ಕೊಡಗು: ನಾನು ಕಾಂಗ್ರೆಸ್ ಕಾರ್ಯಕರ್ತನೆ, ಕಾಂಗ್ರೆಸ್ನಲ್ಲಿ ಹಿಂದೂಗಳಿಲ್ವಾ? ವಿಪಕ್ಷ ನಾಯಕ ಸಿದ್ದರಾಮಯ್ಯ ಹಿಂದೂಗಳೂ ದನದ ಮಾಂಸ ತಿಂತಾರೆ ಅಂದಿದ್ದು ತಪ್ಪಲ್ವಾ ? ಹಿಂದೂ ವಿರೋಧಿ ಹೇಳಿಕೆಯಿಂದ ನೋವಾಗಿತ್ತು. ಹೀಗಾಗಿ ಮೊಟ್ಟೆ ಹೊಡೆದಿದ್ದೆ ಎಂದು ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಹೊಡೆದಿದ್ದ ಆರೋಪಿ ಸಂಪತ್ ಹೇಳಿದ್ದಾನೆ. ಆರೋಪಿ ಸಂಪತ್ನನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಕುಶಾಲನಗರ ಜೆಎಂಎಫ್ಸಿ ನ್ಯಾಯಾಲಯ ಆವರಣದಲ್ಲಿ ಬಂಧಿಸಿದ್ದಾರೆ. ಬಂಧನಕ್ಕೂ ಮೊದಲು ಸಂಪತ್ ಹೇಳಿಕೆ ನೀಡಿದ್ದಾನೆ.
ಸಂಪತ್‌ಗೆ ಜಾಮೀನು
ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಆರೋಪಿ ಸಂಪತ್‌ಗೆ ಕೊಡಗು ಜಿಲ್ಲೆಯ ಕುಶಾಲನಗರದ JMFC ನ್ಯಾಯಾಲಯದಿಂದ ಜಾಮೀನು ಸಿಕ್ಕಿದೆ. ಬಂಧನವಾಗಿ ಕೇವಲ 8 ಗಂಟೆಗಳಲ್ಲೇ ಜಾಮೀನು ದೊರೆತಿದೆ.
ನಡೆದ ಘಟನೆ
ಮುಸ್ಲಿಮರ ಏರಿಯಾದಲ್ಲಿ ಸಾವರ್ಕರ್ ಫ್ಲೆಕ್ಸ್ ಯಾಕೆ ಹಾಕಬೇಕು ಎಂದು ಪ್ರಶ್ನಿಸಿದ್ದ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದ ಬಿಜೆಪಿ ಕಾರ್ಯಕರ್ತರು, ಆಗಸ್ಟ 18 ರಂದು ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ತರಳುತ್ತಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದು ಕಪ್ಪು ಬಾವುಟ ಪ್ರದರ್ಶನ ಮಾಡಿದ್ದರು.
ಈ ಪ್ರಕರಣ ಸಂಬಂಧ 9 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ನಂತರ ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದಾರೆ. ಸಧ್ಯ ಮೊಟ್ಟೆ ಹೊಡೆದ ಆರೋಪಿ ಸಂಪತ್ ಬಂಧನಕ್ಕೂ ಮುನ್ನ ವಿಪಕ್ಷ ನಾಯಕ ಸಿದ್ದರಾಮಯ್ಯ ಹಿಂದೂಗಳೂ ದನದ ಮಾಂಸ ತಿಂತಾರೆ ಅಂದಿದ್ದು ತಪ್ಪಲ್ವಾ ? ಹಿಂದೂ ವಿರೋಧಿ ಹೇಳಿಕೆಯಿಂದ ನೋವಾಗಿತ್ತು. ಹೀಗಾಗಿ ಮೊಟ್ಟೆ ಹೊಡೆದಿದ್ದೆ ಎಂದು ಹೇಳಿದ್ದಾನೆ.
