AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ VS ಕಾಂಗ್ರೆಸ್! ಡಿಕೆ ಶಿವಕುಮಾರ್ ಆಗ್ರಹಕ್ಕೆ ತಮಿಳುನಾಡು ಕಾಂಗ್ರೆಸ್ ತೀವ್ರ ವಿರೋಧ

ಮೈಸೂರಿನಲ್ಲಿ ಪ್ರಧಾನಿ ಮೋದಿ ಸಮ್ಮುಖದಲ್ಲೇ ಮೇಕೆದಾಟು ಯೋಜನೆಗೆ ಕೇಂದ್ರದ ಅಂತಿಮ ಅನುಮತಿ ನೀಡುವಂತೆ ಸಿಎಂ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಕ್ಕೆ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಮಣಿಕಂ ಟ್ಯಾಗೋರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಪರಿಣಾಮವಾಗಿ ಇದೀಗ ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ VS ಕಾಂಗ್ರೆಸ್ ಚರ್ಚೆ ಮುನ್ನೆಲೆಗೆ ಬಂದಿದೆ.

ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ VS ಕಾಂಗ್ರೆಸ್! ಡಿಕೆ ಶಿವಕುಮಾರ್ ಆಗ್ರಹಕ್ಕೆ ತಮಿಳುನಾಡು ಕಾಂಗ್ರೆಸ್ ತೀವ್ರ ವಿರೋಧ
ಮಣಿಕಂ ಟ್ಯಾಗೋರ್ ಹಾಗೂ ಡಿಕೆ ಶಿವಕುಮಾರ್
ಗಣಪತಿ ಶರ್ಮಾ
|

Updated on: Nov 14, 2026 | 11:18 AM

Share

ಮುಖ್ಯಾಂಶಗಳು

  • ಕಾಂಗ್ರೆಸ್ VS ಕಾಂಗ್ರೆಸ್​ ಚರ್ಚೆಗೆ ಕಾರಣವಾದ ಡಿಕೆಶಿ ಹೇಳಿಕೆ
  • ಮೇಕೆದಾಟು ಕುರಿತ ಹೇಳಿಕೆಗೆ ತಮಿಳುನಾಡು ಕಾಂಗ್ರೆಸ್ ಕೆಂಡ
  • ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಬಿಡಲ್ಲವೆಂದು ತಿರುಗೇಟು

ಚೆನ್ನೈ, ನವೆಂಬರ್ 14: ಮೇಕೆದಾಟು ಜಲಾಶಯ ಯೋಜನೆಗೆ ಕೇಂದ್ರ ಸರ್ಕಾರ ಅಂತಿಮ ಅನುಮತಿ ನೀಡಬೇಕು ಎಂದು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲೇ ಮಾಡಿದ ಆಗ್ರಹಕ್ಕೆ ಇದೀಗ ತಮಿಳುನಾಡು ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಮೇಕೆದಾಟು ವಿಚಾರದಲ್ಲಿ ಒಂದೆಡೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಯೋಜನೆಗೆ ಅನುಮತಿ ಕೋರುತ್ತಿದ್ದರೆ, ಮತ್ತೊಂದೆಡೆ ತಮಿಳುನಾಡು ಕಾಂಗ್ರೆಸ್ ಯೋಜನೆಯನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರಿಂದ ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ VS ಕಾಂಗ್ರೆಸ್ ರಾಜಕೀಯ ಚರ್ಚೆ ಮುನ್ನೆಲೆಗೆ ಬಂದಿದೆ.

ನವೆಂಬರ್ 13ರಂದು ಮೈಸೂರಿನಲ್ಲಿ ಪ್ರಧಾನಿ ಮೋದಿ ಕಾಸ್ಮೋಸ್ (CoSMOS) ತಾರಾಲಯ ಉದ್ಘಾಟಿಸಿದ್ದರು. ಆ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದ ಸಹಕಾರ ಅಗತ್ಯ ಎಂದು ಮನವಿ ಮಾಡಿದ್ದರು. ಮೇಕೆದಾಟು ಕರ್ನಾಟಕದಲ್ಲೇ ನಿರ್ಮಾಣವಾಗಬೇಕು, ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂಬ ಅರ್ಥದಲ್ಲಿ ಮಾತನಾಡಿದ ಅವರು, ಯೋಜನೆಗೆ ಬಾಕಿ ಇರುವ ಅಂತಿಮ ಕಾನೂನು ಹಾಗೂ ಶಾಸನಬದ್ಧ ಅನುಮತಿಗಳನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಪ್ರಧಾನಿಗೆ ಮನವಿ ಮಾಡಿದ್ದರು. ಇದು ಕುಡಿಯುವ ನೀರಿಗಾಗಿ ಅಗತ್ಯವಿರುವ ಜಲಾಶಯ ಆಗಿದ್ದು, ಇದರಿಂದ ತಮಿಳುನಾಡಿಗೂ ಪ್ರಯೋಜನವಾಗಲಿದೆ ಎಂಬ ವಾದವನ್ನೂ ಅವರು ಮುಂದಿಟ್ಟಿದ್ದರು.

