ಕೊಡಗು: ಕ್ಷುಲ್ಲಕ ಕಾರಣಕ್ಕೆ ಬಂದೂಕಿನಿಂದ ಹೊಡೆದು ವ್ಯಕ್ತಿಯೋರ್ವನ ಕೊಲೆ

|

Updated on: Apr 18, 2023 | 3:48 PM

ಒಬ್ಬರನ್ನ ಸಾಯಿಸಲು ಬಲವಾದ ಕಾರಣಗಳೇ ಬೇಕೆಂದೇನಿಲ್ಲ. ಎಂತಹದ್ದೋ ಕ್ಷುಲ್ಲಕ ಕಾರಣಗಳಿಗೂ ನಮ್ಮಲ್ಲಿ ಜೀವ ಉರುಳಿ ಹೋಗಿವೆ. ಕಾಫಿನಾಡು ಕೊಡಗಿನಲ್ಲಿಯೂ ಇಂತಹದ್ದೇ ಒಂದು ಘಟನೆ ನಡೆದು ಹೋಗಿದ್ದು, ಇಷ್ಟು ಚಿಕ್ಕ ವಿಷಯಕ್ಕೆ ಒಬ್ಬ ವ್ಯಕ್ತಿಯನ್ನ ಕೊಂದು ಬಿಟ್ಟರಲ್ಲ ಎಂದು ಜನರು ವ್ಯಥೆ ಪಡುತ್ತಿದ್ದಾರೆ. ಏನಿದು ಕಥೆ ಅಂತೀರಾ? ಇಲ್ಲಿದೆ ನೋಡಿ

ಕೊಡಗು: ಕ್ಷುಲ್ಲಕ ಕಾರಣಕ್ಕೆ ಬಂದೂಕಿನಿಂದ ಹೊಡೆದು ವ್ಯಕ್ತಿಯೋರ್ವನ ಕೊಲೆ
ಸಾಂದರ್ಭಿಕ ಚಿತ್ರ
Follow us on

ಮಡಿಕೇರಿ: ಒಂದ್ಕಡೆ ದಾರಿ‌ ಮಧ್ಯೆ ರಕ್ತದ ಮಡುವಿನಲ್ಲಿ ಉರುಳಿ ಬಿದ್ದಿರುವ ಮತ್ತೊಂದ್ಕಡೆ ಮುಗಿಲು ಮುಟ್ಟಿರುವ ಸಂಬಂಧಿಕರ ಆಕ್ರೋಶ. ಎಲ್ಲರ ಮುಖದಲ್ಲೂ ದುಗುಡ, ನೋವು ಹತಾಶೆ. ಅಯ್ಯೋ ಪಾಪ ದೇವರಂಥ ಮನುಷ್ಯ, ಇವರನ್ನ ಹೀಗೆ ಕೊಲ್ಲಬಾರದಿತ್ತು ಎಂದು ಮರುಕಪಡುವವರೆ ಹೆಚ್ಚು. ಹೌದು ಹೀಗೆ ದಾರಿ ಮಧ್ಯೆ ಹೆಣವಾಗಿ ಮಲಗಿರೋದು ಬೇರಾರು ಅಲ್ಲ. ಈ ಊರಿನ ಕೊಡುಗೈ ದಾನಿ. ಬಡ ಬಗ್ಗರಿಗೆ ಸಹಾಯ ಮಾಡ್ತಾ ನೊಂದವರ ಕಣ್ಣೀರು ಒರೆಸುತ್ತಿದ್ದವನೇ ಮಧು(42) ಪತ್ನಿ ಮತ್ತು ಮೂವರು ಮಕ್ಕಳ ಸುಖ ಸಂಸಾರ ಇವರದ್ದು ಕಾಫಿ ತೋಟದ ಮಾಲೀಕನಾಗಿದ್ದ ಮಧು ಸಾಕಷ್ಟು ಸ್ಥಿತಿವಂತರೇ ಆಗಿದ್ದರು. ಸಮಾಜಸೇವೆ ಮಾಡೋದು ಅಂದ್ರೆ ಬಹಳ ಇಷ್ಟ. ಈ ಊರಿನಲ್ಲಿ ಯಾವುದೇ ಜಾತ್ರೆ, ಹಬ್ಬ, ಕ್ರೀಡಾ ಚಟುವಟಿಕೆಗಳು ನಡೆದರೆ ಅದಕ್ಕೆ ಹಣ ಸಾಹಾಯ ಮಾಡ್ತಾ ಇದ್ದವರಲ್ಲಿ ಇವರೇ ಮೊದಲಿಗರು.

