ಉಪನ್ಯಾಸಕ ಹುದ್ದೆ ತೊರೆದ ವ್ಯಕ್ತಿಗೆ ಕೃಷಿಯೇ ಪ್ರಯೋಗ ಶಾಲೆ; ನೀರಿನ ಮಿತ ಬಳಕೆ ಹಾಗೂ ಸಹಜ ಕೃಷಿಯೇ ಮೂಲ ಮಂತ್ರ

| Updated By: preethi shettigar

Updated on: Aug 18, 2021 | 8:56 AM

ಅಶೋಕ್ ಕುಮಾರ್ ತಮ್ಮದೇ ಆದ ತಾಂತ್ರಿಕತೆಯನ್ನು ರೂಡಿಸಿಕೊಂಡಿದ್ದಾರೆ, ಭೂಮಿಯಲ್ಲಿ ಬದುಗಳನ್ನು ಹಾಕುವುದು, ಇಂಗು ಗುಂಡಿಗಳು, ಪಾತಿಗಳ ಮುಖಾಂತರ ಬಿದ್ದ ನೀರನ್ನು ಒಂದು ಹನಿಯೂ ಹೊರ ಹೋಗದಂತೆ ಭೂಮಿಯಲ್ಲಿ ಇಳಿಯುವ ವ್ಯವಸ್ಥೆ ಮಾಡಿದ್ದಾರೆ.

ಉಪನ್ಯಾಸಕ ಹುದ್ದೆ ತೊರೆದ ವ್ಯಕ್ತಿಗೆ ಕೃಷಿಯೇ ಪ್ರಯೋಗ ಶಾಲೆ; ನೀರಿನ ಮಿತ ಬಳಕೆ ಹಾಗೂ ಸಹಜ ಕೃಷಿಯೇ ಮೂಲ ಮಂತ್ರ
ಅಶೋಕ್ ಕುಮಾರ್
Follow us on

ಕೋಲಾರ: ಕೈ ತುಂಬಾ ಸಂಬಳ ಕೊಡುವ ಸರ್ಕಾರಿ ಕೆಲಸವನ್ನು ಬಿಟ್ಟು, ಬರಡು ಭೂಮಿಯಲ್ಲಿ ವ್ಯವಸಾಯ ಮಾಡುವ ಪಣತೊಟ್ಟ ಕೋಲಾರ ಜಿಲ್ಲೆಯ ವ್ಯಕ್ತಿಯೊಬ್ಬರು, ಬರಪೀಡಿತ ಪ್ರದೇಶದ ಹನಿ ನೀರಾವರಿ ತಜ್ಞರಾಗಿದ್ದಾರೆ. ಮಳೆ ಇಲ್ಲದ ಬರಗಾಲದಲ್ಲೂ, ಹಚ್ಚ ಹಸುರಿನ ಬೆಳೆ ಬೆಳೆದಿದ್ದು, ಈ ವ್ಯಕ್ತಿಯ ನೀರಾವರಿ ವಿಧಾನಗಳು ಇತರ ರೈತರಿಗೆ ಮಾದರಿಯಾಗಿದೆ.

ಸರ್ಕಾರಿ ಕೆಲಸ ಬಿಟ್ಟ ಉಪನ್ಯಾಸಕನ ಕೃಷಿ ಸಾಧನೆ
ಎಲ್ಲಿ ನೋಡಿದರು ಹಚ್ಚ ಹಸುರಾಗಿರುವ ಪ್ರದೇಶ, ಮಾವು, ಬೇವು, ಹೆಬ್ಬೇವು, ನೇರಳೆ, ಅರಳಿ, ಹತ್ತಾರು ರೀತಿಯ ಬೃಹತ್ತಾದ ಮರಗಳು. ಇಂತಾದೊಂದು ಪ್ರದೇಶ ಕಂಡು ಬಂದಿರುವುದು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ರಾಂಪುರ ಗ್ರಾಮದಲ್ಲಿ. ಈ ಗ್ರಾಮದ ಅಶೋಕ್ ಕುಮಾರ್ ಎಂಬ ಪ್ರಗತಿಪರ ರೈತ ಬೃಹತ್ತಾದ ತೋಟದಲ್ಲಿ, ಕಳೆದ 20 ವರ್ಷಗಳಿಂದ ವ್ಯವಸಾಯದಲ್ಲಿ ತೊಡಗಿಕೊಂಡಿದ್ದಾರೆ. 13 ವರ್ಷಗಳ ಕಾಲ ಶ್ರೀನಿವಾಸಪುರ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿಯೂ ಕೆಲಸ ಮಾಡಿದ್ದಾರೆ.