ಆದರೆ, ಡಿ.ಕೆ. ಶಿವಕುಮಾರ್ ಅವರ ಈ ಹೇಳಿಕೆಗೆ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಮಣಿಕಂ ಟ್ಯಾಗೋರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೇಕೆದಾಟು ಅಣೆಕಟ್ಟು ನಿರ್ಮಾಣವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಸಮ್ಮುಖದಲ್ಲಿ ಕರ್ನಾಟಕ ಮುಖ್ಯಮಂತ್ರಿ ಹೇಳಿರುವುದು ಖಂಡನೀಯ ಎಂದು ಅವರು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಡಿಕೆ ಶಿವಕುಮಾರ್ ವಿರುದ್ಧ ತಮಿಳುನಾಡು ಕಾಂಗ್ರೆಸ್ ಕಿಡಿ

ಮೇಕೆದಾಟು ಯೋಜನೆ ಕುರಿತು ಕರ್ನಾಟಕ ಮುಖ್ಯಮಂತ್ರಿ ನಿರಂತರವಾಗಿ ಪಟ್ಟು ಹಿಡಿದಿರುವುದು ಸುಪ್ರೀಂ ಕೋರ್ಟ್ ತೀರ್ಪು ಹಾಗೂ ಕಾವೇರಿ ನದಿ ನೀರು ವಿವಾದ ನ್ಯಾಯಮಂಡಳಿಯ ಅಂತಿಮ ಆದೇಶಕ್ಕೆ ವಿರುದ್ಧವಾಗಿದೆ ಎಂದು ತಮಿಳುನಾಡು ಕಾಂಗ್ರೆಸ್ ಆರೋಪಿಸಿದೆ. ಕಾವೇರಿ ನದಿ ನೀರು ಹಂಚಿಕೆಯಲ್ಲಿ ತಮಿಳುನಾಡು ಕೆಳಹರಿವಿನ ರಾಜ್ಯವಾಗಿರುವುದರಿಂದ, ಅದರ ಹಕ್ಕುಗಳಿಗೆ ಧಕ್ಕೆಯಾಗುವ ಯಾವುದೇ ಯೋಜನೆಯನ್ನು ಕರ್ನಾಟಕ ಏಕಪಕ್ಷೀಯವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಟ್ಯಾಗೋರ್ ಹೇಳಿದ್ದಾರೆ.

ಕೆಳಹರಿವಿನ ರಾಜ್ಯಗಳ ಸಂಪೂರ್ಣ ಒಪ್ಪಿಗೆಯಿಲ್ಲದೆ ಮೇಕೆದಾಟು ಅಣೆಕಟ್ಟಿಗೆ ಕೇಂದ್ರ ಸರ್ಕಾರ ಯಾವುದೇ ಅನುಮತಿ ನೀಡಬಾರದು ಎಂದು ಅವರು ಆಗ್ರಹಿಸಿದ್ದಾರೆ. ತಮಿಳುನಾಡಿನ ಒಪ್ಪಿಗೆಯಿಲ್ಲದೆ ಯೋಜನೆಗೆ ಅನುಮೋದನೆ ನೀಡುವುದು ಕಾನೂನುಬಾಹಿರವಾಗುವುದರ ಜತೆಗೆ ಡೆಲ್ಟಾ ಜಿಲ್ಲೆಗಳ ರೈತರ ಜೀವನದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ್ದಾರೆ.

ಮಣಿಕಂ ಟ್ಯಾಗೋರ್ ಎಕ್ಸ್ ಸಂದೇಶ

‘ಮೇಕೆದಾಟಿನಲ್ಲಿ ಕರ್ನಾಟಕ ಒಂದು ಇಟ್ಟಿಗೆಯನ್ನೂ ಇಡಲು ಅವಕಾಶ ನೀಡದಿರುವುದು ಕೇಂದ್ರದ ಕರ್ತವ್ಯ’ ಎಂಬ ಅರ್ಥದಲ್ಲಿ ಟ್ಯಾಗೋರ್ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದು, ತಮಿಳುನಾಡು ಕಾಂಗ್ರೆಸ್ ಈ ಯೋಜನೆಯನ್ನು ಎಂದಿಗೂ ಒಪ್ಪುವುದಿಲ್ಲ ಎಂದಿದ್ದಾರೆ. ರಾಜ್ಯದ ಹಕ್ಕುಗಳ ರಕ್ಷಣೆಗಾಗಿ ಯಾವ ಹಂತದ ಹೋರಾಟಕ್ಕೂ ಸಿದ್ಧ ಎಂದು ಅವರು ಘೋಷಿಸಿದ್ದಾರೆ.