ಈ ಊರಿನ ಬಡವರ ಮಕ್ಕಳು ಕೆಲಸಕ್ಕೆ ಹೋಗಲು ಅನುಕೂಲವಾಗಲಿ ಎಂದು ಒಂದು ಬೊಲೆರೋ ಜೀಪು ಕೂಡ ತೆಗೆದುಕೊಟ್ಟಿದ್ದಾರೆ. ಹಾಗಾಗಿಯೇ ಈ ಊರಿನ ಹುಡುಗರಿಗೆಲ್ಲಾ ಮಧು ಅಣ್ಣ ಅಂದ್ರೆ ಸಾಕು ಸ್ವಂತ ಅಣ್ಣನಂತೆಯೇ. ಅಷ್ಟೊಂದು ಜನಾನುರಾಗಿದ್ದ ಈ ಮಧು ಇಂದು ಹೀಗೆ ಹೆಣವಾಗಿ ಹೋಗಿದ್ದಾರೆ. ದುಷ್ಕರ್ಮಿಯೊಬ್ಬನ ಬಂದೂಕಿನಿಂದ ಸಿಡಿದ ಗುಂಡು ಇವರ ಬದುಕನ್ನೇ ಮುಗಿಸಿಬಿಟ್ಟಿದೆ.

ಇದನ್ನೂ ಓದಿ:ಕಲಬುರಗಿ: ಕತ್ತು ಹಿಸುಕಿ, ಮಾರಕಾಸ್ತ್ರದಿಂದ ಹೊಡೆದು ಯುವಕನ ಕೊಲೆ; ಮೂವರು ಆರೋಪಿಗಳನ್ನ ಬಂಧಿಸಿದ ಪೊಲೀಸರು

ಅಷ್ಟಕ್ಕೂ ಆ ಕರಾಳ ರಾತ್ರಿ ನಡೆದ್ದಾದ್ರೂ ಏನೂ.?

ಅದು ಇದೇ ಏಪ್ರಿಲ್ 15 ನೇ ತಾರೀಖು ತೋರಾ ಗ್ರಾಮದಲ್ಲಿ ಬಿಸು ಹಬ್ಬ. ಗೋಣಿಕೊಪ್ಪ ಪಟ್ಟಣಕ್ಕೆ ಹೋಗಿದ್ದ ಮಧು ಸಂಜೆ ವೇಳೆಗೆ ಹಿಂದಿರುಗಿದ್ದಾರೆ. ಹುಡುಗರು ಮಧು ಅವರನ್ನ ಮನೆಗೆ ಬನ್ನಿ ಅಣ್ಣ, ಬಿಸು ಹಬ್ಬ ಮಾಡುವ ಅಂತ ಕರೆದಿದ್ದಾರೆ. ಮಧು ಕೂಡ ಖುಷಿಯಿಂದಲೇ ಒಪ್ಪಿಕೊಂಡಿದ್ದಾರೆ. ಇವರ ಮನೆಯ ಸಮೀಪ ಶೀಲಾ ಅವರ ಮನೆಯಲ್ಲೇ ಸಂಜೆ ಹಬ್ಬದ ಪಾರ್ಟಿ ಅರೇಂಜ್ ಆಗಿದೆ. ಶೀಲಾ ಅವರೆ ತಮ್ಮ ಕೈಯಾರೆ ಬಿರಿಯಾನಿ ಮಾಡಿ ಬಡಿಸಿದ್ದಾರೆ. ಎಲ್ಲರು ಖುಷಿ ಖುಷಿಯಿಂದಲೇ ಊಟ ಮಾಡಿ ರಾತ್ರಿ 12 ಗಂಟೆ ಸುಮಾರಿಗೆ ಮಧು ಮನೆಗೆ ಹೋಗುತ್ತೇನೆ ಎಂದು ಹೊರಟಿದ್ದಾರೆ. ಹುಡುಗರು ಕೂಡ ಆಯ್ತು ಅಣ್ಣ ಹೋಗೋಣ ಎಂದು ಮಧುವನ್ನು ಕರೆದುಕೊಂಡು ಅವರ ಕಾರಿನ ಬಳಿ ಬಂದಿದ್ದಾರೆ. ಕಾರಿನ ಸ್ವಲ್ಪ ದೂರದಲ್ಲೇ ರಿಮೋಟ್ ಮೂಲಕ ಮಧು ಲಾಕ್ ಓಪನ್ ಮಾಡಿದ್ದಾರೆ. ಅಷ್ಟೆ ಅದೇ ವೇಳೆಗೆ ಡಂ ಎಂದು ಪಟಾಕಿ ಹೊಡೆದ ರೀತಿ ಶಬ್ಧವೊಂದು ಬಂದಿದೆ. ನೋಡ್ರಿದೆ ಮಧು ಅವಯ್ಯಾ ಎಂದು ಕಿರುಚಿ ಕುಸಿದು ಬಿದ್ದಿದ್ದಾರೆ. ನೋಡ ನೋಡ್ತಾ ಇದ್ದ ಹಾಗೆನೇ ಮಧು ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದರು.

