ಕೋಲಾರ: ನೂರು ವರ್ಷಗಳ ಇತಿಹಾಸವಿರುವ ಕೋಲಾರ ಇಟಿಸಿಎಂ ಆಸ್ಟತ್ರೆಯ ಲೆಕ್ಕಾಧಿಕಾರಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದರು ಎನ್ನಲಾದ ಪ್ರಕರಣಕ್ಕೆ ಬಿಗ್ ಟ್ವಸ್ಟ್ ಸಿಕ್ಕಿದೆ. ಪ್ರಕರಣದಲ್ಲಿ ದೂರು ನೀಡಿರುವ ವಿದ್ಯಾರ್ಥಿಗಳೇ ನಕಲಿ ಎಂಬ ಅಂಶ ಬೆಳಕಿಗೆ ಬಂದಿದ್ದು, ಇದೆಲ್ಲಾ ಇತಿಹಾಸ ಇರುವ ಇಟಿಸಿಎಂ ಆಸ್ಪತ್ರೆ ಮಾರಾಟ ಅಥವಾ ಗುತ್ತಿಗೆ ನೀಡುವ ಸಲುವಾಗಿ ಮಾಡುತ್ತಿರುವ ಹುನ್ನಾರ ಎನ್ನಲಾಗುತ್ತಿದೆ.
ನಕಲಿ ವಿದ್ಯಾರ್ಥಿನಿಯರಿಂದ ದೂರು ಪೊಲೀಸರೇ ಶಾಕ್..!
ಇದೇ ಆಗಸ್ಟ್-30 ರಂದು ಕೋಲಾರ ಮೆಥಡಿಸ್ಟ್ ಚರ್ಚ್ಗೆ ಸೇರಿದ ಇ.ಟಿ.ಸಿ.ಎಂ ಆಸ್ಪತ್ರೆಯ ಲೆಕ್ಕಾಧಿಕಾರಿ ಜಾನ್ಸನ್ ಕುಂದರ್ ಅವರು ವಾರ್ಷಿಕ ಶುಲ್ಕ ಕಡಿಮೆ ಮಾಡುವ ಸಲುವಾಗಿ ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಪ್ರಕರಣ ದಾಖಲಾದ ಕೆಲವೇ ದಿನಗಳಲ್ಲಿ ಪ್ರಕರಣಕ್ಕೆ ಬಿಗ್ ಟ್ವಿಸ್ ಸಿಕ್ಕಿದ್ದು, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು ನೀಡಿರುವ ವಿದ್ಯಾರ್ಥಿನಿಯರೇ ನಕಲಿ ಅನ್ನೋ ಅಂಶ ಬೆಳಕಿಗೆ ಬಂದಿದೆ.
ಇಬ್ಬರು ವಿದ್ಯಾರ್ಥಿನಿಯರ ಹೆಸರಲ್ಲಿ ದೂರು ನೀಡಲಾಗಿದ್ದು, ದೂರು ನೀಡಿರುವ ವಿಷಯ ಅಸಲಿ ಆ ವಿದ್ಯಾರ್ಥಿನಿಯರಿಗೇ ಗೊತ್ತಿಲ್ಲ, ಅಲ್ಲದೆ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಬೇರೆ ಇನ್ನಿಬ್ಬರು ನಕಲಿ ವಿದ್ಯಾರ್ಥಿನಿಯರು ಕೋಲಾರ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ, ನ್ಯಾಯಾಧೀಶರ ಎದುರಲ್ಲೂ ನಕಲಿ ವಿದ್ಯಾರ್ಥಿನಿಯರೇ ಹೇಳಿಕೆ ನೀಡುವ ಮೂಲಕ ಪೊಲೀಸರನ್ನೇ ವಂಚಿಸಿದ್ದಾರೆ ಅನ್ನೋದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಇದರ ಹಿಂದೆ ಹಾಸ್ಟಲ್ ವಾರ್ಡನ್ ಅವರನ್ನು ಬಳಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ.
ನೂರು ವರ್ಷದ ಆಸ್ಪತ್ರೆಯನ್ನು ಮಾರಾಟ ಮಾಡುವ ಹುನ್ನಾರ..?
