ರೈತರಿಗೆ ಮೋಸ ಮಾಡಿದ್ರೆ ತಿನ್ನುವ ಅನ್ನಕ್ಕೆ ಹುಳು ಬೀಳುತ್ತೆ, ನಾವು ಏನು ಅನ್ಯಾಯ ಮಾಡಿದ್ದೇವೆ, ನಮಗೆ ಏನೂ ತಿಳಿಯೋಲ್ಲ ಎಂದು ನಮ್ಮ ಭೂಮಿ ಕಿತ್ತುಕೊಂಡು ನಮ್ಮನ್ನು ಬೀದಿಗೆ ತಳ್ಳುವ ಪ್ರಯತ್ನ ಮಾಡಿದಾರೆ. ಈ ಅಧಿಕಾರಿಗಳಿಗೆ ಒಳ್ಳೇದು ಆಗೋದಿಲ್ಲ… ಹೀಗಂತ ಕೋಲಾರದಲ್ಲಿ ನೊಂದ ರೈತರು ಕಣ್ಣೀರು ಹಾಕುತ್ತಾ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಭರದಿಂದ ಸಾಗುತ್ತಿರುವ ಎಕ್ಸ್ಪ್ರೆಕ್ಸ್ ಹೈವೇ ಕಾಮಗಾರಿ, ಕಾಮಗಾರಿ ಆರಂಭದಲ್ಲೇ ಹೆದ್ದಾರಿ ಕಾಮಗಾರಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿರುವ ಹತ್ತಾರು ರೈತರು, ಸರಿಯಾದ ಪರಿಹಾರ ನೀಡದ ಹೊರತು ತಮ್ಮ ಪ್ರಾಣ ಹೋದರೂ ನಮ್ಮ ಭೂಮಿಯನ್ನು ಹೆದ್ದಾರಿಗೆ ಬಿಟ್ಟು ಕೊಡೋದಿಲ್ಲ ಎನ್ನುತ್ತಿರುವ ಭೂಮಿ ಮಾಲೀಕರು, ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಕಲ್ಲುಕೆರೆ ಗ್ರಾಮದಲ್ಲಿ.
ಕೋಲಾರ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಹಾದು ಹೋಗುವ ಎಕ್ಸ್ಪ್ರೆಕ್ಸ್ ಹೈವೇ..!
ಹೌದು ಕೋಲಾರ ಜಿಲ್ಲೆಯ ಕೋಲಾರ ತಾಲ್ಲೂಕು, ಬಂಗಾರಪೇಟೆ ತಾಲ್ಲೂಕು, ಕೆಜಿಎಫ್ ತಾಲ್ಲೂಕು, ಮಾಲೂರು ತಾಲ್ಲೂಕುಗಳಲ್ಲಿ ನೂತನ ಚೆನೈ ಎಕ್ಸ್ಪ್ರೆಕ್ಸ್ ಹೈವೇ ಹಾದು ಹೋಗಲಿದೆ, ಈ ಪ್ರದೇಶಗಳಲ್ಲಿ ಭೂಸ್ವಾಧಿನ ಪ್ರಕ್ರಿಯೆ ವೇಳೆ ಹೆದ್ದಾರಿ ಪ್ರಾಧಿಕಾರ ರೈತರಿಗೆ ಪಕ್ಷಪಾತ ಮಾಡಿದೆ. ಒದೊಂದು ತಾಲ್ಲೂಕಿನಲ್ಲಿ ಭೂಮಿಗೆ ಒಂದೊಂದು ರೀತಿ ಬೆಲೆ ನಿಗದಿ ಮಾಡಿದೆ. ಅಲ್ಲದೆ ಭೂಸ್ವಾದೀನ ನಿಯಮ ಪಾಲನೆ ಮಾಡದೆ ರೈತರನ್ನು ಬೀದಿಗೆ ತಳ್ಳುವ ಕೆಲಸ ನಡೆಯುತ್ತಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಭೂಸ್ವಾದೀನ ಪ್ರಕ್ರಿಯೆ ವೇಳೆ ರೈತರಿಗೆ ತಾರತಮ್ಯ, ಮೋಸ ಆರೋಪ…!