ಅಶೋಕ್ ಕುಮಾರ್ ಹಲವು ವರ್ಷಗಳ ಹಿಂದೆಯೇ ಸಂಪೂರ್ಣವಾಗಿ ಕೃಷಿಕನಾಗಬೇಕು ಕೃಷಿಯಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂದು ನಿರ್ಧರಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಪಿತ್ರಾರ್ಜಿತವಾಗಿ ಬಂದಿದ್ದ ಸುಮಾರು 70 ಎಕರೆ ಭೂಮಿಯಲ್ಲಿ ಸಾವಯವ ಹಾಗೂ ಸಹಜ ಕೃಷಿ ಮಾಡಲು ನಿರ್ಧರಿಸಿದ್ದರು. ತಮ್ಮ ಭೂಮಿಯನ್ನೇ ಒಂದು ಪ್ರಯೋಗ ಶಾಲೆಯನ್ನಾಗಿಸಿಕೊಂಡು ಕೃಷಿ ಕಾರ್ಯಕ್ಕೆ ಇಳಿದರು. ಪರಿಣಾಮ ಇಂದು ಅಶೋಕ್ ಕುಮಾರ್ ಒಬ್ಬ ಪ್ರಗತಿಪರ ಹಾಗೂ ಯಶಸ್ವಿ ಕೃಷಿಕರಾಗಿದ್ದಾರೆ.

ಪಿತ್ರಾರ್ಜಿತ ಆಸ್ತಿಯಲ್ಲಿ ವಿಭಿನ್ನ ಕೃಷಿ ಮೂಲಕ ಸಾಧನೆ
ಅಶೋಕ್ ಕುಮಾರ್ ತಮ್ಮ 70 ಎಕರೆ ಭೂಮಿಯಲ್ಲಿ ಕೃಷಿ ಮಾಡಲು ಒಂದು ಬೋರ್​ವೆಲ್​ ಸಹ ಹಾಕಿಸದೆ, ವಿದ್ಯುತ್ ಕೂಡಾ ಬಳಸದೆ, ಕೇವಲ ಮಳೆಯಾಶ್ರಿತ ಸಹಜ ಕೃಷಿ ಮಾಡುತ್ತಿದ್ದಾರೆ. ತಮ್ಮ ಕೃಷಿ ಜಮೀನಿನಲ್ಲಿ ಐದಾರು ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿಕೊಂಡು, ತಮ್ಮ ಇಡೀ ಭೂಮಿಯಲ್ಲಿ ಬೀಳುವ ಒಂದು ಹನಿ ನೀರು ಕೂಡಾ ವ್ಯರ್ಥವಾಗದಂತೆ ಸಂಪೂರ್ಣ ನೀರನ್ನು ಸಂಗ್ರಹಿಸಲು ಅಶೋಕ್ ಕುಮಾರ್ ವ್ಯವಸ್ಥೆ ಮಾಡಿದ್ದಾರೆ.

