
ಕೋಲಾರ: ಕಳೆದೊಂದು ವರ್ಷದಿಂದ ಜಿಲ್ಲೆಯಲ್ಲಿ ಸಂಸದ ಹಾಗೂ ಆ ಒಂದು ಕ್ಷೇತ್ರದ ಶಾಸಕನೊಬ್ಬನ ನಡುವೆ ನಡೆಯುತ್ತಿದ್ದ ಗಣಿ ವಿವಾದ ಈಗ ಗಣಿ ಇಲಾಖೆಯ ಸಚಿವರ ಎದುರಲ್ಲೇ ಸ್ಪೋಟವಾಗಿದೆ. ಅಂತೆ ಕಂತೆ ಎಂದು ಮಾತನಾಡುತ್ತಿದ್ದ ಸಂಸದನ ಎದುರು ಶಾಸಕ ತೊಡೆ ತಟ್ಟಿ ಎಚ್ಚರಿಕೆ ನೀಡಿದ್ದು, ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು ಎಂದು ಸಂಸದ ಎಚ್ಚರಿಕೆ ನೀಡಿದ್ದಾರೆ.
ಲೋಕಸಭೆ ಚುನಾವಣೆ ನಂತರ ಕೋಲಾರ ಸಂಸದ ಎಸ್.ಮುನಿಸ್ವಾಮಿ ಹಾಗೂ ಮಾಲೂರು ಕಾಂಗ್ರೇಸ್ ಶಾಸಕ ಕೆ.ವೈ.ನಂಜೇಗೌಡ ನಡುವೆ ಗಣಿ ವಿಚಾರದಲ್ಲಿ ಶೀತಲ ಸಮರ ನಡೆಯುತ್ತಿತ್ತು. ವೇದಿಕೆಗಳಲ್ಲಿ ಸಂಸದ ಎಸ್.ಮುನಿಸ್ವಾಮಿ, ಮಾಲೂರು ಶಾಸಕ ನಂಜೇಗೌಡ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದು, ಅವರು ಗುಂಡು ತೋಪು ಸರ್ಕಾರಿ ಜಾಗದಲ್ಲಿ ಗಣಿಗಾರಿಕೆ ಮಾಡುತ್ತಿದ್ದಾರೆ ಎಲ್ಲಾ ದಾಖಲೆ ಸಮೇತ ಬಯಲಿಗೆಳೆಯುತ್ತೇನೆ ಎಂದು ಆಗಿಂದಾಗ್ಗೆ ಹೇಳುತ್ತಲೇ ಬಂದಿದ್ದರು. ಇದಕ್ಕೆ ಪೂರಕ ಎಂಬಂದೆ ಶಾಸಕ ನಂಜೇಗೌಡ ಕೂಡಾ ಇದಕ್ಕೆ ತಕ್ಕ ಉತ್ತರ ಕೊಡುತ್ತಲೇ ಇದ್ದರು. ನಿಮ್ಮಲ್ಲಿ ದಾಖಲೆಗಳಿದ್ದರೆ ಅದನ್ನು ಬಿಡುಗಡೆ ಮಾಡಿ ಅದಕ್ಕೆ ತಕ್ಕ ಉತ್ತರ ನೀಡುತ್ತೇನೆ ಎಂದು ಹೇಳುತ್ತಿದ್ದರು. ಇಬ್ಬರ ನಡುವೆ ಶೀತಲ ಸಮರ ನಡೆಯುತ್ತಲೇ ಇತ್ತು.
ಸಂಸದ ಹಾಗೂ ಶಾಸಕರ ನಡುವೆ ಇಂತಹದೊಂದು ಶೀತಲ ಸಮರಕ್ಕೆ ಕಾರಣವಾಗಿದ್ದು 2019 ಲೋಕಸಭಾ ಚುಣಾವಣೆ. ಲೋಕಸಭಾ ಚುನಾವಣೆ ವೇಳೆಯಲ್ಲಿ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರ ವಿರೋಧಿ ಅಲೆ ಜೋರಾಗಿತ್ತು. ಕಾಂಗ್ರೆಸ್ ಪಕ್ಷದ ಕೆಲವು ಶಾಸಕರು ಬಹಿರಂಗವಾಗಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಿದರೆ, ಮತ್ತೆ ಕೆಲವರು ಗುಪ್ತವಾಗಿ ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದರು.
