ಕೊಡಗು: ಜಿಲ್ಲೆಯ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಮದಲ್ಲಿರುವ ದುಬಾರೆ ಸಾಕಾನೆ ಶಿಬಿರದಲ್ಲಿ(Dubare Elephant Camp) ಮದವೇರಿದ ಕಾಡಾನೆ ತೀವ್ರ ದಾಂಧಲೆ ಮಾಡಿದ್ದು ದಸರಾ ಆನೆ ಗೋಪಿ(Dasara Elephant Gopi) ತೀವ್ರವಾಗಿ ಗಾಯಗೊಂಡಿದೆ. ಪ್ರವಾಸಿಗರ ಸುರಕ್ಷತೆ ಹಿನ್ನೆಲೆಯಲ್ಲಿ ದುಬಾರೆಗೆ ಪ್ರವಾಸಿಗರ ಪ್ರವೇಶ ನಿಷೇಧ ಮಾಡಲಾಗಿದೆ ಎಂದು ಇಲ್ಲಿನ ಅರಣ್ಯಾಧಿಕಾರಿ ರಂಜನ್ ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ರಾತ್ರಿಯಾಗುತ್ತಿದ್ದಂತೆ ಮದವೇರಿದ ಕಾಡಾನೆಯೊಂದು ದುಬಾರೆಗೆ ಆಗಮಿಸಿ ತೀವ್ರ ದಾಂಧಲೆ ಮಾಡುತ್ತಿದೆ. ಮಾಲ್ದಾರೆ ಮೀಸಲು ಅರಣ್ಯದಿಂದ ಬಂದಿರುವ ಮದವೇರಿದ ಆನೆ ಅರಣ್ಯ ಇಲಾಖೆ ಸಿಬ್ಬಂದಿ ನಿದ್ದೆ ಗೆಡಿಸಿದೆ. ಕಾಡಾನೆ ಕಾಡಿಗಟ್ಟಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. RRT ತಂಡ ರಾತ್ರಿ ಪೂರಾ ಆನೆ ಶಿಬಿರದಲ್ಲೇ ಉಳಿದುಕೊಂಡು ಪಟಾಕಿ ಸಿಡಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮದವೇರಿದ ಕಾಡಾನೆ ಹಾಗೂ ದಸರಾ ಆನೆ ಗೋಪಿ ನಡುವೆ ಘರ್ಷಣೆಯಾಗಿದ್ದು ಗೋಪಿಗೆ ಗಾಯಗಳಾಗಿವೆ. ಗಾಯಾಳು ಆನೆಗೆ ಪಶುವೈದ್ಯಾಧಿಕಾರಿ ಡಾ ಚಿಟ್ಟಿಯಪ್ಪ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರವಾಸಿಗರು ಮುಂದಿನ ಆದೇಶದವರೆಗೆ ದುಬಾರೆ ಬಾರದಂತೆಯೂ, ಹಾರಂಗಿ ಜಲಾಶಯದ ಸಮೀಪದ ಆನೆ ಶಿಬಿರಕ್ಕೆ ತೆರಳುವಂತೆ ಅರಣ್ಯಾಧಿಕಾರಿ ರಂಜನ್ ಮನವಿ ಮಾಡಿದ್ದಾರೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನಲ್ಲಿರುವ ಬೇಬಿ ಬೆಟ್ಟದಲ್ಲಿ ಮೇಯಲು ಬಂದಿದ್ದ ಕುರಿಗಳ ಹಿಂಡಿನ ಮೇಲೆ ಚಿರತೆಗಳು ದಾಳಿ ನಡೆಸಿವೆ. ಈ ವೇಳೆ ಚಿರತೆ ದಾಳಿ ಕಂಡು ರೈತರು, ಕುರಿಗಾಹಿಗಳು ಕೂಗಾಡಿಕೊಂಡಿದ್ದು ಕುರಿಗಾಹಿ ಚೀರಾಡುತ್ತಿದ್ದಂತೆ 3 ಕುರಿಗಳನ್ನು ಕೊಂದು ಒಂದು ಕುರಿಯನ್ನು ಚಿರತೆಗಳು ಅರಣ್ಯದೊಳಗೆ ಹೊತ್ತೊಯ್ದಿದ್ದಾವೆ. ಕುರಿಗಳ ಮೇಲೆ ಚಿರತೆ ದಾಳಿಯಿಂದ ರೈತರು ಕಂಗಾಲಾಗಿದ್ದಾರೆ. ಕುರಿಗಾಹಿಗಳಿಗೆ ಪರಿಹಾರ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:35 am, Thu, 12 January 23