ಅಶೋಕ್ ಕುಮಾರ್ ತಮ್ಮದೇ ಆದ ತಾಂತ್ರಿಕತೆಯನ್ನು ರೂಡಿಸಿಕೊಂಡಿದ್ದಾರೆ, ಭೂಮಿಯಲ್ಲಿ ಬದುಗಳನ್ನು ಹಾಕುವುದು, ಇಂಗು ಗುಂಡಿಗಳು, ಪಾತಿಗಳ ಮುಖಾಂತರ ಬಿದ್ದ ನೀರನ್ನು ಒಂದು ಹನಿಯೂ ಹೊರ ಹೋಗದಂತೆ ಭೂಮಿಯಲ್ಲಿ ಇಳಿಯುವ ವ್ಯವಸ್ಥೆ ಮಾಡಿದ್ದಾರೆ. ಅದರಂತೆ ತಮ್ಮ ಇಡೀ ಭೂಮಿಯಲ್ಲಿ ಸಾವಿರಾರು ಹೆಬ್ಬೇವಿನ ಮರಗಳು, ಸಾವಿರಾರು ಮಾವಿನ ಮರಗಳು, ನೂರಾರು ಶ್ರೀಗಂಧ, ಮಹಾಗಣಿ, ನೇರಳೆ, ಹುಣಸೆ, ಅರಳಿ ಸಸಿಗಳು, ಬೇವಿನ ಮರ, ಹೊಂಗೆ ಸಸಿಗಳನ್ನು ಅನುಕೂಲತೆಗೆ ತಕ್ಕಂತೆ ಬೆಳೆಸಿದ್ದಾರೆ. ಅದರ ಮಧ್ಯದಲ್ಲಿ ದನಕರುಗಳಿಗೆ, ಕುರಿ ಮೇಕೆಗಳಿಗೆ ಆಹಾರವಾಗುವಂತ ಸ್ಟೈಲೋ ಹೆಮಟ, ಅಗಸೆ, ಸುಬೋಬುಲ್ ನಂತಹ ಕೆಲವು ಪೌಷ್ಠಿಕ ಆಹಾರ ಬೆಳೆಗಳನ್ನು ಬೆಳೆಸಿದ್ದಾರೆ.

ಸಹಜ ಕೃಷಿಕನಿಗೆ ಹರಸಿ ಬಂದಿವೆ ಹಲವಾರು ಪ್ರಶಸ್ತಿಗಳು

ನೀರಿನ ಮಿತ ಬಳಕೆ ಹಾಗೂ ಸಹಜ ಕೃಷಿ ಇವರ ಮಂತ್ರ
ಇದರ ಜೊತೆ ಜೊತೆಗೆ ಅಶೋಕ್ ಕುಮಾರ್ ಅವರೆ, ತೊಗರಿ, ರಾಗಿ, ಹುರುಳಿ, ಸೇರಿದಂತೆ ಹಲವು ಧಾನ್ಯದ ಬೆಳೆಗಳನ್ನು ಬೆಳೆಯುತ್ತಾರೆ. ಜೊತೆಗೆ ಹಿಪ್ಪುನೇರಳೆ ಮರಗಳನ್ನು ಇವರು ಬೆಳೆಸುತ್ತಿದ್ದಾರೆ. ಎಲ್ಲವೂ ಕೂಡಾ ಸಹಜ ಕೃಷಿಯ ಮುಖಾಂತರವೇ ಬೆಳೆಯುವುದು. ಮತ್ತೊಂದು ವಿಶೇಷ ಅಂದರೆ ಇವರ ಇಡೀ 70 ಎಕರೆ ಭೂಮಿಯಲ್ಲಿ ಒಂದೇ ಒಂದು ಬೋರ್​ವೆಲ್​ ಹಾಕದೆ, ಎಲ್ಲವೂ ಮಳೆಯಾಶ್ರಿತ ಕೃಷಿಯನ್ನು ಅನುಸರಿಸಿಕೊಂಡು ವ್ಯವಸಾಯ ಮಾಡುತ್ತಿದ್ದಾರೆ.

