
ಕೋಲಾರ, ನವೆಂಬರ್ 18: ಚಿಂತಾಮಣಿಯನ್ನು ಜಲಸುರಕ್ಷಿತ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ 4 ವರ್ಷಗಳ ಯೋಜನೆಯನ್ನು ಪ್ರಾರಂಭದ ಬಗ್ಗೆ ಗ್ರೋ ಫೌಂಡೇಶನ್, ವೆಲ್ ಲ್ಯಾಬ್ಸ್ ಮತ್ತು ಚಿಂತಾಮಣಿಯ ನಾಯಕರು ಘೋಷಿಸಿದ್ದಾರೆ. ಕೆರೆಗಳ ಪುನಶ್ಚೇತನ, ಹೆಚ್ಚುವರಿ ಕುಡಿಯುವ ನೀರಿನ ಮೂಲಗಳ ಅಭಿವೃದ್ಧಿ, ಅಂತರ್ಜಲ ಮರುಪೂರಣ ಮತ್ತು ಎಲ್ಲರಿಗೂ ಸಮಾನವಾಗಿ ನೀರು ಲಭ್ಯವಾಗುವಂತೆ ಮಾಡುವ ಮೂಲಕ ನಗರದಲ್ಲಿ ಜಲಸುರಕ್ಷತೆಯನ್ನು ಬಲಪಡಿಸಲು ಒಟ್ಟಾಗಿ ಶ್ರಮಿಸುವುದಾಗಿ ತಿಳಿಸಿದ್ದಾರೆ. ಚಿಂತಾಮಣಿ ನಗರಸಭೆ ಮತ್ತು ಸಂಬಂಧಪಟ್ಟ ಸರ್ಕಾರಿ ಪ್ರಾಧಿಕಾರಗಳ ನಿಕಟ ಸಹಯೋಗದೊಂದಿಗೆ ಈ ಯೋಜನೆ ಅನುಷ್ಠಾನಗೊಳ್ಳಲಿದೆ.
ಚಿಂತಾಮಣಿಯ ಜಲ ಭವಿಷ್ಯವನ್ನು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದ್ದು, ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಿಂತಾಮಣಿ ನಗರಸಭೆ ಆಯುಕ್ತರಾದ ಜಿ.ಎನ್. ಚಲಪತಿ, ಗ್ರೋ ಫೌಂಡೇಶನ್ ಮುಖ್ಯಸ್ಥರಾದ ಕಲ್ಪನಾ ಸ್ವಾಮಿನಾಥನ್ ಮತ್ತು ವೆಲ್ ಲ್ಯಾಬ್ಸ್ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ವೀಣಾ ಶ್ರೀನಿವಾಸನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬಯೋಮ್ ಏನ್ವಿರಾನ್ಮೆಂಟಲ್ ಟ್ರಸ್ಟ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಸೆಟಲ್ಮೆಂಟ್ಸ್ (IIHS), ಫೌಂಡೇಶನ್ ಫಾರ್ ಇನ್ಕ್ಲೂಸಿವ್ ಅಂಡ್ ಸಸ್ಟೈನಬಲ್ ಹ್ಯಾಬಿಟಾಟ್ಸ್ (FISH), ಟೈಡ್ ಇಂಡಿಯಾ (TIDE India), ಮತ್ತು ಬೋರ್ಡಾ ಸೌತ್ ಏಷ್ಯಾ (BORDA South Asia) ಮುಂತಾದ ಸಂಸ್ಥೆಗಳು ಕೂಡ ಭಾಗವಹಿಸಿದ್ದವು.
ಇದನ್ನೂ ಓದಿ: ಅಕ್ರಮ ಮರಳು ಮಾಫಿಯಾ ಜೊತೆ ಪೊಲೀಸರ ನಂಟು ಬಯಲು: ಪಿಎಸ್ಐ ವಿದ್ಯಾಶ್ರೀ, ಕಾನ್ಸ್ಟೇಬಲ್ ಪ್ರವೀಣ್ ಅಮಾನತು
ಚಿಂತಾಮಣಿಯು ತನ್ನ ನೀರಿನ ಅಗತ್ಯಗಳಿಗಾಗಿ ಅಂತರ್ಜಲ ಮತ್ತು ಕೊಳವೆಬಾವಿಗಳನ್ನೇ ವ್ಯಾಪಕವಾಗಿ ಅವಲಂಬಿಸಿರುವ ಒಂದು ಸಣ್ಣ ನಗರವಾಗಿದೆ. ನಗರಸಭೆಯ ಕೊಳವೆಬಾವಿಗಳು 1,000 ದಿಂದ 1,600 ಅಡಿಗಳಷ್ಟು ಆಳಕ್ಕೆ ಹೋಗುತ್ತಿದ್ದರೂ, ಬೆಳೆಯುತ್ತಿರುವ ಚಿಂತಾಮಣಿಯಂತಹ ನಗರದ ಗೃಹಬಳಕೆಯ ನೀರಿನ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಚಿಂತಾಮಣಿಯು ವಿಶೇಷವಾಗಿ ಬೇಸಿಗೆಯಲ್ಲಿ ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಬರಗಾಲದ ಸಮಯದಲ್ಲಿ ಶೇ. 70ರಷ್ಟು ಬಾವಿಗಳು ಬತ್ತಿಹೋಗುವ ಸಾಧ್ಯತೆಯಿದ್ದು, ಇದು ಚಿಂತಾಮಣಿಯ ನಿವಾಸಿಗಳನ್ನು ಹವಾಮಾನ ಬದಲಾವಣೆಯ ಅಪಾಯಕ್ಕೆ ತಳ್ಳುತ್ತದೆ. ಇದರ ಮಧ್ಯೆ, ನಗರದ ನಿರ್ವಹಣಾ ವೆಚ್ಚದ ಸುಮಾರು ಶೇ. 40ರಷ್ಟು ಭಾಗವನ್ನು ನೀರು ಸರಬರಾಜು ಮೂಲಸೌಕರ್ಯವನ್ನು ನಡೆಸಲು ಬಳಸಲಾಗುತ್ತಿದೆ, ಇದರಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬಿಲ್ಗಳೂ ಸೇರಿವೆ. ಅದೇ ಸಮಯದಲ್ಲಿ, ಚಿಂತಾಮಣಿ ನಗರವು ಕೆರೆಗಳ ಜಾಲದಿಂದ ಸುತ್ತುವರೆದಿದೆ. ಒಳಚರಂಡಿ ನೀರು ಮತ್ತು ಕಸ ಸೇರುತ್ತಿರುವುದರಿಂದ ಹೆಚ್ಚಿನ ಕೆರೆಗಳು ನೀರಿನ ಬಳಕೆಗೆ ಯೋಗ್ಯವಿಲ್ಲದಂತಾಗಿವೆ, ಆದರೆ ನಗರದ ನೀರು ಸರಬರಾಜಿಗೆ ಕೊಡುಗೆ ನೀಡುವಲ್ಲಿ ಇವುಗಳಿಗೆ ಗಮನಾರ್ಹ ಸಾಮರ್ಥ್ಯವಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:13 pm, Wed, 18 November 26