ನಂದಿನಿ ಹಾಲಿನ ದರ 5 ರೂ. ಹೆಚ್ಚಳ ಸಾಧ್ಯತೆ; ಕೆಎಂಎಫ್ ನೂತನ ಅಧ್ಯಕ್ಷ ಭೀಮಾ ನಾಯ್ಕ್ ಸುಳಿವು

|

Updated on: Jun 21, 2023 | 2:55 PM

ನಂದಿನಿ ಹಾಲಿನ ದರ ಏರಿಕೆ ಬಗ್ಗೆಯೂ ಚರ್ಚೆ ಆಗುತ್ತಿದೆ ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ ಕೂಡ ಹೇಳಿದ್ದಾರೆ.

ನಂದಿನಿ ಹಾಲಿನ ದರ 5 ರೂ. ಹೆಚ್ಚಳ ಸಾಧ್ಯತೆ; ಕೆಎಂಎಫ್ ನೂತನ ಅಧ್ಯಕ್ಷ ಭೀಮಾ ನಾಯ್ಕ್ ಸುಳಿವು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕ ಹಾಲು ಮಾರಾಟ ಮಹಾಮಂಡಳದ (KMF) ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಭೀಮಾ ನಾಯ್ಕ್ ಅವರು ನಂದಿನಿ ಹಾಲಿನ (Nandini Milk) ದರ ಹೆಚ್ಚಳದ ಸುಳಿವು ನೀಡಿದ್ದಾರೆ. ನಂದಿನಿ ಹಾಲಿನ ದರ 5 ರೂ. ಏರಿಕೆಗೆ ಬೇಡಿಕೆ ಇಟ್ಟಿದ್ದೇವೆ ಎಂದು ಅವರು ಬೆಂಗಳೂರಿನಲ್ಲಿ ಬುಧವಾರ ತಿಳಿಸಿದ್ದಾರೆ. ಹಾಲಿನ ದರ ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚಿಸುತ್ತೇವೆ. ನಂತರ ತೀರ್ಮಾನ ಕೈಗೊಳ್ಳುತ್ತೇವೆ. ಎಲ್ಲಾ ಹಾಲು ಒಕ್ಕೂಟಗಳು 5 ರೂ. ದರ ಹೆಚ್ಚಳಕ್ಕೆ ಬೇಡಿಕೆ ಇಟ್ಟಿವೆ. ದರ ಹೆಚ್ಚಿಸುವುದಲ್ಲದೆ, ಗುಣಮಟ್ಟದ ಹಾಲು, ಮೊಸರು, ತುಪ್ಪ ಗ್ರಾಹಕರಿಗೆ ಒದಗಿಸಲು ಆದ್ಯತೆ ನೀಡಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ, ಹಾಲು ಉತ್ಪಾದಕರಿಗೆ ನೀಡುವ ಮೊತ್ತ ಏರಿಕೆಗೆ ಚಿಂತನೆ ನಡೆಸಲಾಗಿದೆ ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ ಬೆಂಗಳೂರಿನಲ್ಲಿ ಹೇಳಿದ್ದಾರೆ. ರೈತರಿಂದ ಖರೀದಿಸುವ ಹಾಲಿನ ದರ ಏರಿಕೆ ಬಗ್ಗೆ ಚಿಂತನೆ ನಡೆಸಲಾಗಿದೆ. ನಮ್ಮ ರಾಜ್ಯದಲ್ಲಿಯೂ ಉತ್ತಮವಾದ ಹೈನುಗಾರಿಕೆ ಇದೆ. ರೈತರಿಗೆ ಹೆಚ್ಚಿನ ಲಾಭ ನೀಡುವ ಕಡೆ ಗಮನ ಹರಿಸುತ್ತೇವೆ. ಮುಖ್ಯಮಂತ್ರಿಗಳ ಜತೆ ಚರ್ಚಿಸಿ ರೈತರಿಗೆ ಅನುಕೂಲವಾಗುವಂತೆ ಮಾಡುತ್ತೇವೆ. ನಂದಿನಿ ಹಾಲಿನ ದರ ಏರಿಕೆ ಬಗ್ಗೆಯೂ ಚರ್ಚೆ ಆಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಬಾಲಚಂದ್ರ ಜಾರಕಿಹೊಳಿ ಅವರ ಕೆಎಂಎಫ್ ಅಧ್ಯಕ್ಷ ಸ್ಥಾನ ಕೊನೆಗೊಂಡ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ ದೊರೆತಿತ್ತು. ಈ ಸ್ಥಾನಕ್ಕೆ ಕಾಂಗ್ರೆಸ್ ಶಾಸಕ ಭೀಮಾ ನಾಯ್ಕ್ ಅವರ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಅಧ್ಯಕ್ಷ ಸ್ಥಾನಕ್ಕಾಗಿ ಯಾರೂ ನಾಮಪತ್ರ ಸಲ್ಲಿಸದಿರುವುದರಿಂದ ಭೀಮಾ ನಾಯ್ಕ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: KMF Chairman: ಕೊನೆಗೂ ಕಾಂಗ್ರೆಸ್‌ ಶಾಸಕ ಭೀಮಾ ನಾಯ್ಕ್​ಗೆ ಒಲಿದ ಕೆಎಂಎಫ್ ಅಧ್ಯಕ್ಷ ಹುದ್ದೆ

ರೈತರಿಗೆ ಕೊಡುತ್ತಿದ್ದ ಹಾಲಿನ ಪ್ರೋತ್ಸಾಹ ಧನ ಕಡಿತಗೊಳಿಸಲು ಇತ್ತೀಚೆಗೆ ಒಕ್ಕೂಟ ಮುಂದಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಹಾಲಿನ ಪ್ರೋತ್ಸಾಹ ಧನ ಮುಂದುವರೆಸಲು ನಿರ್ಧರಿಸಿತ್ತು. ಆದರೆ, ಗ್ರಾಹಕರಿಗೆ ದರ ಹೆಚ್ಚಳದ ಶಾಕ್ ನೀಡುವ ಸುಳಿವು ನೀಡಿತ್ತು.

ನಂದಿನಿ ಹಾಲಿನ ದರ ಪರಿಷ್ಕರಿಸುವಂತೆ ಹಾಲು ಒಕ್ಕೂಟಗಳು ಪಟ್ಟು ಹಿಡಿದಿವೆ. ಲೀಟರ್ ಹಾಲಿನ ದರ 5 ರೂಪಾಯಿ ಏರಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬಮೂಲ್ ಅಧ್ಯಕ್ಷ ನರಸಿಂಹ ಮೂರ್ತಿ ಇತ್ತೀಚೆಗಷ್ಟೇ ‘ಟಿವಿ9’ಗೆ ತಿಳಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:53 pm, Wed, 21 June 23