ಅಶೋಕ್ ಕುಮಾರ್ ನೀರಿನ ವಿಷಯದಲ್ಲಿ ತಮ್ಮದೇ ಒಂದು ತಾಂತ್ರಿಕತೆಯನ್ನು ಅಳವಡಿಸಿಕೊಂಡಿದ್ದಾರೆ. ಅದರಂತೆ ಹರಿಯುವ ನೀರನ್ನು ನಿಲ್ಲಿಸಿ ಭೂಮಿಯಲ್ಲಿ ಇಂಗುವಂತೆ ಮಾಡುವುದು, ನೀರು ಭೂಮಿಗೆ ಅಲ್ಲ, ಅದು ತಾವು ಬೆಳೆಸುವ ಗಿಡದ ಬೇರಿಗೆ ಕೊಡುವುದು ಎನ್ನುವ ನಿಟ್ಟಿನಲ್ಲಿ ಹತ್ತಾರು ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ. ವ್ಯರ್ಥವಾಗಿ ಬಿದ್ದಿರುವ ನೀರಿನ ಬಾಟೆಲ್, ಗ್ಲೋಕೋಸ್ ಬಾಟಲ್​ಗಳನ್ನು ಗಿಡದ ಬುಡದಲ್ಲಿಟ್ಟು ಅದಕ್ಕೆ ಸಣ್ಣದೊಂದು ರಂಧ್ರ ಮಾಡಿ, ಅದು ಗಿಡಕ್ಕೆ ಎಷ್ಟು ಬೇಕೋ ಅಷ್ಟು ನೀರನ್ನು ಕೊಡುವಂತೆ ಮಾಡಿದ್ದಾರೆ. ಇದಲ್ಲದೆ ಸಣ್ಣ ಸಣ್ಣ ಪೈಪ್​ಗಳ ಮೂಲಕ ಗಿಡದ ಬೇರಿಗೆ ಸಸಿಗಳಿಗೆ ಬೇಕಾದ ನೀರನ್ನು ಕೊಡುವುದು, ಹೀಗೆ ನೀರನ್ನು ಮಿತವಾಗಿ ಬಳಸುವ ತಾಂತ್ರಿಕ ವಿಧಾನಗಳನ್ನು ಅಶೋಕ್ ಕುಮಾರ್ ತೋಟದಲ್ಲಿ ಕಾಣಬಹುದು.

