ಕೊಡಗು ಜಿಲ್ಲೆಯಲ್ಲಿ ಕೊಡವರು ಸೇರಿದಂತೆ ಸುಮಾರು 20 ಬಗೆಯ ಮೂಲ ನಿವಾಸಿಗಳಿದ್ದಾರೆ. ಆದ್ರೆ ಇತ್ತೀಚೆಗೆ ಕೆಲವು ಸಂಘಟನೆಗಳು ಕೊಡಗು ಪ್ರದೇಶವನ್ನು ಕೊಡವ ಲ್ಯಾಂಡ್ ಅಥವಾ ಕೊಡವ ಸ್ವಾಯತ್ತ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಇದಕ್ಕೆ ಜಿಲ್ಲೆಯ ಇತರ ಮೂಲ ನಿವಾಸಿಗಳಿಂದ ಅಪಸ್ವರ ಕೇಳಿಬಂದಿದೆ. ಈ ಮೂಲಕ ಕೊಡಗಿನ ಸಾಂಸ್ಕೃತಿಕ ಅನನ್ಯತೆಗೆ ಭಾರೀ ಪೆಟ್ಟು ಬೀಳುವ ಸಂದರ್ಭ ಬಂದಂತಾಗಿದೆ.
ಕೊಡಗು ಜಿಲ್ಲೆ ಅಂದ್ರೆ ಅದು ಕ್ರೀಡೆ ಜೊತೆಗೆ ವಿಭಿನ್ನ ಸಂಸ್ಕೃತಿಗಳ ಆಚಾರ ವಿಚಾರಗಳ ತವರೂರು. ಇಲ್ಲಿ ಕೊಡವ ಅರೆಭಾಷಿಕ ಗೌಡ ಸೇರಿದಂತೆ 20 ಬಗೆಯ ಮೂಲ ನಿವಾಸಿಗಳ ವಿಶಿಷ್ಟ ಸಂಸ್ಕೃತಿಯಿಂದಾಗಿ ಈ ಜಿಲ್ಲೆ ವಿಶ್ವಮಟ್ಟದಲ್ಲಿ ಹೆಸರುವಾಸಿಯಾಗಿದೆ. ಆದ್ರೆ ಇತ್ತೀಚೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಎಂಬ ಸಂಘಟನೆಯೊಂದು ವಕೀಲ ಸುಬ್ರಹ್ಮಣಿಯಂ ಸ್ವಾಮಿ ಮೂಲಕ ಸುಪ್ರೀಂ ಕೋರ್ಟ್ನಲ್ಲಿ ದಾವೆಯೊಂದನ್ನ ಹೂಡಿದೆ.
ಕೊಡಗು ಜಿಲ್ಲೆಯನ್ನ ಕೊಡವ ಲ್ಯಾಂಡ್ ಎಂದು ಘೋಷಿಸುವಂತೆಯೂ, ಇದು ಕೊಡವರ ಸ್ವಾಯತ್ತ ಪ್ರದೇಶವೆಂದು ಘೋಷಿಸುವಂತೆ ಸರ್ಕಾರಕ್ಕೆ
ಆದೇಶ ನೀಡುವಂತೆ ಈ ಅರ್ಜಿಯಲ್ಲಿ ಕೇಳಿಕೊಂಡಿದೆ. ಈ ಮೂಲಕ ಪ್ರಬಲ ಕೊಡವ ಸಮುದಾಯವನ್ನ ಬುಡಕಟ್ಟು ಜನಾಂಗಕ್ಕೆ ಸೇರಿಸುವ ಪ್ರಯತ್ನ ನಡೆಸಲಾಗಿದೆ.
Also Read: ಬಿಳಿ ಸ್ವಿಫ್ಟ್ ಕಾರಿನಲ್ಲಿ ಬಂದು, ಸಮ್ಮೋಹನಗೊಳಿಸಿ ಗೂಗಲ್ ಪೇ ಮೂಲಕ ಹಣ ದೋಚುತ್ತಿದ್ದಾರೆ ಸ್ವಾಮೀಜಿ ವೇಷಧಾರಿಗಳು!
ಆದರೆ ಸಿಎನ್ಸಿ ಸಂಘಟನೆಯ ಈ ವಾದಕ್ಕೆ ಜಿಲ್ಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಕೊಡಗಿನಲ್ಲಿ ಕೊಡವ ಸಮುದಾಯವನ್ನ ಹೊರತುಪಡಿಸಿ ಇನ್ನೂ 20 ಮೂಲ ನಿವಾಸಿ ಸಮುದಾಯಗಳಿವೆ. ಕೊಡಗಿನಲ್ಲಿ ಮೂಲ ಬುಡಕಟ್ಟು ನಿವಾಸಿಗಳು ಇಂದಿಗೂ ಕಡು ಬಡತನದಲ್ಲಿ ಇದ್ದಾರೆ. ಕೊಡವ ಸಮುದಾಯಕ್ಕೆ ಬುಡಕಟ್ಟು ಸ್ಥಾನ ಮಾನ ನೀಡಿದ್ರೆ ಈ ಮೂಲ ನಿವಾಸಿಗಳ ಹಕ್ಕಿಗೆ ಸಂಚಕಾರ ಬರಲಿದೆ. ಅದ್ರಲ್ಲೂ ಕೊಡವ ಸಮುದಾಯ ಸಾಮಾಜಿಕವಾಗಿ ಆರ್ಥಿಕವಾಗಿ ಸಾಕಷ್ಟು ಮುಂದುವರಿದಿದೆ. ಹಾಗಿರುವಾಗ ಆ ಸಮುದಾಯಕ್ಕೆ ಬುಡಕಟ್ಟು ಸ್ಥಾನಮಾನ ನೀಡುವುದು ಸರಿಯಲ್ಲ ಎಂದು ಪ್ರತಿವಾದಿಸಲಾಗಿದೆ.
ಇದುವರೆಗೂ ಕೊಡಗಿನಲ್ಲಿ ಕೊಡವ ಅರೆಭಾಷಿಕ ಗೌಡ ಹಾಗೂ ಇತರ ಮೂಲ ನಿವಾಸಿಗಳು ಸೌಹಾರ್ದತೆಯಿಂದ ಬದುಕಿ ಬಾಳಿದವರು. ಆದ್ರೆ ಇದೀಗ ಕೊಡವ ಬುಡಕಟ್ಟು ಸ್ಥಾನಮಾನದ ಆಗ್ರಹದಿಂದಾಗಿ ಸಮುದಾಯಗಳ ಮಧ್ಯೆ ಒಡಕು ಮೂಡಿರುವುದು ಜಿಲ್ಲೆಯ ಜನರಲ್ಲಿ ಬೇಸರ ತಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:44 pm, Wed, 10 January 24