ಕೊಡಗು: ಹಿಮಪಾತಕ್ಕೆ ಸಿಲುಕಿ ಹುತಾತ್ಮರಾಗಿ ಯೋಧ ಅಲ್ತಾಫ್ ಅಹ್ಮದ್(Althaf Ahmed) ಅವರ ಪಾರ್ಥಿವ ಶರೀರ ಇಂದು (ಫೆಬ್ರವರಿ 26) ಕೊಡಗು ಜಿಲ್ಲೆಯ ವಿರಾಜಪೇಟೆಗೆ ಆಗಮಿಸಿದೆ. ಶ್ರೀನಗರದಲ್ಲಿ ಹುತಾತ್ಮರಾಗಿದ್ದ ಯೋಧ(Soldier) ಅಲ್ತಾಫ್ ಅಹ್ಮದ್(37) ಪಾರ್ಥಿವ ಶರೀರ ಇಂದು ಅವರ ಹುಟ್ಟುರಾದ ಕೊಡಗು ಜಿಲ್ಲೆಯ ವಿರಾಜಪೇಟೆಗೆ ಬಂದಿದೆ. ವಿರಾಜಪೇಟೆ ತಾಲ್ಲೂಕು ಕೇಂದ್ರದ ಮೈದಾನದಲ್ಲಿ ಅಂತಿಮ ಕಾರ್ಯಕ್ರಮ ನಡೆಯಲಿದೆ. ಫೆಬ್ರವರಿ 23 ರಂದು ಹುತಾತ್ಮರಾದ ವೀರ ಯೋಧ ಅಲ್ತಾಫ್ ಅಹ್ಮದ್ ಅವರಿಗೆ ಇಂದು ಸರ್ಕಾರಿ ಮತ್ತು ಸೇನಾ ಗೌರಗಳೊಂದಿಗೆ ಅಂತ್ಯಸಂಸ್ಕಾರ(Funeral) ನೆರವೇರಿಸಲಾಗುತ್ತದೆ.
ಈಗಾಗಲೇ ವಿರಾಜಪೇಟೆಯಲ್ಲಿ ಅಂತಿಮ ನಮನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕೊಡಗು ಡಿಸಿ ಡಾ. ಸತೀಶ್, ಎಸ್ಪಿ ಅಯ್ಯಪ್ಪ ಯೋಧನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಸೇನಾ ಗೌರವ ನೆರವೇರಲಿದೆ.
ವಿರಾಜಪೇಟೆಯ ಮೀನುಪೇಟೆಯಲ್ಲಿ ಹುಟ್ಟಿ ಬೆಳೆದಿದ್ದ ಅಲ್ತಾಫ್ ಕುಟುಂಬ, ಕಳೆದ 10 ವರ್ಷಗಳಿಂದ ಕೇರಳಕ್ಕೆ ಶಿಫ್ಟ್ ಆಗಿತ್ತು ಎಂದು ತಿಳಿದುಬಂದಿದೆ. ದ್ವಿತೀಯ ಪಿಯುಸಿವರೆಗೂ ವಿರಾಜಪೇಟೆಯಲ್ಲಿ ವಿದ್ಯಾಭ್ಯಾಸ ನಡೆಸಿದ್ದ ಅಲ್ತಾಫ್, ಪಿಯುಸಿ ಬಳಿಕ ಆರ್ಮಿ ಸೇರಿದ್ದರು. ಅಪಾರ ದೇಶಭಕ್ತನಾಗಿದ್ದ ಅಲ್ತಾಫ್, 19 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಶ್ರೀನಗರದಲ್ಲಿ ಕರ್ತವ್ಯದಲ್ಲಿದ್ದ ಯೋಧ ಅಲ್ತಾಫ್ ಹುತಾತ್ಮರಾಗಿದ್ದಾರೆ.
ಕೊಡಗಿನ ವೀರ ಯೋಧ ಅಲ್ತಾಫ್ಗೆ ಭಾವಪೂರ್ಣ ವಿದಾಯ
ವಿರಾಜಪೇಟೆ ತಾಲೂಕು ಮೈದಾನದಲ್ಲಿ ಯೋಧನಿಗೆ ಅಂತಿಮ ನಮನ ಸಲ್ಲಿಸಿದ್ದು, 21 ಸುತ್ತು ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸಲಾಗಿದೆ. ಭಾರತೀಯ ಸೇನೆ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯಿಂದ ಗೌರವ ಸಲ್ಲಿಸಲಾಗಿದೆ. ಅಂತಿಮ ನಮನದ ವೇಳೆ ಪತ್ನಿ ಜುಬೇರಿಯ ಕುಸಿದು ಬಿದ್ದಿದ್ದಾರೆ. ಸೇನೆಯ ಡಿಎಸ್ಸಿ ವಿಭಾಗದಿಂದ ಗಾರಗಡ್ ಆಫ್ ಹಾನರ್ ಸಲ್ಲಿಕೆ ಮಾಡಲಾಗಿದೆ.