ಇಷ್ಟೇಲ್ಲಾ ಹುನ್ನಾರದ ಹಿಂದೆ ಕೋಲಾರ ಮೆಥೋಡಿಸ್ಟ್ ಚರ್ಚ್ನ ಜಿಲ್ಲಾ ಮೇಲ್ವಿಚಾರಕರಾದ ಶಾಂತ್ಕುಮಾರ್ ಅವರಿದ್ದಾರೆ ಅನ್ನೋದು ಸದ್ಯ ಕೇಳಿಬರುತ್ತಿರುವ ಮಾತು. ಹೀಗೆ ಜಾನ್ಸನ್ ಕುಂದರ್ ಅವರ ಮೇಲೆ ಈ ರೀತಿ ಆರೋಪ ಹೊರಿಸಲು ಪ್ರಮುಖ ಕಾರಣ ನೂರು ವರ್ಷಗಳ ಇತಿಹಾಸ ಹೊಂದಿರುವ ಇಟಿಸಿಎಂ ಆಸ್ಪತ್ರೆಯನ್ನು ಮಾರಾಟ ಮಾಡುವುದು ಅಥವಾ ಬೇರೆಯವರಿಗೆ ಗುತ್ತಿಗೆ ನೀಡಲು ಪ್ಲಾನ್ ಮಾಡಿದ್ದು ಅದಕ್ಕೆ ಜಾನ್ಸನ್ ಕುಂದರ್ ಅಡ್ಡಿಪಡಿಸುತ್ತಾರೆ ಅನ್ನೋಕಾರಣಕ್ಕೆ ಅವರ ಮೇಲೆ ಈರೀತಿ ಸಂಚು ಮಾಡಿ ಅವರನ್ನು ಸಂಸ್ಥೆಯಿಂದ ಹೊರಹಾಕುವುದು ಉದ್ದೇಶ, ಅನ್ನೋ ಅಂಶ ಮೇಲ್ನೋಟಕ್ಕೆ ತಿಳಿದು ಬಂದಿದೆ.
ಇಟಿಸಿಎಂ ಆಸ್ಪತ್ರೆ ಮಾರಾಟಕ್ಕೆ ವಿರೋಧ ಕ್ರೈಸ್ತ ಸಮುದಾಯದ ಪ್ರತಿಭಟನೆ..!
ಜಾನ್ಸನ್ ಕುಂದರ್ ಅವರ ಮೇಲೆ ಲೈಂಗಿಕ ಕಿರುಕುಳದ ಸುಳ್ಳು ಆರೋಪ ಮಾಡಿ ಮಿಷನ್ ಆಸ್ಪತ್ರೆಯನ್ನು ಮಾರಾಟ ಮಾಡಲು ನಡೆಯುತ್ತಿರುವ ವಿಷಯ ತಿಳಿದ ಹಿನ್ನೆಲೆಯಲ್ಲಿ ಕರ್ನಾಟಕ ಕ್ರೈಸ್ತ ಕ್ಷೇಮಾಭಿವೃದ್ದಿ ಸಂಘದ ಕಾರ್ಯಕರ್ತರು ಕೋಲಾರದ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಈ ರೀತಿ ಸಂಚು ಮಾಡಿ ಮೆಥೋಡಿಸ್ಟ್ ಚರ್ಚ್ನ ಆಸ್ತಿಪಾಸ್ತಿಯನ್ನು ಮಾರಾಟ ಮಾಡುತ್ತಿರುವ ಮೆಥೋಡಿಸ್ಟ್ ಜಿಲ್ಲಾ ಮೇಲ್ವಿಚಾರಕ ಶಾಂತಕುಮಾರ್, ಸೇರಿದಂತೆ ವಿದ್ಯಾರ್ಥಿನಿಯರ ಮೇಲೂ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಕ್ರೈಸ್ತ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಜಯದೇವಪ್ರಸನ್ನ ಆಗ್ರಹಿಸಿದ್ದಾರೆ.
ಜಾನ್ಸನ್ ಕುಂದರ್ ಪತ್ನಿಯಿಂದ ಕೋಲಾರ ಎಸ್ಪಿಗೆ ದೂರು..!
