ಸಿಹಿ ಉತ್ಪನ್ನಗಳ ಮಾರಾಟದಲ್ಲಿ ದಾಖಲೆ: ದಸರಾ, ದೀಪಾವಳಿಯಲ್ಲಿ ನಂದಿನಿ ಕಮಾಲ್
ಕರ್ನಾಟಕ ಮಿಲ್ಕ್ ಫೆಡರೇಶನ್ (ಕೆಎಂಎಫ್) ನಿಂದ ಮಾರಾಟ ಮಾಡಲ್ಪಟ್ಟ ಹಾಲು ಮತ್ತು ಹಾಲಿನ ಉತ್ಪನ್ನಗಳ ನಂದಿನಿ ಬ್ರ್ಯಾಂಡ್ ವಿಶ್ವದೆಲ್ಲೆಡೆ ಗಮನಸೆಳೆದಿದೆ. ನಂದಿನಿ ತನ್ನ ಬ್ರ್ಯಾಂಡ್ ಉತ್ಪನ್ನಗಳ ಘಮವನ್ನು ಪ್ರಪಂಚದ ಮೂಲೆ ಮೂಲೆಯಲ್ಲೂ ಪಸರಿಸಿದೆ. ಕೇವಲ ಸಿಹಿ ತಿನ್ನುವವರಿಗೆ ಮಾತ್ರವಲ್ಲದೇ ಡಯಾಬಿಟಿಸ್ ಗ್ರಾಹಕರಿಗೂ ಸಹ ನಂದಿನಿ ಸಕ್ಕರೆ ರಹಿತ ಸಿಹಿ ಬಿಡುಗಡೆ ಮಾಡಿದೆ. ಹೀಗೆ ನಂದಿನಿ ಬ್ರ್ಯಾಂಡ್ ತನ್ನ ಗುಣಮಟ್ಟದ ಉತ್ಪನ್ನಗಳಿಂದ ಹೆಸರು ಮಾಡಿದ್ದು, ಇದೀಗ ದೀಪಾವಳಿಯಲ್ಲಿ ಹೊಸ ಕಮಾಲ್ ಮಾಡಿದೆ.

ಬೆಂಗಳೂರು, (ಅಕ್ಟೋಬರ್ 21): ಪ್ರತಿ ಮನೆಯ ಅಡುಗೆಮನೆಯಲ್ಲಿ ಹಾಸುಹೊಕ್ಕಾಗಿರುವ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ನಂದಿನಿ (Nandini), ಕೇವಲ ಹಾಲಿನ ಉತ್ಪನ್ನಗಳಿಗೆ ಸೀಮಿತವಾಗಿಲ್ಲ. ಮೊಸರು, ತುಪ್ಪ, ಸಿಹಿತಿಂಡಿಗಳು ಸೇರಿದಂತೆ ತನ್ನ ವೈವಿಧ್ಯಮಯ ಉತ್ಪನ್ನಗಳ ಮೂಲಕ ಜನರ ಮನ ಗೆದ್ದಿದೆ. ಅಗ್ಗದ ಬೆಲೆಯಲ್ಲಿ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುತ್ತಾ, ನಂದಿನಿ ದೇಶದ ಪ್ರಮುಖ ಡೈರಿ ಬ್ರ್ಯಾಂಡ್‌ಗಳಲ್ಲಿ ಒಂದಾಗಿ ಹೊರಹೊಮ್ಮಿದ್ದು, ದಸರಾ ಮತ್ತು ದೀಪಾವಳಿ ಅವಧಿಯಲ್ಲಿ ರಾಜ್ಯದ ಹೆಮ್ಮೆಯ “ನಂದಿನಿ” ಬ್ರಾಂಡ್ ಹೊಸ ಕಮಾಲ್ ಮಾಡಿದೆ. ಹೌದು… ದಸರಾ ಮತ್ತು ದೀಪಾವಳಿ ಅವಧಿಯಲ್ಲಿ 100ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಿದ್ದು, ಒಟ್ಟಾರೆ 46.00 ಕೋಟಿ ರೂ. ದಾಖಲೆಯ ವಹಿವಾಟು ಸಾಧಿಸುವ ಮೂಲಕ ಒಂದು ಮಹತ್ವದ ಮೈಲುಗಲ್ಲು ನಿರ್ಮಿಸಿದೆ. ಕಳೆದ ವರ್ಷಕ್ಕೆ ಸಾಲಿಗೆ ಹೋಲಿಕೆ ಮಾಡಿದಾಗ ಶೇ. 38 ರಷ್ಟು ವಹಿವಾಟು ಪ್ರಗತಿಯಾಗಿದ್ದು, ಇದು ಕೆ.ಎಂ.ಎಫ್ ಇತಿಹಾಸದಲ್ಲಿಯೇ ಸರ್ವಕಾಲಿಕ ದಾಖಲೆಯಾಗಿದೆ.
