‘ಮೇಕೆದಾಟು ಯೋಜನೆ ವಿಚಾರದಲ್ಲಿ ಕಾಂಗ್ರೆಸಿಗರು ಮಾಡ್ತಿರೋದು ನಾಟಕ’: ವಿಪಕ್ಷ ನಾಯಕ ಆರ್. ಅಶೋಕ್ ಆರೋಪ
ಮೇಕೆದಾಟು ಯೋಜನೆಗೆ ತಮಿಳುನಾಡು ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೇ ವಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸಿಗರು ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಇಲ್ಲಿನ ಕಾಂಗ್ರೆಸ್ ಅಧ್ಯಕ್ಷರು, ರಾಹುಲ್ ಗಾಂಧಿ ಮಾತಾಡಲಿ ಎಂದು ಆಗ್ರಹಿಸಿದ್ದಾರೆ. ಆದರೆ ಸಿಎಂ ಡಿಕೆ ಶಿವಕುಮಾರ್ ಮಾತ್ರ ಯೋಜನೆ ಬಗ್ಗೆ ನಾವು ಏನುಮಾಡಬೇಕು ಅದನ್ನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು, ನವೆಂಬರ್ 15: ಮೇಕೆದಾಟು ಜಲಾಶಯ ಯೋಜನೆಗೆ ಅಂತಿಮ ಅನುಮತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಡಿದ ಆಗ್ರಹಕ್ಕೆ ತಮಿಳುನಾಡು ಕಾಂಗ್ರೆಸ್ನ ವಿರೋಧವೀಗ ಕರ್ನಾಟಕದಲ್ಲಿ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಮೇಕೆದಾಟು ಯೋಜನೆಯನ್ನು ತಮಿಳುನಾಡು ಸರ್ಕಾರ ಮತ್ತು ಅಲ್ಲಿನ ಕಾಂಗ್ರೆಸ್ ವಿರೋಧಿಸಿದೆ. ಯೋಜನೆ ಆಗಬೇಕು ಅಂದರೆ ಬಿಜೆಪಿ ಸರ್ಕಾರವೇ ಬರಬೇಕು. ಕಾಂಗ್ರೆಸ್‌ನವರು ಸುಮ್ನೆ ಬೊಗಳೆ ಬಿಟ್ಕೊಂಡು ನಾಟಕ ಆಡುತ್ತಿದ್ದಾರೆ ಎಂದು ವಿಧಾನ ಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
‘ಇಲ್ಲಿನ ಕಾಂಗ್ರೆಸ್ ಅಧ್ಯಕ್ಷರು, ರಾಹುಲ್ ಗಾಂಧಿ ಮಾತಾಡಲಿ’
ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷರೇ ಮೇಕೆದಾಟು ಕಾನೂನು ಬಾಹಿರ ಅಂದಿದ್ದಾರೆ. ಆ ಸಂಬಂಧ ಇಲ್ಲಿನ ಕಾಂಗ್ರೆಸ್ ಅಧ್ಯಕ್ಷರು, ರಾಹುಲ್ ಗಾಂಧಿ ಮಾತಾಡಲಿ. ಅಂಡಮಾನ್ಗೆ ಹೋಗಿ ಮರ ಅಪ್ಪಿಕೊಳ್ಳುವ ರಾಹುಲ್ ಇಲ್ಲಿಯೂ ಒಮ್ಮೆ ಮೇಕೆದಾಟನ್ನು ತಬ್ಬಿಕೊಳ್ಳಲಿ. ಕಾಂಗ್ರೆಸಿಗರು ಮೇಕೆದಾಟು ವಿಚಾರದಲ್ಲಿ ರಾಜಕೀಯ ನಡೆಸುತ್ತಿದ್ದು, ಮೋಸ ಮಾಡುತ್ತಿದ್ದಾರೆ. ಕಾಂಗ್ರೆಸ್ ರಾಜ್ಯದ ಜನರ ಬೆನ್ನಿಗೆ ಚೂರಿ ಹಾಕಿದೆ. ಯೋಜನೆ ಬಗ್ಗೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಸರಿಯಾಗಿ ಅಪ್ರೋಚ್ ಮಾಡಬೇಕು. ಅರಣ್ಯ ನಾಶ ಬಗ್ಗೆ ಪರಿಸರವಾದಿಗಳ ಕೂಗಿರುವ ಕಾರಣ ಕೇಂದ್ರ ಸರ್ಕಾರ ಎಚ್ಚರಿಕೆ ನಡೆ ಇಡುತ್ತಿದೆ. ಸರಿಯಾದ ಮಾಹಿತಿ, ದಾಖಲೆಗಳನ್ನು ರಾಜ್ಯ ಸರ್ಕಾರ ಕೇಂದ್ರದ ಮನವೊಲಿಸಲಿ ಎಂದು ಅಶೋಕ್ ಹೇಳಿದ್ದಾರೆ.
ಇದನ್ನೂ ಓದಿ: ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ VS ಕಾಂಗ್ರೆಸ್! ಡಿಕೆ ಶಿವಕುಮಾರ್ ಆಗ್ರಹಕ್ಕೆ ತಮಿಳುನಾಡು ಕಾಂಗ್ರೆಸ್ ತೀವ್ರ ವಿರೋಧ
‘ನಾವು ಏನುಮಾಡಬೇಕು ಅದನ್ನ ಮಾಡುತ್ತೇವೆ’
ಮತ್ತೊಂದೆಡೆ ಮೇಕೆದಾಟು ಯೋಜನೆಗೆ ತಮಿಳುನಾಡು ಕಾಂಗ್ರೆಸ್ ವಿರೋಧ ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಸಿಎಂ ಡಿಕೆ ಶಿವಕುಮಾರ್, ಮೇಕೆದಾಟು ವಿಚಾರವನ್ನ ಈಗಾಗಲೇ ಕೇಂದ್ರದ ಮುಂದೆ ಪ್ರಸ್ತಾಪಿಸಲಾಗಿದ್ದು, ಈಗ ಪ್ರಧಾನಮಂತ್ರಿಗಳ ಗಮನಕ್ಕೂ ತಂದಿದ್ದೇನೆ. ಈ ದೇಶದ ಕಾನೂನನ್ನು ನಾವೆಲ್ಲರೂ ಗೌರವಿಸಬೇಕು. ನ್ಯಾಯಾಲಯದ ತೀರ್ಪನ್ನು ಎಲ್ಲರೂ ಗಮನಿಸುತ್ತಿದ್ದಾರೆ. ರಾಜಕೀಯವಾಗಿ ಈ ಯೋಜನೆಯನ್ನು ಅವರು ವಿರೋಧಿಸಬಹುದು. ಅವರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ. ತಮಿಳುನಾಡಿನ ಚೆನ್ನೈನಲ್ಲಿ ಅವರ ಬಳಿ ದೊಡ್ಡ ಕಾನೂನು ತಂಡವಿದ್ದು, ಅವರು ಕೂಡ ಕಾನೂನು ವಿಚಾರವನ್ನು ಅರ್ಥಮಾಡಿಕೊಳ್ಳಲಿ. ಆದರೂ ವಿರೋಧಿಸಿದರೆ ಅವರ ಧ್ವನಿ ಹತ್ತಿಕ್ಕುವ ಕೆಲಸ ಮಾಡಲ್ಲ. ಆದರೆ ಯೋಜನೆ ಬಗ್ಗೆ ನಾವು ಏನುಮಾಡಬೇಕು ಅದನ್ನ ಮಾಡುತ್ತೇವೆ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:30 pm, Sun, 15 November 26