ಸೇನಾ ದಿರಿಸಿನಲ್ಲಿ ಅಂತಿಮ ನಮನ ಸಲ್ಲಿಸಿದ ಯೋಧನ ಮಕ್ಕಳು
ಕೊಡಗಿನಲ್ಲಿ ಹುತಾತ್ಮ ಯೋಧನಿಗೆ ಅಂತಿಮ ನಮನ ಸಲ್ಲಿಸಲಾಗಿದೆ. ಪುತ್ರಿ ಅಸ್ಮಾ ಜಾಸ್ಮಿನ್, ಪುತ್ರ ಮಹಮ್ಮದ್ ಆಫ್ರಿದ್ ಸೇನಾ ಉಡುಪಿನಲ್ಲಿ ಗೌರವ ಸಲ್ಲಿಸಿದ್ದಾರೆ. ವಿರಾಜಪೇಟೆ ತಾಲೂಕು ಮೈದಾನದಲ್ಲಿ ನಡೆಯುತ್ತಿರುವ ಅಂತಿಮ ನಮನ ಕಾರ್ಯಕ್ರಮದಲ್ಲಿ ಸ್ಥಳೀಯ ನಾಗರಿಕರು, ಜಿಲ್ಲೆಯ ನಿವೃತ್ತ ಸೈನಿಕರು ಗೌರವ ಸಲ್ಲಿಸಿದ್ದಾರೆ. ತಾಲೂಕು ಮೈದಾನದಿಂದ ಇದ್ಗಾ ಮೈದಾನಕ್ಕೆ ಯೋಧನ ಪಾರ್ಥಿವ ಶರೀರದ ಮೆರವಣಿಗೆ ಸಾಗುತ್ತಿದೆ.
ಹುತಾತ್ಮ ಯೋಧ ಅಲ್ತಾಫ್ಗೆ ಭಾವಪೂರ್ಣ ವಿದಾಯ
ಕೊಡಗಿನಲ್ಲಿ ಹುತಾತ್ಮ ಯೋಧನಿಗೆ ಅಂತಿಮ ನಮನ ಸಲ್ಲಿಸಲಾಗಿದೆ. ಯೋಧನ ಪತ್ನಿಗೆ ಸೇನಾ ಯೋಧರು ರಾಷ್ಟ್ರಧ್ವಜ ಹಸ್ತಾಂತರಿಸಿದ್ದಾರೆ. ರಾಷ್ಟ್ರಧ್ವಜ ಹಸ್ತಾಂತರ ವೇಳೆ ಪತ್ನಿ ಜುಬೇರಿಯಾ ಕುಸಿದು ಬಿದ್ದಿದ್ದಾರೆ. ಸೇನಾ ಗೌರವದ ಬಳಿಕ ಇಸ್ಲಾಂ ವಿಧಿವಿಧಾನದಂತೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ನಿವೃತ್ತಿಯಾಗಿದ್ದರೂ ಮತ್ತೆ ದೇಶ ಸೇವೆಗೆ ಅರ್ಪಿಸಿಕೊಂಡರು
ಕೆಲ ವರ್ಷಗಳ ಹಿಂದೆ ಸೇನೆಯಿಂದ ನಿವೃತ್ತಿಯಾಗಿದ್ದ ಅಲ್ತಾಫ್ ಮತ್ತೆ ದೇಶ ಸೇವೆಯ ಹಂಬಲದಲ್ಲಿ ಸೇನೆ ಸೇರಿದ್ದರು. ದೇಶ ಸೇವೆಯ ಹಂಬಲ ಅವರನ್ನು ಈ ಬಾರಿ ದೂರ ತೀರಕೆ ಕರೆದೊಯ್ದಿದೆ. ಯೋಧ ಅಲ್ತಾಫ್ ಬುಧವಾರ ಬೆಳಗ್ಗೆ 8.30ಕ್ಕೆ ವಿಡಿಯೋ ಕಾಲ್ ಮಾಡಿದ್ದರು. ಜಮ್ಮುವಿನಲ್ಲಿ ವಿಪರೀತ ಹಿಮಪಾತದ ಬಗ್ಗೆ ಹೇಳಿಕೊಂಡಿದ್ದರು. ಕುಟುಂಬದೊಂದಿಗೆ ಮಾತಾಡುತ್ತಲೇ ಹಿಮಪಾತವಾಗಿ ಅವರ ಸಾವು ಸಂಭವಿಸಿದೆ. ನಾಳೆ ವಿರಾಜಪೇಟೆಗೆ ವೀರ ಯೋಧ ಅಲ್ತಾಫ್ ಅಹಮ್ಮದ್ ಅವರ ಪಾರ್ಥಿವ ಶರೀರ ಬರುವ ನಿರೀಕ್ಷೆಯಿದೆ. ಸೇನೆಯ ಗೌರವಗಳೊಂದಿಗೆ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ.