ವಿಚಾರಣೆಯಲ್ಲಿ ನಿರತರಾದ ಗಣಿಗಾರಿಕೆ ಸಚಿವ ಸಿ.ಸಿ.ಪಾಟೀಲ್
ಆದರೆ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಬೆಂಬಲ ನೀಡಿರಲಿಲ್ಲ, ಬದಲಾಗಿ ನಂಜೇಗೌಡ ವಿರುದ್ಧ ಸೋತಿದ್ದ ಮಾಜಿ ಶಾಸಕ ಕೆ.ಎಸ್.ಮಂಜುನಾಥ ಗೌಡ ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದರು. ಪರಿಣಾಮ ಮುನಿಸ್ವಾಮಿ ಸಂಸದರಾಗಿ ಆಯ್ಕೆಯಾದ ಮೇಲೆ ಮಾಜಿ ಶಾಸಕ ಕೆ.ಎಸ್.ಮಂಜುನಾಥ ಗೌಡರು ಈ ಹಿಂದೆ ನಂಜೇಗೌಡರ ವಿರುದ್ಧ ಮಾಡುತ್ತಿದ್ದ ಗಣಿ ಆರೋಪಗಳನ್ನು ಸಂಸದ ಮುನಿಸ್ವಾಮಿ ಮೂಲಕ ಹೊರ ಬಿಡಲು ಆರಂಭಿಸಿದ್ದರು. ಇದರ ಪರಿಣಾಮ ಸಂಸದ ಮತ್ತು ಶಾಸಕರ ನಡುವೆ ಶೀತಲ ಸಮರ ನಡೆಯುತ್ತಲೇ ಇದೆ.
ಕೋಲಾರದಲ್ಲಿ ಜಲ್ಲಿ ಕ್ರಶರ್
ಶಾಸಕ ನಂಜೇಗೌಡ ವಿರುದ್ಧ ಇರುವ ಆರೋಪವಾದರೂ ಏನು?
ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಟೇಕಲ್ ಹೋಬಳಿಯ ಕೊಮ್ಮನಹಳ್ಳಿಯ ಬಳಿ ಶಾಸಕ ಕೆ.ವೈ.ನಂಜೇಗೌಡ ಒಡೆತನದ ಶ್ರೀನಂಜುಂಡೇಶ್ವರ ಸ್ಟೋನ್ ಕ್ರಶರ್ಸ್ ಇದೆ. ಇಲ್ಲಿನ ಹರದಕೊತ್ತೂರು ಸರ್ವೆ ನಂ-30/ಪಿ ನಲ್ಲಿ 2 ಎಕರೆ ಸರ್ಕಾರಿ ಭೂಮಿಯನ್ನು ನಕಲಿ ದಾಖಲೆಗಳನ್ನು ಸೃಷ್ಟಿಮಾಡಿಕೊಂಡು ಕಬಳಿಕೆ ಮಾಡಿದ್ದಾರೆ ಎನ್ನುವ ಆರೋಪ ಶಾಸಕ ನಂಜೇಗೌಡ ಮೇಲೆ ಕೇಳಿ ಬಂದಿತ್ತು. ಜೊತೆಗೆ ಇಲ್ಲಿ ಕೆಲವೊಂದು ಅರಣ್ಯ ಭೂಮಿಯನ್ನು ಶಾಸಕರು ಕ್ರಶರ್ಸ್ ಮಾಡಲು ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನುವ ಆರೋಪವಿತ್ತು. ಈ ವಿಚಾರವಾಗಿ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನು ಒತ್ತುವರಿ ವಿಚಾರ ವಿಧಾನಸಭೆಯಲ್ಲೂ ಚರ್ಚೆಯಾಗಿತ್ತು. ಆದರೆ ಇದೇ ಪ್ರಕರಣವನ್ನು ಸಾಬೀತು ಮಾಡುವಲ್ಲಿ ಸೂಕ್ತ ದಾಖಲೆಗಳಿಲ್ಲ ಎಂದು ಮಾಲೂರು ಪೊಲೀಸರು ಬಿ ರಿಪೋರ್ಟ್ ಹಾಕಿದ್ದಾರೆ.