ಇನ್ನು ಇದೇ ಶಾಂತ್ಕುಮಾರ್ ಈ ಮೊದಲು ಕೂಡಾ ಮೆಥೋಡಿಸ್ಟ್ ಚರ್ಚ್ಗೆ ಸೇರಿದ ಕೆಲವೊಂದು ಆಸ್ತಿ ಪಾಸ್ತಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಕಡಿಮೆ ಹಣ ಲೆಕ್ಕಕ್ಕೆ ತೋರಿಸಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಅನ್ನೊ ಆರೋಪ ಈಮೊದಲು ಕೇಳಿಬಂದಿತ್ತು. ಸದ್ಯ ಈಗ ಪ್ರತಿಷ್ಠಿತಿ ಇಟಿಸಿಎಂ ಆಸ್ಪತ್ರೆಯನ್ನು ಮಾರಾಟ ಮಾಡುವ, ಅಥವಾ ಬೇರೆಯವರಿಗೆ ಗುತ್ತಿಗೆ ನೀಡುವ ಸಲುವಾಗಿ ಜಾನ್ಸನ್ ಕುಂದರ್ ಇದ್ದರೆ ಈ ಎಲ್ಲಾ ಕೆಲಸಕ್ಕೆ ಅಡ್ಡಿಪಡಿಸುತ್ತಾರೆ ಅನ್ನೋ ಕಾರಣಕ್ಕೆ ಕೆಲವು ವಿದ್ಯಾರ್ಥಿನಿಯರನ್ನು ದುರುಪಯೋಗ ಪಡಿಸಿಕೊಂಡು ಸುಳ್ಳು ದೂರು ಕೊಡಿಸಿದ್ದಾರೆ. ಈ ಮೂಲಕ ಜಾನ್ಸನ್ ಕುಂದರ್ ಅವರ ತೇಜೋವಧೆ ಮಾಡಿದ್ದಾರೆ. ಹಾಗಾಗಿ ಶಾಂತಕುಮಾರ್ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಜಾನ್ಸನ್ ಕುಂದರ್ ಅವರ ಪತ್ನಿ ಸವಿತ ಜಾನ್ ಕೋಲಾರ ಎಸ್ಪಿಗೆ ಲಿಖಿತ ದೂರು ನೀಡಿದ್ದಾರೆ.
ಇಡೀ ಪ್ರಕರಣವನ್ನು ತನಿಖೆಗೆ ಆದೇಶಿಸಿರುವ ಎಸ್ಪಿ ದೇವರಾಜ್..!
ಸದ್ಯ ಜಿಲ್ಲಾ ಮೇಲ್ವಿಚಾರಕ ಶಾಂತ್ಕುಮಾರ್ ಕುಮ್ಮಕ್ಕಿನಿಂದ ಪೊಲೀಸ್ ಠಾಣೆಗೆ ನಕಲಿ ವಿದ್ಯಾರ್ಥಿಗಳ ಹೆಸರಲ್ಲಿ ದೂರು ಕೊಡಿಸಿ ಪೊಲೀಸ್ ಠಾಣೆಗೂ ವಂಚನೆ ಮಾಡಿರುವ ಆರೋಪ ಕೇಳಿಬಂದಿರುವ ಹಿನ್ನೆಲೆ ಇಡೀ ಪ್ರಕರಣವನ್ನು ತನಿಖೆ ನಡೆಸಿ ವರದಿ ನೀಡುಲು ಕೋಲಾರ ಹೆಚ್ಚವರಿ ಎಸ್ಪಿ ಸಚಿನ್ ಘೋರ್ಪಡೆ ಅವರಿಗೆ ಎಸ್ಪಿ ಡಿ.ದೇವರಾಜ್ ಆದೇಶಿಸಿದ್ದು, ವರದಿ ಬಂದ ನಂತರ ತಪ್ಪಿತಸ್ಥರೆಲ್ಲ ಮೇಲೂ ಕಾನೂನ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ದೇವರಾಜ್ ಟಿವಿ9ಗೆ ತಿಳಿಸಿದ್ದಾರೆ.
ಒಟ್ಟಾರೆ ಸಮುದಾಯದ ಒಳಿತಿಗಾಗಿ ಕೆಲಸ ಮಾಡಬೇಕಿದ್ದ ಚರ್ಚ್ನಲ್ಲಿನ ಅಧಿಕಾರಿಗಳು ಹಾಗೂ ಪಾದ್ರಿಗಳು ಇಲ್ಲಿ ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಸಾವಿರಾರು ಜನರಿಗೆ ಸೇವೆ ನೀಡುತ್ತಿದ್ದ ಆಸ್ಪತ್ರೆ ಸೇರಿದಂತೆ ಚರ್ಚ್ನ ಆಸ್ತಿಪಾಸ್ತಿಯನ್ನು ಮಾರಾಟ ಮಾಡುವ ಜೊತೆಗೆ ಸುಳ್ಳು ದೂರು ನೀಡಲು ವಿದ್ಯಾರ್ಥಿಗಳ ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದ್ದು ಮಾತ್ರ ದುರಂತವೇ ಸರಿ.
ವರದಿ: ರಾಜೇಂದ್ರ ಸಿಂಹ
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:49 pm, Thu, 15 September 22