ಸ್ವಂತಕ್ಕೆಂದು ಒಂದು ಮನೆಯನ್ನೂ ಹೊಂದಿರಲಿಲ್ಲ ಯೋಧ ಅಲ್ತಾಫ್
ಇನ್ನು, ಯೋಧ ಅಲ್ತಾಫ್ ಅವರು ಸ್ವಂತಕ್ಕೆಂದು ಒಂದು ಮನೆಯನ್ನೂ ಹೊಂದಿರಲಿಲ್ಲ. ತನ್ನ ಇಬ್ಬರು ಸಹೋದರಿಯರನ್ನು ವಿವಾಹ ಮಾಡಿಕೊಟ್ಟಿದ್ದ ಹೆಗ್ಗಳಿಕೆ ಅಲ್ತಾಫ್ ಅವರದ್ದು. ಪೆರುಂಬಾಡಿ ಬಳಿ ಜಾಗ ಖರೀದಿಸಿದ್ದ ಯೋಧ ಅಲ್ತಾ ನಿವೃತಿಯ ಬಳಿಕ ಮನೆ ಕಟ್ಟುವ ಕನಸು ಕಂಡಿದ್ದರು.
ಯೋಧ ಅಲ್ತಾಫ್ ಪ್ರೇಮಿಗಳ ದಿನ, ಹಿಜಾಬ್ ಬಗ್ಗೆ ಏನು ಹೇಳಿದ್ದರು?
ಯೋಧ ಅಲ್ತಾಫ್ ಫೆಬ್ರವರಿ 14 ರಂದು ಮಾಡಿದ್ದ ಆಡಿಯೋ ಇದೀಗ ವೈರಲ್ ಆಗಿದೆ. ಹಿಜಬ್-ಕೇಸರಿ ಶಾಲು ವಿವಾದಕ್ಜೆ ಬೇಸರ ವ್ಯಕ್ತಪಡಿಸಿದ್ದ ಯೋಧ ನಾವು ಸೈನಿಕರು ದೇಶದ ಜನತೆಗೋಸ್ಕರ ಗಡಿಯಲ್ಲಿ ಹೋರಾಡುತ್ತೇವೆ. ನೀವು ಮಾತ್ರ ಜಾತಿ-ಜಾತಿಗೋಸ್ಕರ ಬಡಿದಾಡುತ್ತೀರಾ? ನಾವೆಲ್ಲಾ ಭಾರತೀಯರೇ. ಇಲ್ಲಿ ನಮ್ಮ ಕಣ್ಣೆದುರೆ ಸೈನಿಕರು ಸಾಯುತ್ತಿದ್ದಾರೆ ಎಂದು ವಾಟ್ಸ್ ಆಪ್ ಆಡಿಯೋದಲ್ಲಿ ವೀರ ಯೋಧ ಅಲ್ತಾಫ್ ವಿಷಾದದ ದನಿಯಲ್ಲಿ ಹೇಳಿದ್ದರು.
ಭಾರೀ ಹಿಮಪಾತದ ವಿಡಿಯೋ ಮಾಡಿ ಕಳುಹಿಸಿದ್ದ ಯೋಧ ಅಲ್ತಾಫ್ ಫೆಬ್ರವರಿ 14 ಪ್ರೇಮಿಗಳ ದಿನವಲ್ಲ; ಅಂದು ರಾಜ್ ಗುರು, ಭಗತ್ ಸಿಂಗ್ ರನ್ನು ನೇಣಿಗೇರಿಸಿದ ದಿನ. ಹಾಗಾಗಿ, ಪ್ರೇಮಿಗಳ ದಿನ ಆಚರಿಸಬಾರದೆಂದು ಯೋಧ ಅಲ್ತಾಫ್ ಕರೆಕೊಟ್ಟಿದ್ದರು.
ಇದನ್ನೂ ಓದಿ:
ಜಮ್ಮು- ಕಾಶ್ಮೀರದಲ್ಲಿ ಕೊಡಗು ಮೂಲದ ಯೋಧ ಅಲ್ತಾಫ್ ಅಹ್ಮದ್ ಹುತಾತ್ಮ; ಹಿಮಪಾತಕ್ಕೆ ಸಿಲುಕಿ ಮೃತಪಟ್ಟಿರುವ ಮಾಹಿತಿ
Published On - 8:00 am, Sat, 26 February 22