ಕೊಡಗು: ಫೆ.12 ರಂದು ಕೇವಲ 24 ಗಂಟೆಗಳಲ್ಲಿ ನರಭಕ್ಷಕ ಹುಲಿ ದಾಳಿಗೆ ಇಬ್ಬರ ಬಲಿಯಾಗಿದ್ದರು. ಇದರಿಂದ ಭಯಭೀತರಾಗಿದ್ದ ಜನರು ಕೂಡಲೇ ಹುಲಿಯನ್ನ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಇದೀಗ ಜಿಲ್ಲೆಯಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ನರಭಕ್ಷಕ ಹುಲಿಯನ್ನ ಇಂದು(ಫೆ.14)ಪೊನ್ನಂಪೇಟೆ ತಾಲೂಕಿನ ನಾಣಚ್ಚಿಗೇಟ್ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಬೆಳಗ್ಗೆಯಿಂದ ದಸರಾ ಆನೆ ಅಭಿಮನ್ಯು ನೇತೃತ್ವದಲ್ಲಿ 3 ಸಾಕಾನೆ ಬಳಸಿ ಹುಲಿ ಸೆರೆ ಕಾರ್ಯಾಚರಣೆ ನಡೆಸಿದ್ದ ಸಿಬ್ಬಂದಿಗಳು, ಕೊನೆಗೂ ಅರಿವಳಿಕೆ ಚುಚ್ಚುಮದ್ದು ನೀಡಿ ಹುಲಿಯನ್ನ ಸೆರೆ ಹಿಡಿಯಲಾಗಿದೆ.
ಫೆಬ್ರವರಿ 12ರಂದು ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಗ್ರಾಮದಲ್ಲಿ 12 ವರ್ಷದ ಬಾಲಕ ಚೇತನ್ ಮೇಲೆ ದಾಳಿ ನಡೆಸಿದ್ದ ವ್ಯಾಘ್ರ ಆತನನ್ನು ಕೊಂದು ಹಾಕಿತ್ತು. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಈ ಘಟನೆ ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದ ಬಳಿ ನಡೆದ ಹುಲಿ ದಾಳಿಯಲ್ಲಿ ಮೈಸೂರು ಜಿಲ್ಲೆಯ ಕೊಳವಿಗೆ ಹಾಡಿ ನಿವಾಸಿ ರಾಜು (75) ಸಾವನ್ನಪ್ಪಿದ್ದರು. ದಾಳಿ ವೇಳೆ ತಡೆಯಲು ಯತ್ನಿಸಿದ ರಾಜು ಪುತ್ರ ಹಾಗೂ ಮೃತ ಚೇತನ್ ತಂದೆ ಮಧು ಅವರಿಗೂ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ:ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ಹುಲಿ ದಾಳಿ: ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲು
ಇನ್ನು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಗಡಿಯಲ್ಲಿರುವ ಕೆ.ಬಾಡಗ ಗ್ರಾಮದಲ್ಲಿ ಹುಲಿ ದಾಳಿಗೆ ಇಬ್ಬರು ಬಲಿಯಾದ ಪ್ರಕರಣ ಸಂಬಂಧ ನರಭಕ್ಷಕ ಹುಲಿ ಕೊಲ್ಲುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಹುಲಿ ಸೆರೆಗೆ ಸರ್ಕಾರ ಆದೇಶಿಸುತ್ತಿದ್ದಂತೆ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದಿದ್ದರು. ಇದೇ ವೇಳೆ ಮೃತ ರಾಜು ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರದ ಚೆಕ್ ಕೂಡ ವಿತರಣೆ ಮಾಡಲಾಗಿತ್ತು. ಇದೀಗ ಹುಲಿಯನ್ನ ಸೆರೆ ಹಿಡಿದಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