ಪ್ರತಿ ವರ್ಷ ದಸರಾ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಸಿಹಿತಿನಿಸುಗಳಿಗೆ ರಾಜ್ಯದಾದ್ಯಂತ ಹೆಚ್ಚಿನ ಬೇಡಿಕೆ ಕಂಡುಬರುತ್ತದೆ. ಈ ಹಬ್ಬದ ಅವಧಿಯಲ್ಲಿ ನಂದಿನಿ ಬ್ರಾಂಡ್‌ನಡಿಯಲ್ಲಿ ಲಭ್ಯವಿರುವ 40 ಕ್ಕೂ ಹೆಚ್ಚು ಸಿಹಿ ಉತ್ಪನ್ನ ಮಾದರಿಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಕೆಎಂಎಫ್ ಮುಂಚಿತ ಸಿದ್ಧತೆ ಕೈಗೊಂಡಿತ್ತು. 2024ರ ದಸರಾ ಮತ್ತು ದೀಪಾವಳಿ ಹಬ್ಬದ ಅವಧಿಯಲ್ಲಿ ಒಟ್ಟು 725 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಿ ರೂ.33.48 ಕೋಟಿ ವಹಿವಾಟು ದಾಖಲಿಸಲಾಗಿತ್ತು.
ಇದನ್ನೂ ಓದಿ: ಮಧುಮೇಹಿಗಳಿಗೆ ಕೆಎಂಎಫ್ ದೀಪಾವಳಿ ಗಿಫ್ಟ್: ನಂದಿನಿ ಶುಗರ್ ಫ್ರೀ ಸಿಹಿತಿಂಡಿಗಳು ಮಾರುಕಟ್ಟೆಗೆ
ಆದ್ರೆ, ಈ ವರ್ಷ ಕೆಎಂಎಫ್ ಮತ್ತು ಸದಸ್ಯ ಹಾಲು ಒಕ್ಕೂಟಗಳು “ಒಟ್ಟಾಗಿ 1100ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಿದ್ದು, ಒಟ್ಟಾರೆ ರೂ. 46.00 ಕೋಟಿಗಳ ದಾಖಲೆಯ ವಹಿವಾಟು” ಸಾಧಿಸುವ ಮೂಲಕ ಕಳೆದ ವರ್ಷದ ದಾಖಲೆಯನ್ನು ಮುರಿದಿದೆ.
ಅವಧಿಗೆ ಹೆಚ್ಚುವರಿ ಬೇಡಿಕೆಯನ್ನು ಪರಿಗಣಿಸಿ, ಸುಮಾರು ಎರಡು ತಿಂಗಳುಗಳ ಮುಂಚಿತವಾಗಿ ಎಲ್ಲ ಸದಸ್ಯ ಹಾಲು ಒಕ್ಕೂಟಗಳ ಸಹಕಾರದೊಂದಿಗೆ ನಿಖರ ಯೋಜನೆ ರೂಪಿಸಿ 1000 ಮೆಟ್ರಿಕ್ ಟನ್ ಮಾರಾಟ ಗುರಿ ಹೊಂದಲಾಗಿತ್ತು. ಕಳೆದ ಸಾಲಿಗೆ ಹೋಲಿಕೆ ಮಾಡಿದಾಗ ಶೇ.38 ರಷ್ಟು ವಹಿವಾಟು ಪ್ರಗತಿಯಾಗಿದ್ದು “ಇದು ಕೆ.ಎಂ.ಎಫ್ ಇತಿಹಾಸದಲ್ಲಿಯೇ ಸಾರ್ವಕಾಲಿಕ ದಾಖಲೆಯಾಗಿರುತ್ತದೆ. ಈ ಸಾಧನೆ “ನಂದಿನಿ” ಬ್ರಾಂಡ್‌ನ ಗುಣಮಟ್ಟ, ಶುದ್ಧತೆ ಮತ್ತು ಗ್ರಾಹಕರ ವಿಶ್ವಾಸದ ಪ್ರತಿಫಲವಾಗಿದ್ದು, ರಾಜ್ಯದ ಹಾಲು ಉತ್ಪಾದಕರ ಶ್ರಮ ಮತ್ತು ಸಹಕಾರಿ ಬಲದ ದೃಢತೆಗೂ ಸಾಕ್ಷಿಯಾಗಿದೆ.