ಅಷ್ಟಕ್ಕೂ ಯಾರು ಈ ಗುಂಡು ಹೊಡೆದವರು?

ದೇವರಂತೆ ಇದ್ದ ಮಧುವನ್ನ ಹೀಗೆ ಕಥೆ ಮುಗಿಸಿದವರು ಯಾರು ಅಂತೀರಾ? ಊರಿನವರು ಹೇಳುವ ಪ್ರಕಾರ ಮಧುವಿನ ಕಥೆ ಮುಗಿಸಿದ ಕಿರಾತಕ ಬೇರಾರು ಅಲ್ಲ. ಹುಲಿಮನೆ ಕಿರಣ್ ಎಂಬಾತ, ಮಧು ಮತ್ತು ಕಿರಣ್ ಇಬ್ಬರೂ ನೆರೆಮನೆಯವರೇ. ಕಿರಣ್ ವೃತ್ತಿಯಲ್ಲಿ ಟಿಂಬರ್ ವ್ಯಾಪಾರಿ. ಈ ಹಿಂದೆ ಕಿರಣ್ ಒಮ್ಮೆ ಅಕ್ರಮವಾಗಿ ಮರ ಕಡಿದಿದ್ದಾನೆ ಎಂದು ಇದೇ ಮಧು ಅರಣ್ಯ ಇಲಾಖೆಗೆ ದೂರು ನೀಡಿದ್ದರನಂತೆ. ಅಲ್ಲಿಂದ ಇಬ್ಬರ ಮಧ್ಯೆ ವೈಷಮ್ಯ ಬೆಳೆದು ಕಲಹವಾಗುತ್ತಿತ್ತು ಎನ್ನಲಾಗಿದೆ. ಇದೀಗ ಕಳೆದ ವಾರವಷ್ಟೇ ಇವರಿಬ್ಬರ‌ ಮಧ್ಯೆ ಇದೇ ದಾರಿಯಲ್ಲಿ ಮಾತಿಗೆ ಮಾತು ಬೆಳೆದು ಕಿರಣ್ ಮಧುವಿಗೆ ಕೊಲೆ ಬೆದರಿಕೆ‌ ಒಡ್ಡಿದ್ದನಂತೆ.

ಇದನ್ನೂ ಓದಿ:ಕಲಬುರಗಿ: ಕತ್ತು ಹಿಸುಕಿ, ಮಾರಕಾಸ್ತ್ರದಿಂದ ಹೊಡೆದು ಯುವಕನ ಕೊಲೆ; ಮೂವರು ಆರೋಪಿಗಳನ್ನ ಬಂಧಿಸಿದ ಪೊಲೀಸರು