ಮೊಟ್ಟೆ ಹೊಡೆದಿದ್ದರಿಂದ ಕೆಂಡಾಮಂಡಲರಾಗಿದ್ದ ಸಿದ್ದರಾಮಯ್ಯನವರು ಕೊಡಗಿನಿಂದ ಚಿಕ್ಕಮಗಳೂರಿಗೆ ತೆರಳುವ ಮುನ್ನ ಪೊಲೀಸ್ರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿಕಾರಿದ್ದರು. ನಮಗೂ ಮೊಟ್ಟೆಎಸೆಯಲು ಬರಲ್ವಾ? ನಾವು ಹೋರಾಟ ಶುರು ಮಾಡಿದರೆ ಮುಖ್ಯಮಂತ್ರಿ ಎಲ್ಲೂ ಓಡಾಡೋಕೆ ಆಗಲ್ಲ ಎಂದು ಬಿಜೆಪಿ ಮುಖಂಡರಿಗೆ ಖಡಕ್ ಎಚ್ಚರಿಕೆ ನೀಡಿದ್ದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಕಾರ್ಯಕರ್ತರಿಗೆ ಮೊಟ್ಟೆ ಹೊಡೆಯಲು ಬರುವುದಿಲ್ಲವೇ ಎಂದಿದ್ದಾರೆ. ಮುಖ್ಯಮಂತ್ರಿ ಹಾಗೂ ಸಚಿವರು ಓಡಾಡಲು ಆಗುತ್ತದೆಯೇ ಎಂದು ಸವಾಲು ಹಾಕಿದ್ದಾರೆ. ಒಬ್ಬ ಮುಖ್ಯಮಂತ್ರಿಗಳಿಗೆ ಈ ರೀತಿ ನೇರವಾಗಿ ಹೇಳಿಕೆ ನೀಡುವುದು ಎಷ್ಟರ ಮಟ್ಟಿಗೆ ಸರಿ. ಈ ರೀತಿಯ ಪ್ರಚೋದನಕಾರಿ ಹೇಳಿಕೆ ನೀಡುವುದನ್ನು ಸಿದ್ದರಾಮಯ್ಯ ಬಿಡಬೇಕು ಎಂದು ದೂರು ನೀಡಿದ್ದರು.
ನಂತರ ಸಿದ್ಧರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿದ್ದರು. ಜೊತೆ ಕಾಂಗ್ರೆಸ್ನ ಹಲವು ನಾಯಕರು ಇದನ್ನು ವಿರೋಧಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಮತ್ತು ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿದ್ದಾರೆ.
ಕಾರಿಗೆ ಮೊಟ್ಟೆ ಎಸೆದಿದ್ದನ್ನು ವಿರೋಧಿಸಿ ಶಿವಮೊಗ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಸರ್ಕಾರವನ್ನು ವಜಾ ಮಾಡುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ಮೈಸೂರಿನಲ್ಲಿ, ಸಿದ್ದರಾಮಯ್ಯನವರ ನಮಗೂ ಮೊಟ್ಟೆ ಎಸೆಯಲು ಬರಲ್ವಾ? ನಾವು ಹೋರಾಟ ಶುರು ಮಾಡಿದರೆ ಮುಖ್ಯಮಂತ್ರಿ ಎಲ್ಲೂ ಓಡಾಡೋಕೆ ಆಗಲ್ಲ ಎಂಬ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಎಸ್ಪಿಗೆ ದೂರು ನೀಡಿದ್ದರು.
ನಿನ್ನೆ ಆಗಸ್ಟ್ 19 ರಂದು ಧಾರವಾಡದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದು, ಪ್ರತಿಭಟನೆ ವೇಳೆ ವೀರ್ ಸಾವರ್ಕರ್ ಭಾವಚಿತ್ರಕ್ಕೆ ಮೊಟ್ಟೆ ಒಡೆದು, ಕಾಲಿನಿಂದ ತುಳಿದು, ದಹಿಸಿದ್ದರು. ಜೊತೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭಾವಚಿತ್ರವನ್ನು ದಹಿಸಿದರು.
Published On - 2:33 pm, Sat, 20 August 22