ಕರ್ನಾಟಕ ಹಾಲು ಮಹಾಮಂಡಳಿ ನಿಯಮಿತ (ಕೆಎಂಎಫ್) ಸಂಸ್ಥೆಯು ಕಳೆದ ಐದು ದಶಕಗಳಿಂದ ರಾಜ್ಯದ ಹೈನುಗಾರಿಕೆ ಮತ್ತು ಸಹಕಾರ ಕ್ಷೇತ್ರದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದು, ಹಾಲು ಉತ್ಪಾದಕರ ರೈತರ ಹಿತದೃಷ್ಟಿಯಿಂದ ರಾಜ್ಯದ ಹೈನು ಸಹಕಾರ ಚಳುವಳಿಯನ್ನು ಬಲಪಡಿಸುವಲ್ಲಿ ಮುಂಚೂಣಿಯಲ್ಲಿದೆ. ಪ್ರತಿದಿನ ರಾಜ್ಯದ ವಿವಿಧ ಹೈನುಗಾರ ರೈತರಿಂದ ಸರಾಸರಿ 1 ಕೋಟಿ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದ್ದು, ಅದರಲ್ಲಿ ಸುಮಾರು 65 ಲಕ್ಷ ಲೀಟರ್ ಹಾಲು, ಮೊಸರು ಹಾಗೂ ಯುಎಚ್‌ಟಿ ಹಾಲು ಉತ್ಪನ್ನಗಳನ್ನು ರಾಜ್ಯ ಮತ್ತು ಹೊರರಾಜ್ಯ ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ ತಲುಪಿಸಲಾಗುತ್ತಿದೆ.
“ನಂದಿನಿ” ಬ್ರಾಂಡ್‌ನಡಿಯಲ್ಲಿ ಹಾಲಿನೊಂದಿಗೆ ತುಪ್ಪ, ಬೆಣ್ಣೆ, ಪನೀರ್, ಸಿಹಿತಿನಿಸುಗಳು, ಹಾಲಿನ ಪುಡಿ, ಪಾನೀಯಗಳು ಸೇರಿದಂತೆ 175ಕ್ಕೂ ಅಧಿಕ ಬಗೆಯ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ರಾಜ್ಯ, ನೆರೆರಾಜ್ಯಗಳು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಗೋವಾ, ಕೇರಳ ಹಾಗೂ ದೆಹಲಿ, ಅಸ್ಸಾಂ ಮತ್ತು ಕೆಲ ಹೊರದೇಶಗಳ ಮಾರುಕಟ್ಟೆಗಳಲ್ಲಿ ಯಶಸ್ವಿಯಾಗಿ ಮಾರಾಟ ಮಾಡಲಾಗುತ್ತಿದೆ.
ಹಾಲು ಮತ್ತು ಹಾಲಿನ ಉತ್ಪನ್ನಗಳ ಶುದ್ಧತೆ, ಗುಣಮಟ್ಟ ಮತ್ತು ಕೈಗೆಟುಕುವ ಬೆಲೆಯು “ನಂದಿನಿ” ಬ್ರಾಂಡ್ ಅನ್ನು ಗ್ರಾಹಕರ ವಿಶ್ವಾಸದ ಪ್ರತೀಕವನ್ನಾಗಿ ಮಾಡಿದೆ.
Published On - 4:32 pm, Tue, 21 October 25




