ಕರ್ನಾಟಕದ ನೀರಾವರಿ ವಿಚಾರಕ್ಕೆ ಮೋದಿಗೆ ದೇವೇಗೌಡರ ಪತ್ರ: ಹಲವು ಪ್ರಮುಖ ಅಂಶಗಳ ಉಲ್ಲೇಖ
ಕರ್ನಾಟಕದ ಜಲ ಮತ್ತು ನೀರಾವರಿ ಹಿತಾಸಕ್ತಿ, ಕಾವೇರಿ ನೀರಿನ ಕೊರತೆ, ಮೇಕೆದಾಟು ಯೋಜನೆಗೆ ತುರ್ತು ಅನುಮೋದನೆ ಹಾಗೂ ಗೋದಾವರಿ-ಕೃಷ್ಣಾ-ಕಾವೇರಿ ನದಿ ಜೋಡಣೆಯಲ್ಲಿ ರಾಜ್ಯದ ನೀರಿನ ಪಾಲು ಹೆಚ್ಚಿಸುವಂತೆ ಆಗ್ರಹಿಸಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು, ನವೆಂಬರ್ 16: ಕರ್ನಾಟಕದ ದೀರ್ಘಕಾಲೀನ ಜಲ ಮತ್ತು ನೀರಾವರಿ ಹಿತಾಸಕ್ತಿಗಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸುದೀರ್ಘ ಪತ್ರ ಬರೆದಿದ್ದಾರೆ. ಶೀಘ್ರದಲ್ಲೇ ಪ್ರಧಾನಮಂತ್ರಿಗಳನ್ನು ಭೇಟಿಯಾಗಿ, ಪತ್ರದಲ್ಲಿ ಪ್ರಸ್ತಾಪಿಸಿರುವ ಪ್ರಮುಖ ಅಂಶಗಳ ಬಗ್ಗೆ ಮನವರಿಕೆ ಮಾಡಿಕೊಡುವುದಾಗಿಯೂ ಅವರು ತಿಳಿಸಿದ್ದಾರೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಕುಡಿಯುವ ನೀರು ಮತ್ತು ನೀರಾವರಿಗಾಗಿ ಎದುರಾಗಿರುವ ನೀರಿನ ಕೊರತೆಯಿಂದ ಕರ್ನಾಟಕ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಧಾನಿ ಮೋದಿಗೆ ದೇವೇಗೌಡರ ಪತ್ರದಲ್ಲಿ ಏನಿದೆ?
I have written a long letter to Prime Minister @narendramodi avaru on the long term water and irrigation interests of Karnataka. I hope to meet the Prime Minister soon and convince him on the points I have raised. @PMOIndia https://t.co/bb7chOvOVz
— H D Devegowda (@H_D_Devegowda) November 16, 2026
ಸುಪ್ರೀಂ ಕೋರ್ಟ್ ಮಾರ್ಪಡಿಸಿರುವ ಕಾವೇರಿ ನ್ಯಾಯಾಧಿಕರಣದ ತೀರ್ಪನ್ನು ಸುಗಮವಾಗಿ ಜಾರಿಗೊಳಿಸುವ ಜವಾಬ್ದಾರಿಯನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಹೊಂದಿದೆ. ಪ್ರಸಕ್ತ ವರ್ಷ ಕರ್ನಾಟಕಕ್ಕೆ ನೀರಿನ ಅಭಾವದ ವರ್ಷವಾಗಿದೆ. ರಾಜ್ಯದಲ್ಲಿ ವಾಡಿಕೆ ಮಳೆಯ ಶೇ.60ರಷ್ಟು ಮಾತ್ರ ದಾಖಲಾಗಿದೆ. ಸುಮಾರು ಶೇ.35ರಿಂದ 40ರಷ್ಟು ಮಳೆ ಕೊರತೆಯಿಂದಾಗಿ ಕರ್ನಾಟಕದ ಜಲಾಶಯಗಳು ತಮ್ಮ ಒಟ್ಟು ಸಾಮರ್ಥ್ಯದ ಶೇ.50ರಿಂದ 55ರಷ್ಟು ಮಾತ್ರ ಭರ್ತಿಯಾಗಿವೆ. ಪರಿಣಾಮವಾಗಿ ನೀರಾವರಿಗೆ ಮಾತ್ರವಲ್ಲದೆ ಕುಡಿಯುವ ನೀರಿಗೂ ಭಾರಿ ಕೊರತೆ ಎದುರಾಗಿದೆ.