ಬಂಗಾರಪೇಟೆ ತಾಲ್ಲೂಕು ಕಲ್ಲುಕೆರೆ, ಐತಾಂಡಹಳ್ಳಿ, ದೊಡ್ಡೂರು, ಸೂಲಿಕುಂಟೆ, ಕುಪ್ಪನಹಳ್ಳಿ ಹಾಗೂ ಕೆಜಿಎಫ್ ತಾಲ್ಲೂಕಿನ ವಡ್ರಹಳ್ಳಿ, ದೊಡ್ಡಕಾರಿ, ದಾದೇನಹಳ್ಳಿ, ಗೆನ್ನೇರಹಳ್ಳಿ, ಮಾಲೂರು ತಾಲ್ಲೂಕಿನ ಲಕ್ಷ್ಮೀಸಾಗರ, ಪಾರ್ಶ್ವಗಾನಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಹೆದ್ದಾರಿ ಪ್ರಾಧಿಕಾರ ರೈತರ ಜಮೀನುಗಳನ್ನು ವಶಕ್ಕೆ ಪಡೆದು ಮಾರುಕಟ್ಟೆ ಬೆಲೆ ನೀಡಿಲ್ಲ, ಜೊತೆಗೆ ಭೂ ಸ್ವಾಧೀನ ನಿಯಮದಂತೆ ಅಲ್ಲಿನ ಭೂಮಿಯ ಬೆಲೆಯ ಎರಡು ಪಟ್ಟು ಹೆಚ್ಚಿಗೆ ಹಣ ಪರಿಹಾರ ನೀಡಬೇಕು ಎನ್ನುವ ಯಾವುದೇ ನಿಯಮ ಪಾಲಿಸಿದೆ ರೈತರು ನೂರಾರು ಎಕರೆ ಭೂಮಿಯನ್ನು ಸ್ವಾದೀನಕ್ಕೆ ಪಡೆದು ರೈತರಿಗೆ ವಂಚನೆ ಮಾಡಿದ್ದಾರೆ ಅನ್ನೋದು ರೈತರ ಆರೋಪ.
ಪಿ-ನಂಬರ್ ಭೂಮಿಗಳಿಗೆ ಪರಿಹಾರ ನೀಡದೆ ಸತಾಯಿಸುತ್ತಿರುವ ಅಧಿಕಾರಿಗಳು…!
ಪ್ರಮುಖವಾಗಿ ಈ ಮೊದಲು ಭೂಸ್ವಾದೀನ ಪ್ರಕ್ರಿಯೆ ವೇಳೆ ಪಿ-ನಂಬರ್ ನಲ್ಲಿರುವ ಸರ್ವೆ ನಂಬರ್ಗಳಿಗೂ ಪರಿಹಾರ ನೀಡಲಾಗುತ್ತಿತ್ತು, ಆದರೆ ಈಗ ಹೆದ್ದಾರಿ ಪ್ರಾಧಿಕಾರ ಭೂಸ್ವಾದೀನ ವೇಳೆ ಪಿ-ನಂಬರ್ ನಲ್ಲಿರುವ ಸರ್ವೇ ನಂಬರ್ಗಳಿಗೆ ಪರಿಹಾರ ನೀಡಿಲ್ಲ ಎಂದು ರೈತರ ಆರೋಪ ಮಾಡಿದ್ದಾರೆ, ಇದೇ ಹೆದ್ದಾರಿಯಲ್ಲಿ ಮಾಲೂರಿನ ಕೆಲವೆಡೆ ಪಿ.ನಂಬರ್ ಭೂಮಿಗೆ ಅಧಿಕಾರಿಗಳು ಶಾಮೀಲಾಗಿ ಕೋಟಿಗಟ್ಟಲೆ ಪರಿಹಾರ ನೀಡಿದ್ದಾರೆ. ಆದರೆ ಬಂಗಾರಪೇಟೆ, ಕೆಜಿಎಫ್ ಬಾಗದಲ್ಲಿ ಪರಿಹಾರ ನೀಡಿಲ್ಲ ನಮ್ಮ ಬಳಿ ಹಣವಿಲ್ಲ ನಾವು ಹಣ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ನಮಗೆ ಪರಿಹಾರ ನೀಡುತ್ತಿಲ್ಲ ಎನ್ನುತ್ತಿದ್ದಾರೆ ಕಲ್ಲುಕರೆ ಗ್ರಾಮದ ರೈತ ವೆಂಕಟೇಶ್ ಹಾಗೂ ರಾಮಚಂದ್ರಪ್ಪ.
ಕಂದಾಯ ಇಲಾಖೆ ಅಧಿಕಾರಿಗಳು ಮಾಡುತ್ತಿರುವ ಎಡವಟ್ಟು..!