ಮಧುವಿನ ಮನೆಗೆ ಹೋಗುವ ದಾರಿಯಲ್ಲಿದ್ದ ಬೀದಿ ದೀಪಗಳನ್ನು ರಾತ್ರಿ ವೇಳೆ ಯಾರೋ ಆಫ್ ಮಾಡಿದ್ದರು. ಯಾರಿದು ಯಾಕೆ ಆಫ್ ಮಾಡಿದ್ರು ಎಂದು ನೋಡುವಾಗಲೇ ಆ ದಾರಿಯಲ್ಲಿ ಕಿರಣ್ ತನ್ನ ಪಿಕ್​ ಅಪ್ ವಾಹನದಲ್ಲಿ ಮರದ ಧಿಮ್ಮಿಗಳನ್ನು ತುಂಬಿಸಿ ಬರುತ್ತಿದ್ದಾನೆ. ಮರಸಾಗಿಸುವುದು ಹೊರಗಿನವರಿಗೆ ಅರಿವಾಗದಿರಲಿ ಎಂಬ ಉದ್ದೇಶದಿಂದಲೇ ಕಿರಣ್​ ಬೀದಿ ದೀಪಗಳನ್ನ ಆಫ್ ಮಾಡಿದ್ದಾನೆ ಎಂಬ ಶಂಕೆ ಮಧುವಿನದ್ದಾಗಿತ್ತು. ಈ ವಿಚಾರದಲ್ಲೇ ಇಬ್ಬರ ಮಧ್ಯೆ ಜಗಳವಾಗಿದೆ. ಅದು ಕೊಲೆ ಬೆದರಿಕೆವರೆಗೂ ಹೋಗಿ, ಕಿರಣ್ ಮಧುವನ್ನು ಪಿಕ್ ಅಪ್ ಹತ್ತಿಸಿ ಕೊಲ್ಲುತ್ತೇನೆ ಎಂದೂ ಆವಾಜ್ ಹಾಕಿದ್ದಾನೆ. ಇದಕ್ಕೆ ಪೂರಕವಾಗಿ ಇದೀಗ ಮಧುವಿನ ಕೊಲೆಯಾಗುತ್ತಲೇ ಆರೋಪಿ ಕಿರಣ್ ಪರಾರಿಯಾಗಿದ್ದಾನೆ. ಹಾಗಾಗಿ ಈ ಕೊಲೆಯನ್ನ ಕಿರಣ್​ ಮಾಡಿದ್ದಾನೆ ಎನ್ನುವ ಶಂಕೆ ಬಲವಾಗಿದೆ.

ತೀರಾ ಸಮೀಪದಿಂದಲೇ ನಾಡ ಬಂದೂಕಿನಿಂದ ಗುಂಡು ಹಾರಿಸಿರುವ ಸಾಧ್ಯತೆ ಇದೆ. ಯಾಕಂದ್ರೆ ಗುಂಡು ಎಲ್ಲೂ ಕೂಡ ಚದುರಿಲ್ಲ. ದೂರದಿಂದ ಗುಂಡು ಹಾರಿಸಿದ್ದಿದ್ದರೆ ಗುಂಡಿನ ಚೂರುಗಳು ಚದುರಿ ಅಕ್ಕಪಕ್ಕದಲ್ಲಿ ಇರುವವರಿಗೂ ತಾಗಬೇಕಿತ್ತು. ಹಾಗಾಗಿ ಇದು ಬಹಳ ಪ್ಲಾನ್ ಮಾಡಿಯೇ ಹೊಡೆದಿದ್ದಾರೆ ಎಂದು ಮಧುವಿನ ಅಪ್ಪ ಬೈಮನ ನಾಣಯ್ಯ ಹೇಳುತ್ತಾರೆ.
ಸಧ್ಯ ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಮಧುವನ್ನು ಕೊಂದವರು ಯಾರು, ಯಾವ ಕಾರಣಕ್ಕಾಗಿ ಈ ಕೊಲೆ ನಡೆದಿದೆ ಎಂಬ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ. ಆದ್ರೆ, ಕುಟುಂಬದ ಯಜಮಾನನ್ನ ಕಳೆದುಕೊಂಡ ಮಧುವಿನ ಕುಟುಂಬ ಮಾತ್ರ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

ವರದಿ: ಗೋಪಾಲ್ ಸೋಮಯ್ಯ ಟಿವಿ9 ಕೊಡಗು

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:48 pm, Tue, 18 April 23