ಸಹಜ ಕೃಷಿಕನಿಗೆ ಅರಸಿ ಬಂದಿವೆ ಹಲವಾರು ಪ್ರಶಸ್ತಿಗಳು
ವಿದ್ಯುತ್ ಬಳಸದೆ ಹನಿ ನೀರಾವರಿಯ ಮೂಲಕ ತಮ್ಮ ಇಡೀ ತೋಟಕ್ಕೆ ನೀರು ಹಾಯಿಸಿದ್ದು, ಅಶೋಕ್ ಕುಮಾರ್​ ಅವರ ಅದ್ಭುತ ಪ್ರಯತ್ನ. ಕೃಷಿ ಹೊಂಡಗಳ ಬಳಿ ದೊಡ್ಡ ದೊಡ್ಡ ಡ್ರಮ್​ಗಳನ್ನಿಟ್ಟು, ಕೃಷಿ ಹೊಂಡಗಳಲ್ಲಿ ಸಂಗ್ರಹವಾಗಿರುವ ನೀರನ್ನು ಶೋದಿಸಿ ಡ್ರಮ್​ಗಳಿಗೆ ಹಾಕಿದರೆ ಅದರ ಮೂಲಕ ಇಡೀ ತೋಟಕ್ಕೆ ಅಳವಡಿಸಿರುವ ಪೈಪ್ಲೈನ್ ಮೂಲಕ ನೀರು ಹನಿ ಹನಿಯಾಗಿ ಹರಿಯುತ್ತದೆ. ಹೀಗೆ ಅಶೋಕ್ ಕುಮಾರ್ ಬರದ ಜಿಲ್ಲೆ ಕೋಲಾರದಲ್ಲಿ ಕಳೆದ 20 ವರ್ಷಗಳಿಂದ ಸೊಂಪಾದ ಬೆಳೆಯನ್ನು ಬೆಳೆದುಕೊಂಡು ಉತ್ತಮ ಕೃಷಿಕನಾಗಿ ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ಕಳೆದ ವರ್ಷ ಸರ್ಕಾರ ಇವರಿಗೆ, ರಾಜ್ಯ ತೋಟಗಾರಿಕಾ ಪ್ರಶಸ್ತಿ ಹಾಗೂ ಕೃಷಿ ಪಂಡಿತ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಮೊದ ಮೊದಲು ಇವರ ಕೃಷಿಯನ್ನು ಕಂಡು ಗೇಲಿ ಮಾಡಿದ ಜನರು ಇದ್ದಾರೆ, ಆದರೆ ಇವರು ಯಶಸ್ವಿಯಾದ ನಂತರ ಹೀಗೂ ಕೃಷಿ ಮಾಡಬಹುದು ಎನ್ನುವುದು ಸಾಧಿಸಿ ತೋರಿಸಿದ ನಂತರ ಸಾವಿರಾರು ಜನ ರೈತರು, ಕೃಷಿ ತಂತ್ರಜ್ಞರು, ಕೃಷಿ ಕಾಲೇಜಿನ ವಿದ್ಯಾರ್ಥಿಗಳು, ಬೇರೆ ಬೇರೆ ರಾಜ್ಯಗಳ ರೈತರು, ಹಲವು ಜಿಲ್ಲೆಗಳ ವ್ಯವಸಾಯಗಾರರು ಇವರ ತೋಟಕ್ಕೆ ಭೇಟಿ ಕೊಟ್ಟು ಸಾಕಷ್ಟು ವಿಷಯಗಳನ್ನು ಕಲಿತುಕೊಂಡು ಹೋಗಿದ್ದಾರೆ.

ಅಶೋಕ್ ಕುಮಾರ್ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಫಲ ಎನ್ನುವುದು ನಂಬಿಕೆ ಹಾಗೂ ಶ್ರಮದ ಮೇಲೆ ನಿರ್ಧಾರವಾಗುತ್ತದೆ ಎಂದು ನಂಬಿರುವ ಅಶೋಕ್ ಕುಮಾರ್, ತಮ್ಮದೇ ಶೈಲಿಯಲ್ಲಿ ಕೃಷಿ ಮಾಡಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಿಕೊಂಡು ಸಮೃದ್ಧ ಬದುಕನ್ನು ನಡೆಸುತ್ತಿದ್ದಾರೆ. ಹಾಗಾಗಿ ದೇಶಕ್ಕೆ ಬರ ಬಂದರು, ನಮ್ಮ ತೋಟದಲ್ಲಿ ಮಾತ್ರ ಬರ ಎನ್ನುವ ಮಾತೆ ಇಲ್ಲಾ ಎನ್ನುವುದು ಅಶೋಕ್ ಕುಮಾರ್ ರವರ ಅಚಲ ನಂಬಿಕೆ.

ವರದಿ : ರಾಜೇಂದ್ರ ಸಿಂಹ

ಇದನ್ನೂ ಓದಿ:
ಬೀದರ್: ಸಮಗ್ರ ಕೃಷಿಯ ಜತೆಗೆ ವಿವಿಧ ಬಗೆಯ ಸಸಿಗಳನ್ನು ಬೆಳೆಸಿದ ರೈತ; ತಿಂಗಳಿಗೆ ಲಕ್ಷ ರೂಪಾಯಿ ಸಂಪಾದನೆ

Drones in Agriculture: ಭತ್ತದ ಕಣಜದಲ್ಲಿ ಕ್ರೀಮಿನಾಶಕ ಸಿಂಪಡಣೆಗಾಗಿ ಡ್ರೋನ್​ಗೆ ಮೊರೆ ಹೋದ ರೈತರು

Published On - 8:51 am, Wed, 18 August 21