ಕೊಡಗು: ಜಿಲ್ಲೆಯಾದ್ಯಂತ ಇಂದು ಕೈಲ್ ಮುಹೂರ್ತ ಹಬ್ಬದ ಸಂಭ್ರಮ. ಜಿಲ್ಲೆಯ ಮೂಲ ನಿವಾಸಿಗಳು ಪ್ರತಿ ವರ್ಷ ಸೆಪ್ಟೆಂಬರ್ 3 ರಂದು ಮನೆ ಮನೆಯಲ್ಲಿ ಸಡಗರ ಸಂಭ್ರಮದಿಂದ ಈ ಹಬ್ಬ ಆಚರಿಸುತ್ತಾರೆ. ಮುಂಗಾರು ಅವಧಿಯಲ್ಲಿ ಗದ್ದೆ ಕೆಲಸ ಕಾರ್ಯಗಳು ಮುಗಿದ ಬಳಿಕ ಗದ್ದೆ ಊಳಲು ಬಳಸುವ ದನಗಳನ್ನು ಸ್ನಾನ ಮಾಡಿಸಿ ಅಲಂಕರಿಸಿ ಪೂಜಿಸಲಾಗುತ್ತದೆ. ಬಳಿಕ ಕೃಷಿ ಚಟುವಟಿಕೆಗಳಿಗೆ ಬಳಸಿದ ನೇಗಿಲು ಸೇರಿದಂತೆ ಎಲ್ಲಾ ಪರಿಕರಗಳನ್ಬು ಶುದ್ಧೀಕರಿಸಿ ಅಲಂಕರಿಸಿ ಪೂಜಿಸುತ್ತಾರೆ.
ಇಷ್ಟು ಮಾತ್ರವಲ್ಲದೆ ಕೊಡಗಿನ ಮೂಲನಿವಾಸಿಗಳ ಪಾಲಿಗೆ ಇದು ಆಯುಧ ಪೂಜೆಯೂ ಹೌದು. ತಮ್ಮ ಮನೆಯಲ್ಲಿರುವ ಬಂದೂಕು ಮತ್ತು ಇತರ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು ಕೂಡ ಅಲಂಕರಿಸಿ ಅವುಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಮನ ಮನೆಗಳಲ್ಲಿ ಹಬ್ಬದೂಟದ ಸಂಭ್ರಮ
ಕೈಲ್ ಮುಹೂರ್ತ ಹಬ್ಬದ ಮತ್ತೊಂದು ವಿಶೇಷತೆ ಅಂದರೆ ಬಗೆ ಬಗೆಯ ಭಕ್ಷ್ಯ ಭೋಜನ. ಸಾಮಾನ್ಯವಾಗಿ ಈ ಹಬ್ಬದ ಆಚರಣೆಗೆ ಹಂದಿ ಮಾಂಸದೂಟ ಬೇಕೇ ಬೇಕು. ಹಾಗಾಗಿ ಹಬ್ಬದ ದಿನದ ಮೊದಲು ಜಿಲ್ಲೆಯಲ್ಲಿ ನೂರಾರು ಹಂದಿಗಳನ್ನು ಕಡಿದು ಮಾಂಸ ಮಾಡಲಾಗುತ್ತದೆ. ಇದರ ಜತೆಗೆ ಇತರ ಮಾಂಸ ಮತ್ತು ಮದ್ಯದ ಸಮಾರಾಧನೆಯೇ ಆಗುತ್ತದೆ.
ಗ್ರಾಮೀಣ ಕ್ರೀಡಾಕೂಟದ ಸಂಭ್ರಮ
ಕೈಲ್ ಮುಹೂರ್ತ ಹಬ್ಬದ ದಿನ ಗ್ರಾಮ ಗ್ರಾಮಗಳಲ್ಲಿ ಗ್ರಾಮೀಣ ಕ್ರೀಡಾ ಕೂಟ ಏರ್ಪಡಿಸಲಾಗುತ್ತದೆ. ವಿಶೇಷವಾಗಿ ಮಹಿಳೆಯರು, ಪುರುಷರು ಮತ್ತು ಮಕ್ಕಳು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ.
