ಕೊಡಗು, ನ.16: ತಾಯಿಯಿಂದ ಬೇರ್ಪಟ್ಟಿದ್ದ ನವಜಾತ ಆನೆ ಮರಿಯನ್ನು (Baby Elephant) ಮಂಗಳವಾರ ಅರಣ್ಯ ಇಲಾಖೆ ಸಿಬ್ಬಂದಿ (Forest Department) ಒಂದು ಮಾಡಿದ್ದಾರೆ. ವಿರಾಜಪೇಟೆಯ ಕರಡ ಗ್ರಾಮದ ಕೀಮಲೆ ಕಾಡು ಎಂಬಲ್ಲಿನ ಮನೆಯ ಮುಂಭಾಗದ ಅಂಗಳದಲ್ಲಿ ಸೋಮವಾರ ತಡರಾತ್ರಿ ಆನೆಯೊಂದು (Elephant) ಮರಿಗೆ ಜನ್ಮ ನೀಡಿತ್ತು. ಸುದ್ದಿ ಹರಡುತ್ತಿದ್ದಂತೆ, ಜನರು ಗುಂಪು ಗುಂಪಾಗಿ ಸ್ಥಳಕ್ಕೆ ಬಂದು ತಾಯಿ-ಮಗುವನ್ನು ನೋಡಲು ಪ್ರಾರಂಭಿಸಿದರು. ಜನರ ಗುಂಪನ್ನು ಕಂಡು ಗಾಬರಿಗೊಂಡ ತಾಯಿ ಆನೆ ಮಗುವನ್ನು ಬಿಟ್ಟು ಕಾಡಿನತ್ತ ಓಡಿತ್ತು. ಸದ್ಯ ಅರಣ್ಯ ಅಧಿಕಾರಿಗಳು ತಾಯಿ-ಮಗುವನ್ನು ಒಂದು ಮಾಡಿದ್ದಾರೆ.
ತಾಯಿಯನ್ನು ಹುಡುಕಲು ಅರಣ್ಯ ಇಲಾಖೆ ಸಿಬ್ಬಂದಿ ಮರಿ ಆನೆಯನ್ನು ಜೀಪಿನ ಮೂಲಕ ಕಾಡಿಗೆ ಕರೆದುಕೊಂಡು ಹೋಗಿದ್ದರು. ಏಳು ಕಿ.ಮೀ ವರೆಗೆ ಹುಡುಕಾಟದ ನಂತರ ತಾಯಿ ಆನೆ ಪತ್ತೆಯಾಗಿದೆ. ಅಲ್ಲಿಯವರೆಗೆ ಮರಿ ಆನೆಗೆ ಗ್ಲೂಕೋಸ್ ನೀಡಿ ಅರಣ್ಯ ಸಿಬ್ಬಂದಿ ಹಾರೈಕೆ ಮಾಡಿದ್ದಾರೆ. ಅಲ್ಲದೆ ತಾಯಿ-ಮಗುವನ್ನು ಒಂದು ಮಾಡುವ ಈ ಕಾರ್ಯಾಚರಣೆಗೆ ಸ್ಥಳೀಯರು ಕೂಡ ಸಹಾಯ ಮಾಡಿದ್ದಾರೆ.
ಈ ಬಗ್ಗೆ ಆರ್‌ಎಫ್‌ಒ ದೇವಯ್ಯ ಮಾತನಾಡಿ, ತಾಯಿ ಆನೆ ಮರಿ ಬಿಟ್ಟು ಹೋದ ಘಟನೆ ಅಪರೂಪ ಎಂದರು. ಇದೇ ವೇಳೆ ಸ್ಥಳೀಯರು ಮಾಡಿದ ಸಹಾಯವನ್ನು ನೆನಪಿಸಿಕೊಂಡರು, ವಿಶೇಷವಾಗಿ ಪಿ ಸೋಮೇಶ್ ಎಂಬವರ ಸಹಾಯವನ್ನು ನೆನಪಿಸಿಕೊಂಡರು.
ಇದನ್ನೂ ಓದಿ: ಚಿಕ್ಕಮಗಳೂರು: ಕಿಲ್ಲರ್ ಒಂಟಿ ಸಲಗ ಆಪರೇಷನ್ ವೇಳೆ ಮತ್ತೊಂದು ಒಂಟಿ ಸಲಗ ಸೆರೆ
ಅರಣ್ಯಾಧಿಕಾರಿಗಳು ನವಜಾತ ಆನೆ ಮರಿಗೆ ಪ್ರಥಮ ಚಿಕಿತ್ಸೆ ನೀಡಿ ಅದಕ್ಕೆ ಗ್ಲೂಕೋಸ್ ಮತ್ತು ಇತರ ಪೂರಕಗಳನ್ನು ನೀಡಿದರು. ತಂಡವು ನಂತರ ಆನೆ ಹಿಂಡನ್ನು ಪತ್ತೆ ಹಚ್ಚಿ ತಾಯಿಯ ಜೊತೆಗೆ ಮಗುವನ್ನು ಸೇರಿಸಿದೆ. ಆನೆ ಹಿಂಡು ಘಟನೆಯ ಸ್ಥಳದಿಂದ ಸುಮಾರು ಏಳು ಕಿಲೋಮೀಟರ್ ದೂರದಲ್ಲಿರುವ ಮಾಕುಟ್ಟಾ ಅರಣ್ಯ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಪಿಸಿಸಿಎಫ್ ಮನೋಜ್ ತ್ರಿಪಾಟಿ, ಡಿಸಿಎಫ್ ಶರಣಬಸಪ್ಪ ಮತ್ತು ಎಸಿಎಫ್ ನೆಹರು ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮದಲ್ಲಿ ಆನೆಗಳ ಓಡಾಟ ಹೆಚ್ಚಾಗಿದ್ದು, ಇಂತಹ ಘಟನೆಗಳನ್ನು ನಿಯಂತ್ರಿಸಲು ಕಾಡಿನ ಪ್ರದೇಶಗಳ ಮಾರ್ಗವನ್ನು ಜನವಸತಿ ಪ್ರದೇಶಗಳಿಗೆ ಮುಚ್ಚುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:58 am, Thu, 16 November 23