ಸರ್ಕಾರದಿಂದ ಭೂಮಿ ಮಂಜೂರಾಗಿರುವ ಭೂಮಿಯನ್ನು, ಪಿ.ನಂಬರ್ ತೆಗೆದು ದುರಸ್ಥಿ ಮಾಡಿ ಹೊಸ ಸರ್ವೆ ನಂಬರ್ ಮಾಡಿ ಕೊಡಬೇಕಾಗಿರುವುದು ಕಂದಾಯ ಇಲಾಖೆಯ ಕೆಲಸ, ಅವರು ಮಾಡಿರುವ ತಪ್ಪಿಗೆ ನಮಗ್ಯಾಕೆ ಶಿಕ್ಷೆ. ಹತ್ತಾರು ವರ್ಷಗಳಿಂದ ಈ ಭೂಮಿ ನಂಬಿಕೊಂಡು ಗ್ರಾಮದಲ್ಲಿ ಬದುಕುತ್ತಿದ್ದೇವೆ ಹೀಗಿರುವಾಗ ನಮ್ಮ ಭೂಮಿ ಕಿತ್ತುಕೊಂಡು ನಮ್ಮನ್ನು ವಕ್ಕಲೆಬ್ಬಿಸುವ ಕೆಲಸ ನಡೆಯುತ್ತಿದೆ ಅನ್ನೋದು ನೊಂದ ರೈತರ ಅಳಲು.
ಅದಕ್ಕಾಗಿಯೇ ಕೆಲವೆಡೆ ರೈತರು ರಸ್ತೆ ಕಾಮಗಾರಿಕೆ ಅಡ್ಡಿಪಡಿಸಿ ಕಾಮಗಾರಿ ಮಾಡಲು ಬಿಟ್ಟಿಲ್ಲ. ಇನ್ನು ಈ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿತ್ತು ಆದರೂ ತಮ್ಮ ಸಮಸ್ಯೆ ಬಗೆಹರಿಯುವ ಮೊದಲು ಅಧಿಕಾರಿಗಳೇ ಬದಲಾಗುತ್ತಿದ್ದಾರೆ. ಈ ಗಾಗಲೇ ಇಬ್ಬರು ಜಿಲ್ಲಾಧಿಕಾರಿಗಳು ಬದಲಾಗಿದ್ದು ನಮ್ಮ ಕೆಲಸ ಮಾತ್ರ ಆಗಿಲ್ಲ, ಇನ್ನು ಈ ಹಿಂದಿನ ಜಿಲ್ಲಾಧಿಕಾರಿ ಸೆಲ್ವಮಣಿ ಇತ್ತೀಚೆಗಷ್ಟ ನಮ್ಮ ಸಮಸ್ಯ ಬಗೆಹರಿಸಿ ಕೊಡುವ ಭರವಸೆ ಕೊಟ್ಟಿದ್ದರೂ ಅದಾದ ಎರಡೇ ದಿನಕ್ಕೆ ಅವರ ವರ್ಗಾವಣೆ ಮಾಡಿದ್ದಾರೆ, ಎನ್ನುತ್ತಿದ್ದಾರೆ ಭೂಮಿ ಕಳೆದುಕೊಂಡ ರೈತ ಮಹಿಳೆ ಸುಗುಣ.
ಒಟ್ಟಾರೆ ಹೆದ್ದಾರಿ ಭೂ ಸ್ವಾಧೀನಾಧಿಕಾರಿಗಳ ದ್ವಂದ್ವ ನೀತಿ ಹಾಗೂ ಎಡವಟ್ಟಿನಿಂದ ಬಡ ರೈತರು ಇಂದು ಇತ್ತ ಭೂಮಿಯೂ ಇಲ್ಲದೆ, ಅತ್ತ ಪರಿಹಾರವೂ ಇಲ್ಲದೆ ತ್ರಿಶಂಕು ಸ್ಥಿತಿಗೆ ತಲುಪಿದ್ದು, ಸದ್ಯ ಗೊಂದಲದಲ್ಲಿರುವ ಭೂಮಿ ಕಳೆದುಕೊಂಡ ರೈತರು ನಮಗೆ ಪರಿಹಾರ ನೀಡದ ಹೊರತು ನಮ್ಮ ಪ್ರಾಣ ಹೋದರೂ ಕೂಡಾ ನಮ್ಮ ಭೂಮಿ ಕೊಡೋದಿಲ್ಲ ಎನ್ನುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ನೊಂದ ರೈತರಿಗೆ ನ್ಯಾಯ ಒದಗಿಸಿಕೊಡಬೇಕಿದೆ.
ವರದಿ: ರಾಜೇಂದ್ರ ಸಿಂಹ