ಬದಲಾದ ಕಾಲಘಟ್ಟದಲ್ಲಿ ಅರ್ಥಕಳೆದುಕೊಂಡ ಆಚರಣೆ
ಕೊಡಗು ಜಿಲ್ಲೆಯಲ್ಲಿ ಬದಲಾದ ಜೀವನ ಪದ್ಧತಿ, ಈ ಸಾಂಪ್ರದಾಯಿಕ ಹಬ್ಬದ ಮೇಲೂ ಪರಿಣಾಮ ಬೀರಿದೆ. ಒಂದು ಕಾಲದಲ್ಲಿ ಜಿಲ್ಲೆಯ ಶೇಕಡ 90 ರಷ್ಟು ಮಂದಿ ಭತ್ತ ಬೆಳೆಯುತ್ತಿದ್ದರು. ಆದರೆ ಇದೀಗ ಭತ್ತದ ಗದ್ದೆಗಳು ಪಾಳು ಬಿದ್ದಿವೆ. ಕೃಷಿ ಚಟುವಟಿಕೆ ನಡೆಸುವವರೇ ಇಲ್ಲವಾಗಿದ್ದಾರೆ. ಹಾಗಾಗಿ ಕೃಷಿ ಸಂಸ್ಕೃತಿಯನ್ನೇ ಆಧರಿಸಿರುವ ಕೈಲ್ ಮುಹೂರ್ತ ಹಬ್ಬ ಈಗ ಅರ್ಥ ಕಳೆದುಕೊಳ್ಳುತ್ತಿದೆ.
ಪೂಜಿಸಲು ಗೋವುಗಳೂ ಇಲ್ಲ, ಕೃಷಿ ಪರಿಕರಗಳೂ ಇಲ್ಲ. ಕೇವಲ ಹಬ್ಬ ಎನ್ನುವುದು ತಿನ್ನುವುದು ಮತ್ತು ಕುಡಿಯುವುದಕ್ಕೆ ಮಾತ್ರ ಸೀಮಿತವಾಗಿದೆ ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜ್ಜಿರ ಅಯ್ಯಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ.
ಅಷ್ಟು ಮಾತ್ರವಲ್ಲದೆ ಕಳೆದ ಮೂರು ವರ್ಷ ಪ್ರವಾಹ ಮತ್ತು ಭೂಕುಸಿತದಿಂದಾಗಿಯೂ ಹಬ್ಬದ ಆಚರಣೆ ಕಳೆಗುಂದಿತ್ತು. ಇದೀಗ ಕೊರೊನದಿಂದಲೂ ಹಬ್ಬ ಕಳೆಗುಂದಿದೆ. ಗ್ರಾಮೀಣ ಕ್ರೀಡಾ ಕೂಟಕ್ಕೆ ಬ್ರೇಕ್ ಬಿದ್ದಿದೆ. ಇಷ್ಟೆಲ್ಲಾ ಅಡೆತಡೆಗಳ ಮಧ್ಯೆಯೂ ಜನರು ಮಾತ್ರ ತಮ್ಮ ಸಾಂಪ್ರದಾಯಿಕ ಆಚರಣೆಯನ್ನು ಪಾಲಿಸಿಕೊಂಡು ಬಂದಿರುವುದು ಪ್ರಶಂಸನೀಯ.
ವರದಿ: ಐಮಂಡ ಗೋಪಾಲ್ ಸೋಮಯ್ಯ
ಇದನ್ನೂ ಓದಿ:
ಕೊಡಗು: ಆಟಿ ಸೊಪ್ಪಿನ ಪಾಯಸದ ರುಚಿ ಸವಿಯುವುದರ ಹಿಂದಿದೆ ಒಂದು ವಿಶೇಷ ನಂಬಿಕೆ!