ಕೊಡಗು ಜಿಲ್ಲೆಗೆ (Kodagu) ಭೇಟಿ ನೀಡುವವರಿಗೆ ಇದು ಬೋನಸ್ ಅಂದ್ರೂ ತಪ್ಪಿಲ್ಲ. ಅತ್ಯದ್ಭುತ ಪ್ರಕೃತಿ ಸೌಂದರ್ಯದ ಜೊತೆ, ಇದೀಗ ಎಲ್ಲಿ ನೋಡಿದ್ರೂ ಮಲ್ಲಿಗೆ ಹೂವು ಚೆಲ್ಲಿದಂತೆ ಭಾಸವಾಗುವ ಡಿಸೆಂಬರ್ ಹೂವಿನ ಸೊಬಗು.. ಹೌದು ಪ್ರತಿ ವರ್ಷ ಡಿಸೆಂಬರ್ ನಲ್ಲಿ ಅರಳಿ ನಗುವ ಈ ಹೂವು ಈ ಬಾರಿ ಕೂಡ ತನ್ನ ಸೌಂದರ್ಯ ರಾಶಿಯನ್ನ ಎಲ್ಲೆಡೆ ಹರಡಿ ಪ್ರವಾಸಿಗರನ್ನ ಕೈ ಬೀಡಿ ಕರೆಯುತ್ತಿದೆ. ಹಚ್ಚ ಹಸಿರು ರಾಶಿಯ ಮಧ್ಯೆ ಅಲ್ಲಲ್ಲಿ ಗಾಳಿಗೆ ತಲೆದೂಗುತ್ತಾ ನಿಂತಿರೋ ಸುಂದರಿಯರು.. ಒಮ್ಮೆಗೆ ನೋಡಿದ್ರೆ ದೇವರೇ ಇಳಿದು ಬಂದು ರಂಗೋಲಿ ಬಿಡಿಸಿದ್ದಾರೇನೋ ಎಂಬಂತಿದೆ ಈ ನಯನ ಮನೋಹರ ಪುಷ್ಪ ರಾಶಿ… (Christmas flower) ಇದು ಕೊಡಗಿನ ಮಡಿಕೇರಿ ಸುತ್ತಮುತ್ತ ಕಂಡು ಬರುತ್ತಾ ಇರುವ ಅಪರೂಪದ ದೃಶ್ಯ ವೈಭವ.
ಪ್ರತಿ ವರ್ಷ ಡಿಸೆಂಬರ್ ತಿಂಗಳು ಬಂದಾಗ ಚಳಿ ಗಾಲ ಶುರುವಾಗುತ್ತದೆ. ಋತುಮಾನ ಬದಲಾಗುತ್ತಲೇ ಇಲ್ಲಿನ ಪರಿಸರವೂ ಬದಲಾಗುತ್ತದೆ. ಕಾಡು ಮೇಡುಗಳಲ್ಲಿ ಹೊಸ ಬಗೆಯ ಆಕರ್ಷಕ ಕಾಡು ಹೂವುಗಳು ತಲೆದೂಗಿ ನಸುನಗಲು ಶುರುಮಾಡ್ತವೆ. ಮಂಜು ಮುಸುಕಿದ ವಾತಾವರಣದಲ್ಲಿ ಈ ಹೂವುಗಳ ಅಂದ ಚೆಂದವನ್ನು ಆಸ್ವಾಧಿಸುವುದೇ ಒಂದು ಖುಷಿ. ಸಾಮಾನ್ಯವಾಗಿ ರಸ್ತೆಬದಿಯಲ್ಲೇ ಈ ಹೂವುಗಳು ಅರಳಿ ನಗುತ್ತಿರುತ್ತವೆ. ಪ್ರಕೃತ ಸೌಂದರ್ಯದ ಹಿನ್ನೆಲೆಯಲ್ಲಿ ಇವುಗಳನ್ನು ಆಸ್ವಾದಿಸುವುದು ಅಂದರೆ ಎಲ್ಲರಿಗೂ ಖುಷಿ.
ಹಾಗೆ ನೋಡಿದ್ರೆ ಸ್ಥಳೀಯವಾಗಿ ಈ ಹೂವಿಗೆ ನಿರ್ಧಿಷ್ಟವಾದ ಒಂದು ಹೆಸರು ಅಂಥೇನೂ ಇಲ್ಲ. ಇದು ಕ್ರಿಸ್ಮಸ್ ಸಂದರ್ಭದಲ್ಲಿ ಹೆಚ್ಚು ಅರಳುವುದರಿಂದ ಕ್ರಿಸ್ಮಸ್ ಹೂವು ಅಂತಾನೂ ಕರೆಯುತ್ತಾರೆ. ಮಲ್ಲಿಗೆಯಂತೆ ಕಾಣುವುದರಿಂದ ಇದನ್ನ ಕಾಡು ಮಲ್ಲಿಗೆ ಅಂತಲೂ ಕರೆಯುತ್ತಾರೆ. ಸಾಮಾನ್ಯವಾಗಿ ಪಶ್ಚಿಮಘಟ್ಟದ ದಟ್ಟಾರಣ್ಯದಲ್ಲಿ ಡಿಸೆಂಬರ್ ತಿಂಗಳಲ್ಲಿ ಈ ಹೂವು ದಟ್ಟವಾಗಿ ಅರಳುತ್ತದೆ.
ಹಾಗಾಗಿ ಈ ಅವಧಿಯಲ್ಲಿ ಹೂವು ಅರಳಿರುವ ಪ್ರದೇಶವನ್ನು ನೋಡುವುದೇ ಒಂದು ಅಂದ. ಅದ್ರಲ್ಲೂ ದಾರಿ ಹೋಕರಿಗಂತೂ ರಸ್ತೆ ಬದಿಯಲ್ಲಿ ಕಾಣ ಸಿಗುವ ಈ ಹೂವು ಕಣ್ಣಿಗೆ ಹಬ್ಬ ನೀಡುತ್ತದೆ. ವಿಶೇಷವಾಗಿ ಪ್ರವಾಸಿಗರು ಹೂವು ಕಂಡಲೆಲ್ಲಾ ಗಾಡಿ ನಿಲ್ಲಿಸಿ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಾರೆ.
ಡಿಸೆಂಬರ್ ತಿಂಗಳಿನಲ್ಲಿ ಕೊಡಗಿಗೆ ಪ್ರವಾಸ ಬರುವವರಿಗೆ ಹಲವು ಆಹ್ಲಾದಕರ ವಾತಾವರಣ ಸಿಗುತ್ತವೆ. ಒಂದು ಚುಮು ಚುಮು ಚಳಿ… ಅದರೊಂದಿಗೆ ಮಂಜು ಮುಸುಕಿದ ವಾತಾವರಣ.. ಇವರೆಡರೊಂದಿಗೆ ಇದೀಗ ಕಾಡು ಮಲ್ಲಿಗೆ ಹೂವಿನ ರಾಶಿ. ಹಾಗಾಗಿ ಮಡಿಕೇರಿ, ಸಂಪಾಜೆ, ಕುಶಾಲನಗರ ರಸ್ತೆಯಲ್ಲಿ ಪ್ರಯಾಣಿಸುವವರಿಗೆ ಇನ್ನೊಂದು 15 ದಿನಗಳ ಕಾಲ ಕಣ್ಣಿಗೆ ಹಬ್ಬವೋ ಹಬ್ಬ.
ವರದಿ: ಗೋಪಾಲ್ ಸೋಮಯ್ಯ ಐಮಂಡ, ಟಿವಿ 9, ಕೊಡಗು
Also Read: