗಳ ಮೇಲೆ ಕ್ಯೂಆರ್ ಕೋಡ್ ಅಂಟಿಸಲಾಗುವುದು. ಅದರಲ್ಲಿ ನಮ್ಮ ಉತ್ಪನ್ನಗಳ ಎಲ್ಲಾ ಮಾಹಿತಿ ಇರುತ್ತೆ. ಜೊತೆಗೆ ಯಾವುದು ಅಸಲಿ, ಯಾವುದು ನಕಲಿ ಎಂಬುದನ್ನೂ ತಿಳಿದುಕೊಳ್ಳಬಹುದು ಎಂದಿದ್ದಾರೆ. ಜೊತೆಗೆ  ನಕಲಿ, ಕಲಬೆರಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಆಗಲಿದೆ ಎಂಬ ಎಚ್ಚರಿಕೆಯನ್ನೂ ರವಾನಿಸಿದ್ದಾರೆ. ಪ್ರತಿದಿನ ಸರಾಸರಿ 1 ಕೋಟಿ ಲೀಟರ್ ಹಾಲು ಸಂಗ್ರಹವಾಗುತ್ತಿದೆ. 65 ಲಕ್ಷ ಲೀಟರ್ ಹಾಲು, ಮೊಸರು, ಉತ್ಪನ್ನ ಗ್ರಾಹಕರಿಗೆ ತಲುಪುತ್ತಿದೆ ದುಬೈ, ಸಿಂಗಾಪುರದಲ್ಲೂ ಕೂಡ ನಂದಿನಿ ಉತ್ಪನ್ನಗಳ ಮಾರಾಟ ನಡೆಯುತ್ತಿದ್ದು, ಮಧುಮೇಹಿಗಳ ಅನುಕೂಲಕ್ಕಾಗಿ ಸಕ್ಕರೆ ರಹಿತ ಸಿಹಿ ಉತ್ಪನ್ನಗಳನ್ನ ಸಿದ್ಧಪಡಿಸಲಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಸಿಹಿ ಉತ್ಪನ್ನಗಳ ಮಾರಾಟದಲ್ಲಿ ದಾಖಲೆ: ದಸರಾ, ದೀಪಾವಳಿಯಲ್ಲಿ ನಂದಿನಿ ಕಮಾಲ್

‘ನಂದಿನಿ ಹಾಲು & ಉತ್ಪನ್ನಗಳ ಬೆಲೆ ಏರಿಕೆ ಇಲ್ಲ’

ಸದ್ಯಕ್ಕೆ ನಂದಿನಿ ಹಾಲು & ಉತ್ಪನ್ನಗಳ ಬೆಲೆ ಏರಿಕೆ ಪ್ರಸ್ತಾವನೆ ಇಲ್ಲ ಎಂದು ಬೆಂಗಳೂರಿನಲ್ಲಿ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಹೇಳಿದ್ದಾರೆ. ನಂದಿನಿ ಹಾಲಿನ ಉತ್ಪಾದನಾ ವೆಚ್ಚ ಜಾಸ್ತಿ ಆಗುತ್ತಾ ಇರುವುದು ನಿಜ. ಕಳೆದ ವರ್ಷ 725 ಮೆಟ್ರಿಕ್ ಟನ್ ನಂದಿನಿ ಸಿಹಿ ಉತ್ಪನ್ನ ಮಾರಾಟವಾಗಿದ್ದು, ಈ ಬಾರಿ 1000 ಮೆಟ್ರಿಕ್ ಟನ್ ಮಾರಾಟ ಗುರಿ ಇಟ್ಟುಕೊಂಡಿದ್ದೆವು. ಆದರೆ ಗುರಿ ಮೀರಿ 1100 ಮೆಟ್ರಿಕ್ ಟನ್ ಉತ್ಪನ್ನ ಮಾರಾಟವಾಗಿದೆ. ಒಟ್ಟಾರೆ 46 ಕೋಟಿ ರೂಪಾಯಿಗಳ ದಾಖಲೆಯ ವಹಿವಾಟು ನಡೆದಿದ್ದು, ಇದು ಕೆಎಂಎಫ್ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.