Kodagu News: ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಗುಂಡಿಗೆ ಬಿದ್ದು ಕಾಡಾನೆ ಸಾವು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 14, 2023 | 11:30 AM

Wild Elephant: ಆನೆಯನ್ನು ಬಹುಕಾಲದಿಂದ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕುತ್ತಿದ್ದರು. ಅಟ್ಟೂರು ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಆನೆ ಕಾಣಿಸಿದಾಗ ಅದಕ್ಕೆ ಅರವಳಿಕೆ ಚುಚ್ಚುಮದ್ದು ನೀಡಲಾಯಿತು.

Kodagu News: ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಗುಂಡಿಗೆ ಬಿದ್ದು ಕಾಡಾನೆ ಸಾವು
ಸಾಂದರ್ಭಿಕ ಚಿತ್ರ
Follow us on

ಮಡಿಕೇರಿ: ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಅಟ್ಟೂರು-ನಲ್ಲೂರು ಅರಣ್ಯ ಪ್ರದೇಶದಲ್ಲಿ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಮಂಪರು ಮದ್ದು (ಅರವಳಿಕೆ ಇಂಜೆಕ್ಷನ್) ನಾಟಿದ್ದ ಸುಮಾರು 20 ವರ್ಷದ ಕಾಡಾನೆ 35 ಅಡಿ ಆಳದ ಗುಂಡಿಗೆ ಬಿದ್ದು ಸಾವನ್ನಪ್ಪಿದೆ. ಘಟನೆಯ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಕಾಡಾನೆ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಈ ಪ್ರದೇಶದಲ್ಲಿ ಜನರನ್ನು ಕಾಡುತ್ತಿದ್ದ ಕಾಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಆದರೆ ಮಂಪರು ಮದ್ದು ನಾಟಿದ ನಂತರ ಅಡ್ಡಾದಿಡ್ಡಿ ಓಡಲು ಆರಂಭಿಸಿದ ಆನೆಯು ಆಕಸ್ಮಿಕವಾಗಿ ಕಡಿದಾದ ಸಿಮೆಂಟ್ ಗುಂಡಿಗೆ ಬಿತ್ತು. ಘಟನೆಯಲ್ಲಿ ಆನೆಯ ಆಂತರಿಕ ಅಂಗಗಳ ವೈಫಲ್ಯವಾಗಿ ಅದು ಸ್ಥಳದಲ್ಲಿಯೇ ಸಾವನ್ನಪ್ಪಿತು ಎಂದು ಆನೆ ಕಾರ್ಯಪಡೆಯ ಡಿಸಿಎಫ್ ಪೂವಯ್ಯ ಪ್ರತಿಕ್ರಿಯಿಸಿದರು. ಆನೆಯ ಬಲಗಣ್ಣು ದೃಷ್ಟಿ ಸಾಮರ್ಥ್ಯ ಕಳೆದುಕೊಂಡಿತ್ತು. ಹೀಗಾಗಿ ಅದಕ್ಕೆ ಗುಂಡಿ ಇರುವುದು ಕಾಣಿಸಿರಲಿಕ್ಕಿಲ್ಲ ಎನಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಅಟ್ಟೂರು-ನಲ್ಲೂರು ಮತ್ತು ಮೊದೂರು ಸೇರಿದಂತೆ ಹಲವು ಹಳ್ಳಿಗಳಲ್ಲಿ ಇದೇ ಕಾಡಾನೆಯು ಮನುಷ್ಯರ ಮೇಲೆ ದಾಳಿ ನಡೆಸಿತ್ತು. ಹಲವೆಡೆ ಕಾಫಿ, ಬಾಳೆಹಣ್ಣು ಮತ್ತು ಇತರ ಬೆಳೆಗಳನ್ನು ಹಾಳುಗೆಡವಿತ್ತು. ಆನೆಯನ್ನು ಬಹುಕಾಲದಿಂದ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕುತ್ತಿದ್ದರು. ಅಟ್ಟೂರು ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಆನೆ ಕಾಣಿಸಿದಾಗ ಅದಕ್ಕೆ ಅರವಳಿಕೆ ಚುಚ್ಚುಮದ್ದು ನೀಡಲಾಯಿತು. ಇಂಜೆಕ್ಷನ್ ನಾಟಿದ ತಕ್ಷಣ 500 ಮೀಟರ್​ಗಳಷ್ಟು ದೂರಕ್ಕೆ ಅಡ್ಡಾದಿಡ್ಡಿ ಓಡಿದ ಆನೆಯು ಕಾಫಿ ಒಣಗಿಸಲೆಂದು ನಿರ್ಮಿಸಿದ್ದ ಸಿಮೆಂಟ್ ಕಣಕ್ಕೆ ಸುಮಾರು 35 ಅಡಿಗಳಷ್ಟು ಎತ್ತರದಿಂದ ಉರುಳಿತು.

ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿದ ಪಶುವೈದ್ಯರಾದ ಡಾ ಚಿಟ್ಟಿಯಪ್ಪ ಮತ್ತು ಡಾ ರಮೇಶ್ ಗ್ಲೂಕೋಸ್ ಮತ್ತು ಇತರ ಔಷಧಿಗಳನ್ನು ನೀಡಿದರು. ಆದರೂ ಆನೆಗಳು ಮೃತಪಟ್ಟವು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದರು.

(ಮತ್ತಷ್ಟು ಮಾಹಿತಿ ಶೀಘ್ರ ಅಪ್​ಡೇಟ್ ಆಗಲಿದೆ)