ಕಲ್ಲಿನ ಗಣಿ
ಗಣಿ ಸಚಿವರ ಎದುರಲ್ಲೇ ಆಸ್ಟೋಟ
ಹೀಗೆ ಕಳೆದೊಂದು ವರ್ಷದಿಂದ ಸಂಸದ ಮುನಿಸ್ವಾಮಿ ಹಾಗೂ ಶಾಸಕ ಕೆ.ವೈ. ನಂಜೇಗೌಡ ವಿರುದ್ಧ ತೆರೆಮರೆಯಲ್ಲಿ ನಡೆಯುತ್ತಿದ್ದ ಆರೋಪ ಮತ್ತು ಪ್ರತ್ಯಾರೋಪಗಳ ಶೀತಲ ಸಮರ ಸ್ಪೋಟವಾಗಲು ವೇದಿಕೆ ಸಿದ್ದವಾಗಿದ್ದು, ಡಿಸೆಂಬರ್ 31 ರಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ಗಣಿ ಪ್ರದೇಶಗಳಿಗೆ ಭೇಟಿ ನೀಡಿದಾಗ. ಸಚಿವ ಸಿ.ಸಿ.ಪಾಟೀಲ್ ರಾಜ್ಯದಾದ್ಯಂತ ಗಣಿ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ.
ಈ ವೇಳೆ ಸಂಸದ ಮುನಿಸ್ವಾಮಿ ಸಚಿವರ ಎದುರು ಇಲ್ಲಿ ಸರ್ಕಾರಿ ಗುಂಡು ತೋಪು ಒತ್ತುವರಿ ಆಗಿದೆ ಎಂದರು. ಈ ವೇಳೆ ಅಲ್ಲೇ ಇದ್ದ ಶಾಸಕ ನಂಜೇಗೌಡ ಸಚಿವರ ಎದುರೇ ಸಚಿವರ ಭೇಟಿಯನ್ನು ವೈಯಕ್ತಿವಾಗಿ ತೆಗೆದುಕೊಂಡರೆ ಸರಿಹೋಗುವುದಿಲ್ಲ ಇದು ನೂರಕ್ಕೆ ನೂರರಷ್ಟು ಕಾನೂನಿನ ಪ್ರಕಾರ ಇದೆ ಎನ್ನುವ ಮೂಲಕ ಸಂಸದರ ವಿರುದ್ಧ ಹರಿಹಾಯ್ದರು. ಈ ವೇಳೆ ಸಚಿವ ಸಿ.ಸಿ. ಪಾಟೀಲ್ ಇಬ್ಬರನ್ನು ಸಮಾಧಾನ ಪಡಿಸಿದರು.
ಉಪ್ಪು ತಿಂದಿಲ್ಲ ಎಂದರೆ ಆರಾಮಾಗಿರಿ!
ಈ ವೇಳೆ ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಂಡ ನಂತರ ಮಾತನಾಡಿದ ಸಂಸದ ಮುನಿಸ್ವಾಮಿ ಶಾಸಕರು ಕಾನೂನಿನ ಪ್ರಕಾರ ಏನು ತಪ್ಪು ಮಾಡಿಲ್ಲ ಎನ್ನುವುದಾದರೆ ಭಯ ಪಡುವ ಅಗತ್ಯವಿಲ್ಲ. ಉಪ್ಪು ತಿಂದಿಲ್ಲ ಎಂದರೆ ಚಿಂತೆ ಮಾಡುವುದು ಏಕೆ ಎಂದರು. ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುತ್ತಾರೆ ಎಂದರು. ಆದರೆ ಇದಕ್ಕೆ ಶಾಸಕ ನಂಜೇಗೌಡ ಸಂಸದ ಮುನಿಸ್ವಾಮಿ ಕ್ರಶರ್ಗಳ ಮಾಲೀಕರನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಅದಕ್ಕೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಸಂಸದರಿಗೆ ತಿರುಗೇಟು ನೀಡಿದ್ದಾರೆ.
ಒಟ್ಟಾರೆ ಕೋಲಾರ ಸಂಸದ ಮತ್ತು ಮಾಲೂರು ಶಾಸಕರ ನಡುವಿನ ವೈಯಕ್ತಿಕ ಕೆಸರೆರಚಾಟ ಸದ್ಯ ಬೀದಿಗೆ ಬಿದ್ದಿದ್ದು, ಇನ್ನು ಮುಂದಿನ ದಿನಗಳಲ್ಲಿ ಯಾರದು ಸರಿ ಯಾರದು ತಪ್ಪು ಎನ್ನುವುದನ್ನು ಸಾಬೀತು ಪಡಿಸಿಕೊಳ್ಳಬೇಕಿದೆ.
ಜೋಶಿ-ಶೆಟ್ಟರ್ ಎದುರೇ ಕಾಂಗ್ರೆಸ್ ಶಾಸಕ-ಬಿಜೆಪಿ ನಾಯಕನ ಕಿತ್ತಾಟ, ಕಾರ್ಯಕರ್ತರ ರಂಪಾಟ!