ಕೋಲಾರ: ಕಳೆದ ಕೆಲ ತಿಂಗಳ ಹಿಂದೆ ಕೋಲಾರದಲ್ಲಿ ಜೆಡಿಎಸ್ ಪಕ್ಷದ ಜನತಾ ಜಲಧಾರೆ ಕಾರ್ಯಕ್ರಮ ನಡೆದಾಗ ಮಾಲೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ಇ.ರಾಮೇಗೌಡ(G.E. Rame gowda) ತಮ್ಮ ಪೆಟ್ರೋಲ್ ಬಂಕ್ನಲ್ಲಿ ಒಂದೊಂದು ಗಾಡಿಗೆ ಇನ್ನೂರು ರೂಪಾಯಿಯ ಪೆಟ್ರೋಲ್ ಹಾಕಿಸಿದ್ದರು. ಜೊತೆಗೆ ಕಾರ್ಯಕ್ರಮಕ್ಕೆ ಬಂದಿದ್ದ ಮಹಿಳೆಯರಿಗೆ ಅಕ್ಕಿ ಮೂಟೆ ಹಾಗೂ ಸೀರೆ ನೀಡಿದ್ದರು. ಅದೇ ರೀತಿ ಜೆಡಿಎಸ್ ಅಭ್ಯರ್ಥಿ ಜಿ.ಇ.ರಾಮೇಗೌಡರ ಅಭಿಮಾನಿಯೊಬ್ಬರು ಮತದಾರರಿಗೆ ಭರ್ಜರಿ ಆಫರ್ ನೀಡಿದ್ದಾರೆ. ಇಲ್ಲಿ ನಾಯಕನ ಪರವಾಗಿ ಅಭಿಮಾನಿಯೇ ಮತದಾರರನ್ನು ಸೆಳೆಯುವ ಪ್ರಯತ್ನ ನಡೆದಿದೆ.
ಕೋಲಾರದ ಜೆಡಿಎಸ್ ಅಭ್ಯರ್ಥಿಗೆ ವೋಟ್ ಹಾಕಿದ್ರೆ ಕಟ್ಟಿಂಗ್, ಶೇವಿಂಗ್ ಫ್ರೀಯಾಗಿ ಮಾಡುವ ಅಂಗಡಿಯೊಂದು ಗಮನ ಸೆಳೆದಿದೆ. ಕೋಲಾರ ಜಿಲ್ಲೆ ಮಾಲೂರು ಜೆಡಿಎಸ್ ಅಭ್ಯರ್ಥಿ ರಾಮೇಗೌಡಗೆ ವೋಟ್ ಹಾಕಿದ್ರೆ ಉಚಿತ ಕಟ್ಟಿಂಗ್ ಎಂದು ಇಲ್ಲೊಬ್ಬ ಬಾರ್ಬರ್ ಶಾಪ್ ಮಾಲೀಕ ಹೀಗೊಂದು ಆಫರ್ ಘೋಷಣೆ ಮಾಡಿದ್ದಾರೆ. ಹೌದು ಮಾಲೂರು ಜೆಡಿಎಸ್ ಅಭ್ಯರ್ಥಿಯ ಬೆಂಬಲಿಗನೊರ್ವ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮಾಲೂರು ಜೆಡಿಎಸ್ ಅಭ್ಯರ್ಥಿ ಜಿ.ಇ.ರಾಮೇಗೌಡರಿಗೆ ವೋಟ್ ಹಾಕಿದ್ರೆ ಉಚಿತ ಕಟ್ಟಿಂಗ್ ಎಂದು ಅನೌನ್ಸ್ ಮಾಡಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕುಡಿಯನೂರು ಗ್ರಾಮದಲ್ಲಿರುವ ಈ ಬಾರ್ಬರ್ ಶಾಪ್‌ನಲ್ಲಿ ಜೆಡಿಎಸ್ ಹಾಗೂ ಅವರ ಬೆಂಬಲಿಗರಿಗೆ ಉಚಿತ ಕಟ್ಟಿಂಗ್ ಅನ್ನೋ ಘೋಷಣೆ ಶುರುವಾಗಿದ್ದು, ಇದೊಂದು ರೀತಿಯ ವಿಚಿತ್ರ ಕ್ಯಾಂಪೇನ್ ಎನ್ನಲಾಗಿದೆ. ಮಾಜಿ ಸೈನಿಕರು, ವೃದ್ಧರು, ಜೆಡಿಎಸ್‌ಗೆ ವೋಟ್ ಹಾಕುವವರಿಗೆ ಉಚಿತ ಕ್ಷೌರಿಕ ಕೆಲಸ ಮಾಡಲು ಇಲ್ಲೊಬ್ಬ ಮುಂದಾಗಿರುವುದು ನಿಜಕ್ಕೂ ಸಖತ್ ವೈರಲ್ ಆಗಿದೆ. ಕುಡಿಯನೂರು ಗ್ರಾಮದ ಸವಿತ ಸಮಾಜದ ರಾಜೇಶ್ ಎಂಬುವವರಿಗೆ ಉಚಿತವಾಗಿ ಅಂಗಡಿ ಮಾಡಿಕೊಟ್ಟ ಜೆಡಿಎಸ್ ಮುಖಂಡನೊರ್ವ ಇಂತಹ ನಿರ್ಧಾರಕ್ಕೆ ಮುಂದಾಗಿದ್ದಾರೆ. ಅಂಗಡಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ರಾಮೇಗೌಡ ಭಾವ ಚಿತ್ರ ಹಾಕಿದ್ದು, ಗೋಡೆಗಳ ಮೇಲೆ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ಸಾಧನೆಗಳನ್ನ ಉಲ್ಲೇಖ ಮಾಡಿ ಜೆಡಿಎಸ್ ಅಭಿಮಾನ ಮೆರೆದಿದ್ದಾರೆ. ಇನ್ನೂ ಅಂಗಡಿಗೆ ಬರುವವರಿಗೆ ಜೆಡಿಎಸ್ ಪಕ್ಷದ ಬಗ್ಗೆ ಪ್ರಚಾರ ಮಾಡುವುದು ಸೇರಿದಂತೆ ತನಗಿರುವ ಪಕ್ಷದ ಅಭಿಮಾನವನ್ನ ಹೀಗೆ ತನ್ನ ವೃತ್ತಿಯಲ್ಲೂ ತೋರಿಸುವ ಮೂಲಕ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ವರದಿ: ರಾಜೇಂದ್ರ ಸಿಂಹ, ಟಿವಿ9 ಕೋಲಾರ