‘ಮೈಸೂರಿಗೆ ಧನ್ಯವಾದ’ ಎಂದ ಪ್ರಧಾನಿ ಮೋದಿ: ಭವ್ಯ ಸ್ವಾಗತದ ವಿಡಿಯೋ ಹಂಚಿಕೊಂಡ ಪಿಎಂ
ಮೈಸೂರು ಭೇಟಿಯ ವೇಳೆ ಜನರಿಂದ ದೊರೆತ ಆತ್ಮೀಯ ಸ್ವಾಗತಕ್ಕೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ತಿಳಿಸಿದ್ದಾರೆ. ಕಾಸ್ಮೋಸ್ ತಾರಾಲಯ ಉದ್ಘಾಟನೆ ಸೇರಿದಂತೆ ಮೈಸೂರು ಪ್ರವಾಸದ ವಿವಿಧ ಕ್ಷಣಗಳನ್ನು ಒಟ್ಟುಗೂಡಿಸಿದ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿರುವ ಮೋದಿ, ಸಾಂಸ್ಕೃತಿಕ ನಗರಿಯಲ್ಲಿ ಸಿಕ್ಕ ಭವ್ಯ ಸ್ವಾಗತಕ್ಕೆ ಧನ್ಯವಾದ ಹೇಳಿದ್ದಾರೆ.

ಮೈಸೂರು, ನವೆಂಬರ್ 14: ಮೈಸೂರು ಭೇಟಿಯ ಸಂದರ್ಭದಲ್ಲಿನ ಆತ್ಮೀಯ ಸ್ವಾಗತಕ್ಕೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ತಿಳಿಸಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮೈಸೂರು ಪ್ರವಾಸದ ವಿವಿಧ ವಿಡಿಯೋ ತುಣುಕುಗಳನ್ನು ಒಟ್ಟುಗೂಡಿಸಿ ವಿಶೇಷ ವಿಡಿಯೋ ಹಂಚಿಕೊಂಡಿರುವ ಪ್ರಧಾನಿ, ನಗರದ ಜನರು ಅಪಾರ ಉತ್ಸಾಹ ಮತ್ತು ಪ್ರೀತಿಯಿಂದ ಸ್ವಾಗತಿಸಿದರು ಎಂದು ಬಣ್ಣಿಸಿದ್ದಾರೆ. ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನರು ಪ್ರಧಾನಿ ಮೋದಿಗೆ ಆತ್ಮೀಯ ಸ್ವಾಗತ ಕೋರಿದ ದೃಶ್ಯಗಳು ವಿಡಿಯೋದಲ್ಲಿ ಗಮನ ಸೆಳೆಯುತ್ತಿವೆ.
ನವೆಂಬರ್ 13ರಂದು ಕರ್ನಾಟಕ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ, ಬೆಂಗಳೂರಿನ ಕಾರ್ಯಕ್ರಮಗಳ ಬಳಿಕ ಮೈಸೂರಿಗೆ ಭೇಟಿ ನೀಡಿದ್ದರು. ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಿರ್ಮಾಣವಾಗಿರುವ ವಿಶ್ವದ ಮೊದಲ ಟಿಲ್ಟೆಡ್ ಎಲ್‌ಇಡಿ ಡೋಮ್ ತಾರಾಲಯ ‘ಕಾಸ್ಮೋಸ್’ ಅನ್ನು ಅವರು ಉದ್ಘಾಟಿಸಿದ್ದರು. ಸುಮಾರು 115 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಅತ್ಯಾಧುನಿಕ ತಾರಾಲಯ ಮೈಸೂರಿನ ವೈಜ್ಞಾನಿಕ ಪಯಣಕ್ಕೆ ಹೊಸ ಅಧ್ಯಾಯ ಸೇರಿಸಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದರು.
ಮೋದಿ ಹಂಚಿಕೊಂಡಿರುವ ವಿಡಿಯೋ
ಈ ಭೇಟಿಯ ವೇಳೆ ಮೈಸೂರಿನ ಜನರು ನೀಡಿದ ಅದ್ಧೂರಿ ಸ್ವಾಗತದ ಕ್ಷಣಗಳು, ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಜನರ ಸಂಭ್ರಮ ಸೇರಿದಂತೆ ವಿವಿಧ ದೃಶ್ಯಗಳನ್ನು ಪ್ರಧಾನಿ ತಮ್ಮ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಮೈಸೂರಿನ ಪ್ರೀತಿ, ಆತ್ಮೀಯತೆ ಮತ್ತು ಸ್ವಾಗತಕ್ಕೆ ಧನ್ಯವಾದ ಹೇಳುವ ಮೂಲಕ ಪ್ರಧಾನಿ ಮೋದಿ ತಮ್ಮ ವಿಶೇಷ ಸಂದೇಶ ನೀಡಿದ್ದಾರೆ.
ಇದನ್ನೂ ಓದಿ: ಕಾಸ್ಮೋಸ್ ತಾರಾಲಯದ ಮೂಲಕ ಮೈಸೂರು ಕೂಡ ಭಾರತದ ವೈಜ್ಞಾನಿಕ ಪಯಣಕ್ಕೆ ಹೊಸ ಅಧ್ಯಾಯ ಸೇರಿಸಿದೆ: ನರೇಂದ್ರ ಮೋದಿ
ಅದಕ್ಕೂ ಮುನ್ನ ಬೆಂಗಳೂರಿಗೆ ಭೇಟಿ ನೀಡಿದ್ದ ಪ್ರಧಾನಿ, ಪಿಂಕ್ ಲೈನ್ ಮೆಟ್ರೋ ಲೋಕಾರ್ಪಣೆಗೊಳಿಸಿದ್ದರು. ಅಲ್ಲದೆ, ಗೋವಾ – ಬೆಂಗಳೂರು ವಂದೇ ಭಾರತ್ ರೈಲಿಗೂ ಚಾಲನೆ ನೀಡಿದ್ದರು. ಜತೆಗೆ, 15,600 ಕೋಟಿ ರೂಪಾಯಿಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