ಡಿಕೆಶಿ ಹೇಳಿಕೆಗೆ ಕಾಂಗ್ರೆಸ್‌ನೊಳಗೇ ಭಿನ್ನ ಧ್ವನಿ

ಮೇಕೆದಾಟು ಯೋಜನೆ ಕರ್ನಾಟಕದಲ್ಲಿ ಹಲವು ವರ್ಷಗಳಿಂದ ರಾಜಕೀಯ ಮತ್ತು ನೀರಿನ ಹಕ್ಕಿನ ಪ್ರಮುಖ ವಿಷಯವಾಗಿದೆ. ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೇಂದ್ರದ ಅನುಮತಿ ಕೋರಿ ಪ್ರಧಾನಿ ಮೋದಿ ಅವರ ಸಮ್ಮುಖದಲ್ಲೇ ಸ್ಪಷ್ಟವಾಗಿ ಒತ್ತಾಯಿಸಿದ್ದು, ಅದಕ್ಕೆ ತಮಿಳುನಾಡಿನ ಕಾಂಗ್ರೆಸ್ ನಾಯಕತ್ವವೇ ಬಹಿರಂಗ ವಿರೋಧ ವ್ಯಕ್ತಪಡಿಸಿರುವುದು ಗಮನಾರ್ಹವಾಗಿದೆ. ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಮೇಕೆದಾಟು ಕುರಿತು ಸಂಪೂರ್ಣ ವಿಭಿನ್ನ ನಿಲುವುಗಳನ್ನು ತೆಗೆದುಕೊಂಡಿರುವುದರಿಂದ, ಈ ವಿಷಯಕ್ಕೆ ‘ಕಾಂಗ್ರೆಸ್ VS ಕಾಂಗ್ರೆಸ್’ ಸ್ವರೂಪದ ಹೊಸ ರಾಜಕೀಯ ಆಯಾಮ ಸಿಕ್ಕಿದೆ.

ಸಿಎಂ ವಿಜಯ್​ಗೆ ಸ್ಟಾಲಿನ್ ಪತ್ರ: ಕ್ರಮಕ್ಕೆ ಆಗ್ರಹ

ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಕೂಡ ಕಾವೇರಿ ವಿಚಾರದಲ್ಲಿ ತಮಿಳುನಾಡು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಮಿಳುನಾಡು ಮುಖ್ಯಮಂತ್ರಿಗೆ ಪತ್ರ ಬರೆದಿರುವುದಾಗಿ ಎಕ್ಸ್‌ನಲ್ಲಿ ತಿಳಿಸಿದ್ದಾರೆ. ಕಾವೇರಿ ವಿಷಯ ತಮಿಳುನಾಡಿಗೆ ಜೀವ-ಮರಣದ ಪ್ರಶ್ನೆಯಾಗಿದ್ದು, ಈ ವಿಚಾರದಲ್ಲಿ ಸರ್ಕಾರ ಇನ್ನಷ್ಟು ಮೌನವಾಗಿರದೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮೇಕೆದಾಟು ಯೋಜನೆಗೆ ನಿಮ್ಮ ಸಹಾಯ ಅಗತ್ಯ, ಇದರಿಂದ ತಮಿಳುನಾಡಿಗೂ ಅನುಕೂಲವಾಗಲಿದೆ: ಪ್ರಧಾನಿ ಮೋದಿಗೆ ಮನವಿ ಮಾಡಿದ ಸಿಎಂ ಡಿಕೆಶಿ

ಒಟ್ಟಾರೆ, ಮೈಸೂರು ವೇದಿಕೆಯಲ್ಲಿ ಡಿ.ಕೆ. ಶಿವಕುಮಾರ್ ಕೇಂದ್ರ ಸರ್ಕಾರದ ಅನುಮತಿಗಾಗಿ ಮಾಡಿದ ಮನವಿ, ಕರ್ನಾಟಕದ ಮೇಕೆದಾಟು ನಿಲುವು ಮತ್ತು ಅದಕ್ಕೆ ತಮಿಳುನಾಡು ಕಾಂಗ್ರೆಸ್‌ನ ತೀವ್ರ ವಿರೋಧದೊಂದಿಗೆ ಕಾವೇರಿ ನೀರಿನ ವಿವಾದಕ್ಕೆ ಮತ್ತೆ ರಾಜಕೀಯ ಕಾವು ಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More