ಕರ್ನಾಟಕದ ಜಲಾಶಯಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ ನೀರು ಸಂಗ್ರಹವಾಗಿದ್ದರೂ, ತಮಿಳುನಾಡಿನ ಬೇಡಿಕೆಗೆ ಮಣಿದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಕರ್ನಾಟಕಕ್ಕೆ ಪದೇಪದೇ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ನಿರ್ದೇಶನ ನೀಡುತ್ತಿದೆ. ಮುಂಬರುವ ಬೇಸಿಗೆಯಲ್ಲಿ ಬೆಂಗಳೂರು ಮತ್ತು ನೆರೆಹೊರೆಯ ಪ್ರದೇಶಗಳ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಜಲಾಶಯಗಳಲ್ಲಿ ಲಭ್ಯವಿರುವ ಅಲ್ಪ ಪ್ರಮಾಣದ ನೀರನ್ನು ಕಾಯ್ದಿರಿಸಬೇಕೆಂದು ಕರ್ನಾಟಕವು ಪ್ರಾಧಿಕಾರದ ಮುಂದೆ ಮಾಡಿದ ಎಲ್ಲಾ ಮನವಿಗಳನ್ನು ನಿರ್ಲಕ್ಷಿಸಲಾಗುತ್ತಿದೆ. ನೀರನ್ನು ಬಿಡುಗಡೆ ಮಾಡುವಂತೆ CWMA ನೀಡಿರುವ ನಿರ್ದೇಶನಗಳನ್ನು ಸಂಪೂರ್ಣವಾಗಿ ಪಾಲಿಸಿದರೆ, ನಮ್ಮ ಎಲ್ಲಾ ಜಲಾಶಯಗಳು ಶೀಘ್ರದಲ್ಲೇ ಖಾಲಿಯಾಗಲಿವೆ. ಇಂತಹ ಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಕೊರತೆ ಆತಂಕಕಾರಿ ಮಟ್ಟಕ್ಕೆ ತಲುಪುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬುದನ್ನು ಪತ್ರದ ಆರಂಭದಲ್ಲಿಯೇ ದೇವೇಗೌಡರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ‘ಮೇಕೆದಾಟು ಯೋಜನೆ ವಿಚಾರದಲ್ಲಿ ಕಾಂಗ್ರೆಸಿಗರು ಮಾಡ್ತಿರೋದು ನಾಟಕ’: ವಿಪಕ್ಷ ನಾಯಕ ಆರ್. ಅಶೋಕ್ ಆರೋಪ
ಈ ಸಂದರ್ಭದಲ್ಲಿ ಗಮನಿಸಬೇಕಾದ ಅಂಶವೆಂದರೆ, ತಮಿಳುನಾಡಿಗೆ ನೀರಿನ ಅಗತ್ಯವಿರುವುದು ನೀರಾವರಿಗಾಗಿ. ಆದರೆ ಕರ್ನಾಟಕವು ತನ್ನ ಜಲಾಶಯಗಳಲ್ಲಿ ಲಭ್ಯವಿರುವ ಅಲ್ಪ ಪ್ರಮಾಣದ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಕಾಯ್ದಿರಿಸಲು ಬಯಸುತ್ತಿದೆ. ರಾಷ್ಟ್ರೀಯ ಜಲ ನೀತಿಯ ಪ್ರಕಾರ ಕುಡಿಯುವ ನೀರಿಗೆ ಅತ್ಯುನ್ನತ ಆದ್ಯತೆ ನೀಡಲಾಗಿದೆ. ಹೀಗಿರುವಾಗ CWMA ಕರ್ನಾಟಕದ ಅಹವಾಲುಗಳನ್ನು ಆಲಿಸಿ, ಕರ್ನಾಟಕದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಬೇಡಿಕೆಯನ್ನು ತಿರಸ್ಕರಿಸಬೇಕಿತ್ತು ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಮೇಕೆದಾಟು ಕುಡಿಯುವ ನೀರು ಪೂರೈಕೆ ಯೋಜನೆ
