
ಕೊಡಗಿನ ವಿರಾಜಪೇಟೆಯಲ್ಲಿ ಬೆಟ್ಟಗುಡ್ಡ ಕಾಡು ಮೇಡುಗಳಲ್ಲೇ ಹೆಚ್ಚಾಗಿ ವಾಸಿಸುವ ಬುಡಕಟ್ಟು ಸಂಸ್ಕೃತಿಯಂತೂ ತುಂಬಾ ವಿಭಿನ್ನ, ವಿಶಿಷ್ಟ. ಆಧುನಿಕ ಜೀವನ ಪದ್ಧತಿಗೆ ಈಗಷ್ಟೇ ತೆರೆದುಕೊಳ್ಳುತ್ತಿರುವ ಈ ಮಂದಿಯ ಸಂಸ್ಕೃತಿಯನ್ನ ಅನಾವರಣಗೊಳಸುವಂತಹ ಕಾರ್ಯಕ್ರಮ ನಡೆಯಿತು.

ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆ ಪ್ರಾಕೃತಿಕವಾಗಿ ಎಷ್ಟೊಂದು ಅದ್ಭುತವೋ, ಈ ಹಸಿರ ಹಾಸಿನ ಮಧ್ಯೆ ಕಂಗೊಳಿಸುವ ಇಲ್ಲಿನ ಸಂಸ್ಕೃತಿ, ಪದ್ಧತಿ, ಆಚಾರ ವಿಚಾರಗಳೂ ಅಷ್ಟೇ ಶ್ರೀಮಂತವಾಗಿದೆ.

ಇನ್ನು ಈ ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಮಕ್ಕಳು ತಳಿಯತ್ತಾಟ್, ಉರ್ಟಿಕೊಟ್ಟಾಟ್, ಕೋಲಾಟ ಸೇರಿದಂತೆ ನಾನಾ ಬಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಪ್ರದರ್ಶಿಸಿದರು. ಇನ್ನು ವಿಶೇಷವೆಂದರೆ ನೀರಿನ ಡ್ರಂಗಳು, ಡಿಶ್ ಆಂಟೆನಾ, ಬಿದಿರಿನ ಪೈಪ್ಗಗಳೆ ಇವರ ಮ್ಯೂಸಿಕ್ ಸಲಕರಣೆಗಳಾಗಿದ್ದವು.

ಕೊಡಗು ಜಿಲ್ಲೆಯ ವಿವಿಧ ಹಾಡಿಗಳಿಂದ ಸುಮಾರು 10ಕ್ಕೂ ಹೆಚ್ಚು ಕಲಾ ತಂಡಗಳು ತಮ್ಮ ಸಾಂಸ್ಕೃತಿಕ ವೈವಿಧ್ಯತೆಯನ್ನ ಪ್ರದರ್ಶಿಸಿದವು. ಅದರಲ್ಲೂ ಜೇನು ಕುರುಬರು ಪುರಾತನ ಕಾಲದಲ್ಲಿ ಆಚರಿಸುತ್ತಿದ್ದ ಬೇಟೆ ಸಂಸ್ಕೃತಿಯನ್ನ ನೃತ್ಯ ರೂಪಕದಲ್ಲಿ ಪ್ರಸ್ತುತ ಪಡಿಸಿ ಎಲ್ಲರ ಗಮನ ಸೆಳೆದರು.

ಮಲೆ ಕುಡಿಯರು, ಜೇನು ಕುರುಬರು, ಎರವರು ಸೇರಿದಂತೆ ಹತ್ತು ಹಲವು ಮೂಲ ನಿವಾಸಿಗಳು, ಜಿಲ್ಲೆಯ ಸಾಂಸ್ಕೃತಿಕ ಹಿರಿಮೆಯನ್ನ ಹೆಚ್ಚು ಮಾಡಿವೆ. ಇವರೆಲ್ಲರ ಸಂಸ್ಕೃತಿ ಆಚಾರ ವಿಚಾರಗಳನ್ನ ಒಂದೇ ವೇದಿಕೆಯಲ್ಲಿ ನೋಡುವ ವಿಶಿಷ್ಟ ಹಬ್ಬವೆಂದರೆ ಹಾಡಿ ಹಬ್ಬ.

ಮಲೆ ಕುಡಿಯ, ಜೇನು ಕುರುಬ, ಎರವ ಸೇರಿದಂತೆ ಹಲವು ಬುಡಕಟ್ಟು ಜನಾಂಗಗಳು ತಮ್ಮ ವಿಶಿಷ್ಟ ಪ್ರತಿಭೆಯನ್ನ ಅನಾವರಣಗೊಳಿಸಿದವು.

ಆಧುನೀಕರಣದ ಭರಾಟೆಯಲ್ಲಿ ನಶಿಸಿ ಹೋಗುತ್ತಿರುವ ವಿಶಿಷ್ಟ ಸಂಸ್ಕೃತಿಯನ್ನ ಉಳಿಸುವ ನಿಟ್ಟಿನಲ್ಲಿ ಈ ಬಗೆಯ ಕಾರ್ಯಕ್ರಮಗಳು ಹೆಚ್ಚು ಅರ್ಥಪೂರ್ಣವಾಗಿದ್ದು, ಇನ್ನು ಕಾರ್ಯಕ್ರಮಕ್ಕೆ ಅನೇಕ ಜನರು ಆಗಮಿಸಿ ಬುಡಕಟ್ಟು ಸಂಸ್ಕೃತಿಯನ್ನು ವೀಕ್ಷಿಸಿದರು.
Published On - 10:14 am, Mon, 5 December 22