
ಮಡಿಕೇರಿ, ನವೆಂಬರ್ 07: ಭುಜ ನೋವು ಎಂದು ಆಸ್ಪತ್ರೆಗೆ ಹೋಗಿದ್ದ ಯುವಕ ಎರಡು ಇಂಜೆಕ್ಷನ್ ಮತ್ತು ಮಾತ್ರೆ ಪಡೆದ ಬಳಿಕ ತೀವ್ರ ಅಸ್ವಸ್ಥನಾಗಿ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷ್ಯದಿಂದಲೇ ತಮ್ಮ ಮಗನ ಸಾವಾಗಿದೆ ಎಂದು ಪೋಷಕರು ಆರೋಪಿಸಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ವಿನೋದ್ ಮೃತ ದುರ್ದೈವಿಯಾಗಿದ್ದು, ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಗ್ರಾಮದ ನಿವಾಸಿ ಶೇಖರ್ ಅವರ ಪುತ್ರ ವಿನೋದ್ ಭುಜದ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆ ಪಡೆಯಲೆಂದು ಸುಂಟಿಕೊಪ್ಪದಲ್ಲೇ ಇರುವ ಖಾಸಗಿ ಕ್ಲಿನಿಕ್ಗೆ ತೆರಳಿದ್ದಾರೆ. ಇವರನ್ನು ಪರೀಕ್ಷಿಸಿದ ವೈದ್ಯ ಯಶೋಧರ್ ಪೂಜಾರಿ ಮಾತ್ರೆ ಜೊತೆಗೆ ಇಂಜೆಕ್ಷನ್ ಕೂಡ ನೀಡಿದ್ದಾರೆ. ಆದರೂ ನೋವು ಕಡಿಮೆಯಾಗದ ಕಾರಣ ಮತ್ತೊಂದು ಇಂಜೆಕ್ಷನ್ ಕೊಟ್ಟು ಮನೆಗೆ ಕಳುಹಿಸಿದ್ದಾರೆ. ಕ್ಲಿನಿಕ್ನಿಂದ ಮನೆಗೆ ಆಗಮಿಸಿದ ವಿನೋದ್ ಕೆಲವೇ ಹೊತ್ತಿನಲ್ಲಿ ಅಸ್ವಸ್ಥರಾಗಿ ಬಿದ್ದಿದ್ದು, ತಕ್ಷಣವೇ ಸ್ಥಳೀಯರು ಆಟೋದಲ್ಲಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಅವರನ್ನು ಕರೆ ತಂದಿದ್ದಾರೆ. ಆದರೆ ಅಷ್ಟರಲ್ಲಾಗಲೇ ವಿನೋದ್ ಸಾವನ್ನಪ್ಪಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಹೆತ್ತ ಕರುಳನ್ನೇ ಕತ್ತರಿಸಿದ ಮಗ: ಹತ್ಯೆ ಮಾಡಿ ನಾಟಕವಾಡಿದ್ದ ನಿವೃತ್ತ ಸರ್ಕಾರಿ ನೌಕರ ಅರೆಸ್ಟ್
ಮೃತ ವಿನೋದ್ಗೆ ಯಾವುದೇ ಆರೋಗ್ಯ ಸಮಸ್ಯೆಗಳು ಇರಲಿಲ್ಲ.ಕಳೆದ ಕೆಲವು ದಿನಗಳಿಂದ ತಮ್ಮ ಮನೆಯನ್ನ ತಾವೇ ನವೀಕರಿಸಿದ್ದರು. ಮರಗಳನ್ನ ಇಳಿಸಿದ್ದರಿಂದ ಸ್ವಲ್ಪ ಭುಜ ನೋವಿದೆ ಅಂತ ಕ್ಲಿನಿಕ್ಗೆ ತೆರಳಿದ್ದೇ ಅವರ ಜೀವಕ್ಕೀಗ ಮುಳುವಾಗಿದೆ. ಭುಜ ನೋವಿಗೆ ಕಾರಣ ಏನು ಎಂದು ವೈದ್ಯರು ಸರಿಯಾಗಿ ಪರಿಶೀಲಿಸದೆ ಎರಡೆರಡು ಇಂಜೆಕ್ಷನ್ ನೀಡಿದ್ದೇ ವಿನೋದ್ ಸಾವಿಗೆ ಕಾರಣ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ ಖಾಸಗಿ ಕ್ಲಿನಿಕ್ ವೈದ್ಯರಾಗಿರೋ ಯಶೋಧರ್ ಪೂಜಾರಿ ವಿರುದ್ಧ ಈ ಹಿಂದೆಯೂ ಹಲವು ದೂರುಗಳಿವೆ. ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ವಿನೋದ್ ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಅದರ ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:52 am, Fri, 7 November 25