ಮಡಿಕೇರಿ ಪ್ರವಾಸಕ್ಕೆ ಹೋಗುವ ಮುನ್ನ ಗಮನಿಸಿ: ಮುಂದಿನ 15 ದಿನ ರಾಜಾಸೀಟ್‌ಗೆ ಪ್ರವೇಶವಿಲ್ಲ

ಮಡಿಕೇರಿಯ ಪ್ರಸಿದ್ಧ ಪ್ರವಾಸಿ ತಾಣ ರಾಜಾಸೀಟ್ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಮುಂದಿನ 15 ದಿನಗಳ ಕಾಲ ಪ್ರವಾಸಿಗರ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ. ಹತ್ತು ವರ್ಷಗಳ ಬಳಿಕ ನಡೆಯುತ್ತಿರುವ ಈ ರಸ್ತೆ ಅಭಿವೃದ್ಧಿ ಕಾಮಗಾರಿಯಿಂದ ಸ್ಥಳೀಯ ವ್ಯಾಪಾರಿಗಳ ವಹಿವಾಟಿಗೆ ನಷ್ಟ ಉಂಟಾಗಿದ್ದು, ಇದೇ ವೇಳೆ ರಸ್ತೆಯಲ್ಲಿರುವ 11 ಅತ್ತಿ ಮರಗಳನ್ನು ಕಡಿಯುವ ನಿರ್ಧಾರಕ್ಕೆ ಪರಿಸರ ಪ್ರೇಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಮಡಿಕೇರಿ ಪ್ರವಾಸಕ್ಕೆ ಹೋಗುವ ಮುನ್ನ ಗಮನಿಸಿ: ಮುಂದಿನ 15 ದಿನ ರಾಜಾಸೀಟ್‌ಗೆ ಪ್ರವೇಶವಿಲ್ಲ
ಮುಂದಿನ 15 ದಿನ ರಾಜಾಸೀಟ್‌ಗೆ ಪ್ರವೇಶವಿಲ್ಲ
Edited By:

Updated on: Nov 18, 2026 | 8:43 AM

ಮುಖ್ಯಾಂಶಗಳು

  • ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ಹಿನ್ನೆಲೆ ರಾಜಾಸೀಟ್ ಪ್ರವೇಶಕ್ಕೆ 15 ದಿನ ನಿರ್ಬಂಧ.
  • ದೀರ್ಘಕಾಲದ ನಿರ್ಬಂಧದಿಂದ ಪ್ರವಾಸಿಗರಿಗೆ ನಿರಾಸೆ ಮತ್ತು ಸ್ಥಳೀಯ ವ್ಯಾಪಾರಿಗಳ ವ್ಯಾಪಾರಕ್ಕೆ ನಷ್ಟ.
  • ರಸ್ತೆ ಅಭಿವೃದ್ಧಿಗಾಗಿ 11 ಅತ್ತಿ ಮರಗಳ ತೆರವು ನಿರ್ಧಾರಕ್ಕೆ ಪರಿಸರ ಪ್ರೇಮಿಗಳ ವಿರೋಧ.

ಮಡಿಕೇರಿ, ನವೆಂಬರ್ 18: ಕೊಡಗು ಪ್ರವಾಸಕ್ಕೆ ಬರುವ ಪ್ರವಾಸಿಗರು ಮಡಿಕೇರಿಯ ರಾಜಾಸೀಟ್‌ಗೆ ಭೇಟಿ ನೀಡದೆ ವಾಪಸ್ ಆಗುವುದು ಅಪರೂಪ. ಇಲ್ಲಿನ ಸುಂದರ ಪ್ರಕೃತಿ, ಸಂಜೆ ಸೂರ್ಯಾಸ್ತದ ಮನಮೋಹಕ ದೃಶ್ಯ, ಬಣ್ಣಬಣ್ಣದ ಕಾರಂಜಿ ಹಾಗೂ ಮಕ್ಕಳ ಉದ್ಯಾನವನ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಆದರೆ ಮುಂದಿನ 15 ದಿನಗಳ ಕಾಲ ರಾಜಾಸೀಟ್‌ಗೆ ಭೇಟಿ ನೀಡಲು ಸಾಧ್ಯವಿಲ್ಲ. ಬರೋಬ್ಬರಿ 10 ವರ್ಷಗಳ ಬಳಿಕ ರಾಜಾಸೀಟ್ ರಸ್ತೆಯ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಪ್ರವಾಸಿಗರಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ. ಇದರಿಂದ ಮಡೇರಿಗೆ ಆಗಮಿಸುವ ಪ್ರವಾಸಿಗರಿಗೆ ನಿರಾಸೆಯಾಗಿದೆ.

10 ವರ್ಷಗಳ ಬಳಿಕ ರಾಜಾಸೀಟ್ ರಸ್ತೆ ಅಭಿವೃದ್ಧಿ!