ಬೆಂಗಳೂರಿನ ವೇಗವಾಗಿ ಬೆಳೆಯುತ್ತಿರುವ ಜಾಗತಿಕ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ, ತಮಿಳುನಾಡು ಗಡಿಯ ಸಮೀಪ ಕಾವೇರಿ ನದಿಗೆ ಅಡ್ಡಲಾಗಿ ‘ಮೇಕೆದಾಟು ಕುಡಿಯುವ ನೀರು ಪೂರೈಕೆ ಯೋಜನೆ (ಸಮತೋಲನ ಜಲಾಶಯ)’ ನಿರ್ಮಿಸಲು ಕರ್ನಾಟಕ ಪ್ರಸ್ತಾಪಿಸಿದೆ. ಈ ಸಂಬಂಧ ಅಗತ್ಯವಾದ ವಿವರವಾದ ಯೋಜನಾ ವರದಿಯನ್ನು (DPR) 2019ರ ಜನವರಿಯಲ್ಲಿ ಕೇಂದ್ರ ಜಲ ಆಯೋಗಕ್ಕೆ (CWC) ಸಲ್ಲಿಸಲಾಗಿತ್ತು. 2026ರ ಜೂನ್ 29ರಂದು ಕೆಲವು ಆಕ್ಷೇಪಣೆಗಳು ಮತ್ತು ಸಲಹೆಗಳೊಂದಿಗೆ CWC ವರದಿಯನ್ನು ಹಿಂದಿರುಗಿಸಿತ್ತು. ಅಗತ್ಯ ಸ್ಪಷ್ಟೀಕರಣಗಳೊಂದಿಗೆ ಕರ್ನಾಟಕವು 2026ರ ಆಗಸ್ಟ್ 13ರಂದು ಪರಿಷ್ಕೃತ DPR ಅನ್ನು ಮರುಸಲ್ಲಿಸಿದೆ. ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಯ ತೀವ್ರತೆಯನ್ನು ಪರಿಗಣಿಸಿ, ಮೇಕೆದಾಟು ಯೋಜನೆಯ DPRಗೆ ಕೇಂದ್ರ ಜಲ ಆಯೋಗವು ಅತ್ಯಂತ ಆದ್ಯತೆಯ ಮೇರೆಗೆ ಅನುಮೋದನೆ ನೀಡಬೇಕು ಎಂದವರು ಆಗ್ರಹಿಸಿದ್ದಾರೆ
ಗೋದಾವರಿ-ಕೃಷ್ಣಾ-ಕಾವೇರಿ ನದಿ ಜೋಡಣೆ ಯೋಜನೆ
ಗೋದಾವರಿ-ಕೃಷ್ಣಾ-ಕಾವೇರಿ ನದಿ ಜೋಡಣೆ ಯೋಜನೆ ವಿಚಾರವಾಗಿಯೂ ಪ್ರಸ್ತಾಪಿಸಿರುವ ಅವರು, ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (NWDA) ಯೋಜಿಸುತ್ತಿರುವ ಮಹತ್ವದ ರಾಷ್ಟ್ರೀಯ ಯೋಜನೆ ಇದಾಗಿದೆ. ಈ ಯೋಜನೆಯ ಪ್ರಸ್ತಾಪದ ಪ್ರಕಾರ ಗೋದಾವರಿ ನದಿಯಿಂದ 147 ಟಿಎಂಸಿ ನೀರನ್ನು ಕಾವೇರಿ ನದಿಗೆ ಹರಿಸುವ ಉದ್ದೇಶವಿದೆ. NWDA ಈಗಾಗಲೇ ಯೋಜನೆಯ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸಿದೆ. ಕಾವೇರಿ ನದಿಗೆ ವರ್ಗಾಯಿಸುವ ನೀರಿನ ಹಂಚಿಕೆಯನ್ನೂ ಬಹುತೇಕ ಅಂತಿಮಗೊಳಿಸಲಾಗಿದೆ ಎಂದು ಮಾಜಿ ಪ್ರಧಾನಿಗಳು ತಿಳಿಸಿದ್ದಾರೆ. ತಾತ್ಕಾಲಿಕವಾಗಿ ನಿರ್ಧರಿಸಿರುವ ಹಂಚಿಕೆಯ ಪ್ರಕಾರ ಫಲಾನುಭವಿ ರಾಜ್ಯಗಳಿಗೆ ಸಿಗುವ ನೀರಿನ ಪ್ರಮಾಣದ ವಿವರಣೆಯನ್ನೂ ಉಲ್ಲೇಖಿಸಿದ್ದಾರೆ.
ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕಕ್ಕೆ ಅತ್ಯಂತ ಕಡಿಮೆ ಪ್ರಮಾಣದ ನೀರು ಹಂಚಿಕೆಯಾಗಲಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಾವರಿ ಮತ್ತು ಕುಡಿಯುವ ನೀರಿಗಾಗಿ ತೀವ್ರ ಕೊರತೆ ಎದುರಾಗಿರುವುದನ್ನು ಪರಿಗಣಿಸಿ, ಸಮಾನತೆ ಮತ್ತು ನೈಸರ್ಗಿಕ ನ್ಯಾಯದ ತತ್ತ್ವಗಳ ಆಧಾರದ ಮೇಲೆ ಗೋದಾವರಿ-ಕಾವೇರಿ ನದಿ ಜೋಡಣೆ ಯೋಜನೆಯಲ್ಲಿ ಕರ್ನಾಟಕಕ್ಕೆ ಹಂಚಿಕೆಯಾಗುವ ನೀರಿನ ಪ್ರಮಾಣವನ್ನು ಹೆಚ್ಚಿಸುವಂತೆ ಅವರು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರಕ್ಕೆ ದೇವೇಗೌಡರ ಪ್ರಮುಖ ಮನವಿಗಳು
2025ರ ನವೆಂಬರ್ 13ರಂದು ಸುಪ್ರೀಂ ಕೋರ್ಟ್ ನೀಡಿದ ಆದೇಶಕ್ಕೆ ಅನುಗುಣವಾಗಿ CWMAಯ ಅಧಿಕಾರ ಮತ್ತು ಕಾರ್ಯವ್ಯಾಪ್ತಿಯನ್ನು ಮಾರ್ಪಡಿಸಬೇಕು. ತಮಿಳುನಾಡಿನ ಮನವಿಯ ಮೇರೆಗೆ ಹೊಸ ನ್ಯಾಯಾಧಿಕರಣ ರಚಿಸಲು ನಿರ್ಧರಿಸಿದಾಗ, ಕಾವೇರಿ ನ್ಯಾಯಾಧಿಕರಣದ ತೀರ್ಪಿನ ಮರುಪರಿಶೀಲನೆಯ ವಿಚಾರವನ್ನೂ ಆ ನ್ಯಾಯಾಧಿಕರಣದ ಮುಂದಿಡಬೇಕು. ಮೇಕೆದಾಟು ಕುಡಿಯುವ ನೀರು ಪೂರೈಕೆ ಯೋಜನೆಯ ವಿಸ್ತೃತ ಯೋಜನಾ ವರದಿಗೆ (DPR) ತುರ್ತಾಗಿ ಅನುಮೋದನೆ ನೀಡಬೇಕು ಮತ್ತು ಫಲಾನುಭವಿ ರಾಜ್ಯಗಳ ಒಪ್ಪಿಗೆ ಪಡೆದು ಗೋದಾವರಿ-ಕೃಷ್ಣಾ-ಕಾವೇರಿ ನದಿ ಜೋಡಣೆ ಯೋಜನೆಯ DPR ಅನ್ನು ಆದಷ್ಟು ಶೀಘ್ರ ಅಂತಿಮಗೊಳಿಸಬೇಕು ಹಾಗೂ ರಾಜ್ಯಗಳ ನಡುವಿನ ನೀರಿನ ಹಂಚಿಕೆಯನ್ನು ಅಂತಿಮಗೊಳಿಸಬೇಕು ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ದೇವೇಗೌಡರು ಆಗ್ರಹಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:59 pm, Mon, 16 November 26