ಮಡಿಕೇರಿ ನಗರದ ಪ್ರಮುಖ ರಸ್ತೆಗಳಲ್ಲಿ ರಾಜಾಸೀಟ್ ರಸ್ತೆಯೂ ಒಂದು. ನಗರದ ಜ. ತಿಮ್ಮಯ್ಯ ವೃತ್ತದಿಂದ ರಾಜಾಸೀಟ್, ಹೊಸ ಬಸ್ ನಿಲ್ದಾಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಆದರೆ ಕಳೆದ 10 ವರ್ಷಗಳಿಂದ ಈ ರಸ್ತೆಗೆ ಸಮರ್ಪಕ ಡಾಂಬರೀಕರಣ ನಡೆದಿರಲಿಲ್ಲ. ಆಗಾಗ್ಗೆ ತೇಪೆ ಹಾಕುವ ಕೆಲಸವಷ್ಟೇ ನಡೆಯುತ್ತಿತ್ತು. ಕಳೆದ ಒಂದು ವರ್ಷದಿಂದ ರಸ್ತೆ ಸಂಪೂರ್ಣ ಹದಗೆಟ್ಟು ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿತ್ತು. ರಸ್ತೆಯ ದುಸ್ಥಿತಿ ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಟ್ರೋಲ್ ಆಗಿತ್ತು.

Loading...

ಇದೀಗ ಜಿಲ್ಲಾಡಳಿತ ರಸ್ತೆ ಅಭಿವೃದ್ಧಿಗೆ ಮುಂದಾಗಿದೆ. ಜಿಲ್ಲಾಧಿಕಾರಿ ಕಚೇರಿಯ ಹೆಬ್ಬಾಗಿಲಿನಿಂದ ಕುಂದುರುಮೊಟ್ಟೆ ದೇವಾಲಯದವರೆಗಿನ ಸುಮಾರು ಒಂದು ಕಿಲೋಮೀಟರ್ ರಸ್ತೆಯನ್ನು ಕಾಂಕ್ರೀಟೀಕರಣ ಮಾಡಲಾಗುತ್ತಿದೆ. ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ.

ಪ್ರವಾಸಿಗರಿಗೆ ನಿರಾಸೆ, ವ್ಯಾಪಾರಿಗಳಿಗೂ ನಷ್ಟ!

ರಸ್ತೆ ಕಾಮಗಾರಿಯ ಹಿನ್ನೆಲೆಯಲ್ಲಿ ಈ ತಿಂಗಳ ಅಂತ್ಯದವರೆಗೂ ರಾಜಾಸೀಟ್ ಪ್ರವೇಶವನ್ನೂ ನಿರ್ಬಂಧಿಸಲಾಗಿದೆ. ಮಕ್ಕಳ ಉದ್ಯಾನವನ, ಬಣ್ಣದ ಕಾರಂಜಿ ಹಾಗೂ ಸೂರ್ಯಾಸ್ತ ವೀಕ್ಷಣೆಗಾಗಿ ಬರುವ ಪ್ರವಾಸಿಗರಿಗೆ ಇದರಿಂದ ನಿರಾಸೆಯಾಗಿದೆ. 15 ದಿನಗಳ ಕಾಲ ಪ್ರವಾಸಿ ತಾಣವನ್ನೇ ಬಂದ್ ಮಾಡಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗಿದೆ. ಕಾಂಕ್ರೀಟ್ ಕಾಮಗಾರಿಗೆ ಅಗತ್ಯವಿರುವಷ್ಟು ದಿನ ಮಾತ್ರ ನಿರ್ಬಂಧ ವಿಧಿಸಬಹುದಿತ್ತು ಎಂಬುದು ಕೆಲವರ ವಾದ. ರಾಜಾಸೀಟ್ ರಸ್ತೆಯಲ್ಲಿರುವ ಅಂಗಡಿ ಮುಂಗಟ್ಟುಗಳ ವ್ಯಾಪಾರಕ್ಕೂ ಹೊಡೆತ ಬಿದ್ದಿದೆ.

11 ಅತ್ತಿ ಮರಗಳ ತೆರವಿಗೂ ವಿರೋಧ

ಇನ್ನು ರಸ್ತೆ ಅಭಿವೃದ್ಧಿಯ ಜೊತೆಗೆ ರಸ್ತೆಯಲ್ಲಿರುವ 11 ಅತ್ತಿ ಮರಗಳನ್ನು ಕಡಿಯಲು ಮುಂದಾಗಿರುವುದು ಪರಿಸರ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಮರಗಳನ್ನು ಉಳಿಸಿಕೊಂಡೇ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಒಟ್ಟಿನಲ್ಲಿ ಪ್ರವಾಸಿಗರಿಗೆ ಅನುಕೂಲವಾಗಬೇಕಾದ ರಸ್ತೆ ಅಭಿವೃದ್ಧಿ ಕಾಮಗಾರಿ ಸದ್ಯ ರಾಜಾಸೀಟ್ ಪ್ರವೇಶ ನಿರ್ಬಂಧ, ವ್ಯಾಪಾರಿಗಳ ನಷ್ಟ ಹಾಗೂ ಮರಗಳ ತೆರವು ವಿವಾದಕ್ಕೆ ಕಾರಣವಾಗಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಸುಗಮ ರಸ್ತೆ ಸಿಗುವ ನಿರೀಕ್ಷೆಯಲ್ಲಿ ಸ್ಥಳೀಯರಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗೋಪಾಲ್​ ಸೋಮಯ್ಯ
Loading...
Unable to load recommendations.
Follow Us